ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಮಹಿಳೆಯರ ಮದುವೆ ವಯಸ್ಸು ಹೆಚ್ಚಳ: ಸಮಸ್ಯೆ ಪರಿಹಾರದ ಮಂತ್ರದಂಡವೇ?

ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸು 18 ವರ್ಷದಿಂದ 21ಕ್ಕೆ ಏರಿಕೆ ಸರಿಯಾದ ನಿರ್ಧಾರವೇ?
Last Updated 24 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಮದುವೆಯ ಕನಿಷ್ಠ ವಯಸ್ಸು ಏರಿಕೆಯು ಮಂತ್ರದಂಡದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ವಾದಿಸುವುದೇ ಅಪಾಯಕಾರಿ ಕುತರ್ಕ. ಹೌದು, ಈ ಒಂದು ಬದಲಾವಣೆಯು ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂದಾದರೆ, ಈಗಲೂ ಅಷ್ಟೊಂದು ಹೆಣ್ಣು ಮಕ್ಕಳಿಗೆ 18 ವರ್ಷದ ಒಳಗೇ ಮದುವೆ ಆಗುತ್ತಿರುವುದು ಏಕೆ?

**

ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುವ ದೀರ್ಘ ಕಾಲದ ಸಂಕೀರ್ಣವಾದ ಸಾಮಾಜಿಕ–ರಾಜಕೀಯ ಮತ್ತು ಆರ್ಥಿಕ ಸವಾಲೊಂದನ್ನು ಎದುರಿಸುವುದಕ್ಕಾಗಿ ಕೇಂದ್ರ ಸರ್ಕಾರವು ತರಲು ಮುಂದಾಗಿರುವ ಮಸೂದೆಯು ಮೋಸಗೊಳಿಸುವಷ್ಟು ಸರಳೀಕೃತ ಮತ್ತು ಅತ್ಯಂತ ಹಾನಿಕಾರಕ.

ಹೆಣ್ಣು ಮಕ್ಕಳಿಗೆ ಸಮಾನತೆ ದೊರೆಯುವುದನ್ನು ಖಾತರಿಪಡಿಸುವುದು ಮತ್ತು ಅವರನ್ನು ಸಬಲೀಕರಿಸುವುದು ಈ ಮಸೂದೆಯ ಗುರಿ ಎಂದು ಹೇಳಲಾಗುತ್ತಿದೆ. ಈ ಗುರಿ ಸಾಧನೆಗಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ (2006) ತಿದ್ದುಪಡಿ ತಂದು ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಸುವುದು ಏಕೈಕ ಕಾರ್ಯಸೂಚಿಯಾಗಿದೆ ಎಂಬುದೇ ವಿಚಿತ್ರ.

ಮಗು ಎಂಬುದಕ್ಕೆ ಮಸೂದೆಯಲ್ಲಿ ಅತ್ಯಂತ ವಿಚಿತ್ರವಾದ ವ್ಯಾಖ್ಯಾನ ಇದೆ. ಅದೆಂದರೆ, ‘21 ವರ್ಷ ತುಂಬಿರದ ಹೆಣ್ಣು ಅಥವಾ ಗಂಡು’. ಮತದಾನದ ಹಕ್ಕು, ಆಸ್ತಿ ಹೊಂದುವ ಹಕ್ಕು, ಪೂರ್ಣಾವಧಿ ಉದ್ಯೋಗ ಹೊಂದುವ ಹಕ್ಕು ಇತ್ಯಾದಿಗೆ 18 ವರ್ಷ ವಯಸ್ಸು ತುಂಬಿದರೆ ಸಾಕು. ಯುವ ಜನರನ್ನು ಮಗು ಎಂದೇ ದೀರ್ಘ ಕಾಲ ಪರಿಗಣಿಸುವುದು ಅತ್ಯಂತ ಪ್ರತಿಗಾಮಿ. ಈಗ, ಈ ವ್ಯಾಖ್ಯಾನವು ಈ ಕಾಯ್ದೆಗಷ್ಟೇ ಸೀಮಿತ ಆಗಿರಬಹುದು. ಆದರೆ ಮುಂದೆ ಅದನ್ನು ಪೋಕ್ಸೊ, ಮಕ್ಕಳ ಸುಪರ್ದಿ, ವೈವಾಹಿಕ ಆಸ್ತಿ ಹಕ್ಕು ಮುಂತಾದವುಗಳಿಗೂ ಅನ್ವಯ ಆಗುವಂತೆ ಮಾಡಬಹುದು. ಇವುಗಳ ಪರಿಣಾಮವು ದೂರಗಾಮಿ.

ಈ ಚರ್ಚೆ ಆರಂಭವಾಗಿದ್ದು 2020ರ ಮಧ್ಯ ಭಾಗದಲ್ಲಿ. ನಾಗರಿಕ ಸಮಾಜದ 60 ಸಂಘಟನೆಗಳ ಬೆಂಬಲದ ‘ಯಂಗ್‌ ವಾಯ್ಸ್‌ ನ್ಯಾಷನಲ್‌ ಮೂವ್‌ಮೆಂಟ್‌’ನ 15 ರಾಜ್ಯಗಳ 2,500ಕ್ಕೂ ಹೆಚ್ಚು ಯುವ ಜನರು ಈ ಪ್ರಸ್ತಾವವನ್ನು ವಿರೋಧಿಸಿದ್ದಾರೆ. ಇವರ ಪ್ರತಿನಿಧಿಗಳು ಕಾರ್ಯಪಡೆಯ ಎದುರು ತಮ್ಮ ವಾದ ಮಂಡಿಸಿದ್ದಾರೆ. ‘ಅವರ ವಾದವನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಾಗಿದೆ’ ಎಂದು ಕಾರ್ಯಪಡೆಯ ಅಧ್ಯಕ್ಷೆ ಹೇಳಿದ್ದರು. ಬೇಸರದ ಸಂಗತಿ ಎಂದರೆ, ಈ ಪ್ರತಿನಿಧಿಗಳ ಧ್ವನಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅದಲ್ಲದೆ, ನಿಜವಾದ ಸಮಸ್ಯೆಯನ್ನು ಗಣನೆಗೇ ತೆಗೆದುಕೊಳ್ಳದೆ ಮಸೂದೆ ಸಿದ್ಧಪಡಿಸಲಾಗುತ್ತಿದೆ. ಒಂದು ಮಗು ಹೀಗೆ ಹೇಳಿದೆ: ‘ಮದುವೆಯ ಕನಿಷ್ಠ ವಯಸ್ಸು 21 ವರ್ಷಕ್ಕೆ ಏರಿಕೆಯಾದರೆ, ಹೆಣ್ಣು ಭ್ರೂಣ ಹತ್ಯೆ ಹೆಚ್ಚಲಿದೆ. ಈಗ, ಕುಟುಂಬಗಳು ಕಷ್ಟಪಟ್ಟು ನಮಗೆ 18 ಆಗುವವರೆಗೆ ಕಾಯುತ್ತಿವೆ. ಯಾವುದೇ ಅವಕಾಶ ಅಥವಾ ಸುರಕ್ಷತೆ ಇಲ್ಲದೆ ನಮಗೆ 21 ವರ್ಷ ಆಗುವತನಕ ಅವರು ಕಾಯುವುದೇ ಇಲ್ಲ’.

‘ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸಿದ್ದರಲ್ಲಿ ತಪ್ಪೇನಿದೆ?’ ಎಂದು ಕೆಲವರು ಪ್ರಶ್ನಿಸಬಹುದು. ನ್ಯಾಯಯುತ ಪ್ರಶ್ನೆ. ಯುವತಿಯರು 18 ವರ್ಷದ ನಂತರ ಮದುವೆ ಆಗುವುದರಲ್ಲಿ ಅಥವಾ ಮದುವೆಯೇ ಆಗದೇ ಇರುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಪ್ರಗತಿಯ ಹೆಚ್ಚು ಅವಕಾಶಗಳು, ಉನ್ನತ ಶಿಕ್ಷಣದ ಅವಕಾಶಗಳು, ಅರ್ಥಪೂರ್ಣ ಜೀವನೋಪಾಯಮದುವೆಯು ವಯಸ್ಸಿನ ಏರಿಕೆಯಿಂದ ತನ್ನಿಂತಾನಾಗಿ ಲಭ್ಯವಾಗಬೇಕು. ಪುರುಷ ಪ್ರಾಬಲ್ಯದ ನಮ್ಮ ಸಮಾಜದಲ್ಲಿ ಮಹಿಳೆಯು ತನ್ನ ನಿರ್ಧಾರಗಳು ಮತ್ತು ಆಯ್ಕೆಗಳನ್ನು ಹೇಳಿಕೊಳ್ಳುವಂತಹ ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣವನ್ನು ಮದುವೆಯ ವಯಸ್ಸು ಏರಿಕೆಯು ಸೃಷ್ಟಿಸಬೇಕು.

ಸಾಮಾಜಿಕ ನಿಯಮಗಳು, ಪದ್ಧತಿಗಳು, ಬಡತನ, ಆರ್ಥಿಕ ಒತ್ತಡಗಳು, ದುಬಾರಿ ವೆಚ್ಚಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ತರಬೇತಿಗೆ ಅಗತ್ಯವಾದ ಅವಕಾಶಗಳ ಕೊರತೆ, ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುವ ದೌರ್ಜನ್ಯ, ಜೀವನ ವೆಚ್ಚವನ್ನು ಹೆಚ್ಚಿಸಬೇಕಾದ ಒತ್ತಡ, ವಲಸೆ ಮುಂತಾದವುಗಳು ಬಡ ಕುಟುಂಬಗಳ ಹೆಚ್ಚಿನ ಹೆಣ್ಣು ಮಕ್ಕಳನ್ನು ಮದುವೆಯತ್ತ ತಳ್ಳುತ್ತವೆ. ಇದು ಅತ್ಯಂತ ಕಳವಳಕಾರಿಯಾದ ಅಂಶ. ಆದರೆ, ಒಂದೇ ಅಂಶದ ಕಾರ್ಯಸೂಚಿಯು ಸಮಸ್ಯೆಯ ಬೇರುಗಳನ್ನು ಕಿತ್ತು ಹಾಕಬಲ್ಲುದೇ? ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಅಸಮಾನತೆಯನ್ನು ಸರಿಪಡಿಸಬಲ್ಲುದೇ?

ಮದುವೆಯ ಕನಿಷ್ಠ ವಯಸ್ಸು ಏರಿಕೆಯು ಮಂತ್ರದಂಡದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ವಾದಿಸುವುದೇ ಅಪಾಯಕಾರಿ ಕುತರ್ಕ. ಹೌದು, ಈ ಒಂದು ಬದಲಾವಣೆಯು ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂದಾದರೆ, ಈಗಲೂ ಅಷ್ಟೊಂದು ಹೆಣ್ಣು ಮಕ್ಕಳಿಗೆ 18 ವರ್ಷದ ಒಳಗೇ ಮದುವೆ ಆಗುತ್ತಿರುವುದು ಏಕೆ? ತಾಯಂದಿರ ಮರಣಕ್ಕೆ ಬಡತನ, ಅಪೌಷ್ಟಿಕತೆ ಮತ್ತು ಆರೈಕೆ ಕೊರತೆಯ ಜತೆಗೆ ನೇರ ಸಂಬಂಧ ಇದೆ. ಮದುವೆಯಾದ ಬಳಿಕ ಮಕ್ಕಳನ್ನು ಹೆರುವಂತೆ ಹೆಣ್ಣು ಮಕ್ಕಳು ಮತ್ತು ಯುವತಿಯರ ಮೇಲೆ ಭಾರಿ ಒತ್ತಡ ಇರುತ್ತದೆ. ತಾಯ್ತನ ಮತ್ತು ಸಂತಾನೋತ್ಪತ್ತಿ ವಿಚಾರಗಳಲ್ಲಿ ಅವರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಸಂತಾನೋತ್ಪತ್ತಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ದೊಡ್ಡ ಸಂಖ್ಯೆಯ ಹೆಣ್ಣು ಮಕ್ಕಳಿಗೆ ಸರಿಯಾದ ಮಾಹಿತಿ, ಸೇವೆಗಳು ಅಥವಾ ಬೆಂಬಲ ವ್ಯವಸ್ಥೆ ಇಲ್ಲ. ಮದುವೆಯ ಕನಿಷ್ಠ ವಯಸ್ಸು ಏರಿಕೆ ಮಾಡುವುದರಿಂದ ಈ ಕೊರತೆಗಳನ್ನು ನೀಗಿಸುವುದು ಸಾಧ್ಯವೇ? ಸ್ಥಳೀಯವಾದ, ಸಾಂದರ್ಭಿಕವಾದ ಪ್ರತಿಕ್ರಿಯೆ, ಮಹಿಳೆ ಕೇಂದ್ರಿತ ಆರೋಗ್ಯ ಕಾರ್ಯಕ್ರಮ ಮತ್ತು ಉಪಕ್ರಮಗಳ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯ ಇದೆ.

ಬಡತನದಿಂದಾಗಿ ಮದುವೆಯಾಗಲೇಬೇಕಾದ ಅನಿವಾರ್ಯದಲ್ಲಿರುವ ಮಹಿಳೆಯರ ವೈವಾಹಿಕ ಸ್ಥಿತಿ ಮತ್ತು ಹಕ್ಕುಗಳನ್ನುಪ್ರಸ್ತಾವಿತ ಮಸೂದೆಯು ಮೊಟಕು ಮಾಡುತ್ತದೆ. ಕುಟುಂಬದ ಅಸ್ತಿತ್ವದ ಅಗತ್ಯಗಳು ಮತ್ತು ಅಸುರಕ್ಷತೆಯ ಅನಿವಾರ್ಯದಿಂದಾಗಿ ಚಿಕ್ಕ ವಯಸ್ಸಿಗೆ ಮದುವೆ ಮಾಡಲೇಬೇಕಾದುದು ಮಾತ್ರವಲ್ಲದೆ ಕೆಲಸಕ್ಕೂ ಸೇರಿಕೊಳ್ಳಬೇಕಾದ ಸ್ಥಿತಿಯಲ್ಲಿರುವ ಕುಟುಂಬಗಳವರನ್ನು ಈ ಕಾಯ್ದೆಯು ಅಪರಾಧಿಗಳೆಂದು ಪರಿಗಣಿಸುತ್ತದೆ. ಹೆಣ್ಣು ಮಕ್ಕಳು ಮದುವೆ ಆಗುವುದಕ್ಕಾಗಿ ಶಾಲೆ ಬಿಡುವುದಿಲ್ಲ. ಬದಲಿಗೆ ಶಾಲೆ ಬಿಟ್ಟ ಬಳಿಕ ಮದುವೆ ಆಗುತ್ತಾರೆ. ಉತ್ತಮ ಉದ್ಯೋಗ ಒದಗಿಸಬಲ್ಲ ಕೈಗೆಟುಕುವ, ಉಚಿತ, ಗುಣಾತ್ಮಕವಾದ ಶೈಕ್ಷಣಿಕ ಅವಕಾಶಗಳು ಈಗಿನ ಅಗತ್ಯವಾಗಿದೆ. ಕೋವಿಡ್‌–19 ಸಾಂಕ್ರಾಮಿಕ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸವಾಲುಗಳು ಒಂದು ಕೋಟಿಗೂ ಹೆಚ್ಚು ಹೆಣ್ಣು ಮಕ್ಕಳನ್ನು ಔಪಚಾರಿಕ ಶಿಕ್ಷಣದಿಂದ ಹೊರ ತಳ್ಳಿವೆ. ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಲು ಮತ್ತು ಅವರ ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತಮಪಡಿಸಲು ಸರ್ಕಾರವು ಪ್ರಾಮಾಣಿಕವಾಗಿ ಬಯಸಿದ್ದರೆ, ವ್ಯವಸ್ಥೆಯಲ್ಲಿ ಇರುವ ಕೊರತೆಗಳನ್ನು ಹೋಗಲಾಡಿಸಬೇಕು. ಈ ಅಗತ್ಯಗಳಿಗೆ ಸಂಬಂಧಿಸಿದ ಸೇವೆಗಳನ್ನು ಉತ್ತಮಪಡಿಸಬೇಕು ಮತ್ತು ದೂರಗಾಮಿ ಪರಿಣಾಮ ಬೀರಬಲ್ಲ ಸುಧಾರಣೆಗಳನ್ನು ತುರ್ತಾಗಿ ಜಾರಿಗೆ ತರಬೇಕು.

ಬಡತನ, ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಖಾತರಿ, ಘನತೆ, ಸಮಾನತೆ, ಆರೋಗ್ಯ, ಶಿಕ್ಷಣ ಮತ್ತು ಕೆಲಸದ ಅವಕಾಶಗಳು, ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯ, ಹೆಣ್ಣು ಮಕ್ಕಳು ಮತ್ತು ಯುವತಿಯರ ಮೇಲಿನ ದೌರ್ಜನ್ಯ ಮುಂತಾದವುಗಳಿಗೆ ಪರಿಹಾರ ಒದಗಿಸುವುದು ಮುಖ್ಯ. ಅದಲ್ಲದೇ ಇದ್ದರೆ, ಮದುವೆಯ ವಯಸ್ಸು ಏರಿಕೆ ಪ್ರಸ್ತಾವವು ಯುವ ಜನರ ಜೀವನದ ಮೇಲೆ ನಿಯಂತ್ರಣ ಹೇರುವ ಇನ್ನೊಂದು ಪ್ರಯತ್ನವಷ್ಟೇ ಆಗುತ್ತದೆ.

ಉದ್ಯೋಗ, ಆದಾಯ, ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಸ್ಥಳಗಳು, ಸಮಾನ ವೇತನ, ತಾಯ್ತನ ಮತ್ತು ಸ್ತ್ರೀ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು ಮತ್ತು ಅನುಕೂಲಗಳು ಯುವತಿಯರ ಬೇಡಿಕೆಗಳಾಗಿವೆ. ತವರು ಮನೆ ಮತ್ತು ಮದುವೆಯಾದ ಮನೆಯ ಆಸ್ತಿಯಲ್ಲಿ ಸಮಾನ ಹಕ್ಕು ಅವರಿಗೆ ಬೇಕಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಮಗ್ರವಾದ ಕ್ರಮಗಳು ಅಗತ್ಯವಾಗಿವೆ.

–ಕವಿತಾ ರತ್ನ
–ಕವಿತಾ ರತ್ನ

ನಾಗರಿಕರಾಗಿ ಸಮಾನ ಹಕ್ಕುಗಳು ಬೇಕು, ತಮ್ಮ ದೇಹ, ಲೈಂಗಿಕತೆ, ಫಲವಂತಿಕೆ ಮತ್ತು ಜೀವನದಲ್ಲಿ ಸಂಪೂರ್ಣ ನಿಯಂತ್ರಣ ಮಹಿಳೆಯರ ಬೇಡಿಕೆಗಳಾಗಿವೆ. ಜಾತಿ, ಧರ್ಮ ಮತ್ತು ಪ್ರಾದೇಶಿಕ ಹಣೆಪಟ್ಟಿಯ ವಿಭಜನೆಯನ್ನು ಅವರು ವಿರೋಧಿಸುತ್ತಿದ್ದಾರೆ. ಸಬಲೀಕರಣ ಕಾರ್ಯಕ್ರಮ, ಹೆಣ್ಣು ಮಕ್ಕಳ ಅಭಿವೃದ್ಧಿ, ಸಮಾನತೆ ಮತ್ತು ಸ್ವಾತಂತ್ರ್ಯದ ಖಾತರಿಗಾಗಿ ಸರ್ಕಾರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಹೆಣ್ಣು ಮಕ್ಕಳು ಆಗ್ರಹಿಸುತ್ತಿದ್ದಾರೆ.

ಮದುವೆಯ ಕನಿಷ್ಠ ವಯಸ್ಸು 18 ವರ್ಷವಾಗಿಯೇ ಉಳಿದರೂ ಹಕ್ಕು ಆಧಾರಿತವಾದ ಧೋರಣೆಯಿಂದ ತಮ್ಮ ಸಮ್ಮತಿಗೆ ವಿರುದ್ಧವಾಗಿ ಮದುವೆ ನಡೆಯುವುದನ್ನು ಹೆಣ್ಣು ಮಕ್ಕಳು ಪ್ರಶ್ನಿಸಲು ಸಮರ್ಥರಾಗುತ್ತಾರೆ. ಹಲವು ಯುವತಿಯರ ಮದುವೆಯ ವಯಸ್ಸಿನ ಆಯ್ಕೆಯು ಅವರ ಜೀವನದ ವಾಸ್ತವಗಳು ಮತ್ತು ಸಂದರ್ಭಗಳ ಮೇಲೆ ಆಧಾರಿತವಾಗಿರುತ್ತದೆ. ಮದುವೆ ಆಗಬೇಕೇ, ಬೇಕಿದ್ದರೆ ಯಾವಾಗ, ಯಾರನ್ನು, ಹೇಗೆ ಮದುವೆ ಆಗಬೇಕು ಎಂಬುದನ್ನು ನಿರ್ಧರಿಸಲು ಅವರು ಸಮರ್ಥರಾಗುವಂತೆ ಮಾಡುವುದೇ ಈಗ ಅತ್ಯಂತ ನಿರ್ಣಾಯಕ. ಜತೆಗೆ, ಹೆಣ್ಣು ಮಕ್ಕಳ ಅಭಿವ್ಯಕ್ತಿಗೆ ಅವಕಾಶ, ಕುಟುಂಬದ ಒಳಗೆ ಮತ್ತು ಅವರ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಇಂತಹ ಶಾಸನಗಳ ವಿಚಾರದಲ್ಲಿ ಅರ್ಥಪೂರ್ಣ ಭಾಗೀದಾರಿಕೆಯು ಅಗತ್ಯವಾಗಿದೆ.

ಲೇಖಕಿ: ಅಡ್ವೊಕಸಿ, ದಿ ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ನ ನಿರ್ದೇಶಕಿ, ಯಂಗ್‌ ವಾಯ್ಸಸ್‌ ನ್ಯಾಷನಲ್‌ ಮೂವ್‌ಮೆಂಟ್‌ನ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT