ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಶಾಲಾ ಶುಲ್ಕ ಏರಿಕೆಗೆ ಕಡಿವಾಣ ಪೋಷಕರಿಗೆ ಕೊಂಚ ಸಮಾಧಾನ

Last Updated 1 ಮೇ 2020, 20:00 IST
ಅಕ್ಷರ ಗಾತ್ರ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶುಲ್ಕಗಳನ್ನು ಹೆಚ್ಚಿಸದಿರುವಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸರ್ಕಾರ ನೀಡಿರುವ ನಿರ್ದೇಶನವು ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ಕೊಂಚ ಸಮಾಧಾನ ನೀಡುವಂತಹದ್ದು. ಸರ್ಕಾರದ ಅಧಿಸೂಚನೆ ಅನ್ವಯ ಪ್ರತಿವರ್ಷ ಶೇ 15ರಷ್ಟು ಬೋಧನಾ ಶುಲ್ಕವನ್ನು ಹೆಚ್ಚಿಸಲು ಶಾಲಾ ಆಡಳಿತ ಮಂಡಳಿಗಳಿಗೆ ಅವಕಾಶವಿದೆ. ಆದರೆ, ಕೊರೊನಾ ವೈರಾಣು ಸೋಂಕಿನ ಭೀತಿಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪೋಷಕರಿಗೆ ಶಾಲಾ ಶುಲ್ಕದ ಹೆಚ್ಚಳ ಹೊರೆಯಾಗಿ ಪರಿಣಮಿಸುವುದರಿಂದ, ಈ ಬಾರಿ ಶುಲ್ಕವನ್ನು ಹೆಚ್ಚಿಸದಿರುವಂತೆ ಸರ್ಕಾರ ತಿಳಿಸಿದೆ.

ಏರಿಕೆಯ ಯೋಚನೆ ಕೈಬಿಟ್ಟು, ಶಾಲಾ ಶುಲ್ಕವನ್ನು ಕಡಿಮೆ ಮಾಡಲು ಯಾರಾದರೂ ಇಚ್ಛಿಸಿದಲ್ಲಿ ಅವರು ಸ್ವತಂತ್ರರು ಎಂದು ಹೇಳುವ ಮೂಲಕ ಶಾಲಾ ಆಡಳಿತ ಮಂಡಳಿಗಳು ಹೃದಯವಂತಿಕೆ ಮೆರೆಯಲು ಅವಕಾಶವನ್ನೂ ಕಲ್ಪಿಸಿದೆ. ಸರ್ಕಾರ ಸೂಚಿಸುವವರೆಗೆ ಶಾಲೆಗಳು ದಾಖಲಾತಿ ಪ್ರಕ್ರಿಯೆ ನಡೆಸುವಂತಿಲ್ಲ ಹಾಗೂ ಪೋಷಕರಿಂದ ಶುಲ್ಕ ಪಡೆಯುವಂತಿಲ್ಲ ಎನ್ನುವ ತನ್ನ ಹಿಂದಿನ ಆದೇಶವನ್ನು ಸಡಿಲಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಆರ್ಥಿಕವಾಗಿ ಸಬಲರಾಗಿದ್ದು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಸಬಯಸುವ ಪೋಷಕರಿಂದ ಶುಲ್ಕ ಪಡೆಯಲು ಖಾಸಗಿ ಆಡಳಿತ ಮಂಡಳಿಗಳಿಗೆ ಅವಕಾಶ ಕಲ್ಪಿಸಿದೆ. ಆದರೆ, ಶುಲ್ಕ ಪಾವತಿಸಲು ಸಾಮರ್ಥ್ಯವಿಲ್ಲದ ಪೋಷಕರನ್ನು ಯಾವ ಕಾರಣಕ್ಕೂ ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಗಳು– 1995ರ ಅನ್ವಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲವಾಗುವಂತೆ
ಶಾಲಾ ಶುಲ್ಕವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡುವಂತೆ ತಿಳಿಸಲಾಗಿದೆ. ಆರ್ಥಿಕವಾಗಿ ಸಮರ್ಥರಿರುವ ಪೋಷಕರಿಂದ ಪ್ರವೇಶ ಶುಲ್ಕವನ್ನು ಪಡೆಯಲು ಅವಕಾಶ ಕಲ್ಪಿಸಿರುವುದು ಶಾಲಾ ಆಡಳಿತ ಮಂಡಳಿಗಳ ಮೇಲಿನ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಲಿದ್ದು, ಸಿಬ್ಬಂದಿಗೆ ಸಂಬಳ ನೀಡಲು ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣಕ್ಕೆ ನೆರವಾಗಲಿದೆ.

ಪ್ರಥಮ ಪಿ.ಯು ಫಲಿತಾಂಶ ಮತ್ತು ದ್ವಿತೀಯ ಪಿ.ಯು ಪ್ರವೇಶಕ್ಕೆ ಸಂಬಂಧಿಸಿದಂತೆಯೂ ಸರ್ಕಾರ ರೂಪಿಸಿರುವ ನೀತಿನಿಯಮಗಳು, ಕೋವಿಡ್–‌ 19ರ ಭೀತಿಯ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳು ಮುಂದುವರಿಯಲು ಅವಕಾಶ ಕಲ್ಪಿಸಿವೆ.

ಪ್ರಥಮ ಪಿ.ಯು ಫಲಿತಾಂಶವನ್ನು ಕಾಲೇಜುಗಳಲ್ಲಿ ಪ್ರಕಟಿಸುವ ಬದಲು, ಮೊಬೈಲ್‌ ಫೋನ್‌ಗೆ ಮೆಸೇಜ್‌ ಮಾಡುವಂತೆ ಇಲ್ಲವೇ ಇ–ಮೇಲ್‌ ಮೂಲಕ ಮಾತ್ರ ಕಳುಹಿಸುವಂತೆ ತಿಳಿಸಿರುವುದು ವಿದ್ಯಾರ್ಥಿಗಳು ಗುಂಪು ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ದ್ವಿತೀಯ ಪಿ.ಯು ಪ್ರವೇಶದ ಸಂದರ್ಭದಲ್ಲಿ ವಿದ್ಯಾರ್ಥಿ ಖುದ್ದಾಗಿ ಹಾಜರಿರುವಂತೆ ಒತ್ತಾಯಿಸದಿರಲು ಸೂಚಿಸಿದೆ.

ಕಾಲೇಜಿನ ಪ್ರವೇಶ ಶುಲ್ಕವನ್ನು ಪೋಷಕರ ಅನುಕೂಲಕ್ಕೆ ತಕ್ಕಂತೆ ಕಂತುಗಳನ್ನು ಮಾಡಿಕೊಡಲು ಸೂಚಿಸಿದೆ. ಹೀಗೆ ವಿದ್ಯಾರ್ಥಿಗಳು–ಪೋಷಕರ ಹಿತಾಸಕ್ತಿ ರಕ್ಷಣೆಯ ನಿರ್ಧಾರಗಳನ್ನು ಕೈಗೊಂಡಿರುವ ಸರ್ಕಾರವೇ ಇನ್ನೊಂದೆಡೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿಯ (ಎಂ.ಡಿ) ಸೀಟಿನ ವಾರ್ಷಿಕ ಶುಲ್ಕವನ್ನು ಭಾರಿ ‍ಪ್ರಮಾಣದಲ್ಲಿ ಹೆಚ್ಚಿಸುವ ಆಶ್ಚರ್ಯಕರ
ತೀರ್ಮಾನ ಕೈಗೊಂಡಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಸೀಟಿಗೆ ಈವರೆಗೆ ಇದ್ದ ವಾರ್ಷಿಕ ಶುಲ್ಕವನ್ನು ಶೇ 23ರಷ್ಟು ಹಾಗೂ ಕೌನ್ಸೆಲಿಂಗ್‌ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದವರಿಗೆ ಶುಲ್ಕವನ್ನು ಶೇ 32ರಷ್ಟು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ 15ರಷ್ಟು ಶುಲ್ಕ ಹೆಚ್ಚಿಸಲು ಇರುವ ಅವಕಾಶವನ್ನು ಮೀರಿ ಏರಿಕೆ ಮಾಡಲಾಗಿದೆ. ಈ ಸೀಟುಗಳ ಶುಲ್ಕವನ್ನುಕಳೆದ ವರ್ಷವಷ್ಟೇ ದೊಡ್ಡಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಈಗ ಮತ್ತೆ ಶುಲ್ಕ ಏರಿಸಿರುವುದು ವಿದ್ಯಾರ್ಥಿಗಳ ಪಾಲಿಗೆ ಹೊರೆಯಾಗಿದೆ. ಕೊರೊನಾ ಬಿಕ್ಕಟ್ಟು ಇರುವ ಸಂದರ್ಭದಲ್ಲಿ ಶುಲ್ಕ ಏರಿಕೆಯ ಈ ನಿರ್ಧಾರವನ್ನು ಸರ್ಕಾರ ಪುನರ್‌ ಪರಿಶೀಲಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT