ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೋವಿಡ್‌ ಸಾವು; ಅಂತ್ಯಸಂಸ್ಕಾರದಲ್ಲಿ ಮಾನವ ಘನತೆಯನ್ನು ಕಾಪಾಡಿ

Last Updated 2 ಜುಲೈ 2020, 19:30 IST
ಅಕ್ಷರ ಗಾತ್ರ

ಕೋವಿಡ್‌– 19 ಕುರಿತು ತಿಳಿವಳಿಕೆ ಮೂಡಿಸುವ ಬಹಳಷ್ಟು ಸಂದೇಶಗಳನ್ನು ಸರ್ಕಾರವು ಬಹುಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿದೆ. ಆದರೂ ಕೊರೊನಾ ಸೋಂಕು ತಗುಲಿದವರನ್ನು ಸಮಾಜವು ಕಡೆಗಣ್ಣಿನಿಂದ ನೋಡುವ ಪ್ರವೃತ್ತಿ ಮುಂದುವರಿದಿದೆ. ಇದು ಜೀವಂತ ಇದ್ದವರ ಸ್ಥಿತಿಯಾದರೆ, ಕೋವಿಡ್‌ನಿಂದ ಮೃತಪಟ್ಟವರ ಘನತೆಗೆ ಕುಂದುಂಟು ಮಾಡುವಂತಹ ವಿದ್ಯಮಾನಗಳು ನಡೆಯುತ್ತಿರುವುದು ಅತೀವ ನೋವಿನ ಸಂಗತಿ.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವು ಅತ್ಯಂತ ಅಮಾನವೀಯವಾಗಿ ನಡೆಯುತ್ತಿರುವುದು ಪದೇ ಪದೇ ವರದಿ
ಯಾಗುತ್ತಿದೆ. ಬಳ್ಳಾರಿಯಲ್ಲಿ ಕೆಲವು ಮೃತದೇಹಗಳನ್ನು ಒಂದೇ ಗುಂಡಿಗೆ ಬೀಸಿ ಒಗೆಯುವ ಕ್ರೂರ ವಿಡಿಯೊ ದೃಶ್ಯವೊಂದು ವೈರಲ್‌ ಆಗಿತ್ತು. ಅದರ ಬೆನ್ನಲ್ಲೇ ಈಗ ಚನ್ನಗಿರಿ ಮತ್ತು ಯಾದಗಿರಿಯಿಂದಲೂ ಅಮಾನವೀಯ ಕೃತ್ಯಗಳು ವರದಿಯಾಗಿವೆ.

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ 56 ವರ್ಷದ ಮಹಿಳೆಯ ಮೃತದೇಹವನ್ನು ವಾಹನದಲ್ಲಿ ಚನ್ನಗಿರಿಯ ಸ್ಮಶಾನಕ್ಕೆ ತಂದು, ಬಳಿಕ ಜೆಸಿಬಿ ಯಂತ್ರದ ಬಕೆಟ್‌ನಲ್ಲಿ ಹೊತ್ತೊಯ್ದು ಗುಂಡಿಗೆ ತಳ್ಳಲಾಗಿದೆ. ತಹಶೀಲ್ದಾರ್‌, ಪೊಲೀಸ್ ಇನ್‌ಸ್ಪೆಕ್ಟರ್‌ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಸಮ್ಮುಖದಲ್ಲೇ ಇದು ನಡೆದಿರುವುದು ನಿಜಕ್ಕೂ ವಿಷಾದನೀಯ.

ನಾಗರಿಕರಲ್ಲಿ ಅರಿವು ಮೂಡಿಸಬೇಕಾದ ಅಧಿಕಾರಿಗಳೇ ಇಷ್ಟೊಂದು ನಿರ್ಲಕ್ಷ್ಯದಿಂದ ವರ್ತಿಸಿರುವುದು ಸರಿಯಲ್ಲ. ಯಾದಗಿರಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ 45 ವರ್ಷದ ವ್ಯಕ್ತಿಯ ಮೃತದೇಹವನ್ನು ಆಂಬುಲೆನ್ಸ್‌ನಿಂದ ಇಳಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಬಳಿಕ ಅದನ್ನು ಬಡಿಗೆಗೆ ಕಟ್ಟಿ ಎಳೆದೊಯ್ದು ಗುಂಡಿಗೆ ಎಸೆದಿರುವ ಕೃತ್ಯವಂತೂ ಹೃದಯಹೀನವಾಗಿದೆ.

ಕೋವಿಡ್‌ ಸಾಂಕ್ರಾಮಿಕದ ಹಬ್ಬುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸರ್ಕಾರವೊಂದರಿಂದಲೇ ಸಾಧ್ಯವಿಲ್ಲ; ಜನರೂ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು ಎನ್ನುವುದು ನಿಜ. ಆದರೆ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಘನತೆಯಿಂದ ನಿರ್ವಹಿಸುವುದಕ್ಕೆ ಈ ಜವಾಬ್ದಾರಿ ಯಾವುದೇ ಕಾರಣಕ್ಕೂ ಅಡ್ಡಿ ಬರುವುದಿಲ್ಲ. ತಿಳಿವಳಿಕೆಯ ಕೊರತೆ ಮತ್ತು ನಿರ್ಲಕ್ಷ್ಯದ ಪರಮಾವಧಿಯೇ ಇಂತಹ ಕೃತ್ಯಗಳಿಗೆ ಕಾರಣ ಎನ್ನದೆ ವಿಧಿಯಿಲ್ಲ.

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ಈ ಪರಿ ಭಯ ಅನಗತ್ಯ. ರೋಗಿ ಜೀವಂತ ಇದ್ದಾಗ ಸೋಂಕು ಹರಡುವ ಪ್ರಮಾಣ ಎಷ್ಟು ಇರುತ್ತದೋ ಅದಕ್ಕಿಂತ ಹೆಚ್ಚು ಅಪಾಯವೇನೂ ಮೃತಪಟ್ಟ ಬಳಿಕ ಇರುವುದಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ನಿರ್ವಹಣೆಯ ಕುರಿತು ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳಲ್ಲಿ ಈ ವಿಷಯ ಸ್ಪಷ್ಟವಾಗಿದೆ.

ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಿ ಪ್ಯಾಕ್‌‌ ಮಾಡಲಾದ ಮೃತದೇಹದಿಂದ ಸೋಂಕು ಹರಡುವ ಅಪಾಯ ಇಲ್ಲ. ಮೃತಪಟ್ಟವರ ಶ್ವಾಸಕೋಶದ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಸೋಂಕು ಹರಡದಂತೆ ವೈದ್ಯರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಅದು ಬಿಟ್ಟರೆ, ಸ್ಮಶಾನದಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಸಂಬಂಧಿಕರು ಹಾಜರಿರುವಾಗ ವೈಯಕ್ತಿಕ ಅಂತರ ಹಾಗೂ ಇತರ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು.

ಅಗ್ನಿಸ್ಪರ್ಶ ಮಾಡಿದರೆ, ಎಲ್ಲ ಮುಗಿದ ಬಳಿಕ ಚಿತಾಭಸ್ಮವನ್ನು ಶಾಸ್ತ್ರಬದ್ಧ ವಿಸರ್ಜನೆಗಾಗಿ ಒಯ್ಯುವುದಕ್ಕೂ ಅನುಮತಿ ಇದೆ. ಚಿತಾಭಸ್ಮದಿಂದ ಸಹ ಸೋಂಕು ಹರಡುವುದಿಲ್ಲ ಎಂಬುದು ನಿಚ್ಚಳವಾಗಿದೆ. ಸರ್ಕಾರದ ಈ ಮಾರ್ಗಸೂಚಿಗಳನ್ನು ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಪೂರ್ಣ ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅಷ್ಟಾಗಿಯೂ ಅಂತ್ಯಸಂಸ್ಕಾರದ ವೇಳೆ ಮಾನವ ಘನತೆಗೆ ಚ್ಯುತಿ ಬರುವಂತೆ ವರ್ತಿಸುವವರ ಮತ್ತು ನಿರ್ಲಕ್ಷ್ಯ ತೋರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು.

ಪಾರ್ಥಿವ ಶರೀರವನ್ನು ಘನತೆ ಮತ್ತು ಗೌರವದಿಂದ ಸಂಸ್ಕಾರ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಹೊಣೆಯರಿತು ನಡೆಯದೆ ನಿರ್ಲಕ್ಷ್ಯದಿಂದ ವರ್ತಿಸುವುದು ಸಂಸ್ಕಾರಹೀನ ನಡವಳಿಕೆ ಮಾತ್ರವಲ್ಲ, ಅಕ್ಷಮ್ಯ ಸಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT