ಬುಧವಾರ, ಮಾರ್ಚ್ 29, 2023
31 °C

ಚುರುಮುರಿ: ದೀಪಾವಳಿಗೆ ದಶಮಗ್ರಹ!

ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

‘ರೀ... ನಿಮ್ದು ಯಾವ ರಾಶಿ?’, ಬೆಳ್ಳಂಬೆಳಗ್ಗೆ ಶ್ರೀಮತಿಯಿಂದ ಕೋರ್ಟ್ ಮಾರ್ಷಲ್. ‘ತುಲಾ’ ಎಂದೆ.

‘ಹೌದಲ್ವೇ! ಅದಕ್ಕೇ ತಾನೆ ನೀವು ಯಾವ್ದೇ ಕೆಲ್ಸವಾದ್ರೂ ಅಷ್ಟು ಅಳೆದೂ ತೂಗೀ ಮಾಡೋದು’.

‘ಇಲ್ದಿದ್ರೆ, ವೃಶ್ಚಿಕ ರಾಶಿಯ ನಿನ್ನಿಂದ ಕುಟುಕಿಸಿಕೊಳ್ಳಬೇಕಲ್ಲ... ಹಬ್ಬದಲ್ಲಿ ಈ ರಾಶಿ ರಗಳೆ ಯಾಕೆ?’

‘ಈ ದೀಪಾವಳೀಲಿ ಚತುರ್ಗ್ರಹಿ ಯೋಗ ಇದೆಯಂತೆ. ಸೂರ್ಯ, ಮಂಗಳ, ಬುಧ, ಶುಕ್ರ ಗ್ರಹಗಳು ಸ್ಥಾನ ಬದಲಿಸುತ್ವಂತೆ. ನಿಮ್ಮಂಥ ತುಲಾ ರಾಶಿಯವರಿಗೆ ಶುಕ್ರದೆಶೆ ಅಂತೆ. ಇದು ಸಂತೋಷದ ಸಂಗತಿಯಲ್ವೇ?’

‘ಏನು ಸಂತೋಷಾನೋ. ದಸರಾ ಆದ್ಮೇಲೆ ಮೈಸೂರಲ್ಲಿ ಕೊರೊನಾ ಹೆಚ್ಚಿದೆಯಂತೆ. ಹಬ್ಬಗಳಲ್ಲಿ ಮೈಮರೀಬೇಡೀಂತ ತಜ್ಞರು
ಎಚ್ಚರಿಸ್ತಿದಾರೆ. ನಮ್ಮ ನಮೋ ಸಾಹೇಬ್ರು ಗ್ಲಾಸ್ಗೊ ಶೃಂಗ ಸಮ್ಮೇಳನದಲ್ಲಿ ಭಾರತ ಹವಾಮಾನ ವೈಪರೀತ್ಯ ತಡೆಯಲ್ಲಿ ಇನ್ನು ಐವತ್ತು ವರ್ಷಗಳಲ್ಲಿ ನೆಟ್ ಜೀರೊ ಗುರಿ ತಲುಪುತ್ತೇಂತ ಘೋಷಿಸಿದಾರೆ...’

‘ಹೌದೂರೀ, ಸರ್ಕಾರ ಹಸಿರು ಪಟಾಕಿ ಮಾತ್ರ ಬಳಸಿ ಪರಿಸರಮಾಲಿನ್ಯ ತಡೆಯಿರೀಂತ ಹೇಳಿದೆ’.

‘ಅದಕ್ಕೇ ನಾನು ಈ ದೀಪಾವಳೀನ ಬಹಳ ಸಿಂಪಲ್ಲಾಗಿ ಆಚರಿಸೋಣ, ನೆಂಟರಿಷ್ಟರನ್ನ ಕರೆಯೋದು ಬೇಡಾಂತ ಹೇಳಿದ್ದು’.

‘ಹೌದೂರಿ, ಆದ್ರಿಂದ್ಲೇ ನಾನು ನಾಲ್ಕೇ ಜನರಿಗೆ ಹೇಳಿರೋದು’.

‘ಯಾರ್‍ಯಾರು?’

‘ನಿಮ್ಮತ್ತೆ, ಮಾವ, ಅಳಿಯ, ಮಗಳು’.

‘ಹಾಗಾದ್ರೆ ಈ ಚತುರ್ಗ್ರಹಿ ಯೋಗದಲ್ಲಿ ನಂಗೆ ಇನ್ನೊಂದು ರಾಜಯೋಗವೂ ಕೂಡಿಬಂತು ಅನ್ನು. ನನ್ನ ಮೈಸೂರು ತಂಗಿಯನ್ನ ಕರೆಯಬೌದಿತ್ತಲ್ಲ. ಪ್ರತೀ ದಸರಾಕ್ಕೂ ಹೋಗಿ ಅವ್ರ ಮನೇಲಿ ಝಾಂಡಾ ಹೊಡೀತೀವಿ. ಈ ಬಾರಿ ಮಾತ್ರ ಸರಳ ದಸರಾ ಅಂತ ಹೋಗಲಿಲ್ಲ’.

‘ಅಲ್ಲಿ ಕೊರೊನಾ ಜಾಸ್ತಿಯಾಗಿದೆಯಲ್ರೀ, ಯುಗಾದಿಗೆ ಕರೆಯೋಣ ಬಿಡಿ’ ಎಂದು ಮಡದಿ ಮೂಗು ಮುರಿಯುವಷ್ಟರಲ್ಲಿ, ವರದಕ್ಷಿಣೆಗೆ ಮುನಿಸಿಕೊಂಡಿದ್ದ ‘ಜಾಮಾತೋ ದಶಮಗ್ರಹ’ ಬಾಗಿಲಲ್ಲಿ ಸಕುಟುಂಬ ಪ್ರತ್ಯಕ್ಷ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.