ಗುರುವಾರ , ಆಗಸ್ಟ್ 5, 2021
22 °C

ಸಂಪಾದಕೀಯ | ಶಾಲಾ ಮಕ್ಕಳ ನಿರಂತರ ಕಲಿಕೆ ಸರ್ಕಾರದ ಮುಂದೆ ಗುರುತರ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾದ ಮೂರನೇ ಅಲೆಯು ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದೆ. ಕೊರೊನಾ ಸಾಂಕ್ರಾಮಿಕದ ದಿನಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದ ಎರಡು ದೋಣಿಗಳ ಪಯಣವು ಮಕ್ಕಳ ಪಾಲಿಗೆ ಅನಿವಾರ್ಯ ಎನ್ನುವುದನ್ನು ತಜ್ಞರ ವರದಿ ಹೇಳುತ್ತಿರುವಂತಿದೆ. ರಾಜ್ಯದ ಶೇಕಡ 30ರಷ್ಟು ಮಕ್ಕಳು ಕೊರೊನಾ ಕಾರಣದಿಂದಾಗಿ ಕಲಿಕೆಯಿಂದ ವಂಚಿತರಾಗಿದ್ದಾರೆ ಎನ್ನುವ ಸಂಗತಿಯು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ (ಡಿಎಸ್‌ಇಆರ್‌ಟಿ) ಸಮೀಕ್ಷೆಯಲ್ಲಿ ಹೊರಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ನಿರಂತರ ಕಲಿಕೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಸರ್ಕಾರ ಕೈಗೊಳ್ಳಬೇಕಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಮಕ್ಕಳ ಚಟುವಟಿಕೆಗಳು ಹಾಗೂ ಅವರು ಪಡೆದುಕೊಂಡಿರಬಹುದಾದ ಕೌಶಲಗಳನ್ನು ತಿಳಿಯುವ ಉದ್ದೇಶದಿಂದ ಡಿಎಸ್‌ಇಆರ್‌ಟಿ ನಡೆಸಿದ ಸಮೀಕ್ಷೆಯು ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಯ ಮಿತಿಯನ್ನು ಸ್ಪಷ್ಟಪಡಿಸುವಂತಿದೆ. ಮೊಬೈಲ್‌ ಫೋನ್‌ ಹೊಂದುವುದು ಎಲ್ಲ ವಿದ್ಯಾರ್ಥಿಗಳಿಗೆ ಸಾಧ್ಯವಾಗದಿರುವುದು ಹಾಗೂ ದುರ್ಬಲ ನೆಟ್‌ವರ್ಕ್‌ನಿಂದಾಗಿ ಗ್ರಾಮೀಣ ಭಾಗದ ಎಲ್ಲ ಮಕ್ಕಳನ್ನೂ ತಲುಪುವುದು ಆನ್‌ಲೈನ್‌ ಶಿಕ್ಷಣದಿಂದ ಸಾಧ್ಯವಿಲ್ಲ. ಆ ಕೊರತೆಯನ್ನು ತುಂಬುವುದಕ್ಕಾಗಿ, ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ಚಂದನ’ ವಾಹಿನಿಯ ಮೂಲಕ ಜುಲೈ 1ರಿಂದ ವಿಡಿಯೊ ಪಾಠಗಳನ್ನು ಪ್ರಸಾರ ಮಾಡಲು ಸರ್ಕಾರ ಉದ್ದೇಶಿಸಿದೆ.

ಕನ್ನಡ, ಇಂಗ್ಲಿಷ್‌ ಮತ್ತು ಉರ್ದು ಮಾಧ್ಯಮಗಳಲ್ಲಿ ಈ ಪಾಠಗಳು ಪ್ರಸಾರಗೊಳ್ಳಲಿವೆ. ಮರಾಠಿ ಮಾಧ್ಯಮದ ಪಾಠಗಳು ಯೂಟ್ಯೂಬ್‌ನಲ್ಲಿ ದೊರೆಯಲಿವೆ. ಟಿ.ವಿ. ಮೂಲಕ ಬೋಧಿಸುವ ಪ್ರಯತ್ನದೊಂದಿಗೆ ಮಕ್ಕಳನ್ನು ತಲುಪಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಸರ್ಕಾರ ಬಳಸಿಕೊಳ್ಳಬೇಕು. ಈ ದಿಸೆಯಲ್ಲಿ ಶಿಕ್ಷಕರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಜೊತೆಗೆ, ಮಕ್ಕಳ ಹಿತಾಸಕ್ತಿಗಾಗಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಹಾಗೂ ತಜ್ಞರ ನೆರವನ್ನು ಪಡೆಯಬಹುದು.

ಒಂದರಿಂದ 10ನೇ ತರಗತಿಯವರೆಗಿನ ಶಾಲೆಗಳು ಸದ್ಯಕ್ಕೆ ಆರಂಭವಾಗುವ ಸೂಚನೆ ಇಲ್ಲ. ಆದರೆ, ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಎಲ್ಲ ಪದವಿ ತರಗತಿಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕ–ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಿದ ನಂತರ ಆರಂಭಿಸುವಂತೆ ತಜ್ಞರ ಸಮಿತಿಯು ಶಿಫಾರಸು ಮಾಡಿದೆ. ನಂತರದ ಹಂತದಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಬಹುದು. ಕೊರೊನಾ ಕಾರಣ ದಿಂದಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಮನೆಯಲ್ಲಿಯೇ ಉಳಿಯುವಂತಾಯಿತು.

ಜುಲೈ 1ರಿಂದ ಆರಂಭವಾಗುವ ನೂತನ ಶೈಕ್ಷಣಿಕ ವರ್ಷ ದಲ್ಲೂ ಶಾಲೆಗಳು ಯಾವಾಗ ಆರಂಭವಾಗಲಿವೆ ಎನ್ನುವುದು ಅಸ್ಪಷ್ಟವಾಗಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಈ ವರ್ಷವೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸವಾಲು ಸರ್ಕಾರದ ಮೇಲಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಮಕ್ಕಳು ಶಾಲೆಗಳಿಂದ ಹೊರಬಿದ್ದು ಪೋಷಕರಿಗೆ ನೆರವಾಗಲು ಹೊಲಗಳಲ್ಲಿ ದುಡಿಯು ತ್ತಿದ್ದಾರೆ. ಕೆಲವರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಾಲ್ಯವಿವಾಹದ ಘಟನೆಗಳೂ ನಡೆ ದಿವೆ. ಅಂಥ ಮಕ್ಕಳನ್ನು ಗುರುತಿಸುವುದು ಹಾಗೂ ಅವರನ್ನು ಶೈಕ್ಷಣಿಕ ಚೌಕಟ್ಟಿಗೆ ಮರಳಿ ಕರೆತರುವ ಗುರುತರ ಸವಾಲು ಶಿಕ್ಷಣ ಇಲಾಖೆಯ ಮುಂದಿದೆ. 

ಮಕ್ಕಳು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ಸಾಧ್ಯವಾಗುವಂತೆ ಶಿಕ್ಷಕರು ಶ್ರಮಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ. ಆದರೆ, ಮಕ್ಕಳಿಗೆ ಕಲಿಸುವ ಹೊಣೆಯನ್ನು ಹೊರಲು ಶಿಕ್ಷಕರ ಭುಜಗಳು ಎಷ್ಟು ಬಿಡುವಾಗಿವೆ ಹಾಗೂ ಅವರ ಮನಸ್ಸು ಎಷ್ಟು ಮುಕ್ತವಾಗಿದೆ ಎನ್ನುವುದನ್ನೂ ಸರ್ಕಾರ ಯೋಚಿಸಬೇಕು. ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅನೇಕ ಶಿಕ್ಷಕರು ಇನ್ನೂ ತಮ್ಮ ಶಾಲೆಗಳಿಗೆ ಮರಳಿಲ್ಲ.

ಕೊರೊನಾದ ಮೂರನೇ ಅಲೆ ಯಾವಾಗ ಎದುರಾಗುತ್ತದೆ ಎನ್ನುವುದೂ ಸ್ಪಷ್ಟವಿಲ್ಲವಾದುದರಿಂದ, ಶಾಲೆಗಳಿಗೆ ಮರಳಿದ ನಂತರವೂ ಶಿಕ್ಷಕರಿಗೆ ಕೋವಿಡ್‌ ಕರ್ತವ್ಯದ ಕರೆ ಯಾವಾಗ ಬೇಕಾದರೂ ಬರಬಹುದು. ಹಾಗಾಗಿ ಅವರ ಪೂರ್ಣ ಸಾಮರ್ಥ್ಯ ಮಕ್ಕಳ ಕಲಿಕೆಗೆ ಲಭ್ಯವಾಗುತ್ತದೆಂದು ಸದ್ಯದ ಪರಿಸ್ಥಿತಿಯಲ್ಲಿ ನಿರೀಕ್ಷಿಸಲಾಗದು. ಶಾಲೆ ಮತ್ತು ಕೋವಿಡ್‌ ಕರ್ತವ್ಯದ ನಡುವೆ ಕಳೆದ ಒಂದೂವರೆ ವರ್ಷದಿಂದ ಶಿಕ್ಷಕವರ್ಗ ಹೈರಾಣಾಗಿದೆ. ಚುನಾವಣೆ ಮತ್ತು ಕೋವಿಡ್‌ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಕೆಲವು ಶಿಕ್ಷಕರು ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರಂತೂ ಜೀವನೋಪಾಯಕ್ಕಾಗಿ ಹೋರಾಟ ನಡೆಸುವಂತಾಗಿದೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ವೈದ್ಯಕೀಯ ಕ್ಷೇತ್ರದ ಮೇಲೆ ಉಂಟಾದ ಅತೀವ ಒತ್ತಡದ ಬಗ್ಗೆ ಸರ್ಕಾರ ಮತ್ತು ಸಮಾಜ ಕಾಳಜಿ ವ್ಯಕ್ತಪಡಿಸುವುದು ಸರಿಯಾಗಿದೆ. ಆ ಕಾಳಜಿ ಶಿಕ್ಷಕರ ಕುರಿತೂ ವ್ಯಕ್ತವಾಗಬೇಕು. ಅವರ ಸಮಯ ಮತ್ತು ಕೌಶಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು.

ಮಕ್ಕಳು ಕಲಿಕೆಯಿಂದ ದೂರವಾಗದಂತೆ ನೋಡಿಕೊಳ್ಳುವುದು ಅಗತ್ಯವಾದಷ್ಟೇ, ಶಿಕ್ಷಕರು ಬೋಧನೆಯಿಂದ ದೂರವಾಗದಿರುವುದೂ ಮುಖ್ಯ. ಶಿಕ್ಷಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಮತ್ತು ಅಸ್ತವ್ಯಸ್ತಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ಸವಾಲನ್ನು ಸರ್ಕಾರ ಹಾಗೂ ಸಮಾಜ ಗಂಭೀರವಾಗಿ ಪರಿಗಣಿಸಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು