ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಶಾಲೆಗಳು ತೆರೆಯಲಾಗದ ಸಮಯದಲ್ಲಿ ಪರ್ಯಾಯಗಳ ಹುಡುಕಾಟ ಅಗತ್ಯ

Last Updated 24 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಡಿಸೆಂಬರ್‌ ಅಂತ್ಯದವರೆಗೆ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸದಿರುವ ರಾಜ್ಯ ಸರ್ಕಾರದ ತೀರ್ಮಾನವು ಕೋವಿಡ್-19‌ ಬಿಕ್ಕಟ್ಟಿನ ಸಂದರ್ಭದಲ್ಲಿ ಅನಿವಾರ್ಯವಾಗಿದ್ದ ಕ್ರಮ. ಯಾವುದೇ ಸಮಯದಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಬಹುದು ಎನ್ನುವ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಚಳಿಯ ದಿನಗಳಲ್ಲಿ ಕೋವಿಡ್‌ ಹರಡುವಿಕೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಬಹುದೆಂದು ತಜ್ಞರು ಅಂದಾಜು ಮಾಡಿರುವುದನ್ನು ನೋಡಿದರೆ, ಡಿಸೆಂಬರ್‌ ನಂತರವೂ ಶಾಲೆಗಳನ್ನು ತೆರೆಯಲು ಅನುಕೂಲವಾದ ಪರಿಸ್ಥಿತಿ ಇರುತ್ತದೆಂದು ಹೇಳಲಾಗದು.

ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ ಮತ್ತು ಯುಜಿಸಿ ನಿರ್ದೇಶನದ ಮೇರೆಗೆ ನ. 17ರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನು ರಾಜ್ಯ ಸರ್ಕಾರ ಪುನರಾರಂಭಿಸಿದೆ. ಆದರೆ, ವಿದ್ಯಾರ್ಥಿಗಳ ಹಾಜರಾತಿ ಕನಿಷ್ಠ ಮಟ್ಟದಲ್ಲಿರುವುದು, ಕೊರೊನಾ ಸೋಂಕಿನ ಬಗ್ಗೆ ಸಮುದಾಯದಲ್ಲಿರುವ ಆತಂಕವನ್ನು ಸೂಚಿಸುವಂತಿದೆ. ಪ್ರೌಢ ವಿದ್ಯಾರ್ಥಿಗಳೇ ತರಗತಿಗಳಿಗೆ ಹಾಜರಾಗಲಿಕ್ಕೆ ಹಿಂದೆಮುಂದೆ ನೋಡುತ್ತಿರುವ ಸಂದರ್ಭದಲ್ಲಿ ಎಳೆಯ ಮಕ್ಕಳಿಗೆ ಶಾಲೆ ಆರಂಭಿಸಬೇಕೆಂದು ಯೋಚಿಸುವುದರಲ್ಲಿ ಅರ್ಥವಿಲ್ಲ.

ಮಕ್ಕಳ ಹಿತರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಸಲ್ಲದು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗುತ್ತದೋ ಇಲ್ಲವೋ ಎಂಬ ಗೊಂದಲಕ್ಕಿಂತ ಕಲಿಕೆಯ ಕಡೆ ಗಮನ ಕೇಂದ್ರೀಕರಿಸುವುದು ಒಳಿತು.ವಿದ್ಯಾರ್ಥಿಗಳಿಗೆ ಈಗಿರುವಂತೆ ಆನ್‌ಲೈನ್‌ ಶಿಕ್ಷಣವನ್ನು ಮುಂದುವರಿಸಿ,ಒಂಬತ್ತನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವ ಕುರಿತು ಯೋಚಿಸಬಹುದು. ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳ ಕಲಿಕೆಯ ಕುರಿತು ಸ್ಪಷ್ಟ ನಿಲುವು ತಳೆಯಲು ಸಾಧ್ಯವಾದರೆ, ಹತ್ತನೇ ತರಗತಿ ಹಾಗೂ ಪಿಯು ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಗಮನಹರಿಸಲು ಶಿಕ್ಷಣ ಇಲಾಖೆಗೆ ಅನುಕೂಲವಾಗುತ್ತದೆ.

ಶಿಕ್ಷಣ ಇಲಾಖೆಯ ಪಾಲಿಗಿದು ಅತ್ಯಂತ ಸೂಕ್ಷ್ಮವಾದ ಸನ್ನಿವೇಶ. ಇಡೀ ವರ್ಷ ಶಾಲೆಗೆ ಹೋಗದ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವಂತೆ ಕೇಳಬೇಕಾಗಿದೆ. ನಗರಪ್ರದೇಶಗಳ ವಿದ್ಯಾರ್ಥಿಗಳು, ವಿಶೇಷವಾಗಿ ಖಾಸಗಿ ಶಾಲೆಗಳ ಮಕ್ಕಳು ತಕ್ಕಮಟ್ಟಿಗೆ ಸಿದ್ಧತೆ ಮಾಡಿಕೊಳ್ಳಬಹುದು. ಆದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ತೊಂದರೆಗೊಳಗಾಗುತ್ತಾರೆ. ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಆನ್‌ಲೈನ್ ಸಂಪರ್ಕ ಸುಲಭ ಲಭ್ಯವಲ್ಲ.

ಸ್ಮಾರ್ಟ್ ಫೋನ್ ಹೊಂದುವ ಸಾಮರ್ಥ್ಯ ಕೂಡ ಎಲ್ಲ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಇಂಥ ಪ್ರತಿಕೂಲ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಗ್ರಾಮೀಣ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ಸರ್ಕಾರ ಸೂಕ್ತ ಮಾರ್ಗಗಳನ್ನು ಹುಡುಕಬೇಕಾಗಿದೆ. ಒಂದರಿಂದ ಒಂಬತ್ತರವರೆಗಿನ ವಿದ್ಯಾರ್ಥಿಗಳಿಗೆ ಕೂಡ ನಿರಂತರ ಕಲಿಕೆ ಸಾಧ್ಯವಾಗುವಂತಹ ಪರ್ಯಾಯ ಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗಿದೆ. ಈ ದಿಸೆಯಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತಹ ಚಿಂತನೆಗಳ ಜೊತೆಗೆ,ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಅಲ್ಲಿಗೆ ಹೊಂದುವಂತಹ ತೀರ್ಮಾನಗಳನ್ನು ಕೈಗೊಳ್ಳಬಹುದು.

ಶಾಲೆಗಳನ್ನು ತೆರೆಯುವುದು ವಿಳಂಬವಾದಷ್ಟೂ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹದಂಥ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತವೆ ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಇದು ಗಂಭೀರವಾದ ವಿಷಯ. ಆದರೆ, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಶಾಲೆ ತೆರೆಯುವುದೊಂದೇ ಮಾರ್ಗವಲ್ಲ. ಸ್ಥಳೀಯ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಬೇಕು. ಶಾಲೆ ನಡೆಸುವುದರಾಚೆಗೆ ಇರುವ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನಹರಿಸಬೇಕಾಗಿದೆ.

ಖಾಸಗಿ ಶಾಲೆಗಳ ಬಹಳಷ್ಟು ಶಿಕ್ಷಕರ ಸಂಬಳಕ್ಕೆ ತೊಂದರೆಯಾಗಿದೆ. ಕೆಲವರು ಉದ್ಯೋಗ ಖಾತರಿಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಂಥ ಶಿಕ್ಷಕರ ನೆರವಿಗೆ ಸರ್ಕಾರ ಧಾವಿಸಬೇಕು. ಎಂಟನೇ ತರಗತಿಯವರೆಗಿನ ಶಾಲಾಮಕ್ಕಳಿಗೆ ಬಿಸಿಯೂಟ ಪೂರೈಸುವ ಯೋಜನೆಯು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದೆ. ಈ ಬಿಸಿಯೂಟ ಕಾರ್ಯಕ್ರಮ ಆದಷ್ಟು ಬೇಗ ಪುನರಾರಂಭಗೊಳ್ಳಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT