ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ಶಿಕ್ಷಣ ಕುರಿತಾದ ಚರ್ಚೆ: ಸಾತ್ವಿಕ ಆಹಾರವೆಂಬ ಜಾತಿ ಶ್ರೇಷ್ಠತೆಯ ಮೌಲ್ಯ

ಶಾಲೆಯಲ್ಲಿ ಧರ್ಮಾಧಾರಿತ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆಯೇ?
Last Updated 13 ಜನವರಿ 2023, 19:31 IST
ಅಕ್ಷರ ಗಾತ್ರ

ಸಾತ್ವಿಕ ಆಹಾರ ಪದ್ಧತಿ ಸಾತ್ವಿಕತೆಯನ್ನು ಬೆಳೆಸುತ್ತದೆ ಎಂಬ ಅತಾರ್ಕಿಕವಾದ ಸೂತ್ರವನ್ನು ಶಿಕ್ಷಣದಲ್ಲಿ ಜಾರಿಗೊಳಿಸಬೇಕೆಂದು ‘ಮೌಲ್ಯಶಿಕ್ಷಣ’ ಸಮಾಲೋಚನೆಯ ದುಂಡು ಮೇಜಿನ ಪರಿಷತ್ ಸೂಚನೆ ನೀಡಿದೆ. ಇದು ಸಸ್ಯಾಹಾರವೊಂದೇ ಶ್ರೇಷ್ಠ, ಸಸ್ಯಾಹಾರಿಗಳೆಲ್ಲ ಸಾತ್ವಿಕ ಪ್ರವೃತ್ತಿಯವರಾಗಿರುತ್ತಾರೆ, ಮಾಂಸಹಾರಿಗಳೆಲ್ಲ ಹಿಂಸ್ರಕರಾಗಿರುತ್ತಾರೆ ಎಂಬ ಸುಳ್ಳು ಪ್ರಮೇಯವನ್ನು ವಿದ್ಯಾರ್ಥಿಗಳ ತಲೆಗೆ ತುಂಬುವ ಪುರೋಹಿತಶಾಹಿ ಕುತರ್ಕವಲ್ಲದೆ ಬೇರೇನಲ್ಲ. ಬೇರೆ ಬೇರೆ ಆಹಾರ ಕ್ರಮಗಳನ್ನು ಶ್ರೇಷ್ಠ-ಕನಿಷ್ಠ ಎಂಬ ವಿಂಗಡೀಕರಣಕ್ಕೆ ಇದು ಗುರಿಮಾಡುತ್ತದೆ. ಇದು ಅಸಹಿಷ್ಣು- ಅಗೌರವದ ಭಾವನೆಗಳನ್ನು ಎಳೆ ಮನಸ್ಸುಗಳಲ್ಲಿ ಬಿತ್ತುತ್ತದೆ. ಸಸ್ಯಾಹಾರಿಗಳೆಲ್ಲ ಸಾತ್ವಿಕ ವ್ಯಕ್ತಿತ್ವದವರು ಎಂಬ ವಾದವನ್ನು ಸಮರ್ಥಿಸುವುದಕ್ಕೆ ನಮ್ಮ ಸಮಾಜದಲ್ಲಿ ಇರುವ ನಿದರ್ಶನಗಳೆಷ್ಟು? ಮಾಂಸಾಹಾರಿಗಳೆಲ್ಲ ತಾಮಸರು ಎಂಬುದಕ್ಕೆ ನಮ್ಮಲ್ಲಿ ಇರುವ ಸಾಕ್ಷಾಧಾರಗಳೆಷ್ಟು?

**

ಶಿಕ್ಷಣ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ವಿವಾದ ಉಂಟು ಮಾಡುವುದು ಸಚಿವ ಬಿ. ಸಿ. ನಾಗೇಶ್ ಅವರಿಗೆ ಒಂದು ಚಟವಾಗಿಬಿಟ್ಟಿದೆ. ಶಿಕ್ಷಣ ಮಂತ್ರಿ ಸದಾ ಸುದ್ದಿಯಲ್ಲಿರುತ್ತಾರೆ ಆದರೆ ಕೆಲಸಕ್ಕೆ ಬಾರದ ವಿಷಯಗಳಿಗಾಗಿ ಎಂದು ವಿಷಾದದಿಂದ ಹೇಳಬೇಕಾಗಿದೆ. ಶಿಕ್ಷಣ ಇಲಾಖೆ ಸುಧಾರಣೆಗಳ ಹೆಸರಲ್ಲಿ ಬೇರೆ ಬೇರೆ ಕ್ರಮಗಳನ್ನು ಪರಿಚಯಿಸಿದೆಯಾದರೂ ಅವು ಯಾವುವೂ ಶಿಕ್ಷಣವನ್ನು ವಸಾಹತುಶಾಹಿ ಛಾಯೆಯಿಂದ ಪೂರ್ಣ ಬಿಡುಗಡೆಗೊಳಿಸಿಲ್ಲ. ವಾರ್ಷಿಕ ಪರೀಕ್ಷೆಯೊಂದರ ಮೂಲಕ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಅಳೆಯುವುದೆಂಬುದು ಸೂಕ್ತ ವಿಧಾನವಲ್ಲ ಎಂಬ ಟೀಕೆಗಳಿಗೆ ಉತ್ತರವಾಗಿ ವರ್ಷದಲ್ಲಿ ಎರಡು ಮೂರು ಸಲ ಕಿರು ಪರೀಕ್ಷೆಗಳನ್ನು ಮಾಡುವ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಆದರೆ ಇದು ಪರೀಕ್ಷೆ ಮಾಡುವ ವಿಧಾನವನ್ನು ಬದಲಿಸಲಿಲ್ಲ, ಬದಲಾಗಿ ಪರೀಕ್ಷೆ ನಡೆಸುವ ಆವರ್ತನಗಳನ್ನು ಮಾತ್ರ ಹೆಚ್ಚಿಸಿತು.

ಪಾಠವೊಂದರ ಬಗ್ಗೆ ವಿದ್ಯಾರ್ಥಿಗಳು ಎಷ್ಟು ಕಲಿತಿದ್ದಾರೆ ಎಂಬುದನ್ನು ಪರೀಕ್ಷೆ ಮಾಡ‌ಲು ಜ್ಞಾಪಕ ಶಕ್ತಿಯನ್ನಾಧರಿಸಿದ ಅಳತೆಗೋಲುಗಳನ್ನೇ ಈಗಲೂ ಪ್ರಧಾನವಾಗಿ ಇಟ್ಟುಕೊಳ್ಳಲಾಗಿದೆ. ಪ್ರವಚನ ಮಾದರಿಯ ಬೋಧನೆಯ ಮುಖಾಂತರ ಪಾಠವನ್ನು ಅರ್ಥಮಾಡಿಸುತ್ತೇವೆಂದು ಪ್ರಯತ್ನಿಸುವ ಪದ್ಧತಿ, ಉತ್ತರಗಳನ್ನು ಉರು ಹಚ್ಚುವ ಮುಖಾಂತರ ಹೆಚ್ಚು ಅಂಕ ಗಳಿಸಿದರೆ ಸಾಕು ಎಂಬ ವಿದ್ಯಾರ್ಥಿಗಳ ಮನಸ್ಥಿತಿ ಇವೆರಡೂ ಬಗೆಹರಿಯಬೇಕಾದ ಸಮಸ್ಯೆಗಳಾಗಿಯೇ ಉಳಿದಿವೆ.

ಶಿಕ್ಷಣದಲ್ಲಿ ಮೂಲಭೂತ ಸುಧಾರಣೆಯೆಂದರೆ ಇಂಗ್ಲಿಷರು ವಿನ್ಯಾಸ ಮಾಡಿಟ್ಟು ಹೋಗಿದ್ದ ಶಿಕ್ಷಣ ಕ್ರಮವನ್ನು ಭಾರತದ ಸಾಮಾಜಿಕ - ಸಾಂಸ್ಕೃತಿಕ ಸೂಕ್ಷ್ಮಗಳಿಗೆ ಅನುವಾಗುವ ಹಾಗೆ ಮಾರ್ಪಡಿಸಿಕೊಳ್ಳಬೇಕು ಎಂಬ ಮಾತನ್ನು ನುರಿತ ಶಿಕ್ಷಣ ತಜ್ಞರು ಹೇಳಿದ್ದಾರೆ. ಅದನ್ನು ಜಾರಿಗೊಳಿಸುತ್ತೇವೆಂಬ ಪ್ರಯತ್ನದಲ್ಲಿ ನಡೆಯುತ್ತಾ ಬಂದಿರುವುದು ಶಿಕ್ಷಣದ ವೈದಿಕೀಕರಣ. ಈ ವೈದಿಕೀಕರಣ ಜಾತಿ ಶ್ರೇಣಿ ವ್ಯವಸ್ಥೆಯನ್ನು ಪರೋಕ್ಷವಾಗಿ ಪ್ರತಿಪಾದನೆ ಮಾಡುವ ದಿಕ್ಕಿನಲ್ಲಿದೆ. ಇಂಗ್ಲಿಷರ ಪದ್ಧತಿಯನ್ನು ರಿಪೇರಿ ಮಾಡುವುದೆಂದರೆ ಪ್ರಾಚೀನ ಗುರುಕುಲ ಶಿಕ್ಷಣದ ಮಾದರಿಯನ್ನು ಅಳವಡಿಸಿಕೊಳ್ಳುವುದು ಎಂಬ ದಿಕ್ಕಿಗೆ ಹೊರಳಿಕೊಂಡಿರುವುದು ಹೊಸಶಿಕ್ಷಣ ನೀತಿಯಲ್ಲಿ ಢಾಳಾಗಿ ಕಂಡು ಬರುತ್ತಿದೆ. ವೇದ ಗಣಿತವನ್ನು ಪಠ್ಯಕ್ರಮದೊಳಕ್ಕೆ ಪರಿಚಯಿಸಿರುವುದು ಕೂಡ ಇಂತಹ ಮಹಾನ್ ಸುಧಾರಣೆಗಳ ಒಂದು ಫಲ. ಶಿಕ್ಷಣದ ಕೋಮುವಾದೀಕರಣದ ಹಲವು ಪ್ರಯತ್ನಗಳು ನಡೆಯುತ್ತಿದ್ದು, ಅಂತಹ ಪ್ರಯತ್ನಗಳಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಮತ್ತು ಅದರ ಶಿಕ್ಷಣ ಮಂತ್ರಿ ಬಹಳ ಮುಂದೆ ಹೋಗುವ ತರಾತುರಿಯಲ್ಲಿದ್ದಾರೆ.

ಶಾಲಾ ಮಕ್ಕಳಿಗೆ ಯೋಗ ಕಲಿಸುವ ಮೂಲಕ ಏಕಾಗ್ರತೆ ಸಾಧಿಸಲು ನೆರವಾಗುತ್ತೇವೆ ಎಂಬ ಒಂದು ಕ್ರಮವನ್ನು ಜಾರಿಗೊಳಿಸಲಾಯಿತು. ಶಾಲಾ ಮಕ್ಕಳ ವಯಸ್ಸು, ಅವರ ಆಸಕ್ತಿಗಳು, ಗಮನ ಕೇಂದ್ರೀಕರಣ ಮಾಡುವಲ್ಲಿನ ಸಾಮರ್ಥ್ಯ, ಸುತ್ತಲ ಲೋಕ ವಿದ್ಯಮಾನಗಳು; ಮುಖ್ಯವಾಗಿ ಡಿಜಿಟಲ್ ಸಂಪರ್ಕ ಮಾಧ್ಯಮಗಳು ಅವರ ಆಸಕ್ತಿಯನ್ನು ಕೆರಳಿಸುತ್ತಿರುವ ವಿಧಾನಗಳನ್ನು ಸಮಗ್ರವಾಗಿ ಗಮನದಲ್ಲಿಟ್ಟುಕೊಳ್ಳದೆ, ಯೋಗಾಭ್ಯಾಸದಿಂದ ಈ ಸಮಸ್ಯೆಯನ್ನು ನೇರ್ಪುಗೊಳಿಸುತ್ತೇವೆಂದು ಹೊರಟಿದ್ದು ವೈದಿಕೀಕರಣದ ಒಂದು ಹುನ್ನಾರವಷ್ಟೆ.

ಈಗ ‘ಮೌಲ್ಯ ಶಿಕ್ಷಣ’ ಪರಿಚಯ ಎಂಬ ಮತ್ತೊಂದು ತಂತ್ರವನ್ನು ಶಿಕ್ಷಣ ಮಂತ್ರಿಗಳು ಪ್ರಯೋಗಿಸಲು ಹೊರಟಿದ್ದಾರೆ. ನೈತಿಕ ನಡವಳಿಕೆಯನ್ನು ಕಲಿಸುವುದು ಶಿಕ್ಷಣದ ಒಂದು ಕರ್ತವ್ಯ ಎನ್ನುವುದರಲ್ಲಿ ಹೆಚ್ಚು ತಕರಾರಿಲ್ಲ. ಆಧುನಿಕ ಶಿಕ್ಷಣದಲ್ಲಿ ಮೌಲ್ಯ ಪ್ರಜ್ಞೆ ಎನ್ನುವುದು ‘ನಾಗರಿಕ ಪ್ರಜ್ಞೆ’ಯಾಗಿ ರೂಪುಗೊಳ್ಳಬೇಕು. ವಿಚಾರಶೀಲ ಮನಸ್ಸು, ಸುಶಿಕ್ಷಿತ ಸ್ವಭಾವ, ಸಂಸ್ಕಾರವಂತ ನಡವಳಿಕೆ ಎನ್ನುವುದು ಆಧುನಿಕ ಸಮಾಜದ ಅಗತ್ಯಗಳನ್ನು ಆಧರಿಸಿ, ವೈಜ್ಞಾನಿಕ ಚಿಂತನೆ ಮತ್ತು ವಿವೇಕಯುತ ಪರಾಮರ್ಶೆಯಿಂದ ರೂಪುಗೊಳ್ಳಬೇಕು. ಸಾರ್ವಜನಿಕ ಬದುಕಿನಲ್ಲಿ ಸಾಮರಸ್ಯ- ಸಹಿಷ್ಣುತೆ- ಸಹಾನುಭೂತಿ ಎಂಬ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ‘ತನ್ನಂತೆ ಪರರ ಬಗೆದೊಡೆ ಕೈಲಸಮಕ್ಕು ಬಿನ್ನಾಣಮಕ್ಕು’ ಎಂಬ ಮೌಲ್ಯ ಪ್ರಜ್ಞೆ ಮಾತ್ರವೇ ಭಾರತದಂತಹ ಬಹುತ್ವದ ಸಾಂಸ್ಕೃತಿಕ ವಾತಾವರಣದಲ್ಲಿ ಸಾಮಾಜಿಕ ನೆಮ್ಮದಿಯನ್ನು ನೆಲೆಗೊಳಿಸಬಲ್ಲುದು. ಈ ಬಗ್ಗೆ ಸೂಕ್ತವಾದ ತಿಳಿವಳಿಕೆಯನ್ನು ಕಲಿಸಲು, ಪ್ರೇರಣೆಗಳನ್ನು ಒದಗಿಸಲು ಭಗವದ್ಗೀತೆಯೂ ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥವನ್ನು ಪಠ್ಯಕ್ರಮದಲ್ಲಿ ಸೇರಿಸುವುದು ಪರಿಣಾಮಕಾರಿ ಕ್ರಮವಾಗುವುದಿಲ್ಲ. ಶಿಕ್ಷಣವು ಕಲಿಸಬೇಕಿರುವುದು ಧಾರ್ಮಿಕ ನೀತಿಯನ್ನಲ್ಲ. ನಾಗರಿಕ ನೈತಿಕತೆಯನ್ನು.

ವಿಮಾರ್ಶಾತ್ಮಕವಾಗಿ ಆಲೋಚಿಸಿ, ಸರಿ-ತಪ್ಪುಗಳನ್ನು ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ವಿವೇಚಿಸಿ ನಡೆದುಕೊಳ್ಳುವ ಮೌಲ್ಯ ಪ್ರಜ್ಞೆ ಬರಬೇಕಿರುವುದು ಸನಾತನ ಧಾರ್ಮಿಕ ಗ್ರಂಥಗಳ ಪಠಣದಿಂದಲ್ಲ. ನಮ್ಮ ದೇಶದ ಸಂವಿಧಾನ ಹೇಳಿರುವ ಸಮಭಾವ- ಸಾಮಾಜಿಕ ನ್ಯಾಯಗಳ ಆಶಯದಲ್ಲಿರುವ ‘ಸರ್ವೋದಯ’ ಎಂಬ ಚಿಂತನೆ ವಿದ್ಯಾರ್ಥಿ ಯುವಜನರಲ್ಲಿ ಚೆನ್ನಾಗಿ ಬೇರೂರಬೇಕು. ಪಂಗಡ ಪ್ರಜ್ಞೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ತಾರತಮ್ಯ, ಅಧಿಕಾರದಾಹ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ಮನಸ್ಸಿನೊಳಗಿಂದ ತೊಲಗಿಸಿ, ಸಮದರ್ಶಿತ್ವದ - ಭೂತದಯೆಯ ಮನಸ್ಥಿತಿಯನ್ನು ರೂಪಿಸುವುದು ಆಧುನಿಕ ಶಿಕ್ಷಣದ ಗುರಿಯಾಗಬೇಕು.

ಶಿಕ್ಷಣ ಮಂತ್ರಿಗಳಿಗೆ ಬೇಕಿರುವುದು ದೇಶ ಕಟ್ಟುವ, ಸಮಾಜವನ್ನು ಸ್ವಾಸ್ಥ್ಯದೆಡೆಗೆ ಮುನ್ನಡೆಸುವ ಇಂತಹ ಮೌಲ್ಯ ಪ್ರಜ್ಞೆಯಲ್ಲ. ಸಾತ್ವಿಕ ಆಹಾರ ಪದ್ಧತಿ ಸಾತ್ವಿಕತೆಯನ್ನು ಬೆಳೆಸುತ್ತದೆ ಎಂಬ ಅತಾರ್ಕಿಕವಾದ ಸೂತ್ರವನ್ನು ಶಿಕ್ಷಣದಲ್ಲಿ ಜಾರಿಗೊಳಿಸಬೇಕೆಂದು ‘ಮೌಲ್ಯಶಿಕ್ಷಣ’ ಸಮಾಲೋಚನೆಯ ದುಂಡು ಮೇಜಿನ ಪರಿಷತ್ ಸೂಚನೆ ನೀಡಿದೆ. ಇದು ಸಸ್ಯಾಹಾರವೊಂದೇ ಶ್ರೇಷ್ಠ, ಸಸ್ಯಾಹಾರಿಗಳೆಲ್ಲ ಸಾತ್ವಿಕ ಪ್ರವೃತ್ತಿಯವರಾಗಿರುತ್ತಾರೆ, ಮಾಂಸಹಾರಿಗಳೆಲ್ಲ ಹಿಂಸ್ರಕರಾಗಿರುತ್ತಾರೆ ಎಂಬ ಸುಳ್ಳು ಪ್ರಮೇಯವನ್ನು ವಿದ್ಯಾರ್ಥಿಗಳ ತಲೆಗೆ ತುಂಬುವ ಪುರೋಹಿತಶಾಹಿ ಕುತರ್ಕವಲ್ಲದೆ ಬೇರೇನಲ್ಲ. ಬೇರೆ ಬೇರೆ ಆಹಾರ ಕ್ರಮಗಳನ್ನು ಶ್ರೇಷ್ಠ-ಕನಿಷ್ಠ ಎಂಬ ವಿಂಗಡೀಕರಣಕ್ಕೆ ಇದು ಗುರಿಮಾಡುತ್ತದೆ. ಇದು ಅಸಹಿಷ್ಣು- ಅಗೌರವದ ಭಾವನೆಗಳನ್ನು ಎಳೆ ಮನಸ್ಸುಗಳಲ್ಲಿ ಬಿತ್ತುತ್ತದೆ. ಸಸ್ಯಾಹಾರಿಗಳೆಲ್ಲ ಸಾತ್ವಿಕ ವ್ಯಕ್ತಿತ್ವದವರು ಎಂಬ ವಾದವನ್ನು ಸಮರ್ಥಿಸುವುದಕ್ಕೆ ನಮ್ಮ ಸಮಾಜದಲ್ಲಿ ಇರುವ ನಿದರ್ಶನಗಳೆಷ್ಟು? ಮಾಂಸಾಹಾರಿಗಳೆಲ್ಲ ತಾಮಸರು ಎಂಬುದಕ್ಕೆ ನಮ್ಮಲ್ಲಿ ಇರುವ ಸಾಕ್ಷ್ಯಾಧಾರಗಳೆಷ್ಟು?

ಇವನ್ನೆಲ್ಲಾ ಪರ್ಯಾಲೋಚಿಸಿ ದುಂಡು ಮೇಜಿನ ಪರಿಷತ್ ತನ್ನ ಸಲಹೆಗಳನ್ನು ಕೊಡಬೇಕಿತ್ತು. ಆದರೆ ಅದು ಕೊಟ್ಟಿರುವುದು ವೈದಿಕ ಜಾತಿವಾದದ ಅವೈಜ್ಞಾನಿಕ ಅತಾರ್ಕಿಕ ಸಲಹೆಯನ್ನು. ದುಂಡು ಮೇಜಿನ ಪರಿಷತ್ತಿನಲ್ಲಿ ಸೇರಿದ್ದವರು ಶಿಕ್ಷಣ ತಜ್ಞರಲ್ಲ. ಹೇಳಿ ಕೇಳಿ ಧಾರ್ಮಿಕ ಕ್ಷೇತ್ರದ ಸ್ವಾಮೀಜಿಗಳು. ಜಾತಿಗೊಂದು ಮಠವನ್ನು ಕಟ್ಟಿಕೊಂಡಿರುವ ಪೀಠಾಧೀಶರು. ಪಾದಪೂಜೆ, ಅಡ್ಡಪಲ್ಲಕ್ಕಿ ಮೆರವಣಿಗೆ, ಪಂಕ್ತಿಭೇದ ಪದ್ಧತಿಗಳನ್ನು ಆಚಾರಗಳಾಗಿ ಪಾಲಿಸುತ್ತಿರುವವರು. ಶಿಕ್ಷಣದಲ್ಲಿ ಕ್ಯಾಪಿಟೇಶನ್, ಡೊನೇಷನ್‌ಗಳನ್ನು, ಖಾಸಗಿ ಮನೆಪಾಠಗಳನ್ನು ಬೆಂಬಲಿಸುತ್ತಿರುವವರು.

ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿ ಕಾಪಿಚೀಟಿ, ಮೌಲ್ಯಮಾಪನದಲ್ಲಿ ಅವ್ಯವಹಾರ ಮುಂತಾದವುಗಳನ್ನು ತಡೆಯದೆ ವಿದ್ಯಾರ್ಥಿಗಳಿಗೆ ನ್ಯಾಯಪ್ರಜ್ಞೆಯ ಉಪದೇಶ ಮಾಡಿದ ಮಾತ್ರಕ್ಕೆ ಪರಿಣಾಮಕಾರಿಯಾಗಬಲ್ಲದೇ. ಶಿಕ್ಷಣ ತಜ್ಞರು, ಬೇರೆ ಬೇರೆ ಸಾಂಸ್ಕೃತಿಕ ವಲಯದ ಚಿಂತಕರು, ಮನೋವರ್ತನ ಶಾಸ್ತ್ರಜ್ಞರು, ದಮನಿತ ಸಮುದಾಯಗಳ ಪ್ರತಿನಿಧಿಗಳು, ಮಹಿಳೆಯರು ಮುಂತಾದವರೆಲ್ಲ ಸೇರಿ ಒಟ್ಟಾಗಿ ಚಿಂತಿಸಿ, ಶಿಕ್ಷಣ ಕ್ಷೇತ್ರದ ಭವಿಷ್ಯ, ದೇಶದ ಹಿತಾಸಕ್ತಿ, ಆಧುನಿಕ ಜಗತ್ತಿನ ಅವಶ್ಯಕತೆಗಳನ್ನೆಲ್ಲಾ ಗಮನಿಸಿ ‘ಮೌಲ್ಯ ಶಿಕ್ಷಣ’ದ ನೀತಿಗಳನ್ನು ರೂಪಿಸಿದರೆ ಮಾತ್ರ ಅದಕ್ಕೊಂದು ಅರ್ಥವಿರುತ್ತದೆ. ತನ್ನ ಮೂಗಿನ ನೇರಕ್ಕೆ, ರಾಜಕೀಯ ತಂತ್ರಕ್ಕಾಗಿ ‘ಪಕ್ಷಕ್ಕೊಂದು ನೀತಿಶಾಸ್ತ್ರ’ ಎಂಬ ಪದ್ಧತಿಯಿಂದ ಉಂಟಾಗುವುದು ದುಷ್ಪರಿಣಾಮ ಮಾತ್ರ.

ಶಿಕ್ಷಣ ಮಂತ್ರಿಗಳಿಗೆ ತಮ್ಮ ಪಕ್ಷದ ಚಾತುರ್ವರ್ಣ ಪ್ರಣೀತ ಸನಾತನವಾದವನ್ನು ‘ಮೌಲ್ಯ ಶಿಕ್ಷಣ’ ಎಂಬ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತುರುಕಬೇಕೆಂದಿರುವ ಉದ್ದೇಶವನ್ನು ಈ ಒಟ್ಟಾರೆ ಪ್ರಹಸನ ನಮ್ಮ ಮುಂದಿಟ್ಟಿದೆ. ಕೋಮುವಾದಿ ಪ್ರೇರಣೆಯುಳ್ಳ ಇಂತಹ ಪ್ರಯೋಗಗಳ ಮೂಲಕ ಸಮಾಜದ ನೆಮ್ಮದಿಯನ್ನು ಹಾಳುಗೆಡಹುವ ಪ್ರಯತ್ನಗಳನ್ನು ಸರ್ಕಾರ ಕೈಬಿಡಬೇಕು. ಇದಕ್ಕೆ ಸಿಗುವ ಬೆಂಬಲ ಏನಾದರೂ ಇದ್ದರೆ ಅದು ಜಾತಿ ಶ್ರೇಣೀಕರಣವನ್ನು, ಸಾಂಸ್ಕೃತಿಕ ಅಸಮಾನತೆಯನ್ನುಪ್ರತಿಪಾದಿಸುವವರದ್ದು ಮಾತ್ರವಾಗಿರುತ್ತದೆ. ಏಕಸಂಸ್ಕೃತಿ ಹೇರಿಕೆಯ ಹುನ್ನಾರದ ಅಂಗವಾಗಿ ಮೂಡಿಬಂದಿರುವ ಇಂತಹ ಅವೈಜ್ಞಾನಿಕ ಸಲಹೆಗಳನ್ನು ನಿರಾಕರಿಸುವುದರಿಂದ ಮಾತ್ರ ವಿದ್ಯಾರ್ಥಿಗಳ ಆಲೋಚನಾ ಸ್ವಾಸ್ಥ್ಯ ಕಾಪಾಡಬಹುದಾಗಿದೆ.

ಲೇಖಕ: ಕವಿ ಮತ್ತು ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT