ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಬ್ರಿಟನ್‌ ಪ್ರಧಾನಿ ಸ್ಟಾರ್ಮರ್‌ ಮುಂದೆ ಸವಾಲುಗಳ ಸಾಲು

Published 5 ಜುಲೈ 2024, 21:27 IST
Last Updated 5 ಜುಲೈ 2024, 21:27 IST
ಅಕ್ಷರ ಗಾತ್ರ

ಬ್ರಿಟನ್‌ ಜನಪ್ರತಿನಿಧಿ ಸಭೆಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ಲೇಬರ್‌ ಪಾರ್ಟಿಯು ಭಾರಿ ಬಹುಮತದ ಗೆಲುವು ದಾಖಲಿಸಿದೆ. 650 ಸದಸ್ಯ ಬಲದ ಸದನದಲ್ಲಿ 412 ಸ್ಥಾನಗಳನ್ನು ಕೀರ್‌ ಸ್ಟಾರ್ಮರ್‌ ನಾಯಕತ್ವದ ಲೇಬರ್‌ ಪಾರ್ಟಿಯು ಗಳಿಸಿದೆ. ಇದರೊಂದಿಗೆ ಕನ್ಸರ್ವೇಟಿವ್‌ ಪಾರ್ಟಿಯ 14 ವರ್ಷಗಳ ಆಳ್ವಿಕೆಯು ಕೊನೆಗೊಂಡಿದೆ.

ಭಾರತ ಮೂಲದ ರಿಷಿ ಸುನಕ್ ನಾಯಕತ್ವದ ಕನ್ಸರ್ವೇಟಿವ್‌ ಪಾರ್ಟಿಯು ಸುಮಾರು ಎರಡು ಶತಮಾನಗಳಲ್ಲಿಯೇ ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಸ್ಟಾರ್ಮರ್‌ ಹೊಸ ಪ್ರಧಾನಿಯಾಗಿ ಅಧಿಕಾರವನ್ನೂ ವಹಿಸಿಕೊಂಡಿದ್ದಾರೆ. ಕನ್ಸರ್ವೇಟಿವ್‌ ಪಕ್ಷದ ಹೀನಾಯ ಸೋಲು ಮತ್ತು ಲೇಬರ್‌ ಪಾರ್ಟಿಯ ಅದ್ಭುತ ಗೆಲುವು ನಿರೀಕ್ಷಿತವೇ ಆಗಿತ್ತು. ಮತಗಟ್ಟೆ ಸಮೀಕ್ಷೆಗಳು ಕೂಡ ಇದನ್ನೇ ಹೇಳಿದ್ದವು.

ಕನ್ಸರ್ವೇಟಿವ್‌ ಪಕ್ಷದ 14 ವರ್ಷಗಳ ಆಡಳಿತವು ಬ್ರಿಟನ್‌ ಅನ್ನು ಹಿಂದಕ್ಕೆ ಒಯ್ಯಿತೇ ಹೊರತು ಪ್ರಗತಿಯತ್ತ ಮುನ್ನಡೆಸಲಿಲ್ಲ. ಈ 14 ವರ್ಷಗಳಲ್ಲಿ ಪ್ರಧಾನಿ ಹುದ್ದೆಗೆ ಐವರು ಏರಿದರು. ಹಣಕಾಸು ಸಚಿವರನ್ನು ಏಳು ಬಾರಿ ಬದಲಾಯಿಸಲಾಯಿತು. ವಿದೇಶಾಂಗ ಸಚಿವರು ಎಂಟು ಬಾರಿ ಬದಲಾದರು. ವಸತಿ ಸಚಿವರು 16 ಬಾರಿ ಬದಲಾದರು. ಸರ್ಕಾರವು ಎಷ್ಟು ಅಸ್ಥಿರವಾಗಿತ್ತು ಎಂಬುದಕ್ಕೆ ಬೇರೆ ವಿವರಗಳನ್ನೇನೂ ನೀಡಬೇಕಾಗಿಲ್ಲ. ಅಧಿಕಾರ ಸ್ಥಾನದಲ್ಲಿ ಇದ್ದವರು ಪದೇ ಪದೇ ಬದಲಾದರೆ ಆಡಳಿತವು ದಕ್ಷವಾಗಿ ಇರಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ಹಲವು ಗಂಭೀರ ಸಮಸ್ಯೆಗಳನ್ನೂ ದೇಶವು ಎದುರಿಸಿದೆ. ಐರೋಪ್ಯ ಒಕ್ಕೂಟದಿಂದ ಹೊರಬರುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು.

ಕೋವಿಡ್‌ ಸಾಂಕ್ರಾಮಿಕವು ದೇಶವನ್ನು ಆವರಿಸಿದಾಗ ಬೋರಿಸ್‌ ಜಾನ್ಸನ್‌ ಪ್ರಧಾನಿಯಾಗಿದ್ದರು. ದೇಶದಲ್ಲಿ 2.3 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡರು. ಜಾನ್ಸನ್‌ ಅವರ ಅಸಡ್ಡೆಯೇ ಕೋವಿಡ್‌ ಅಪಾಯಕಾರಿಯಾಗಿ ಹರಡಲು ಕಾರಣ ಎಂದು ಆಗ ವಿಶ್ಲೇಷಿಸಲಾಗಿತ್ತು. 46 ದಿನ ಪ್ರಧಾನಿಯಾಗಿದ್ದ ಲಿಜ್‌ ಟ್ರಸ್‌ ಅವರ ಆರ್ಥಿಕ ನೀತಿಯು ದೇಶದ ಆರ್ಥಿಕತೆಯು ಮಗುಚಿ ಬೀಳುವಂತೆ ಮಾಡಿತು. ಕನ್ಸರ್ವೇಟಿವ್‌ ಆಳ್ವಿಕೆಯಲ್ಲಿ ಬ್ರಿಟನ್‌ನ ಸಾಮಾನ್ಯ ಪ್ರಜೆಯ ವಾರ್ಷಿಕ ವರಮಾನದಲ್ಲಿ ಕನಿಷ್ಠ 10 ಸಾವಿರ ಡಾಲರ್‌ ಕಡಿತವಾಗಿದೆ ಎಂಬ ವಿಶ್ಲೇಷಣೆಯೂ ಇದೆ. ಆದಾಯ ಕಡಿಮೆಯಾಗಿ, ಹಣದುಬ್ಬರ ಅಂಕೆ ಮೀರಿ ಜನರು ಹೈರಾಣಾದುದರ ಪರಿಣಾಮವೇ ಈ ಪರಿಯ ಫಲಿತಾಂಶಕ್ಕೆ ಕಾರಣ.

ಸ್ಟಾರ್ಮರ್‌ ಮುಂದೆ ಸಾಲು ಸಾಲು ಸವಾಲುಗಳಿವೆ. ಹಣದುಬ್ಬರ ನಿಯಂತ್ರಣ, ಜನರ ಆದಾಯ ಹೆಚ್ಚಳ, ಸರ್ಕಾರದ ಹಣಕಾಸು ಸ್ಥಿತಿಯನ್ನು ಉತ್ತಮಪಡಿಸುವುದು, ಉದ್ಯೋಗ ಸೃಷ್ಟಿ ಪ್ರಮುಖವಾದವು. ಭಾರಿ ಬಹುಮತದ ಸರ್ಕಾರ ಅಧಿಕಾರದಲ್ಲಿರುವಾಗ ಜನರಿಗೆ ಆ ಸರ್ಕಾರದ ಮೇಲೆ ನಿರೀಕ್ಷೆಗಳೂ ಹೆಚ್ಚೇ ಇರುತ್ತವೆ. ಹಾಗಾಗಿ, ಸ್ಟಾರ್ಮರ್‌ ಬಹಳ ಜಾಣ್ಮೆಯಿಂದ, ಎಚ್ಚರದಿಂದ ಕೆಲಸ ಮಾಡಬೇಕಾಗುತ್ತದೆ. ‘ಬದಲಾವಣೆ ಬೇಕಿದೆ’ ಎಂಬ ಘೋಷವಾಕ್ಯವನ್ನು ಮುಂದಿಟ್ಟು ಸ್ಟಾರ್ಮರ್‌ ಮತ ಯಾಚನೆ ಮಾಡಿದ್ದಾರೆ. ಆದರೆ ದೇಶವು ಸಮಸ್ಯೆಗಳ ಸುಳಿಯಲ್ಲಿ ಇದ್ದರೂ ಲೇಬರ್‌ ಪಾರ್ಟಿ ಈ ಬಾರಿ ಮುಂದಿರಿಸಿದ ಪ್ರಣಾಳಿಕೆಯು ಅಸ್ಪಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಮುಂದಿನ ದಾರಿ ಯಾವುದು ಎಂಬುದು ನಿಚ್ಚಳವಲ್ಲದಿದ್ದರೆ ತತ್ತರಿಸಿ ಹೋಗಿರುವ ದೇಶವನ್ನು ಮರಳಿ ಹಳಿಗೆ ತರುವುದು ಸುಲಭವಲ್ಲ. ಆಂತರಿಕವಾಗಿ ಮಾತ್ರವಲ್ಲ, ಬ್ರಿಟನ್‌ ಸುತ್ತ ಹಾಗೂ ಜಗತ್ತಿನಾದ್ಯಂತ ಹಲವು ಬಿಕ್ಕಟ್ಟು ಮತ್ತು ಸಂಘರ್ಷಗಳು ಇರುವ ಸಂದರ್ಭ ಇದು. ರಷ್ಯಾ–ಉಕ್ರೇನ್‌ ಸಂಘರ್ಷವು ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ.

ಇಸ್ರೇಲ್‌–ಹಮಾಸ್‌ ಜಟಾಪಟಿಗೂ ಪರಿಹಾರ ಸಿಕ್ಕಿಲ್ಲ. ಈ ವಿಚಾರದಲ್ಲಿ ಕನ್ಸರ್ವೇಟಿವ್‌ ಪಾರ್ಟಿ ದೃಢ ನಿಲುವು ತಳೆಯಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಜಾಗತಿಕ ತಾಪಮಾನ ತಡೆಗೆ ರೂಪಿಸಿದ ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಪ್ರಧಾನಿಯಾದ ಮೊದಲ ತಿಂಗಳಲ್ಲಿಯೇ ಸ್ಟಾರ್ಮರ್‌ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿಯಾಗಲಿದ್ದಾರೆ. ಯುರೋ‍ಪ್‌ನ ಇತರ ದೇಶಗಳ ಮುಖ್ಯಸ್ಥರನ್ನೂ ಭೇಟಿಯಾಗಲಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸ್ಪಷ್ಟವಾದ ವಿದೇಶಾಂಗ ನೀತಿಯನ್ನು ಅವರು ರೂಪಿಸಿಕೊಳ್ಳಬೇಕಿದೆ. ಈ ಬಾರಿ ಭಾರತ ಮೂಲದ 26 ಸಂಸದರು ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಭಾರತ ಮೂಲದ ಮತದಾರರನ್ನು ಒಲಿಸಿಕೊಳ್ಳಲು ಸ್ಟಾರ್ಮರ್‌ ಭಾರಿ ಪ್ರಯತ್ನ ಮಾಡಿದ್ದಾರೆ. ದೇವಸ್ಥಾನಗಳಿಗೂ ಭೇಟಿ ಕೊಟ್ಟಿದ್ದಾರೆ. ಹೀಗಾಗಿ, ಭಾರತದ ಜೊತೆಗೆ ಅವರು ಸೌಹಾರ್ದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT