ಗುರುವಾರ , ಜುಲೈ 29, 2021
25 °C

ಸಂಪಾದಕೀಯ | ಮೂರನೇ ಅಲೆ ಎದುರಿಸಲು ಸರ್ವ ಬಗೆಯಲ್ಲೂ ಸನ್ನದ್ಧರಾಗೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ಇಳಿದಿದೆ. ಲಾಕ್‌ಡೌನ್‌ ನಿರ್ಬಂಧಗಳು ಬಹುಮಟ್ಟಿಗೆ ತೆರವಾಗಿವೆ. ಕಚೇರಿ, ಕಾರ್ಖಾನೆ, ಅಂಗಡಿ–ಮುಂಗಟ್ಟುಗಳ ಬಾಗಿಲು ತೆರೆದುಕೊಳ್ಳತೊಡಗಿವೆ. ಆರ್ಥಿಕ ಚಟುವಟಿಕೆಗಳು ಜೀವ ಪಡೆಯಲಾರಂಭಿಸಿವೆ. ಕೋವಿಡ್‌ ಪ್ರಕರಣಗಳ ಸರಾಸರಿ ದೃಢ ಪ್ರಮಾಣ ಶೇಕಡ 5ಕ್ಕಿಂತ ಕೆಳಗೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆ ಇದೆ. ದಿನನಿತ್ಯ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಆಸುಪಾಸಿಗೆ ಬಂದಿದ್ದು, ಇದು ಮೂರು ತಿಂಗಳಲ್ಲೇ ಅತ್ಯಂತ ಕಡಿಮೆ. ಚೇತರಿಕೆಯ ಪ್ರಮಾಣವೂ ಹೆಚ್ಚಿದೆ.

ಇವೆಲ್ಲ ಜನಸಮೂಹದ ಪಾಲಿಗೆ ಸಹಜವಾಗಿಯೇ ಶುಭಶಕುನದಂತೆ ಭಾಸವಾಗುತ್ತಿವೆ. ಹೊಸ ಭರವಸೆಗೆ ಕಾರಣವಾಗಿರುವ ಈ ಬೆಳವಣಿಗೆಯ ನಡುವೆಯೇ ಮೂರನೇ ಅಲೆಯ ಸಾಧ್ಯತೆ ಕುರಿತು ತಜ್ಞರ ಎಚ್ಚರಿಕೆಯ ಸಂದೇಶ ಹೊರಬಿದ್ದಿದೆ. ಆರು ವಾರಗಳಿಂದ ಎಂಟು ವಾರಗಳೊಳಗೆ ಮತ್ತೊಂದು ಅಲೆ ಅಪ್ಪಳಿಸಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಎಚ್ಚರಿಸಿದ್ದಾರೆ. ಮತ್ತೊಂದು ಅಲೆ ಇನ್ನೂ ತ್ವರಿತವಾಗಿಯೇ ರಾಜ್ಯದ ಮೇಲೆ ಎರಗಬಹುದು ಎಂದು ಮಹಾರಾಷ್ಟ್ರದ ಕೋವಿಡ್‌ ಕಾರ್ಯಪಡೆ ಹೇಳಿದೆ. ಎರಡನೇ ಅಲೆಯಲ್ಲಿ ಆಗಿರುವುದಕ್ಕಿಂತ ಹೆಚ್ಚಿನ ಸಾವು–ನೋವು ಸಂಭವಿಸಬಹುದು ಎಂದೂ ಹೇಳಿದೆ. ಇದನ್ನು ಆ ರಾಜ್ಯಕ್ಕೆ ಮಾತ್ರ ಅನ್ವಯ ಆಗುವಂತಹ ಎಚ್ಚರಿಕೆ ಎಂದೇನೂ ಭಾವಿಸಬೇಕಾಗಿಲ್ಲ.

ಸಂಭವನೀಯ ಮೂರನೇ ಅಲೆಯ ತೀವ್ರತೆಯನ್ನು ನಿಯಂತ್ರಿಸುವ ಅಥವಾ ಅದಕ್ಕೆ ಲಗಾಮು ಹಾಕುವಂತಹ ಸೌಕರ್ಯಗಳು ಮತ್ತು ವ್ಯವಸ್ಥೆ ಈಗಲೂ ದೇಶದಲ್ಲಿ ಇಲ್ಲ. ಸದ್ಯದ ಮಟ್ಟಿಗೆ ಕೋವಿಡ್‌ ಪ್ರತಿರೋಧಕ ಲಸಿಕೆಯೊಂದೇ ಭರವಸೆಯ ರಕ್ಷಾಕವಚ. ಆದರೆ, ದೇಶದಲ್ಲಿ ಎರಡು ಡೋಸ್ ಲಸಿಕೆ ಪಡೆದವರ ಪ್ರಮಾಣ ಇನ್ನೂ ಶೇಕಡ 4 ಮೀರಿಲ್ಲ. ಲಸಿಕೆ ನೀಡಿಕೆಯು ಈಗಿನ ವೇಗದಲ್ಲಿಯೇ ಮುಂದುವರಿದರೆ ಮುಂದಿನ ಕೆಲವು ವಾರಗಳಲ್ಲಿ ಭಾರಿ ಜಿಗಿತವನ್ನೇನೂ ನಿರೀಕ್ಷಿಸಲಾಗದು. ಇದರ ನಡುವೆ, ಕೊರೊನಾ ವೈರಾಣುವಿನ ರೂಪಾಂತರ ತಳಿಯೊಂದು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರವಾಗಲು ಡೆಲ್ಟಾ ತಳಿಯ ವೈರಾಣು ಕಾರಣ ಎಂದು ತಜ್ಞರು ಹೇಳಿದ್ದಾರೆ.

ಈಗ ಇದರ ರೂಪಾಂತರ ತಳಿಯಾದ ‘ಡೆಲ್ಟಾ ಪ್ಲಸ್‌’ ಭಾರತದ ಹಲವೆಡೆ ಕಾಣಿಸಿಕೊಂಡು ಜನರ ನೆಮ್ಮದಿ ಕದಡಿದೆ. ಇದು, ಅತ್ಯಂತ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದು ಪರಿಣತರ ಅಭಿಪ್ರಾಯ. ಭಾರತದಲ್ಲಿ ಬುಧವಾರದ ವೇಳೆಗೆ 40ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಇದರಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ನೆರೆಯ ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ಮಧ್ಯಪ್ರದೇಶದಲ್ಲಿ ಒಟ್ಟು ಆರು ಹಾಗೂ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿರುವ ಕಾರಣ, ಕಟ್ಟೆಚ್ಚರ ವಹಿಸುವಂತೆ ಈ ಮೂರೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕರ್ನಾಟಕದಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶದಲ್ಲಿ ಒಂದು ಮತ್ತು ತಮಿಳುನಾಡಿನಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ. ಕೊರೊನಾಕ್ಕೆ ಸಂಬಂಧಿಸಿದ ದತ್ತಾಂಶಗಳು ಹೆಚ್ಚು ಪಾರದರ್ಶಕವಾಗಿರಬೇಕು. ಅಂಕಿಅಂಶಗಳನ್ನು ಅಡಗಿಸಿಡುವ ಪರಿಪಾಟ ಸಲ್ಲದು. ನಿಖರ ದತ್ತಾಂಶ ಇಲ್ಲದೇ ಹೋದರೆ ಸಾಂಕ್ರಾಮಿಕದ ವಿರುದ್ಧದ ಹೋರಾಟವು ಕಗ್ಗತ್ತಲಲ್ಲಿ ನಡೆಸಿದಂತಾಗುತ್ತದೆ.

ಕೊರೊನಾ ಅಬ್ಬರ ಇಳಿದಿರುವ ಈ ಸಂದರ್ಭದಲ್ಲಿ ಆರೋಗ್ಯ ಸೇವಾ ವಲಯದ ಮೇಲಿನ ಒತ್ತಡ ಕಡಿಮೆಯಾಗಿದೆ. ಈ ಸುಸಂದರ್ಭದ ಪ್ರತಿಕ್ಷಣವನ್ನೂ ಸರ್ಕಾರ ಸಾರ್ಥಕಪಡಿಸಿಕೊಳ್ಳಬೇಕು. ಸಾಂಕ್ರಾಮಿಕವು ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಬೀಗುವ ಸಮಯ ಇದಲ್ಲ ಎಂಬುದನ್ನು ಅರಿಯಬೇಕು. ಆರೋಗ್ಯ ಸೇವಾ ಕ್ಷೇತ್ರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿಕ್ಕೆ ಒತ್ತು ಕೊಡಬೇಕು. ಲಸಿಕೆ ಆಂದೋಲನಕ್ಕೆ ವೇಗ ತುಂಬುವುದರ ಜೊತೆಗೆ ವೈದ್ಯಕೀಯ ಆಮ್ಲಜನಕದ ಲಭ್ಯತೆ, ಔಷಧ, ಆಸ್ಪತ್ರೆಗಳಲ್ಲಿನ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು ತುರ್ತು ಕ್ರಮ ಜರುಗಿಸಬೇಕು. ಮಕ್ಕಳ ಆರೈಕೆಗೆ ಬೇಕಾದ ಸೌಕರ್ಯಗಳ ವೃದ್ಧಿಗೂ ಗಮನಹರಿಸಬೇಕು. ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಕೊರತೆ ತುಂಬಬೇಕು. ಸಮುದಾಯ ಶುಶ್ರೂಷಕ ಸಹಾಯಕ ಸೇವೆಗೆ ಸ್ವಯಂ ಸೇವಕರನ್ನು ಅಣಿಗೊಳಿಸುವ ದಿಸೆಯಲ್ಲಿ ಕೆಲವು ರಾಜ್ಯಗಳು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರು
ವುದು ಶ್ಲಾಘನೀಯ.

ಸೋಂಕು ಪ್ರಕರಣಗಳ ತ್ವರಿತ ಪತ್ತೆಗೆ ನಿಗಾ ವ್ಯವಸ್ಥೆಯನ್ನು ವಿಸ್ತರಿಸಬೇಕು ಮತ್ತು ಬಲಪಡಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿಗಾ ಇರಿಸುವುದು ಅಗತ್ಯ. ಇದರಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು. ಸೋಂಕಿಗೆ ಬಹಳ ಬೇಗ ಈಡಾಗುವ ಸಾಧ್ಯತೆ ಹೆಚ್ಚಿರುವಂತಹ ಜನರ ಕುರಿತು ವಿಶೇಷ ಮುತುವರ್ಜಿ ವಹಿಸಬೇಕು. ಪರಿಹಾರ ನೀಡುವಿಕೆ ಮತ್ತು ಆದಾಯ ಮೂಲಕ್ಕೆ ಬೆಂಬಲವಾಗಿ ಒದಗಿಬರುವುದನ್ನು ಕೋವಿಡ್‌ ನಿರ್ವಹಣೆಯ ಭಾಗವಾಗಿ ಪರಿಗಣಿಸಬೇಕು. ಕೋವಿಡ್‌ ಮಾರ್ಗಸೂಚಿ ಪಾಲನೆ ವಿಚಾರದಲ್ಲಿ ಸಣ್ಣ ನಿರ್ಲಕ್ಷ್ಯಕ್ಕೂ ಅವಕಾಶ ಕೊಡಬಾರದು. ಕೊರೊನಾದ ಎರಡನೇ ಅಲೆಯನ್ನು ಎದುರಿಸುವ ಸಂದರ್ಭದಲ್ಲಿ ಉಂಟಾದ ಗೊಂದಲ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ವೈರಾಣು ಹೊರಟುಹೋಗಿಲ್ಲ. ಪುನಃ ಬಾಗಿಲು ಬಡಿಯಲು ಅದಕ್ಕೆ ಅವಕಾಶ ಕಲ್ಪಿಸಬಾರದು. ಹಾಗಂತ ಪಣ ತೊಡೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು