ಸೋಮವಾರ, ಮಾರ್ಚ್ 27, 2023
30 °C

ಕನ್ನಡದಲ್ಲೇ ತಾಂತ್ರಿಕ ಶಿಕ್ಷಣ ನಾಡು-ನುಡಿ ಬೆಳೆಸುವ ಬದ್ಧತೆ

ಡಾ.ಸಿ.ಎನ್. ಅಶ್ವತ್ಥನಾರಾಯಣ Updated:

ಅಕ್ಷರ ಗಾತ್ರ : | |

Prajavani

ನಮ್ಮ ಉಸಿರು ಕನ್ನಡ, ನಮ್ಮ ಕಸುವು ಕನ್ನಡ
ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ;
ಕನ್ನಡವಿದು ಕನ್ನಡ, ಬನ್ನಿ ನಮ್ಮ ಸಂಗಡ
→-ಎಂ. ಗೋಪಾಲಕೃಷ್ಣ ಅಡಿಗ

ಈಗ ರಾಜ್ಯದ ಶೈಕ್ಷಣಿಕ ವಲಯದಲ್ಲಿ ದಿನವೂ ಒಂದಿಲ್ಲೊಂದು ಕಡೆ ಚರ್ಚಿತವಾಗುತ್ತಿರುವ ವಿಷಯವೆಂದರೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ). ರಾಜ್ಯದಲ್ಲಂತೂ ಈ ನೀತಿಯನ್ನು ಕುರಿತು ನಾನಾ ಕಡೆಗಳಲ್ಲಿ ಹಲವು ರೂಪಗಳಲ್ಲಿ ಸಂವಾದ ನಡೆಯುತ್ತಿರುವುದು ಸ್ವಾಗತಾರ್ಹ.

ನಮಗೆ `ನಮ್ಮತನ’ ಎನ್ನುವ ಹೆಮ್ಮೆಯನ್ನು ಮೂಡಿಸುವ ಮತ್ತು ಅನನ್ಯ ಸ್ಥಾನಮಾನ ತಂದುಕೊಡುವ ನಿರ್ಣಾಯಕ ಅಂಶಗಳೆಂದರೆ, ಭಾಷೆ ಮತ್ತು ಸಂಸ್ಕೃತಿ. ನಾವು ಆಧುನಿಕ ಶಿಕ್ಷಣ ಮತ್ತು ಅವಕಾಶಗಳನ್ನು ಪಡೆದುಕೊಂಡು ಯಾವ ದೇಶಕ್ಕೆ ಬೇಕಾದರೂ ಹೋಗಿ ನೆಲೆಸಬಹುದು, ನಿಜ. ಆದರೆ, ಎಷ್ಟೇ ತಲೆಮಾರುಗಳು ಉರುಳಿದರೂ ನಮ್ಮ ಅಸ್ತಿತ್ವದ ಬೇರುಗಳಿರುವುದು ನಮ್ಮ ಕರ್ನಾಟದಲ್ಲೇ; ಕನ್ನಡ ಭಾಷೆಯಲ್ಲೇ. ಹೀಗಾಗಿ, ನಮ್ಮೆಲ್ಲರ ಅಂತರಂಗದಲ್ಲೂ `ಕನ್ನಡ-ಕನ್ನಡಿಗ-ಕರ್ನಾಟಕ’ ಎನ್ನುವುದೇ ನಿತ್ಯಮಂತ್ರವಾಗಿದೆ. ಕನ್ನಡ ಜನಮಾನಸದಲ್ಲಿ ಹೇಗೋ ಹಾಗೆ ಕರ್ನಾಟಕ ಸರ್ಕಾರವು ಕೂಡ ನಾಡು-ನುಡಿಗಳನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿದೆ.

ಎನ್ಇಪಿಯಲ್ಲಿ ಅತ್ಯಂತ ಸ್ಪಷ್ಟವಾಗಿ `ಪ್ರಾಥಮಿಕ ಶಿಕ್ಷಣದ ಜೊತೆಗೆ ಸಾಧ್ಯವಿರುವ ಕಡೆಗಳಲ್ಲೆಲ್ಲ ಮಾತೃಭಾಷೆಯಲ್ಲೇ (ಪರಿಸರದ ಭಾಷೆ, ಸ್ಥಳೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆ ಎಂದರೂ ಇದೇ) ಶಿಕ್ಷಣವನ್ನು ಕೊಡಬೇಕು. ಉನ್ನತ ಶಿಕ್ಷಣವನ್ನು ಕೂಡ ಆಯಾ ಪ್ರದೇಶಗಳ ಭಾಷೆಯಲ್ಲೇ ಕೊಡಬೇಕು’ ಎನ್ನುವ ಗುರಿ ಇರುವುದನ್ನು ಎಲ್ಲರೂ ಗಮನಿಸಿರಬಹುದು. ಇದಕ್ಕೆ ತಕ್ಕಂತೆ ಕರ್ನಾಟಕವು ದೇಶದಲ್ಲೇ ಪ್ರಥಮ ರಾಜ್ಯವಾಗಿ ಕನ್ನಡದಲ್ಲೇ ಎಂಜಿನಿಯರಿಂಗ್ ಶಿಕ್ಷಣವನ್ನು ಕೊಡಲು ಮುಂದಡಿ ಇಟ್ಟಿದ್ದು, ಈಗಾಗಲೇ ನಾಲ್ಕು ಕಾಲೇಜುಗಳಲ್ಲಿ ಇದನ್ನು ಆರಂಭಿಸಿದೆ. ಇವೆಂದರೆ-  ಭಾಲ್ಕಿಯ ಭೀಮಣ್ಣ ಖಂಡ್ರೆ ಎಂಜಿನಿಯರಿಂಗ್ ಕಾಲೇಜು, ಚಿಕ್ಕಬಳ್ಳಾಪುರದ ಎಸ್.ಜಿ.ಸಿ. ಎಂಜಿನಿಯರಿಂಗ್ ಕಾಲೇಜು, ಮೈಸೂರಿನ ಮಹಾರಾಜ ಎಂಜಿನಿಯರಿಂಗ್ ಕಾಲೇಜು ಮತ್ತು ವಿಜಯಪುರದ ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು.

ಈ ಪೈಕಿ ಮೊದಲ ಎರಡು ಕಾಲೇಜುಗಳಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲೂ ಕೊನೆಯ ಎರಡು ಕಾಲೇಜುಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲೂ ಕನ್ನಡ ಮಾಧ್ಯಮದಲ್ಲಿ ಬೋಧನೆಯನ್ನು ಆರಂಭಿಸಲಾಗಿದ್ದು, ನಾಲ್ಕೂ ಕಾಲೇಜುಗಳಲ್ಲಿ ತಲಾ 30 ಸೀಟುಗಳಿವೆ. ಇಷ್ಟೇ ಅಲ್ಲ, ಇದಕ್ಕೆ ತಕ್ಕಂತೆ ಕನ್ನಡದಲ್ಲೇ ಎಂಜಿನಿಯರಿಂಗ್ ಪಠ್ಯ ಪುಸ್ತಕಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ! ಇದರ ಹಿಂದೆ ನೂರಾರು ಪರಿಣತರ ಶ್ರಮವಿದೆ. ಇಷ್ಟೇ ಅಲ್ಲ, ಡಿಪ್ಲೊಮಾ ಹಂತಕ್ಕೂ ಇದನ್ನು ವಿಸ್ತರಿಸುವ ಮಹದಾಸೆ ನಮ್ಮದು. ಹೀಗಾಗಿ ಈಗ ಈ ಹಂತದಲ್ಲಿರುವ ಕನ್ನಡ-ಇಂಗ್ಲಿಷ್ ಸಮ್ಮಿಶ್ರ ಬೋಧನಾ ಮಾದರಿಯು ಅಬಾಧಿತವಾಗಿ ಮುಂದುವರಿಯಲಿದೆ. ಇದನ್ನು ನಾನಿಲ್ಲಿ ವಿಷದವಾಗಿ ಹೇಳಲು ಕಾರಣವಿದೆ. ಅದೇನೆಂದರೆ, ಕೇಂದ್ರ ಸರ್ಕಾರವು ರಾಷ್ಟ್ರದ ಎಂಟು ಭಾಷೆಗಳಿಗೆ ಈ ದಿಸೆಯಲ್ಲಿ ಹಸಿರು ನಿಶಾನೆ ತೋರಿಸಿದೆ. ಆದರೆ, ಈ ಉಜ್ವಲ ಅವಕಾಶವನ್ನು ಎಲ್ಲರಿಗಿಂತ ಮೊದಲು ಉಪಯೋಗಿಸಿಕೊಂಡಿರುವುದು ನಮ್ಮ ಕರ್ನಾಟಕ ಸರ್ಕಾರವೊಂದೇ! ಇದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಚಾರ.

ರಾಷ್ಟ್ರಕವಿ ಕುವೆಂಪು ಅವರಂತೂ ಯಾವಾಗಲೂ ‘ಕನ್ನಡ ನಾಡಿನಲ್ಲಿನ ಶಿಕ್ಷಣ ವ್ಯವಸ್ಥೆಯು ಕನ್ನಡಮಯವಾಗಬೇಕು. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೂ ನಮ್ಮ ನುಡಿಯಾದ ಕನ್ನಡದಲ್ಲೇ ಬೋಧನೆ, ಸಂಶೋಧನೆ, ಪ್ರಸಾರ ಎಲ್ಲವೂ ಸುಗಮವಾಗಿ ನಡೆಯಬೇಕು. ಕನ್ನಡಕ್ಕೆ ಅಂತಹ ಕಸುವಿದೆ’ ಎನ್ನುತ್ತಿದ್ದರು. ಇನ್ನು ಮಹಾತ್ಮ ಗಾಂಧೀಜಿಯವರಂತೂ ಭಾರತೀಯ ಭಾಷೆಗಳಲ್ಲೇ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂಬ ವಿಚಾರದ ಅಗ್ರ ಪ್ರತಿಪಾದಕರೇ ಆಗಿದ್ದರು. ಗುರುದೇವ ರವೀಂದ್ರನಾಥ ಟ್ಯಾಗೋರ್, ಶಿಕ್ಷಣವೇತ್ತರಾಗಿದ್ದ ಶಾಮಪ್ರಸಾದ್ ಮುಖರ್ಜಿ ಕೂಡ ಇದೇ ತತ್ತ್ವದಲ್ಲಿ ಗಾಢ ನಂಬಿಕೆ ಇಟ್ಟುಕೊಂಡಿದ್ದರು. ಇದು ನಮ್ಮ ಪರಂಪರೆಗೆ ಅನುಗುಣವಾದ ಚಿಂತನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೂ ಕನ್ನಡದಲ್ಲಿ ಇದು ಇಲ್ಲಿಯವರೆಗೆ ಸಾಧ್ಯವಾಗಿರಲಿಲ್ಲ. ಇದಕ್ಕೆ ಶತಶತಮಾನಗಳ ಕಾಲದ ಪರಕೀಯರ ಆಳ್ವಿಕೆ, ಬ್ರಿಟಿಷರ ಕಾಲದಲ್ಲಿ ಮೆಕಾಲೆಯು ದೇಶದ ಸಾಂಸ್ಕೃತಿಕ ತಂತುಗಳನ್ನೇ ಕಡಿದು ಹಾಕುವ ದುರುದ್ದೇಶದಿಂದ ಹೇರಿದ ಇಂಗ್ಲಿಷ್ ಶಿಕ್ಷಣ ಪದ್ಧತಿ, ವಸಾಹತುಶಾಹಿ ಆಳ್ವಿಕೆಯ ದುಷ್ಪರಿಣಾಮ, ಇದರ ಫಲವಾಗಿ ಕನ್ನಡದಂತಹ ಸ್ಥಳೀಯ ಭಾಷೆಗಳನ್ನಾಡುವವರು ಬೆಳೆಸಿಕೊಂಡ ಕೀಳರಿಮೆ ಮುಂತಾದ ಹತ್ತಾರು ಐತಿಹಾಸಿಕ ಕಾರಣಗಳಿವೆ. ಹೀಗಾಗಿಯೇ ಆಫ್ರಿಕಾದ ಖ್ಯಾತ ಲೇಖಕ ಗೂಗಿ ವಾ ಥಿಯಾಂಗ್, ‘ಬ್ರಿಟಿಷರ ಆಳ್ವಿಕೆಯಲ್ಲಿದ್ದ ದೇಶಗಳ ಜನರು ಮಾನಸಿಕವಾಗಿ ಕರಾಳ ವಸಾಹತುಶಾಹಿ ಚಕ್ರವ್ಯೂಹದಿಂದ ಹೊರಬರಬೇಕು’ ಎಂದಿದ್ದು, ಇದನ್ನು ‘ಡಿಕಲೋನೈಸಿಂಗ್ ದಿ ಮೈಂಡ್’ ಎಂದು ಕರೆದಿದ್ದಾನೆ.

ಇಸ್ರೇಲ್, ಜರ್ಮನಿ, ಫ್ರಾನ್ಸ್, ಜಪಾನ್, ಚೀನಾ, ರಷ್ಯಾ ಮುಂತಾದ ದೇಶಗಳಲ್ಲಿ ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣದ ಯಾವೊಂದು ವಲಯದಲ್ಲೂ ಇಂಗ್ಲಿಷ್‌ನಲ್ಲಿ ಬೋಧನೆಯೇನೂ ಇಲ್ಲ. ಈ ದೇಶಗಳಲ್ಲೆಲ್ಲ ಇರುವುದು ಆಯಾ ದೇಶಗಳ ಭಾಷೆಗಳಾದ ಹೀಬ್ರೂ, ಜರ್ಮನ್, ಜಪಾನೀಸ್, ಮ್ಯಾಂಡರಿನ್ ಮತ್ತು ರಷ್ಯನ್ ಭಾಷೆಗಳ ಪಾರಮ್ಯವೇ!

ಕಂಪ್ಯೂಟರಿನ ಕೀಲಿಮಣೆಯಿಂದ ಹಿಡಿದು ಸಾಫ್ಟ್‌ವೇರ್ ರೂಪಿಸುವವರೆಗೂ ಇಲ್ಲೆಲ್ಲ ಅಲ್ಲಲ್ಲಿನ ಭಾಷೆಗಳಿಗೆ ರಾಜಮರ್ಯಾದೆ ಇದೆ. ಇಲ್ಲದೆ ಹೋದರೆ ಅಲ್ಲಿಗೆ ಜಗತ್ತಿನ ಯಾವ ದೈತ್ಯ ಕಂಪನಿಯೂ ಕಾಲಿಡುವುದು ಸಾಧ್ಯವಿಲ್ಲ! ಇದಕ್ಕೆ ಉದಾಹರಣೆಯಾಗಿ ಇಸ್ರೇಲಿನ ‘ಟೆಕ್ನಿಆನ್’ ವಿಶ್ವವಿದ್ಯಾಲಯವು ಮಾಡಿರುವ ಸಾಧನೆಗಳನ್ನು ನೋಡಬಹುದು. ತಮ್ಮ ಭಾಷೆಗಳನ್ನು ಯಾವತ್ತೂ ಬಿಟ್ಟುಕೊಡದ ಈ ದೇಶಗಳು ಆಧುನಿಕ ಜ್ಞಾನಶಾಖೆಗಳಲ್ಲಿ ಮಾಡಿರುವ ಸಾಧನೆಗಳು ಕುವೆಂಪು ಅವರ ಮಾತಿನಲ್ಲಿ ಹೇಳುವುದಾದರೆ ‘ಭೂಮವೂ ಭವ್ಯವೂ ಮಹೋನ್ನತವೂ ಆಗಿವೆ’.
ಭಾರತ ಒಕ್ಕೂಟ ವ್ಯವಸ್ಥೆ ರಚನೆಯಾಗಿರುವುದೇ ಭಾಷೆಗಳ ಆಧಾರದ ಮೇಲೆ. ನಾವು ಸಂವಿಧಾನದಲ್ಲಿ ಕೆಲವೇ ಭಾಷೆಗಳನ್ನಷ್ಟೇ ಗುರುತಿಸಿರಬಹುದು, ನಿಜ. ಆದರೆ, ದೇಶದಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಭಾಷೆಗಳಿವೆ. ಇದೇ ನಮ್ಮ ಶ್ರೀಮಂತಿಕೆ! ಭಾರತವನ್ನು ಪರಸ್ಪರ ಹೆಣೆದು, ಅಖಂಡವಾಗಿ ಉಳಿಸಿರುವುದೇ ನಮ್ಮ ಭಾಷೆಗಳು ಎನ್ನುವುದು ನಮ್ಮ ದೃಢ ನಂಬಿಕೆಯಾಗಿದೆ.

ಅದರಲ್ಲೂ ಕನ್ನಡಕ್ಕೆ ಇಂಗ್ಲಿಷ್‌ಗಿಂತ ದೊಡ್ಡ ಇತಿಹಾಸವಿದೆ; ದೀರ್ಘ ಪರಂಪರೆ ಇದೆ. ನಮಗೆ 1,500 ವರ್ಷಗಳಿಗೂ ಹೆಚ್ಚಿನ ಲಿಖಿತ ಪರಂಪರೆ ಇದೆ. ನಮ್ಮ ಭಾಷೆಯ ರಚನೆ ಮತ್ತು ವಿನ್ಯಾಸ ಅತ್ಯಂತ ವೈಜ್ಞಾನಿಕವಾಗಿದೆ; ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೋಧನೆಗೆ ನಮ್ಮ ಕನ್ನಡ ನುಡಿಯು ಹೇಳಿಮಾಡಿಸಿದಂತಿದೆ. ಭಾರತೀಯ ಭಾಷಿಕ ಸಂರಚನೆ ಮತ್ತು ಕನ್ನಡದ ಸ್ಥಳೀಯ ಶಕ್ತಿ ಎರಡೂ ನಮ್ಮ ಅಂತಃಸತ್ವವನ್ನು ಹೆಚ್ಚಿಸಿವೆ. ನಾವು ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು.

ಕನ್ನಡವು ಅನ್ನವನ್ನು ಕೊಡುವ ಭಾಷೆಯಾಗಬೇಕೆಂಬ ಒಂದು ಆಗ್ರಹ ಮೊದಲಿನಿಂದಲೂ ಕೇಳಿಬರುತ್ತಿದೆ. ಇದರಲ್ಲಿ ತಪ್ಪೇನೂ ಇಲ್ಲ. ಹಾಗೆಯೇ ಖ್ಯಾತ ವಿಜ್ಞಾನಿಗಳಾದ ರೊದ್ದಂ ನರಸಿಂಹ, ಸಿ.ಎನ್.ಆರ್. ರಾವ್ ಕೂಡ ಕನ್ನಡದಲ್ಲೇ ವಿಜ್ಞಾನ-ತಂತ್ರಜ್ಞಾನದ ಬೋಧನೆಗೆ ಕರೆ ಕೊಟ್ಟಿದ್ದಾರೆ. ಈಗ ನಾವು ನಾಲ್ಕು ಕಾಲೇಜುಗಳ ಮೂಲಕ ಇಟ್ಟಿರುವ ಹೆಜ್ಜೆಯು ತ್ರಿವಿಕ್ರಮ ಸಾಧನೆಗೆ ಪ್ರೇರಣೆಯಾಗಲಿದೆ ಎನ್ನುವ ಭರವಸೆ ನನಗಿದೆ.

ನಮ್ಮದು ‘ಎಲೈಟ್’ ಕನ್ನಡವಲ್ಲ. ಬದಲಿಗೆ ರೈತರು, ಕೂಲಿ ಕಾರ್ಮಿಕರು, ಬಡವರು, ಬಲ್ಲಿದರು ಎಲ್ಲರನ್ನೂ ಒಳಗೊಳ್ಳುವಂತಹ, ಬೆಳೆಸುವಂತಹ ಮತ್ತು ಭಾರತ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕನ್ನಡಪರ ಬದ್ಧತೆಯಾಗಿದೆ. ಎಂಜಿನಿಯರಿಂಗ್ ಶಿಕ್ಷಣವನ್ನು ಈಗ ಕನ್ನಡದಲ್ಲಿ ಆಗುಮಾಡಿರುವುದು ಒಂದು ದೊಡ್ಡ ಮೈಲಿಗಲ್ಲು!

ಲೇಖಕ: ಕರ್ನಾಟಕದ ಉನ್ನತ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು