ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಇನ್ಫೊಸಿಸ್ ಹಾಗೂ ದೇಶದ್ರೋಹದ ಆರೋಪ: ಮಾತುಗಳು ಘನತೆ ಕಳೆದುಕೊಂಡ ಲಕ್ಷಣ

Last Updated 12 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

‘ಇನ್ಫೊಸಿಸ್’ ಎಂಬುದು ಭಾರತದ, ಅದರಲ್ಲೂ ಮುಖ್ಯವಾಗಿ ಕನ್ನಡ ನಾಡಿನ ಅಸಂಖ್ಯ ಕುಟುಂಬಗಳ ಪಾಲಿಗೆ ಒಂದು ತಂತ್ರಾಂಶ ಕಂಪನಿಯ ಹೆಸರಷ್ಟೇ ಅಲ್ಲ. ಅದು ಅವರ ಪಾಲಿಗೆ ಬದುಕು ಕಟ್ಟಿಕೊಟ್ಟ ಸಂಸ್ಥೆಯೂ ಹೌದು. ಭಾರತವು ಆರ್ಥಿಕ ಉದಾರೀಕರಣ ಪ್ರಕ್ರಿಯೆಗೆ ತೆರೆದುಕೊಂಡ ನಂತರದ ಕೆಲವೇ ವರ್ಷಗಳಲ್ಲಿ ಇನ್ಫೊಸಿಸ್, ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಿತು.

ಎನ್.ಆರ್. ನಾರಾಯಣಮೂರ್ತಿ, ನಂದನ್ ನಿಲೇಕಣಿ, ಎಸ್.ಡಿ. ಶಿಬುಲಾಲ್, ಎಸ್. ಗೋಪಾಲಕೃಷ್ಣನ್ ಅವರಂತಹ ಸಾಹಸಿಗರು ಕಟ್ಟಿದ ಇನ್ಫೊಸಿಸ್, ಆ ಮೂಲಕ ನಿಜ ಅರ್ಥದಲ್ಲಿ ಎಲ್ಲರ ಕಂಪನಿ ಆಯಿತು. ಲಕ್ಷಾಂತರ ಮಂದಿ ನೌಕರರು ಈ ಕಂಪನಿಯ ಮೂಲಕ ಅನ್ನ ಕಂಡುಕೊಂಡಿದ್ದಾರೆ. ಲಕ್ಷಾಂತರ ಮಂದಿ ಹೂಡಿಕೆದಾರರು, ಈ ಐ.ಟಿ. ದೈತ್ಯನಲ್ಲಿ ಹೂಡಿಕೆ ಮಾಡಿ ಸಂಪ‌ತ್ತು ಸೃಷ್ಟಿಸಿಕೊಂಡಿದ್ದಾರೆ. ದೇಶವು ಆರ್ಥಿಕವಾಗಿ ಮುಕ್ತವಾದ ನಂತರದಲ್ಲಿ ಈ ಕಂಪನಿಯು ಕನ್ನಡದ ಮಣ್ಣಿನಲ್ಲಿ ತನಗೆ ತಾನೇ ಸಾಟಿ ಎಂಬ ರೀತಿಯಲ್ಲಿ ಬೆಳೆದು ನಿಂತಿದೆ. ಬಡ ಹಾಗೂ ಮಧ್ಯಮ ವರ್ಗದ ಸಹಸ್ರಾರು ಕುಟುಂಬಗಳಿಗೆ ಶ್ರೀಮಂತಿಕೆ ತಂದುಕೊಡುವಲ್ಲಿ ಇನ್ಫೊಸಿಸ್‌ನ ಕೊಡುಗೆ ಗುರುತರವಾದುದು. ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಸಿಕೊಡುವಲ್ಲಿ ದೇಶದ ಮುಂಚೂಣಿ ಕಂಪನಿಗಳ ಸಾಲಿನಲ್ಲಿ ಇನ್ಫೊಸಿಸ್‌ಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಮಧ್ಯಮ ವರ್ಗಕ್ಕೆ ಸೇರಿದ ನಾರಾಯಣಮೂರ್ತಿ ಅವರಂತಹ ಉದ್ಯಮಿಗಳು ಭಾರತದ ನೆಲದಲ್ಲಿ ಸಹಸ್ರಾರು ಕೋಟಿ ರೂಪಾಯಿ ಬೆಲೆಬಾಳುವ ಉದ್ಯಮವೊಂದನ್ನು ಕಟ್ಟಬಲ್ಲರು, ಆ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಒಂದು ಬ್ರ್ಯಾಂಡ್ ಆಗಿ ಬೆಳೆಸಬಲ್ಲರು ಎಂಬುದರ ರೂಪಕ ಇನ್ಫೊಸಿಸ್. ಇಂತಹ ಕಂಪನಿಯ ಬಗ್ಗೆ ಈಗ ತೀರಾ ಹಗುರವೂ ಅತ್ಯಂತ ಅಪಾಯಕಾರಿಯೂ ಆದ ಮಾತುಗಳು ಆಡಳಿತಾರೂಢ ಪಕ್ಷಕ್ಕೆ ಹತ್ತಿರವಾಗಿ ಇರುವವರಿಂದ ಬಂದಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಜೊತೆ ನಂಟು ಹೊಂದಿರುವ ‘ಪಾಂಚಜನ್ಯ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಇನ್ಫೊಸಿಸ್ ಬಗ್ಗೆ ಸಲ್ಲದ ಮಾತುಗಳನ್ನು ಆಡಲಾಗಿದೆ. ಆದಾಯ ತೆರಿಗೆ ವಿವರ ಸಲ್ಲಿಸಲು ಅನುವು ಮಾಡಿಕೊಡುವ ಹೊಸ ಪೋರ್ಟಲ್‌ನಲ್ಲಿ ಹಲವು ಸಮಸ್ಯೆಗಳು ಇರುವುದು ವರದಿಯಾಗಿದೆ. ಈ ಪೋರ್ಟಲ್‌ ಅಭಿವೃದ್ಧಿಪಡಿಸಿದ್ದು ಇನ್ಫೊಸಿಸ್. ಪೋರ್ಟಲ್‌ನಲ್ಲಿ ಇರುವ ಸಮಸ್ಯೆಗಳನ್ನು ಸೆಪ್ಟೆಂಬರ್ 15ರೊಳಗೆ ಸರಿಪಡಿಸಬೇಕು ಎಂದು ಕೇಂದ್ರ ಸರ್ಕಾರವು ಕಂಪನಿಗೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಲೇಖನವೊಂದನ್ನು ಪ್ರಕಟಿಸಿರುವ ‘ಪಾಂಚಜನ್ಯ’ ಪತ್ರಿಕೆಯು ಪೋರ್ಟಲ್‌ನಲ್ಲಿ ಸಮಸ್ಯೆಗಳು ಇರುವುದರ ಹಿಂದೆ ದೇಶವಿರೋಧಿ ಪಿತೂರಿ ಇದೆಯೇ ಎಂಬ ಪ್ರಶ್ನೆ ಎತ್ತಿರುವುದಾಗಿ ವರದಿಯಾಗಿದೆ. ಇಂತಹ ಮಾತುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿಯೊಬ್ಬರು ಲೇಖನಕ್ಕೂ ಸಂಘಕ್ಕೂ ಸಂಬಂಧವಿಲ್ಲ, ಪತ್ರಿಕೆಯು ಸಂಘದ ಮುಖವಾಣಿ ಅಲ್ಲ ಎಂಬ ವಿವರಣೆ ನೀಡಿದ್ದಾರೆ. ಈ ವಿವರಣೆಯು ಬಂದ ನಂತರದಲ್ಲಿ ಆರ್‌ಎಸ್‌ಎಸ್‌ನ ಇನ್ನೊಬ್ಬ ಹಿರಿಯ ಪದಾಧಿಕಾರಿಯು, ‘ಪತ್ರಿಕೆಯು ಧರ್ಮಯುದ್ಧ ನಡೆಸುತ್ತಿದೆ’ ಎಂದು ಶ್ಲಾಘಿಸಿರುವುದು ವರದಿಯಾಗಿದೆ. ಆಳುವ ಪಕ್ಷಕ್ಕೆ ಹತ್ತಿರವಾಗಿರುವ ಸಂಘಟನೆಗೆ ಸೇರಿದವರು ನಡೆಸುತ್ತಿರುವ ಪತ್ರಿಕೆಯಲ್ಲಿ ಇಂತಹ ಮಾತುಗಳು ಪ್ರಕಟವಾಗುವುದು, ಉದ್ಯಮ ವಲಯದಲ್ಲಿ ಹಾಗೂ ಹೂಡಿಕೆದಾರರ ಸಮೂಹದ ಮೇಲೆ ತೀರಾ ಕೆಟ್ಟ ಪರಿಣಾಮ ಉಂಟುಮಾಡಬಲ್ಲದು. ಆಡಳಿತ ಪಕ್ಷದ ಜತೆ ಸೈದ್ಧಾಂತಿಕ ಸಂಬಂಧ ಹೊಂದಿದ ಕೆಲವರು ಮುಸ್ಲಿಮರನ್ನು, ಎಡಪಂಥೀಯರನ್ನು, ಬುದ್ಧಿಜೀವಿಗಳನ್ನು, ಕೆಲವು ಲೇಖಕರು ಮತ್ತು ಕಲಾವಿದರನ್ನು ‘ದೇಶದ್ರೋಹಿ’ಗಳು ಎಂದು ಚಿತ್ರಿಸಲು ಯತ್ನಿಸಿದ್ದು ಇದೆ. ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ದ್ವೇಷ ಕಾರಿದ್ದು ಕೂಡ ಇದೆ. ಆದರೆ, ಇನ್ಫೊಸಿಸ್‌ನಂತಹ ಭಾರತ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದರ ಬಗ್ಗೆ ಸಡಿಲ ಮಾತುಗಳನ್ನು ಆಡಿದ ನಿದರ್ಶನ ಇರಲಿಲ್ಲ. ಈಗ ಅದೂ ಆಗಿದೆ. ತಮ್ಮ ಸಿದ್ಧಾಂತಕ್ಕೆ ಸರಿಕಾಣದವರೆಲ್ಲ ‘ದೇಶದ್ರೋಹಿಗಳು’ ಅಥವಾ ‘ದೇಶದ್ರೋಹಿಗಳ ಜೊತೆ ಶಾಮೀಲಾದವರು’ ಎಂದು ದೂಷಿಸುವುದು ಇಡೀ ಸಮಾಜದ ಹಿತವನ್ನು ಕೆಡಿಸುವ ಪ್ರವೃತ್ತಿ. ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಟಾಟಾ ಸಮೂಹದ ಬಗ್ಗೆಯೂ ಈಚೆಗೆ ಹಗುರವಾದ ಮಾತು ಆಡಿದ್ದಾಗಿ ವರದಿಯಾಗಿದೆ.

ಇನ್ಫೊಸಿಸ್ ಅಭಿವೃದ್ಧಿಪಡಿಸಿರುವ ಪೋರ್ಟಲ್‌ನಲ್ಲಿ ದೋಷಗಳು ಇವೆ. ಅವು ತಾಂತ್ರಿಕ ಸಮಸ್ಯೆಗಳು. ಅವುಗಳನ್ನು ಪರಿಹರಿಸಬಹುದು. ಆ ತಾಂತ್ರಿಕ ಸಮಸ್ಯೆಗಳ ವಿಚಾರವಾಗಿ, ಗುತ್ತಿಗೆ ಒಪ್ಪಂದದ ನಿಯಮಗಳ ಅನುಸಾರ ಕಂಪನಿಯ ವಿರುದ್ಧ ಕ್ರಮವನ್ನೂ ಜರುಗಿಸಲು ಅವಕಾಶ ಇದ್ದಿರಬಹುದು. ಆದರೆ, ತಾಂತ್ರಿಕ ಲೋಪವೊಂದನ್ನು ದೇಶದ್ರೋಹಕ್ಕೆ ಸಮ ಎಂಬಂತೆ ಚಿತ್ರಿಸುವುದು ಮಾತು ಸೋತ ವ್ಯಕ್ತಿಗಳ ಲಕ್ಷಣ. ದೊಡ್ಡ ಸಂಘಟನೆಗಳಿಗೆ ಸೇರಿದವರು, ಅಂತಹ ಸಂಘಟನೆಗಳ ಜೊತೆ ನಂಟು ಹೊಂದಿರುವುದಾಗಿ ಹೇಳಿಕೊಳ್ಳುವವರ ಮಾತುಗಳು ಸೋಲಬಾರದು. ಈಗ ಆಡಿರುವ ಮಾತುಗಳು ದೇಶದ ಉದ್ಯಮ ವಲಯ, ಹೂಡಿಕೆದಾರರ ಸಮೂಹದ ಆತ್ಮಸ್ಥೈರ್ಯವನ್ನು ಹಾಳುಮಾಡುತ್ತವೆ. ಇನ್ಫೊಸಿಸ್ ಕಂಪನಿಯು ‘ತುಕ್ಡೆ ತುಕ್ಡೆ ಗ್ಯಾಂಗ್‌’ಗೆ ಸಹಾಯ ಮಾಡುತ್ತಿರಬಹುದು, ನಕ್ಸಲರಿಗೆ, ಎಡಪಂಥೀಯರಿಗೆ ಸಹಾಯ ಮಾಡುತ್ತಿರಬಹುದು ಎಂದು ಅನುಮಾನಿಸುವುದು ಕಂಪನಿಯ ಹೂಡಿಕೆದಾರರಿಗೆ ಪರೋಕ್ಷವಾಗಿ ಬೆದರಿಕೆ ಒಡ್ಡುವುದಕ್ಕೆ ಸಮ. ಘನತೆ ಕಳೆದುಕೊಂಡ ಮಾತುಗಳು ದೇಶಪ್ರೇಮಿಗಳ ಲಕ್ಷಣ ಅಲ್ಲ; ಅಂಕೆ ತಪ್ಪಿದ ಮಾತುಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ದೇಶ ಅಂದರೆ ಸಿದ್ಧಾಂತವಲ್ಲ. ತಮಗೆ ಸರಿಕಾಣದವರನ್ನೆಲ್ಲ ದೇಶದ್ರೋಹಿಗಳು ಎಂಬಂತೆ ಚಿತ್ರಿಸುವುದರಿಂದ ದೇಶಕ್ಕೆ, ದೇಶವಾಸಿಗಳಿಗೆ ಯಾವ ಅನುಕೂಲವೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT