ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪರಿಹಾರ ವಿತರಣೆ ರಾಜಕೀಯಕ್ಕೆ ಬಳಕೆ ಆಗದಿರಲಿ

Last Updated 4 ಮೇ 2020, 5:19 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೊರೊನಾ ವೈರಸ್ ಸೃಷ್ಟಿಸಿರುವ ಬಿಕ್ಕಟ್ಟನ್ನು ಎದುರಿಸಲು ಭಗೀರಥ ಯತ್ನಗಳು ನಡೆದಿವೆ. ಕೊರೊನಾ ಸೋಂಕು‌ ತಗುಲಿದವರನ್ನು ಗುರುತಿಸುವ ಕೆಲಸ ಒಂದೆಡೆ ನಡೆದಿದ್ದರೆ, ಇನ್ನೊಂದೆಡೆ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿರುವ ಶ್ರಮಿಕ ವರ್ಗಕ್ಕೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಕೆಲಸ ನಡೆದಿದೆ. ಈ ಪ್ರಯತ್ನದಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ದಾನಿಗಳು ಕೈಜೋಡಿಸಿರುವುದು ಎದ್ದು ಕಾಣುತ್ತಿದೆ. ಹಸಿರು ವಲಯದಲ್ಲಿ ನಿರ್ಬಂಧ ಸಡಿಲಿಸಲು ಸೂಕ್ತ ವಾತಾವರಣ ಇದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ ಈ ವೈರಸ್ ಹರಡುವಿಕೆ ತಡೆಯುವ ದಿಸೆಯಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದ್ದೇ ಇದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿರುವುದು ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎನ್ನುವುದನ್ನೇ ಸೂಚಿಸುವಂತಿದೆ. ಲಾಕ್‍ಡೌನ್‍ನಿಂದ ಬೆಂಗಳೂರು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರು ತವರೂರಿಗೆ ಹೊರಡಲು ಸರ್ಕಾರ ಕೊನೆಗೂ ಬಸ್‍ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ಆದರೆ, ವಲಸಿಗರನ್ನು ಊರಿಗೆ ತಲುಪಿಸುವ ಕಾರ್ಯ ಮೊದಲ ದಿನ ತೀವ್ರ ಗೊಂದಲದಿಂದ ಕೂಡಿದ್ದುದು ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ. ದುಬಾರಿ ದರ ನಿಗದಿಗೊಳಿಸಿದ ನಡೆಯಿಂದಾಗಿ, ಕೆಲಸವಿಲ್ಲದೆ ಬರಿಗೈದಾಸರಾಗಿರುವ ವಲಸೆ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ, ವಲಸಿಗರಿಗೆ ಈಗ ಉಚಿತ ಪ್ರಯಾಣ ಸೌಕರ್ಯ ದೊರಕಿಸಿಕೊಟ್ಟಿರುವುದು ಸಂತಸದ ಸಂಗತಿ.

ಈ ಮಧ್ಯೆ, ಕೆಲಸವಿಲ್ಲದೆ ಸಂಕಷ್ಟದಲ್ಲಿ ಸಿಲುಕಿರುವ ಬಡವರಿಗೆ ಆಹಾರ ಪದಾರ್ಥಗಳನ್ನು ಹಂಚುವ ವಿಷಯ ಈಗ ವಿವಾದಕ್ಕೆ ಈಡಾಗಿದೆ. ‘ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸರ್ಕಾರದ ವತಿಯಿಂದ ನೀಡಲು ಮೀಸಲಿಟ್ಟ ಆಹಾರ ಪದಾರ್ಥಗಳನ್ನು ಬಿಜೆಪಿಯ ಕೆಲವು ನಾಯಕರು ತಮ್ಮ ಹೆಸರಿರುವ ಪ್ಯಾಕೆಟ್‍ಗಳಲ್ಲಿ ತುಂಬಿಸಿ ಹಂಚುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ‘ಸಂತ್ರಸ್ತರಿಗೆ ಪರಿಹಾರ ಒದಗಿಸುವ ವಿಷಯದಲ್ಲಿ ರಾಜ್ಯದ ಅನೇಕ ಭಾಗಗಳಲ್ಲಿ ಅಕ್ರಮ ನಡೆಯುತ್ತಿದ್ದು, ಈ ವಿಚಾರದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ. ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಐಸಿಡಿಎಸ್ ಯೋಜನೆಯಲ್ಲಿ ಸರ್ಕಾರ ಪೂರೈಸಿರುವ ಸಕ್ಕರೆ ಪೊಟ್ಟಣಗಳಿಗೆ ಸ್ಥಳೀಯ ಬಿಜೆಪಿ ನಾಯಕರೊಬ್ಬರ ಹೆಸರಿನ ಲೇಬಲ್ ಅಂಟಿಸಿರುವುದನ್ನು ಕಾಂಗ್ರೆಸ್ ನಾಯಕರು ಬಯಲಿಗೆ ತಂದಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ, ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆ ಪೂರೈಸಿದ ಆಹಾರದ ಪೊಟ್ಟಣಗಳಿಗೆ ಆಡಳಿತಾರೂಢ ಪಕ್ಷದ ಸ್ಥಳೀಯ ಶಾಸಕ ತಮ್ಮ ಹಾಗೂ ಮುಖ್ಯಮಂತ್ರಿಯವರ ಭಾವಚಿತ್ರಗಳನ್ನು ಅಂಟಿಸಿ ಹಂಚುತ್ತಿರುವುದಾಗಿಯೂ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ನಿರ್ಮಾಣ ಕ್ಷೇತ್ರ ಸಹಿತ ಉದ್ದಿಮೆಗಳೆಲ್ಲ ಬಾಗಿಲು ಹಾಕಿರುವುದರಿಂದ ಕಾರ್ಮಿಕರು ಮತ್ತು ಬಡವರು ತೀವ್ರ ಸಂಕಷ್ಟದಲ್ಲಿದ್ದಾರೆ. ತರಕಾರಿ ಮಾರುವವರು, ಸಣ್ಣ ಪುಟ್ಟ ವ್ಯಾಪಾರಿಗಳು, ಆಟೊ-ಕಾರು ಚಾಲಕರ ಸಹಿತ ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಬವಣೆ ಹೇಳತೀರದು. ಅಂತಹವರಿಗೆ ನೆರವಾಗುವುದು ಎಲ್ಲರ ಕರ್ತವ್ಯ. ಆಡಳಿತಾರೂಢ ಪಕ್ಷದ ಕೆಲವು ನಾಯಕರು ಸರ್ಕಾರದ ಸೌಲಭ್ಯಗಳನ್ನು ತಮ್ಮ ಹೆಸರಿನಲ್ಲಿ ವಿತರಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿದ್ದರೆ ಸರ್ಕಾರ ಆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು. ಈ ಸಂಕಷ್ಟ ಕಾಲದಲ್ಲಿ ಬಡವರಿಗೆ ಆಹಾರ ದೊರೆಯವುದು ಮುಖ್ಯ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ. ಅಂತೆಯೇ, ಪರಿಹಾರ ವಿತರಣೆಯಂತಹ ಮಾನವೀಯ ಕಾರ್ಯಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳ ಮೇಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT