ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚರ್ಚೆ: ಸೂಕ್ಷ್ಮ ಪರಿಸರಕ್ಕೆ ಹಾನಿ, ಜನಜೀವನಕ್ಕೂ ಕೊಳ್ಳಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಪರ್ಯಾಯ ಇಲ್ಲವೇ?
Published : 23 ಆಗಸ್ಟ್ 2024, 23:30 IST
Last Updated : 23 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅರಣ್ಯ ಪ್ರದೇಶ ನಾಶ ಆಗುವುದಲ್ಲದೇ, ವನ್ಯಜೀವಿಗಳ ಪಥ ಛಿದ್ರವಾಗಲಿದೆ. ಕಾಡು ನಾಶವು ನದಿ ಪಾತ್ರದ ಮೇಲೆ, ಸ್ಥಳೀಯವಾದ ಮಳೆ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಶರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಲಿದ್ದು, ಇಡೀ ಹೊನ್ನಾವರದ ಸಾಮಾಜಿಕ ಭದ್ರತೆಗೆ ಧಕ್ಕೆಯಾಗುತ್ತದೆ. ಸಾವಿರಾರು ಕುಟುಂಬಗಳು ಬದುಕಿನ ನೆಲೆ ಕಳೆದುಕೊಳ್ಳಲಿವೆ

ಒಂದೆಡೆ, ಕಣ್ಣಿಗೆ ಕಾಣುವಷ್ಟು ದೂರದವರೆಗೂ ಉಪ್ಪು ನೀರಿನಿಂದ ಆವೃತವಾದ ಸಮುದ್ರ, ಮತ್ತೊಂದೆಡೆ ಮುಗಿಲೆತ್ತರಕ್ಕೆ ಚಾಚಿ ನಿಂತ ಗುಡ್ಡಬೆಟ್ಟಗಳು. ಎರಡರ ನಡುವೆ ಲಭ್ಯವಿರುವ ಚಿಕ್ಕ ಚಿಕ್ಕ ಪ್ರದೇಶದಲ್ಲಿ ದೊಡ್ಡ  ಜನಸಮೂಹ ಬದುಕು ಕಟ್ಟಿಕೊಂಡಿದೆ. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ಹೊನ್ನಾವರ ತಾಲ್ಲೂಕಿನ ಬಹುತೇಕ ಜನರು ಇಂತಹ ಪ್ರದೇಶದಲ್ಲಿರುವ ಚಿಕ್ಕ ಹಿಡುವಳಿಯಲ್ಲಿ ತೋಟಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಾರೆ. ಅವರ ಕೃಷಿ ಕಾರ್ಯಕ್ಕೆ ಮೂಲಾಧಾರ ಶರಾವತಿ ನದಿಯ ನೀರು. 

ಬಯಲುನಾಡಿನ ಸಮತಟ್ಟಾದ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಮಾಡುವುದಕ್ಕೆ ಹೋಲಿಸಿದರೆ, ಗುಡ್ಡಗಾಡಿನ ಕಿರುಪ್ರದೇಶದಲ್ಲಿ ಕೃಷಿ-ತೋಟಗಾರಿಕೆ ಮಾಡಲು ವಿಶೇಷ ಪಾರಂಪರಿಕ ಜ್ಞಾನ, ಬುದ್ಧಿವಂತಿಕೆ ಮತ್ತು ಶ್ರಮ ಬೇಕು. ಇವೆರಡಿದ್ದರೆ ಸಾಲದು; ಮಳೆಗಾಲದ ಅವಧಿ ಬಿಟ್ಟು, ಬಾಕಿ ಇಡೀ ವರ್ಷ ನಿಯಮಿತವಾಗಿ ಸಿಹಿ ನೀರು ಬೇಕು. ಇದಕ್ಕೆ ಇಲ್ಲಿನ ಜನ ನಂಬಿರುವುದು ಶರಾವತಿ ನದಿಯನ್ನು. ಹೊನ್ನಾವರ ನಗರ ಪ್ರದೇಶ, ಕರ್ಕಿ, ಮಂಕಿ ಹಾಗೂ ಮುರುಡೇಶ್ವರಕ್ಕೆ ಶರಾವತಿ ನದಿ ಕುಡಿಯುವ ನೀರಿನ ಮೂಲ. ಇಡೀ ತಾಲ್ಲೂಕು ಶರಾವತಿ ನದಿಯ ಆರೋಗ್ಯ ಹಾಗೂ ಅದರ ಹರಿವಿನ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ವಿದ್ಯುತ್‌ ನಿಗಮವು ಶರಾವತಿ ಕಣಿವೆಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ, ಅಲ್ಲಿನ ಸೂಕ್ಷ್ಮ ಭೌಗೋಳಿಕ ಪರಿಸರಕ್ಕೆ ಮತ್ತು ಇಡೀ ತಾಲ್ಲೂಕು ಹಾಗೂ ಜನರ ಬದುಕಿಗೆ ಕೊಳ್ಳಿ ಇಡುವುದು ಖಚಿತ.   

ನದಿಯೊಂದು ಸಮುದ್ರ ಸೇರುವ ಪ್ರದೇಶಕ್ಕೆ ‘ಅಳಿವೆ’ ಎನ್ನುತ್ತಾರೆ. ಇಂತಹ ಅಳಿವೆ ಪ್ರದೇಶಗಳನ್ನು ಸಮುದ್ರದ ‘ನರ್ಸರಿ’ ಎಂದು ಕರೆಯಲಾಗುತ್ತದೆ. ಕಡಿಮೆ ಅಥವಾ ಹದವಾದ ಲವಣಾಂಶವಿರುವ ಇಲ್ಲಿ ಅನೇಕ ಕಿರುಜಲಜೀವಿಗಳಿರುತ್ತವೆ. ಇವುಗಳು ಅನೇಕ ಪ್ರಭೇದದ ಮೀನುಗಳ ಮರಿಗಳಿಗೆ ಆಹಾರವಾಗುತ್ತವೆ. ಆದ್ದರಿಂದಲೇ ಮೀನುಗಳು ಈ ಪ್ರದೇಶದಲ್ಲಿ ಬಂದು ಮೊಟ್ಟೆಯಿಡುತ್ತವೆ. ಕಡಿಮೆ ಲವಣಾಂಶದ ಈ ಪ್ರದೇಶ ಮತ್ಸ್ಯ ಸಂತತಿಗಳ ನರ್ಸರಿಯಾಗಿದ್ದು, ನದಿಯ ಸಿಹಿನೀರು ಅಳಿವೆಯ ಉಳಿವಿಗೆ ಅತಿ ಅವಶ್ಯ. ಶರಾವತಿ ತಪ್ಪಲಿನಿಂದ ಸೋಸಿಕೊಂಡು ಬಂದ ಮರಳು ಅಳಿವೆಯ ಹಿಂಭಾಗದ ಪ್ರದೇಶದಲ್ಲಿ ಶೇಖರಣೆಯಾಗುತ್ತದೆ. ಈ ಮರಳು ಉತ್ಕ್ರಷ್ಟವಾಗಿದ್ದು, ಕಟ್ಟಡ ನಿರ್ಮಾಣದಲ್ಲಿ ಬಳಕೆಯಾಗುತ್ತದೆ. ಕಟ್ಟಡ ಕಾರ್ಮಿಕರ ಬದುಕು ಈ ಮರಳಿನ ಮೇಲೆ ಅವಲಂಬಿಸಿದೆ.

1977ರಲ್ಲಿ ಶರಾವತಿ ಅಭಯಾರಣ್ಯವನ್ನು ಘೋಷಿಸಿ ಅಧಿಸೂಚನೆ ಹೊರಡಿಸಲಾಯಿತು. ಆಗ ಅದರ ವ್ಯಾಪ್ತಿ 430 ಚದರ ಕಿ.ಮೀ ಆಗಿತ್ತು. ಜೋಗ ಜಲಪಾತ ನಂತರದ ಶರಾವತಿ ಕಣಿವೆ ಯಾವುದೇ ಸಂರಕ್ಷಣೆಗೆ ಒಳಪಟ್ಟಿರಲಿಲ್ಲ. 2019ರಲ್ಲಿ ಅಭಯಾರಣ್ಯದ ವ್ಯಾಪ್ತಿಯನ್ನು 930 ಚದರ ಕಿ.ಮೀಗೆ ವಿಸ್ತರಿಸಿ, ಶರಾವತಿ ಸಿಂಗಳೀಕ ಅಭಯಾರಣ್ಯವೆಂದು ಮರುನಾಮಕರಣ ಮಾಡಲಾಯಿತು. ಅತ್ಯಂತ ವಿಶಿಷ್ಟ, ಪಾರಿಸರಿಕವಾಗಿ ಸೂಕ್ಷ್ಮವಾದ ಹಾಗೂ ಅನನ್ಯವಾದ ಈ ಕಣಿವೆ ಪ್ರದೇಶವು ಅತಿಹೆಚ್ಚು ಜೀವಿವೈವಿಧ್ಯ ಹೊಂದಿದೆ. ಸಿಂಗಳೀಕ, ದೊಡ್ಡಮಂಗಟ್ಟೆ ಪಕ್ಷಿ ಸೇರಿದಂತೆ, ಹುಲಿ, ಆನೆ, ಚಿರತೆ, ಕಾಟಿ, ಕರಡಿ, ಕಾಡುಹಂದಿ, ಮುಳ್ಳುಹಂದಿ, ಚಿಪ್ಪುಹಂದಿ, ನರಿ, ಸೀಳುನಾಯಿ, ಕಾನುಕುರಿ ಇತ್ಯಾದಿ ಅಪರೂಪದ ಪ್ರಾಣಿಗಳ ತವರಾಗಿದೆ.

ಈಗ, ಇದೇ ಸಂರಕ್ಷಿತ ಪ್ರದೇಶದಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜಾರಿಗೆ ಕರ್ನಾಟಕ ವಿದ್ಯುತ್‌ ನಿಗಮ ಮುಂದಾಗಿದೆ. ಹೆಚ್ಚು ಬೇಡಿಕೆ ಇರುವ ಹೊತ್ತಿನಲ್ಲಿ ಗುಣಮಟ್ಟದ ವಿದ್ಯುಚ್ಛಕ್ತಿ ಪೂರೈಸುವುದು ಈ ಯೋಜನೆ ಉದ್ದೇಶ. ಇದಕ್ಕಾಗಿ, ಶರಾವತಿ ಸಿಂಗಳೀಕ ಅಭಯಾರಣ್ಯ ಕೇಂದ್ರ ಭಾಗದಲ್ಲಿ 1000 ಎಕರೆ ಪ್ರದೇಶವನ್ನು ಬಳಸಲು ನಿಗಮ ಹೊರಟಿದೆ. ಗುಡ್ಡವನ್ನು ಕೊರೆದು ಆಳದಲ್ಲಿ ಘಟಕ ನಿರ್ಮಿಸಲಾಗುವುದರಿಂದ ಅಲ್ಲಿನ ಪರಿಸರಕ್ಕೆ ಅತಿಹೆಚ್ಚು ಹಾನಿಯಾಗಲಿದೆ. ಯೋಜನೆಗೆ ಬೇಕಾಗುವ ಸಾಮಗ್ರಿ, ಯಂತ್ರಗಳು, ಪೈಪುಗಳನ್ನು ಸಾಗಿಸಲು ರಸ್ತೆ ನಿರ್ಮಾಣ ಮಾಡುವುದು, ಕಾರ್ಮಿಕರಿಗೆ ತಾತ್ಕಾಲಿಕ ಮನೆಗಳನ್ನು ನಿರ್ಮಿಸುವುದು ಇತ್ಯಾದಿಗಳಿಂದಾಗಿ ಇನ್ನಷ್ಟು ಅರಣ್ಯ ಪ್ರದೇಶ ನಾಶವಾಗುವುದಲ್ಲದೇ, ವನ್ಯಜೀವಿಗಳ ಪಥ ಛಿದ್ರವಾಗಲಿದೆ. ಕಾಡು ನಾಶವು ನದಿ ಪಾತ್ರದ ಮೇಲೆ ಹಾಗೂ ಸ್ಥಳೀಯವಾದ ಮಳೆ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯೋಜನೆ ಜಾರಿಯಾದಲ್ಲಿ ಶರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಲಿದ್ದು, ಇಡೀ ಹೊನ್ನಾವರದ ಸಾಮಾಜಿಕ ಭದ್ರತೆಗೆ ಧಕ್ಕೆಯಾಗುತ್ತದೆ. ಸಾವಿರಾರು ಕುಟುಂಬಗಳು ಬದುಕಿನ ನೆಲೆಯನ್ನು ಕಳೆದುಕೊಳ್ಳಲಿದ್ದು, ಜಲಚರಗಳ ಕೊರತೆಯಿಂದಾಗಿ ಬೆಸ್ತರ ಬದುಕು ಹೈರಾಣಗಲಿದೆ. ಹಣಕಾಸು ವಹಿವಾಟು ನಡೆಸುವ ಸರ್ಕಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಹಾರಗಳು ಹೊನ್ನಾವರದಲ್ಲಿ ತಾಲ್ಲೂಕಿನ ಬೆಳೆಯಲಾಗುವ ಅಡಿಕೆ, ತೆಂಗು ಮತ್ತು ಕಾಳುಮೆಣಸನ್ನೇ ನಂಬಿಕೊಂಡಿವೆ. ನೀರಿನ ಕೊರತೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಕೃಷಿಕರ ಬದುಕು ಮೂರಾಬಟ್ಟೆಯಾಗಲಿದೆ. 

ಪರ್ಯಾಯ ಸಾಧ್ಯತೆಗಳಿವೆ:

ವಿದ್ಯುತ್ತಿಗೆ ಅತಿಹೆಚ್ಚು ಬೇಡಿಕೆ ಇರುವ ಬೆಳಗಿನ ಹಾಗೂ ಸಂಜೆಯ ಎರಡು ತಾಸುಗಳ ಹೊತ್ತಿನಲ್ಲಿ ವಿದ್ಯುತ್ ಪೂರೈಸಲು ಕೈಗೆತ್ತಿಕೊಳ್ಳಲಾಗುತ್ತಿರುವ ಈ ಯೋಜನೆಗೆ, ಪರ್ಯಾಯ ಹಾಗೂ ಸುಲಭದ ಪರಿಹಾರವಿಲ್ಲವೇ? ಖಂಡಿತವಾಗಿಯೂ ಇವೆ. ಜಾರಿಗೊಳಿಸಲು ಇಚ್ಛಾಶಕ್ತಿ ಬೇಕಷ್ಟೆ. 

ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬೀದಿ ದೀಪಗಳ ಬಗ್ಗೆ ಅಧ್ಯಯನ ನಡೆಸಿದ್ದು, ಮೈಸೂರಿನ ಬೀದಿ ದೀಪಗಳು ಅಗತ್ಯಕ್ಕಿಂತ ಹೆಚ್ಚು ಬೆಳಕನ್ನು ಬೀರುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಮಿತಿಗಿಂತ 2.5 ಪಟ್ಟು ಹೆಚ್ಚು ಬೆಳಕನ್ನು ಬೀದಿ ದೀಪಗಳು ಬೆಳಗುತ್ತವೆ. ಎಲ್ಲ ನಗರಗಳಲ್ಲೂ ಈ ಮಾದರಿಯೇ ಇದ್ದರೆ, ಮಿತಿಗಿಂತ ಹೆಚ್ಚು ಬೆಳಕನ್ನು ನೀಡುವ ಹಾಗೂ ಹೆಚ್ಚು ವಿದ್ಯುತ್ತನ್ನು ಬಳಸಿಕೊಳ್ಳುವ ಈ ಮಾದರಿಯನ್ನು ಸುಧಾರಿಸಬಹುದು. ಆಗ ವಿದ್ಯುತ್ ಬೇಡಿಕೆ ಕಡಿಮೆಯಾಗಲಿದೆ. ವಿದ್ಯುತ್ ಸಾಗಣಿಕೆ ಮತ್ತು ಸರಬರಾಜು ಪ್ರಕ್ರಿಯೆಯಲ್ಲಿ ಸೋರಿಕೆ ಪ್ರಮಾಣ ಹಾಲಿ ಶೇ 18 ಇದ್ದು, ಈ ಪ್ರಮಾಣವನ್ನು ಶೇ 8 ರಿಂದ ಶೇ 5ಕ್ಕೆ ಇಳಿಸುವುದಕ್ಕೆ ಸಾಧ್ಯವಿದೆ. ಈ ಕ್ರಮವೂ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಪೂರೈಸುವಲ್ಲಿ ತನ್ನ ಕೊಡುಗೆಯನ್ನು ನೀಡಲಿದೆ.

ಉದ್ಯಾನಗಳು ಹಾಗೂ ಬಸ್ ನಿಲ್ದಾಣ, ರೈಲು ನಿಲ್ದಾಣ, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣ, ಕ್ರೀಡಾಂಗಣ, ವಾಚನಾಲಯ ಮುಂತಾದ ಕಡೆಗಳಲ್ಲಿ ಸೋಲಾರ್ ಅಳವಡಿಸಿ, ಕೊರತೆಯಾಗುವ ವಿದ್ಯುತ್ತನ್ನು ಪಡೆಯಬಹುದಾಗಿದೆ. ಆಧುನಿಕ ತಂತ್ರಜ್ಞಾನದ ಅಡಿ ವಿದ್ಯುತ್‌ ಉಳಿತಾಯ ಮಾಡುವ ವ್ಯವಸ್ಥೆಯೂ ಈಗ ಇದೆ. ದೊಡ್ಡ ಮಾಲ್‌ಗಳಲ್ಲಿನ ಹವಾನಿಯಂತ್ರಣ ವ್ಯವಸ್ಥೆಯು ಕಡಿಮೆ ವಿದ್ಯುತ್ ಬೇಡಿಕೆ ಇರುವ ಹೊತ್ತಿನಲ್ಲಿ ಸ್ವಯಂಚಾಲಿತವಾಗುತ್ತವೆ ಹಾಗೂ ಹೆಚ್ಚು ವಿದ್ಯುತ್ ಬೇಡಿಕೆ ಇರುವ ಹೊತ್ತಿನಲ್ಲಿ ಸ್ವಯಂಚಾಲಿತವಾಗಿಯೇ ನಿಲ್ಲುತ್ತವೆ. ಈ ತಂತ್ರಜ್ಞಾನವನ್ನು ಮನೆಗಳಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲನೆ ಮಾಡಬಹುದು.

ಬ್ಯಾಟರಿ ಎನರ್ಜಿ ಸೇವಿಂಗ್ ಸಿಸ್ಟಮ್ (BESS) ಎಂಬ ಮಾದರಿಯನ್ನು ಹೊರದೇಶಗಳಲ್ಲಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ವಿದ್ಯುತ್ ಬೇಡಿಕೆ ಇರುವ ಸಮಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ತನ್ನು ನೇರವಾಗಿ ಬ್ಯಾಟರಿಗಳಲ್ಲಿ ಸಂಗ್ರಹಿಸುವುದು ಹಾಗೂ ಹೆಚ್ಚು ಬೇಡಿಕೆ ಇರುವ ಹೊತ್ತಿನಲ್ಲಿ ಸಂಗ್ರಹಿಸಿಟ್ಟ ವಿದ್ಯುತ್ತನ್ನು ಬಳಸಿಕೊಳ್ಳುವುದು. ಈ ಮಾದರಿಗೆ ಹೊಸ ಅರಣ್ಯ ಪ್ರದೇಶವನ್ನು ನಾಶ ಮಾಡುವ ಅಗತ್ಯವಿಲ್ಲ. ಇದನ್ನು, ಎಲ್ಲಿ ಹೆಚ್ಚು ವಿದ್ಯುತ್ ಬೇಡಿಕೆ ಇರುತ್ತದೆಯೋ ಅಲ್ಲಿಯೇ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಬೆಂಗಳೂರಿಗೆ ಹೆಚ್ಚು ವಿದ್ಯುತ್ ಬೇಡಿಕೆಯಿದ್ದು, ಈ ತಂತ್ರಜ್ಞಾನವನ್ನೂ ಅಲ್ಲಿಯೇ ಅಳವಡಿಸಿಕೊಳ್ಳಲು ಅವಕಾಶಗಳಿವೆ. ನಾಗರಿಕ ಸಮಾಜಕ್ಕೆ ಹೊರೆಯಾಗದ ಹಾಗೂ ಅರಣ್ಯ, ಜೀವಿವೈವಿಧ್ಯ ನೆಲೆಗಳನ್ನು ನಾಶ ಮಾಡದೇ ಇರುವ ಇಂತಹ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕ ವಿದ್ಯುತ್ ನಿಗಮ ಚಿಂತಿಸಬೇಕಿದೆ.

ಲೇಖಕ: ಪರಿಸರ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT