ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಎಐಎಫ್‌ಎಫ್‌ ಅಮಾನತು; ಕ್ರೀಡಾ ಆಡಳಿತಗಾರರಿಗೆ ಪಾಠ

Last Updated 17 ಆಗಸ್ಟ್ 2022, 21:51 IST
ಅಕ್ಷರ ಗಾತ್ರ

ಕ್ರಿಕೆಟ್‌ ಆಟವನ್ನು ಧರ್ಮದಂತೆ ಆರಾಧಿಸುವ ಭಾರತದಲ್ಲಿಯೂ ತಾರಾವರ್ಚಸ್ಸಿನ ಸುನಿಲ್ ಚೆಟ್ರಿ ನಾಯಕತ್ವದಲ್ಲಿ ದೇಶದ ಫುಟ್‌ಬಾಲ್ ತಂಡವು ಜನಪ್ರಿಯತೆ ಗಳಿಸುತ್ತಿದೆ. ಆದರೆ ಇದೀಗ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ವಿರುದ್ಧ ಫುಟ್‌ಬಾಲ್‌ ಸಂಸ್ಥೆಗಳ ಅಂತರರಾಷ್ಟ್ರೀಯ ಒಕ್ಕೂಟ (ಫಿಫಾ) ಕೈಗೊಂಡಿರುವ ಅಮಾನತು ಕ್ರಮದಿಂದಾಗಿ ಈ ಕ್ರೀಡೆಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಕೆಲವರ ಅಧಿಕಾರದಾಹ, ಸ್ವಪ್ರತಿಷ್ಠೆ ಹಾಗೂ ಸ್ವಾರ್ಥ ರಾಜಕೀಯಕ್ಕಾಗಿ ಭಾರತದ ಗೌರವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ಆಗಿದೆ. ಇದೇ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಬೇಕಿರುವ ಮಹಿಳಾ ವಿಭಾಗದ 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಮೇಲೂ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಎಐಎಫ್‌ಎಫ್‌ ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಸಲ್ಲದು. ಇದು ಫಿಫಾ ನಿಯಮಗಳ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ಎಐಎಫ್‌ಎಫ್‌ ಅನ್ನು ಅಮಾನತುಗೊಳಿಸಿರುವುದಾಗಿ ಫಿಫಾ ಹೇಳಿದೆ. ಈ ಬೆಳವಣಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಮೇ 18ರಂದು ಎಐಎಫ್‌ಎಫ್‌ ಅಧ್ಯಕ್ಷ ಸ್ಥಾನದಿಂದ ಪ್ರಫುಲ್‌ ಪಟೇಲ್ ಅವರನ್ನು ಸುಪ್ರೀಂ ಕೋರ್ಟ್‌ ಕಿತ್ತುಹಾಕಿತ್ತು. ಆ ದಿನದಿಂದಲೇ ಫಿಫಾ ಅಮಾನತು ಆದೇಶ ಹೊರಬೀಳುವ ಅನುಮಾನ ಸುಳಿದಾಡುತ್ತಲೇ ಇತ್ತು. ಎನ್‌ಸಿಪಿ ಧುರೀಣರೂ ಆಗಿರುವ ಪಟೇಲ್, ಎಐಎಫ್‌ಎಫ್‌ನಲ್ಲಿ ಸತತ 12 ವರ್ಷ ಅಧಿಕಾರದಲ್ಲಿದ್ದರು. ರಾಷ್ಟ್ರೀಯ ಕ್ರೀಡಾ ನೀತಿಯ ಅನ್ವಯ ಪ್ರಫುಲ್ ಅಧಿಕಾರಾವಧಿಯು 2020ರ ಡಿಸೆಂಬರ್‌ನಲ್ಲಿ ಕೊನೆಗೊಂಡಿತ್ತು. ಆದರೂ ಅವರು ಅಧಿಕಾರ ಬಿಟ್ಟುಕೊಟ್ಟಿರಲಿಲ್ಲ.

ಚುನಾವಣೆ ನಡೆಸಲು ಕೂಡ ಅವರು ಅಡ್ಡಗಾಲು ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಅವರ ವಿರೋಧಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. ಪಟೇಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಮೂರ್ತಿ ಎ.ಆರ್. ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಹಾಗೂ ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಭಾಸ್ಕರ್ ಗಂಗೂಲಿ ಅವರಿದ್ದ ಆಡಳಿತ ಸಮಿತಿಯನ್ನು (ಸಿಒಎ) ನೇಮಿಸಿತ್ತು. ಆಡಳಿತದಲ್ಲಿ ಕ್ರೀಡಾನೀತಿಯನ್ನು ಸಮಗ್ರವಾಗಿ ಜಾರಿಗೊಳಿಸಿ, ಚುನಾಯಿತ ಆಡಳಿತ ಮಂಡಳಿಯನ್ನು ನೇಮಿಸುವಂತೆ ಸೂಚಿಸಿತ್ತು.

ಸೆಪ್ಟೆಂಬರ್‌ ಅಂತ್ಯದೊಳಗೆ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬರಲಿದೆ ಎಂದು ಸಿಒಎ ವಾಗ್ದಾನ ಮಾಡಿತ್ತು. ಆ ದಿಸೆಯಲ್ಲಿ ಕಾರ್ಯೋನ್ಮುಖ ವಾಗಿತ್ತು. ಜೂನ್‌ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಫಿಫಾ ನಿಯೋಗಕ್ಕೂ ಸಿಒಎ ಇದೇ ಮಾತು ಹೇಳಿತ್ತು. ಈ ತಿಂಗಳ ಅಂತ್ಯಕ್ಕೆ ಚುನಾವಣೆ ನಡೆಸುವುದಕ್ಕೂ ಸಿದ್ಧತೆ ನಡೆಸಿತ್ತು. ಆಗ ಸಮ್ಮತಿ ಸೂಚಿಸಿದ್ದ ಫಿಫಾ, ಹೋದ ವಾರ ಎಐಎಫ್‌ಎಫ್‌ ಅನ್ನು ಅಮಾನತುಗೊಳಿಸುವುದಾಗಿ ಬೆದರಿಕೆಯೊಡ್ಡಿತ್ತು. ಅದು ಈಗ ನಿಜವಾಗಿದೆ. ಅಮಾನತು ಆದೇಶದ ಹಿಂದೆ ಪ್ರಫುಲ್‌ ಪ್ರಭಾವ ಕೆಲಸ ಮಾಡಿದೆ ಎಂಬ ಆರೋಪ ಇದೆ. ಪ್ರಫುಲ್‌,ಫಿಫಾ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರೂ ಹೌದು. ಒಂದೊಮ್ಮೆ ಅವರು ಹುನ್ನಾರ ಮಾಡಿದ್ದರೆ ಅದು ಅಕ್ಷಮ್ಯ. ಏಕೆಂದರೆ, ತಮ್ಮ ಸ್ವಪ್ರತಿಷ್ಠೆಗಾಗಿ ದೇಶದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳೆಯುವುದು ಸರಿಯಲ್ಲ. ಇಂತಹ ನಡೆಯಿಂದಾಗಿ ಕ್ರೀಡೆಯ ಆಡಳಿತದಲ್ಲಿ ಪಾರದರ್ಶಕತೆ, ಮಾಜಿ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆ ಯಲ್ಲಿರುವಂತಹ ಸಮಿತಿಯ ರಚನೆಯ ಆಶಯಗಳಿಗೆ ಹಿನ್ನಡೆಯಾಗುತ್ತದೆ. ಕ್ರೀಡಾ ನೀತಿಯನ್ನು ಅಚ್ಚುಕಟ್ಟಾಗಿ ಹಾಗೂ ನಿಷ್ಪಕ್ಷಪಾತವಾಗಿ ಜಾರಿಗೊಳಿಸುವಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು ತೋರಿದ ವಿಳಂಬ ಧೋರಣೆಯೂ ಇಂತಹ ಪ್ರಮಾದಗಳಿಗೆ ಕಾರಣ.

ಎಲ್ಲದಕ್ಕೂ ನ್ಯಾಯಾಲಯದತ್ತ ಮುಖ ಮಾಡುವುದಾದರೆ ಸಚಿವಾಲಯಗಳು ಏಕೆ ಬೇಕು ಎಂಬ ಪ್ರಶ್ನೆ ಮೂಡುತ್ತದೆ. ಇವತ್ತು ದೇಶದಲ್ಲಿ ಫುಟ್‌ಬಾಲ್, ಟೇಬಲ್ ಟೆನಿಸ್ ಹಾಗೂ ಈಗ ಭಾರತ ಒಲಿಂಪಿಕ್ ಸಂಸ್ಥೆಯಲ್ಲಿ ಸಿಒಎ ನೇಮಕವಾಗಿದೆ. ಇದು ಕ್ರೀಡಾ ಆಡಳಿತಗಾರರ ಅದಕ್ಷತೆಯನ್ನು ಎತ್ತಿ ತೋರಿಸುತ್ತದೆ. ರಾಜಕೀಯ ಹಸ್ತಕ್ಷೇಪ ಮತ್ತು ರಾಜಕಾರಣಿಗಳನ್ನು ಕ್ರೀಡೆಯ ಆಡಳಿತದಿಂದ ದೂರವಿಡಬೇಕು ಎಂಬ ಪಾಠವನ್ನು ಇನ್ನಾದರೂ ಕಲಿಯಬೇಕು. ಒಲಿಂಪಿಕ್ಸ್‌, ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಪದಕಗಳನ್ನು ಗೆದ್ದು ಬೀಗುತ್ತಿರುವ ಕಾಲಘಟ್ಟ ಇದು. ಫುಟ್‌ಬಾಲ್ ತಂಡವು ಫಿಫಾ ವಿಶ್ವಕಪ್, ಒಲಿಂಪಿಕ್ ಕೂಟಗಳಲ್ಲಿ ಮರಳಿ ಪ್ರವೇಶ ಗಿಟ್ಟಿಸಲು ಬಹಳಷ್ಟು ಹಾದಿ ಸವೆಸಬೇಕಾಗಿದೆ, ನಿಜ. ಆದರೆ, ಫ್ರ್ಯಾಂಚೈಸಿ ಲೀಗ್ ಹಾಗೂ ಕೆಲವು ಉತ್ತಮ ಆಟಗಾರರಿಂದಾಗಿ ಪ್ರಸ್ತುತ ಫುಟ್‌ಬಾಲ್ ತಂಡವು ಏಷ್ಯಾಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಫಿಫಾ ರ‍್ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿರುವ ಭಾರತವು ಯುರೋಪಿನ ಬಲಾಢ್ಯ ತಂಡಗಳೊಂದಿಗೆ ಸರಿಸಾಟಿಯಾಗಿ ನಿಲ್ಲಲು ಇನ್ನೂ ಬಹಳಷ್ಟು ಕಾಲ ಬೇಕು. ಅಂತಹ ಸಾಧನೆ ಮಾಡಲು ಪೂರಕವಾದ ವಾತಾವರಣ ಸೃಷ್ಟಿಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT