ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಟ್ಟು 25 ಕ್ಷೇತ್ರಗಳ ಪೈಕಿ 20ರಲ್ಲಿ ಸ್ಪರ್ಧಿಸಿದ್ದ ಆಡಳಿತಾರೂಢ ಬಿಜೆಪಿ 11 ಕ್ಷೇತ್ರಗಳಲ್ಲಿ ಜಯ ಗಳಿಸಿ, ಸಮಾಧಾನದ ನಿಟ್ಟುಸಿರುಬಿಟ್ಟಿದೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇತ್ತು. ಮಸೂದೆಗಳಿಗೆ ಅಂಗೀಕಾರ ಪಡೆಯಲು ಇತರ ಪಕ್ಷಗಳ ನೆರವು ಪಡೆಯಬೇಕಿತ್ತು. ಈಗ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಸನಿಹಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಈ ಸಮಾಧಾನವನ್ನು ಗುರುತಿಸಬಹುದು. ಆದರೆ, ಚುನಾವಣಾ ಪ್ರಚಾರದ ವೇಳೆ 15 ಸ್ಥಾನಗಳನ್ನು ಗೆಲ್ಲುವ ಆ ಪಕ್ಷದ ಆತ್ಮವಿಶ್ವಾಸದ ಮಾತುಗಳು ಠುಸ್ ಆಗಿವೆ. ಅದರಲ್ಲೂ ಬೆಳಗಾವಿಯ ದ್ವಿಸದಸ್ಯ ಕ್ಷೇತ್ರದಲ್ಲಿ ಒಂದನ್ನೂ ಗೆಲ್ಲಲಾಗದೆ ಹೋದದ್ದು ಪಕ್ಷದ ಪ್ರತಿಷ್ಠೆಗೆ ಬಿದ್ದ ಹೊಡೆತ ಎಂದೇ ಹೇಳಬಹುದು. ಬಿಜೆಪಿಯು ಬೆಳಗಾವಿಯಲ್ಲಿ ಸಂಸದರು ಮತ್ತುಹೆಚ್ಚು ಶಾಸಕರನ್ನು ಹೊಂದಿದೆ.

ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಪರಿಷತ್ತಿನಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕರೂ ಆಗಿದ್ದಾರೆ. ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅತ್ಯಧಿಕ ಮತ ಗಳಿಸಿ ಮೊದಲ ಸುತ್ತಿನಲ್ಲೇ ಗೆದ್ದಿದ್ದಾರೆ. ಅಲ್ಲದೆ, ರಮೇಶ ಜಾರಕಿಹೊಳಿಯವರ ಸೋದರ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿರುವುದು ಪಕ್ಷದೊಳಗೇ ಸಂಶಯದ ಸುಳಿಯನ್ನು ಸೃಷ್ಟಿಸಿದೆ ಎನ್ನುವುದು ಸುಳ್ಳಲ್ಲ.

ಸಂಖ್ಯಾಬಲದ ದೃಷ್ಟಿಯಿಂದ ಕಾಂಗ್ರೆಸ್ ಕಳೆದುಕೊಂಡದ್ದೇ ಹೆಚ್ಚು. ತೆರವಾದ ಕ್ಷೇತ್ರಗಳಲ್ಲಿ ಪಕ್ಷ 14 ಕಡೆ ಪ್ರಾತಿನಿಧ್ಯ ಹೊಂದಿತ್ತು. ಈಗ 11 ಸ್ಥಾನಗಳನ್ನು ಮಾತ್ರ ಗೆದ್ದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಅಲ್ಪ ಅಂತರದಿಂದ ಸೋಲು ಅನುಭವಿಸಿದ್ದಾರೆ. ಈ ಸೋಲಿನ ಹೊರತಾಗಿಯೂ ಹಳೆ ಮೈಸೂರಿನ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಹಿಂದಿಕ್ಕಿ ಮೇಲುಗೈ ಸಾಧಿಸಿರುವುದು ಗಮನಾರ್ಹ ಸಂಗತಿ. ಅದೂ ಅಲ್ಲದೆ, ಫಲಿತಾಂಶವನ್ನು ಗಮನಿಸಿದಾಗ ದ್ವಿಸದಸ್ಯ ಕ್ಷೇತ್ರಗಳು ಇರುವ ಕಡೆ ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೊದಲ ಸ್ಥಾನ ಪಡೆದಿದೆ.

ಪಕ್ಷ ಬಹುನಿರೀಕ್ಷೆ ಹೊಂದಿದ್ದ ಚಿತ್ರದುರ್ಗ, ಬಳ್ಳಾರಿಯಲ್ಲಿ ಸೋತಿದ್ದು ಪಕ್ಷಕ್ಕೆ ಹೊಡೆತ ನೀಡಿದೆಯಾದರೂ ಒಟ್ಟಾರೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕರು ತೃಪ್ತಿ ಹೊಂದಲು ಕಾರಣಗಳಿವೆ. ಜೆಡಿಎಸ್‌ನ ನಾಲ್ವರು ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಈ ಸಲ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್, ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆದು (ಒಂದು ಕ್ಷೇತ್ರದ ಫಲಿತಾಂಶದ ಅಧಿಕೃತ ಘೋಷಣೆಯು ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಆಗಿರಲಿಲ್ಲ) ಹಿನ್ನಡೆ ಅನುಭವಿಸಿದೆ. ಅದರಲ್ಲೂ ಗಟ್ಟಿ ನೆಲೆ ಹೊಂದಿರುವ ಮಂಡ್ಯ, ಕೋಲಾರ, ತುಮಕೂರಿನಲ್ಲಿ ಸೋಲು ಅನುಭವಿಸಿರುವುದು ಪಕ್ಷದ ಭವಿಷ್ಯದ ಬಗ್ಗೆ ಕಾರ್ಯಕರ್ತರಲ್ಲಿ ಚಿಂತೆ ಹುಟ್ಟುಹಾಕುವುದು ನಿಶ್ಚಿತ. ‘ಚುನಾವಣೆಯಲ್ಲಿ ಜನಬಲದ ಮುಂದೆ ಹಣಬಲ ಗೆದ್ದಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಏನೇ ಹೇಳಲಿ;ಹಳೆಮೈಸೂರು ಭಾಗದಲ್ಲಿ ಪಕ್ಷದ ಈ ನಿರಾಶಾದಾಯಕ ಪ್ರದರ್ಶನವು ಕಾರ್ಯಕರ್ತರ ಧೃತಿಗೆಡಿಸುವುದರಲ್ಲಿ ಸಂದೇಹವಿಲ್ಲ. ಹಾಸನ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಜೆಡಿಎಸ್ ಕಸಿದುಕೊಂಡಿದೆಯಾದರೂ ಇಲ್ಲಿ ಗೆದ್ದಿರುವುದುಎಚ್.ಡಿ.ದೇವೇಗೌಡ ಅವರ ಕುಟುಂಬದ ಕುಡಿ ಎನ್ನುವುದು ಕುತೂಹಲಕರ ಸಂಗತಿ.

ಫಲಿತಾಂಶ ಏನೇ ಇರಲಿ, ಈ ಸಲದ ಚುನಾವಣೆಯು ಹಲವು ಪ್ರಶ್ನೆಗಳನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ. ಗೆದ್ದಿರುವ ಅಭ್ಯರ್ಥಿಗಳ ಪೈಕಿ ಶೇಕಡ 40ಕ್ಕೂ ಹೆಚ್ಚು ಮಂದಿ ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬಗಳಿಂದ ಬಂದವರು ಎನ್ನುವುದು ಗಮನಿಸಬೇಕಾದ ಸಂಗತಿ. ಪರಿವಾರದ ರಾಜಕಾರಣಕ್ಕೆ ಬೆಂಬಲ ನೀಡುವಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ ಎನ್ನುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ರಾಜ್ಯದಲ್ಲಿ ರಾಜಕೀಯ ಎನ್ನುವುದು ಅಧಿಕಾರದಲ್ಲಿ ಇರುವವರ ಕುಟುಂಬಗಳಿಗೇ ಮೀಸಲಾದರೆ ಪ್ರಜಾಪ್ರಭುತ್ವದ ಮೂಲಸೂತ್ರಗಳು ಅರ್ಥ ಕಳೆದುಕೊಳ್ಳುತ್ತವೆ ಎನ್ನಬೇಕಾಗುತ್ತದೆ. ಅದೂ ಅಲ್ಲದೆ ಈ ಸಲ ಅಭ್ಯರ್ಥಿಗಳು ಖರ್ಚು ಮಾಡಿರುವ ಹಣದ ಪ್ರಮಾಣವು ಪರಿಷತ್‌ನ ಮಹತ್ವವನ್ನು ಕುಂದಿಸುವಂತಿದೆ. ಮೇಲ್ಮನೆ ಎಂದರೆ ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅನುಭವ– ಪರಿಣತಿ ಹೊಂದಿರುವ ಹಿರಿಯರ ಮನೆ ಎಂದೇ ಪರಿಗಣಿಸಲಾಗಿತ್ತು. ಆದರೆ ಈ ಸಲ ಎಲ್ಲ ಪಕ್ಷಗಳೂ ಚುನಾವಣೆಗೆ ಟಿಕೆಟ್ ನೀಡಿದಾಗ ಪರಿಗಣಿಸಿದ್ದು ಹಣಬಲವನ್ನು ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣುವಂತಿತ್ತು. ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರತೀ ಮತಕ್ಕೆ ₹ 50 ಸಾವಿರದಿಂದ ಒಂದು ಲಕ್ಷದವರೆಗೆ ಮತದಾರರಿಗೆ ಆಮಿಷ ಒಡ್ಡಲಾಗಿತ್ತು ಎಂದು ವರದಿಯಾಗಿರುವುದನ್ನು ಗಮನಿಸಿದರೆ ಮೇಲ್ಮನೆ ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆಗಳು ಆಗಬೇಕು ಎಂಬುದು ಮನದಟ್ಟಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.