ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಚೌತಿ: ಚೌಕ ಚರ್ಚೆ

Last Updated 12 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಗಣೇಶ ಚೌತಿ ಕುರಿತು ಚೌಕ ಚರ್ಚೆ- ನಾನು, ನನ್ನವಳು, ಪುಟ್ಟಿ ಮತ್ತು ಅತ್ತೆ- ಚೌಕದ ನಾಲ್ಕು ಮೂಲೆಗಳು, ಮಾತುಗಳು ಖಡಕ್ ಎಂದರೆ ಅತ್ತೆ, ತೀಕ್ಷ್ಣ ಎಂದರೆ ನನ್ನವಳು, ತಮಾಷೆ, ಕೀಟಲೆ ಎಂದರೆ ಪುಟ್ಟಿ, ಸಪ್ಪೆ ಎಂದರೆ ನನ್ನದೇ...

‘ಅಲಂಕಾರ ಹೆಚ್ಚು ಇಲ್ಲ, ಮಲ್ಲಿಗೆ ಮೊಳ ಐವತ್ತು, ಕನಕಾಂಬರದ ಬೆಲೆ ಅಂಬರಕ್ಕೇರಿದೆ, ಮನೆ ಮುಂದೆ ಬೆಳೆದಿರೋ ಗರಿಕೆ ಜೊತೆಗೆ ಕಾಕಡ ಇದೆ, ಭಕ್ತಿ ಮುಖ್ಯ ಅಲ್ವೇ?’

‘ಆಡಂಬರಕ್ಕೆ ಕೊಕ್ಕೆ, ಕೊರೊನಾ ಹೆದರಿಕೆ’.

‘ಈ ಪಾಟಿ ನಿರ್ಬಂಧಗಳು, ಬೀದಿ ಗಣೇಶನ ದರ್ಶನದ ಜೊತೆಗೆ ಚರುಪಿಗೂ ಕೊಕ್’.

‘ಉಡುಗೆ ತೊಡುಗೆ ಮನೇಮಟ್ಟಿಗೆ, ನೆರೆಹೊರೆಗೆ ಕೊಡುಗೆ ಕೊಡೋಕ್ಕೂ ಭಯ, ಎಲ್ಲಿ ಏನು ಅಮರಿಕೊಳ್ಳುತ್ತೋ ಅನ್ನೋ ಆತಂಕ’.

‘ಊಟೋಪಚಾರಕ್ಕೆ ಲಿಮಿಟ್ ಇರಲಿ, ಆರೋಗ್ಯದ ದೃಷ್ಟಿಯಿಂದ. ನಾಲ್ಕು ಕಡುಬು ಜಾಸ್ತಿ ತಿಂದು ಹೊಟ್ಟೆ ಉಬ್ಬರಿಸಿದರೆ ಅನುಭವಿಸೋಕ್ಕಾಗೋಲ್ಲ’.

‘ಎಲ್ಲಿಗೆ ಹೋದರೂ ಎಲ್ಲಿಂದ ಬಂದರೂ ಸ್ಯಾನಿಟೈಸ್ ಆಗೋದು ಮರೀಬೇಡಿ’.

‘ಏನಾದರೂ ಸರಿ, ಮಾಸ್ಕೊಳಗೆ ಮಂತ್ರ, ಸೋಷಿಯಲ್ ಡಿಸ್ಟೆನ್ಸ್ ಕಾಪಾಡ್ಕೋತಾ ಅರ್ಚನೆ, ಹೋಂ ಮೇಡ್ ನೈವೇದ್ಯ ಒಳ್ಳೆಯದು’.

‘ಐದಡಿ ಗಣೇಶಾನೂ ಸಿಗಲಾರದು, ಸಾರ್ವಜನಿಕವಾಗಿ ಕೂರಿಸೋಕ್ಕೂ ನಾಲ್ಕಡಿ ರಿಸ್ಟ್ರಿಕ್ಷನ್ನು...’

‘ಒಣ ಒಣ ಫೀಲಿಂಗ್. ಮೊದಲಿನ ಸ್ಥಿತಿಗೆ ಯಾವಾಗ ಬರುವುದೋ’ ಕಂಠಿ ಬಂದ, ಕೈಯಲ್ಲಿ ಮೋದಕ. ಡಿಸ್ಕಷನ್ ಮಧ್ಯೆ, ‘ಓವರ್ ನೈಟ್ ಡಿಸಿಷನ್ನು, ಬಾಸ್ ಓಣೀಲೂ ಗಣೇಶೋತ್ಸವ, ನಮ್ಮದೇ ಲೀಡು... ಔತಣ, ಸತ್ಕಾರ ಇದೆ, ನಿಮ್ಮನ್ನೂ ಕರೆಯೋಕ್ಕೆ ಹೇಳಿದ್ದಾರೆ’ ಅಂದ.

‘ಆಹಾ, ಅದೆಷ್ಟು ಸೊಗಸು!’ ಹೊಸ ಉತ್ಸಾಹ ಪುಟಿಯಿತು, ಮನೆಮಂದಿಗೆಲ್ಲ ಸಡಗರ ಗಣೇಶೋತ್ಸವ ನೆನೆದು.

‘ಗಂಟೆ ಏಳಾದ್ರೂ ಏಳೋಕ್ಕೇನು ಧಾಡಿ? ರಾತ್ರಿ ಪೂರ್ತಿ ಮೊಬೈಲ್ ಉಜ್ಜೋದು,
ಸೂರ್ಯ ನೆತ್ತಿಗೆ ಬಂದ್ರೂ ಹಾಸಿಗೆಗೆ ಅಂಟಿರೋದು’ ನನ್ನವಳ ಸುಪ್ರಭಾತ ಶುರುವಾಗಿತ್ತು, ಪುಟ್ಟಿಯನ್ನು ಉದ್ದೇಶಿಸುವ ನೆಪದಲ್ಲಿ.

ನನ್ನ ಕನಸೆಲ್ಲ ಕರಗಿ, ಕೈಯುಜ್ಜುತ್ತಾ ‘ಕರಾಗ್ರೇ ವಸತೇ...’ ಗುನುಗಿ ಮೇಲೆದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT