ಕನ್ನಡದ ಬಳಕೆಯನ್ನು ತಳಮಟ್ಟದಿಂದ ಬೆಳೆಸುವುದಕ್ಕೆ ಔಷಧದ ಚೀಟಿಗಳನ್ನು ಕನ್ನಡದಲ್ಲಿ ಬರೆಯುವುದೇ ದಾರಿಯಾಗಿದ್ದು, ಅದಕ್ಕೆ ತಕ್ಕ ಆದೇಶವನ್ನು ಸರ್ಕಾರ ಹೊರಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳತೊಡಗಿದ್ದಾರೆ. ಅಂತಹ ಆದೇಶವನ್ನು ಹೊರಡಿಸಲಾಗದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟವಾಗಿಯೇ ಹೇಳಿದ್ದಾರೆ. ಹಿರಿಯ ವೈದ್ಯರಾದ ಡಾ. ಪಿ.ಎಸ್.ಶಂಕರ್ ಅವರು ಕೂಡ ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯುವುದರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ (ಸಂಗತ, ಸೆ. 19).
ಔಷಧ ಚೀಟಿಗಳು ಕನ್ನಡದಲ್ಲಿ ಇರದಿದ್ದರೆ ಕನ್ನಡದ ಅಭಿವೃದ್ಧಿಯಾಗದು ಎನ್ನುವುದಾದರೆ, ವೈದ್ಯರು ಚೀಟಿಯನ್ನು ಕನ್ನಡದಲ್ಲಿ ಬರೆದು ಭಾಷಾಭಿವೃದ್ಧಿಯ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು ಎಂದಾದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಾದರೂ ಏನು?
ಔಷಧದ ಚೀಟಿಯು ಔಷಧಗಳ ಪಟ್ಟಿ ಮಾತ್ರವಲ್ಲ, ರೋಗದ ಬಗ್ಗೆ ಮಾಹಿತಿಯನ್ನು ನೀಡಬಲ್ಲ, ಕಾನೂನಿನ ಮಾನ್ಯತೆಯನ್ನು ಹೊಂದಿರುವ ವೈದ್ಯಕೀಯ ದಾಖಲೆಯೂ ಆಗಿದೆ. ಇಂದು ವಿಶ್ವದೆಲ್ಲೆಡೆ ಸಾಕ್ಷ್ಯಾಧಾರಿತ ಆಧುನಿಕ ವೈದ್ಯವಿಜ್ಞಾನವೇ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವುದರಿಂದ, ಯಾವುದೇ ಮೂಲೆಯಲ್ಲೂ ಏಕರೂಪದ ಚಿಕಿತ್ಸಾ ಕ್ರಮವನ್ನು ಪಾಲಿಸಲಾಗುತ್ತದೆ. ಮಂಗಳೂರಿನಲ್ಲಿ ಬರೆದ ಔಷಧ ಚೀಟಿಯು ಬೆಂಗಳೂರು, ಹುಬ್ಬಳ್ಳಿ ಮಾತ್ರವಲ್ಲ ಚೆನ್ನೈ, ತಿರುವನಂತಪುರ, ದೆಹಲಿ, ಅಮೆರಿಕದ ನ್ಯೂಯಾರ್ಕ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ವೈದ್ಯರಿಗೂ ತಿಳಿಯುತ್ತದೆ. ಈ ಮೂಲಕ ರೋಗಿಯು ಅಲ್ಲೂ ತನ್ನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಅಂತಹ ಮೌಲ್ಯ
ಇರುವ ವೈದ್ಯಕೀಯ ದಾಖಲೆಯು ವಿಶ್ವಮಾನ್ಯವಾದ, ವೈಜ್ಞಾನಿಕವಾದ ಭಾಷೆಯಲ್ಲಿ ಇರುವ
ಅಗತ್ಯವಿಲ್ಲವೇ?
ಔಷಧ ಚೀಟಿಯು ಔಷಧಗಳನ್ನು ಸೇವಿಸಬೇಕಾದ ವರಿಗಿಂತಲೂ ಹೆಚ್ಚಾಗಿ ಔಷಧಗಳನ್ನು ತೆಗೆದು
ಕೊಡುವವರಿಗೆ ವೈದ್ಯರು ನೀಡುವ ಆಣತಿಯಾಗಿರುತ್ತದೆ. ಆದ್ದರಿಂದ ಅದರಲ್ಲಿ ಬರೆದಿರುವುದು ಔಷಧದ ಅಂಗಡಿಗಳಲ್ಲಿ ಇರುವವರಿಗೆ ಅರ್ಥವಾಗಬೇಕು. ಯಾವುದೇ ಔಷಧಗಳ ಪೊಟ್ಟಣಗಳಲ್ಲಿ ಅವುಗಳ ಹೆಸರು ಕನ್ನಡದಲ್ಲಿ ನಮೂದಾಗಿರುವುದೇ ಇಲ್ಲ. ಹೆಚ್ಚಿನ ಔಷಧದ ಅಂಗಡಿಗಳಲ್ಲಿ ಕೆಲಸಕ್ಕೆ ಇರುವವರಿಗೆ ಕನ್ನಡ ಹೋಗಲಿ, ಇಂಗ್ಲಿಷ್ ಅನ್ನೇ ಸರಿಯಾಗಿ ಓದುವುದಕ್ಕೂ ಬರುವುದಿಲ್ಲ. ಈಗ ಇಂಗ್ಲಿಷ್‌ನಲ್ಲೇ ಬರೆದಾಗಲೂ ಅನೇಕ ಸಲ ಎಡವಟ್ಟು
ಗಳಾಗುತ್ತಿರುವಾಗ ಇನ್ನು ಕನ್ನಡದಲ್ಲಿ ಚೀಟಿ ಬರೆದರೆ ಏನೇನಾದೀತು, ಅದಕ್ಕೆ ಹೊಣೆ ಯಾರು?
ಹೊರರಾಜ್ಯಗಳಿಂದ ನಮ್ಮಲ್ಲಿಗೆ ಚಿಕಿತ್ಸೆಗಾಗಿ ಬಂದಿರುವವರಿಗೆ ಕನ್ನಡದಲ್ಲಿ ಚೀಟಿ ಬರೆದುಕೊಟ್ಟರೆ ಹೇಗಾದೀತು? ಇವನ್ನು ಬಗೆಹರಿಸಲು ಪ್ರತಿ ಚೀಟಿಯನ್ನು ಎರಡೆರಡು ಭಾಷೆಗಳಲ್ಲಿ ಬರೆದುಕೊಡಬೇಕೆ?
ಒಟ್ಟಿನಲ್ಲಿ ಔಷಧ ಚೀಟಿಯ ಮೌಲ್ಯವನ್ನು ಅರಿಯದೆ, ವೈದ್ಯಕೀಯ ವಲಯದೊಂದಿಗೂ ಚರ್ಚಿಸದೆ, ಪ್ರಾಧಿಕಾರವು ಏಕಪಕ್ಷೀಯವಾಗಿ ಹೇಳಿಕೆ ನೀಡಿರುವುದರಿಂದ ಒಂದಷ್ಟು ಪೇಚಿಗೀಡಾಗುವಂತೆ ಆಗಿದೆ. ಇದರಿಂದ ಹೊರಬರಲು ಒಂದು ಉಪಾಯವನ್ನು ಮಾಡಬಹುದೇನೊ? ಔಷಧ ಚೀಟಿಯಲ್ಲೂ ಕನ್ನಡವನ್ನು ಕಾಣುವ ಮಹದಾಸೆಯು ಪ್ರಾಧಿಕಾರಕ್ಕೆ ಇದ್ದರೆ, ಅದರಿಂದಷ್ಟೇ ಕನ್ನಡದ ಅಭಿವೃದ್ಧಿ ಸಾಧ್ಯ ಎಂದಾದರೆ, ಔಷಧ ಚೀಟಿಯಲ್ಲಿ ಔಷಧಗಳ ಹೆಸರುಗಳನ್ನು ಕನ್ನಡದಲ್ಲಿ ಬರೆಯುವ ಬದಲಿಗೆ, ಅದರಲ್ಲಿರುವ ವೈದ್ಯರ ಹೆಸರು, ಸಂಸ್ಥೆಯ ಹೆಸರು, ವೈದ್ಯರ ಪರಿಣತಿಯ ವಿವರಗಳು, ಸಂದರ್ಶನದ ಅವಧಿಯಂತಹ ವಿಷಯಗಳನ್ನು ಕನ್ನಡದಲ್ಲೂ ಮುದ್ರಿಸುವಂತೆ ಕೇಳಿಕೊಳ್ಳಬಹುದು.
ಆಧುನಿಕ ವೈದ್ಯ ವಿಜ್ಞಾನದ ವೈದ್ಯರು ಡಾ. ಎಂದು ಬಳಸಿ, ವಿಶೇಷ ಪರಿಣತಿಗಳನ್ನು ಕನ್ನಡ ಪದಗಳ (ಮಿದುಳು, ನರರೋಗ, ಮೂತ್ರಾಂಗ...) ಮೂಲಕ ತಿಳಿಸುವಂತೆ ಮಾಡಬಹುದು. ಆಯುರ್ವೇದ, ಯುನಾನಿ, ಹೋಮಿಯೋಪಥಿ ಚಿಕಿತ್ಸೆ ನೀಡುವವರು ಸ್ಪಷ್ಟವಾಗಿ ಅವನ್ನು ಹಾಗೆಯೇ ಬರೆದು, ವೈದ್ಯ, ಹಕೀಮ್, ಹೋಮಿಯೋ ಎಂದು ಹಾಕಬಹುದು. ಇದರಿಂದ ಕನ್ನಡ ಬೆಳೆಯುವುದಕ್ಕೂ ಜನರ ಗೊಂದಲ ಇಳಿಯುವುದಕ್ಕೂ ಸಹಾಯ ಆಗಬಹುದು.
- ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು
ಔಷಧ ಚೀಟಿಗೆ ಸಂಬಂಧಿಸಿದಂತೆ ಕನ್ನಡಿಗರಿಗೆ ಇಂಗ್ಲಿಷನ್ನು ಹೇಗೆ ಹಗುರ ಮಾಡಬಹುದು ಎಂಬುದರ ಬಗೆಗೆ, ಡಾ. ಪಿ.ಎಸ್.ಶಂಕರ್ ತಮ್ಮ ಲೇಖನದಲ್ಲಿ ಕಾರ್ಯಸಾಧ್ಯ ಮಾರ್ಗವನ್ನು ನೀಡಿದ್ದಾರೆ. ನಾನು ನಾಲ್ಕು ದಶಕಗಳಿಂದಲೂ ಒತ್ತಾಯಿಸುತ್ತಿರುವ, ಕನ್ನಡವನ್ನೇ ಮೊದಲ ಭಾಷೆಯನ್ನಾಗಿ ಮಾಡಿ, ತಾಂತ್ರಿಕ ಪದವನ್ನು ಬದಲಾಯಿಸುವ ಅಥವಾ ಭಾಷಾಂತರಿಸುವ ಗೋಜಿಗೆ ಹೋಗಬೇಡಿ, ಅದನ್ನು ಇದ್ದಹಾಗೇ ಕಲಿಸಿ ಎಂಬ ಆಗ್ರಹಕ್ಕೆ ಬಲ ಬಂದಂತಾಗಿದೆ.
ಹೀಗೆ ಮಾಡುವುದರಿಂದ ಬಡ ಬೋರೇಗೌಡನ ಮಗನಿಗೂ ಉಳ್ಳವರ ಮಕ್ಕಳಿಗೆ ಸಿಗುವ ಉನ್ನತ ನೌಕರಿ ಸಿಗುತ್ತದೆ ಎಂಬ ಹಂಬಲ ಇದರ ಹಿಂದೆ ಇದೆ. ಹಣ ಪೀಕಿಸುವ ಇಂಗ್ಲಿಷ್ ಮಾಧ್ಯಮದ ದೈತ್ಯ ಸಂಸ್ಥೆಗಳಿಗೂ ಕಡಿವಾಣ ಬೀಳುತ್ತದೆ.
ಡಾ. ಶಂಕರ್ ಅವರ ಸಲಹೆಯು ಮಾತೆಯ ಮಮತೆಯಂತಿದೆ. ಇಂಗ್ಲಿಷ್‌ನಲ್ಲಿ ವೈದ್ಯಕೀಯ ಕಲಿತಿರುವ ವೈದ್ಯರನ್ನು ಕನ್ನಡದಲ್ಲಿ ಬರೆಯಲು ಒತ್ತಾಯಿಸುವುದು ಧ್ರುತರಾಷ್ಟ್ರ ಆಲಿಂಗನವಾಗುತ್ತದೆ. ತಾಯಿಯ ಅಪ್ಪುಗೆಗೂ ಧ್ರುತರಾಷ್ಟ್ರನ ಆಲಿಂಗನಕ್ಕೂ ಅಜಗಜಾಂತರ ಇದೆ ಅಲ್ಲವೇ?
- ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.