ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಆಸ್ತಿ ತೆರಿಗೆ ವಂಚನೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಾಕ್ಷಿಣ್ಯ ಬೇಡ

Last Updated 11 ಆಗಸ್ಟ್ 2020, 20:34 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು ಮಾಲೀಕರೇ ಸ್ವಯಂಘೋಷಿಸಿ, ಪಾವತಿಸುವ ಪದ್ಧತಿ ಜಾರಿಯಲ್ಲಿದೆ. ತಮ್ಮ ಕಟ್ಟಡದ ವಿಸ್ತೀರ್ಣ ಎಷ್ಟು ಎಂಬುದನ್ನು ಘೋಷಿಸಿ, ಪಾಲಿಕೆಯು ನಿಗದಿಪಡಿಸಿದ ದರದಲ್ಲಿ ತೆರಿಗೆ ಲೆಕ್ಕಾಚಾರವನ್ನೂ ಮಾಡಿ, ಪಾವತಿಸುವ ಪದ್ಧತಿ ಇದು.

ಆಸ್ತಿಗಳ ವಿಸ್ತೀರ್ಣದ ಕುರಿತು ತಪ್ಪು ಮಾಹಿತಿ ನೀಡಿದರೆ, ಅಂತಹವರನ್ನು ದಂಡಿಸುವ ಅಧಿಕಾರ ಬಿಬಿಎಂಪಿಗೆ ಇದೆ. ಬಿಬಿಎಂಪಿಗೆ ಹರಿದುಬರುವ ವರಮಾನದಲ್ಲಿ ವಾಣಿಜ್ಯ ಕಟ್ಟಡಗಳಿಂದ ಬರುವ ಆಸ್ತಿ ತೆರಿಗೆಯ ಬಾಬತ್ತು ತುಂಬಾ ದೊಡ್ಡದು. ತಪ್ಪು ಮಾಹಿತಿ ನೀಡಿ, ತೆರಿಗೆ ವಂಚಿಸುವ ಪರಿಪಾಟ ಅಲ್ಲಿಯೇ ಹೆಚ್ಚು ಎನ್ನುತ್ತವೆ ಬಿಬಿಎಂಪಿ ಕಂದಾಯ ವಿಭಾಗದ ದಾಖಲೆಗಳು. ಆದ್ದರಿಂದಲೇ ಟೆಕ್‌ಪಾರ್ಕ್‌ಗಳು, ದೊಡ್ಡ ಮಾಲ್‌ಗಳು ಹಾಗೂ ಐಷಾರಾಮಿ ಹೋಟೆಲ್‌ ಕಟ್ಟಡಗಳ ನಿಖರವಾದ ವಿಸ್ತೀರ್ಣವನ್ನು ಪತ್ತೆಹಚ್ಚಲು ಪಾಲಿಕೆಯು ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಿತ್ತು.

ಒಟ್ಟು 104 ಕಟ್ಟಡಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಅದರ ವರದಿಯನ್ನು ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲಾಗಿದೆ. 80 ಆಸ್ತಿಗಳ ಮಾಲೀಕರು, ವಾಸ್ತವದ ವಿಸ್ತೀರ್ಣಕ್ಕಿಂತ ಕಡಿಮೆ ಲೆಕ್ಕ ತೋರಿಸಿರುವುದು ಈ ಸರ್ವೇಯಲ್ಲಿ ಕಂಡುಬಂದಿದೆ. ₹ 627 ಕೋಟಿಯಷ್ಟು ಹೆಚ್ಚುವರಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕಿದೆ ಎಂದೂಅಂದಾಜಿಸಲಾಗಿದೆ.

ಬಿಬಿಎಂಪಿಯು ಸಂಪನ್ಮೂಲ ಕೊರತೆಯಿಂದ ತನ್ನ ಆಸ್ತಿಗಳನ್ನು ಅಡಮಾನ ಇಟ್ಟಿದೆ. ಸಾಲದ ಹೊರೆಯಿಂದಲೂ ಬಳಲಿದೆ. ‘ಸದ್ಯ ಪಾಲಿಕೆ ಖಾತೆಯಲ್ಲಿ ₹ 68 ಕೋಟಿ ಮಾತ್ರ ಇದೆ. ಬಾಕಿ ಬಿಲ್‌ಗಳ ಪಾವತಿಗೆ, ಕಸ ವಿಲೇವಾರಿಗೆ, ಅಧಿಕಾರಿಗಳ ವೇತನ ಪಾವತಿಗೂ ಸಂಪನ್ಮೂಲದ ತೀವ್ರ ಕೊರತೆ ಎದುರಾಗಿದೆ’ ಎಂದು ಆಯುಕ್ತರೇ ಕೌನ್ಸಿಲ್‌ ಸಭೆಗೆ ಮಾಹಿತಿ ನೀಡಿದ್ದಾರೆ.

ಬರೀ 80 ದೊಡ್ಡ ಕಟ್ಟಡಗಳ ವಿಸ್ತೀರ್ಣದ ಸುಳ್ಳು ಲೆಕ್ಕ ಬಯಲಿಗೆ ಬಂದಿದ್ದರಿಂದ ಬಿಬಿಎಂಪಿಗೆ ನೂರಾರು ಕೋಟಿ ರೂಪಾಯಿಯಷ್ಟು ವರಮಾನ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಇಂತಹ 300ಕ್ಕೂ ಹೆಚ್ಚು ಕಟ್ಟಡಗಳಿದ್ದು, ಅವೆಲ್ಲವುಗಳ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಿದರೆ ಇನ್ನೂ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹರಿದುಬರಲಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್‌ನಂತಹ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆತೆರಿಗೆ ಹೆಚ್ಚಿಸುವ ಪ್ರಸ್ತಾವದ ಕುರಿತು ಚಿಂತಿಸುವುದಕ್ಕಿಂತ ಇಂತಹ ಸೋರಿಕೆಗಳನ್ನು ತಪ್ಪಿಸುವುದಕ್ಕೆ ಆದ್ಯತೆ ನೀಡಬೇಕು. ಎಲ್ಲ ಬೃಹತ್‌ ವಾಣಿಜ್ಯ ಕಟ್ಟಡಗಳ ಸರ್ವೇ ಕಾರ್ಯಕ್ಕೆ ಚಾಲನೆ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳು ತಮ್ಮ ಸಂಸ್ಥೆಯ ಹಿತ ಕಾಯುವ ಬದಲು ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟಿರುವ ಪ್ರಕರಣಗಳ ಕುರಿತೂ ಮಾಹಿತಿ ಇದೆ. ಅಂತಹ ಪ್ರಕರಣಗಳು ಟೋಟಲ್‌ ಸ್ಟೇಷನ್‌ ಸರ್ವೇ ಕಾರ್ಯಾಚರಣೆಯ ಮೂಲ ಆಶಯವನ್ನೇ ಬುಡಮೇಲು ಮಾಡುತ್ತವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.

ತೆರಿಗೆ ಸಂಗ್ರಹದ ವಿಷಯದಲ್ಲಿ ಉದಾಸೀನ ತೋರುವ ಸಿಬ್ಬಂದಿಯನ್ನೂ ದಂಡಿಸಬೇಕು. ಭೌಗೋಳಿಕ ಮಾಹಿತಿ ವ್ಯವಸ್ಥೆಯ ನೆರವಿನಿಂದ ನಗರದ ಪ್ರತೀ ಆಸ್ತಿಯನ್ನೂ ನಿಖರವಾಗಿ ಗುರುತಿಸುವ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಸರ್ವೇ ನಡೆದ ಬಳಿಕವೂ ವ್ಯತ್ಯಾಸದ ಮೊತ್ತವನ್ನು ವಸೂಲಿ ಮಾಡುವ ಗಂಭೀರ ಪ್ರಯತ್ನಗಳು ನಡೆದಿಲ್ಲ ಎಂಬ ದೂರುಗಳಿವೆ. ಸಂಪನ್ಮೂಲ ಕೊರತೆ ಬಗ್ಗೆ ಗೋಗರೆಯುವ ಬದಲು ಆಸ್ತಿ ತೆರಿಗೆ ವ್ಯತ್ಯಾಸದ ಮೊತ್ತ ವಸೂಲಿಗೆ ಬಿಬಿಎಂಪಿ ಆಡಳಿತವು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ತೆರಿಗೆ ಸೋರಿಕೆ ತಡೆಯುವ ಇಂತಹ ಪ್ರಯತ್ನಗಳಿಗೆ ಬಿಬಿಎಂಪಿ ಅಧಿಕಾರಿಗಳಿಗೆ ಸರ್ಕಾರವೂ ಬೆಂಬಲವಾಗಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT