‘ಚಂಪಟ್ನದ ಟಿಕೆಟ್ ಮ್ಯಾಚಲ್ಲಿ ಯೋಗಣ್ಣ, ಕುಮಾರಣ್ಣ ಇಬ್ಬರೂ ಔಟೇ ಆಯ್ತಿಲ್ಲವಂತೆ. ಇವರಿಬ್ಬರಲ್ಲಿ ಯಾರು ಯಾರ ಅತಿಥಿ ಅಂತ ಗೊತ್ತಾಯ್ತಿಲ್ಲ?’ ಯಂಟಪ್ಪಣ್ಣ ಹೇಳಿತು.
‘ನೋಡಣೈ, ವ್ಯವಸ್ಥೆಯಲ್ಲಿ ಅತಿಥಿಗಳದ್ದೇ ಜಮಾನ. ಅವರು ‘ಗಿವ್’ ಅಂತ ಕೇಳಿದೇಟಿಗೆ ‘ಟೇಕ್’ ಅಂತ ಕೊಟ್ಟು ಸೇವೆ ಮಾಡೂದೇ ಆತಿಥ್ಯದ ಮೂಲ ಮಂತ್ರ!’ ಅಂತ ಒಂದು ಗುಳಿಗೆ ಹಾಕಿದೆ.
‘ಅದೇನ್ಲಾ ಹಂಗಂದ್ರೆ?’ ತುರೇಮಣೆ ಕೇಳಿದರು.
‘ಹೂ ಕನ್ರಿ ಸಾ. ಗಣ್ಯ ಕೈದಿಗಳೇ ನಮ್ಮ ವಿಶೇಷ ಅತಿಥಿಗಳು. ಅವರಿಗೆ ಒಂದು ವೇಯ್ಟ್ ಇರತದೆ. ಇವರು ಯಾವ ಮೋಡಲ್ಲಿ ಕಮೋಡು, ಬಿರಿಯಾನಿ, ಗಾಂಜಾ ಕೇಳಿದ್ರೂ ಇಲ್ಲ ಅನ್ನದೇ ಕೊಡಬಕು. ಧೂಪ, ದೀಪ, ನೈವೇದ್ಯ, ಹೂವು ಕೊಟ್ಟು ಅಕ್ಷತೆ ಇಕ್ಕಿ ಒಳಿಕ್ಕೆ ಕರಕಬಕು’ ಅಂತ ರೂಲುದೊಣ್ಣೆ ಎತ್ತಿದೆ.
‘ಹಂಗಾದ್ರೆ ಕಾಲೇಜುಗಳಲ್ಲಿ ಊಟ-ತಿಂಡಿ ಖರ್ಚಿಗೆ ಸಾಲ ಮಾಡಿಕ್ಯಂದು ಬದುಕ್ತಿರೋ ಅತಿಥಿ ಉಪನ್ಯಾಸಕರನ್ನ ಸಾಲಂಕೃತ ಅತಿಥಿಗಳು ಅಂದೀಯಾ? ಮೂಢರ ರಾಜ್ಯದೇಲಿ ಯಾರು ಅತಿಥಿಗಳು?’ ಅಂತ ತುರೇಮಣೆ ಈಸೀಸೇ ಚಾಟಿ ಬೀಸಿದರು.
‘ಅಲ್ಲ ಕನ್ರೋ ಸಿದ್ದಣ್ಣ ‘ಜಗತ್ತಲ್ಲಿ ಗಾಂಧಿ ತತ್ವ- ಗಾಂಧಿ ವಿಚಾರಧಾರೆ ಬೇರು ಬುಡಬಕು’ ಅಂದದೆ. ಯಾವ ಗಾಂಧಿ, ಯಾರ ಅತಿಥಿ ಅಂತ ಗೊತ್ತಾಯ್ತಾ ಇಲ್ಲ’ ಯಂಟಪ್ಪಣ್ಣ ಚಿಂತೆಗೆ ಬಿದ್ದಿತ್ತು.
‘ಇದು ನನ್ನ ವಿನಮ್ರ ತೀರ್ಮಾನ. ಅಸಂತುಷ್ಟ ಅತಿಥಿಗಳು ಯಾವುದೇ ಕಲ್ಪಿತ ಬದಲಾವಣೆಗಳಿಂದ ತಮ್ಮ ಸಂತೋಷವನ್ನು ಹೆಚ್ಚಿಸಿಕೊಳ್ಳಬಹುದು. ಆದರೂ ಅವರು ತೀವ್ರ ಅತೃಪ್ತರಾಗಿದ್ದಾರೆ’ ನನ್ನ ಮಾತಿಗೆ ಚಂದ್ರು ಬೆರಗಾಗಿ ಚಳಿ ಬಂದೋನ ಥರ ನಡುಗ್ತಿದ್ದ.
‘ಅದೇನು ಬದಲಾವಣೆ? ಯಾವುದು ಕಲ್ಪಿತ? ಯಾರು ಅತೃಪ್ತರು? ಇದ್ಯಾವ ಸೀಮೆ ಕನ್ನಡ?!’ ತುರೇಮಣೆಗೂ ಚಿಂತೆಯಾಯಿತು.
‘ಇದು ಕೆಪಿಎಸ್‍ಸಿ ಪರೀಕ್ಷೆಯ ಗುಟೇಶನ್ ಪುಲ್ ಸಾ. ಇಂಥಾ ಮೀಮುಗಳು, ಚೀಟುಗಳು ನನಗೆ ಬಲೇ ಇಷ್ಟ’ ಅಂತ ಗಿಲೀಟ್ ಮಾಡಿದೆ.