ಸೋಮವಾರ, ಜುಲೈ 4, 2022
21 °C

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸ್ಥಗಿತ, ರೈತರನ್ನು ಸಂಕಷ್ಟಕ್ಕೆ ದೂಡುವ ನಿರ್ಧಾರ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷದ ಮುಂಗಾರು ಹಾಗೂ ನಂತರದ ದಿನಗಳಲ್ಲಿ ಚೆನ್ನಾಗಿ ಸುರಿದ ಮಳೆ ಕೃಷಿ ಬದುಕನ್ನು ಚಿಗುರಿಸಿತ್ತು. ಆದರೆ, ಹಿಂಗಾರಿನಲ್ಲಿ ಬಿಡದೇ ಕಾಡಿದ ಅತಿವೃಷ್ಟಿಯಿಂದ ಜಮೀನಿನಲ್ಲಿದ್ದ ಬಹುಪಾಲು ಫಸಲು ಕಣಜ ಸೇರದೆ ನೀರುಪಾಲಾಗಿದ್ದು ಸುಳ್ಳಲ್ಲ. ಇಂಥ ವೈರುಧ್ಯಗಳ ನಡುವೆಯೂ ರಾಜ್ಯದಲ್ಲಿ ಸುಮಾರು ನಾಲ್ಕೂವರೆ ಲಕ್ಷ ಟನ್‌ಗಳಷ್ಟು ರಾಗಿ ಫಸಲು ಬರುವ ಅಂದಾಜು ಮಾಡಲಾಗಿತ್ತು. ಇಳುವರಿ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ರಾಗಿಯ ದರ ಕುಸಿಯಿತು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜನವರಿ 1ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಿದವು. ಕ್ವಿಂಟಲ್‌ ರಾಗಿಗೆ ₹ 3,377 ದರ ನಿಗದಿಪಡಿಸಿ, ಒಂದು ಎಕರೆಗೆ 10 ಕ್ವಿಂಟಲ್‌ನಂತೆ, ಪ್ರತೀ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಖರೀದಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತು. ರಾಗಿ ಬೆಳೆದವರಿಗೆ ನೋಂದಣಿ ಮಾಡಿಸಿಕೊಳ್ಳುವಂತೆಯೂ ಸೂಚಿಸಿತ್ತು. ನೋಂದಣಿ ಸೇರಿ ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ಸಾಗುತ್ತಿರು ವಾಗಲೇ, ಬೆಂಬಲ ಬೆಲೆಯಡಿ ರಾಗಿ ಖರೀದಿಸುವ ಪ್ರಮಾಣವನ್ನು ಈ ವರ್ಷ 2.10 ಲಕ್ಷ ಟನ್‌ಗೆ ಸೀಮಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಆ ಮಿತಿ ತಲುಪಿದ್ದರಿಂದ ಸದ್ಯ ರಾಗಿ ಖರೀದಿಯ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈವರೆಗೆ ನೋಂದಣಿ ಮಾಡಿಸಿದವರಿಂದ ಮಾತ್ರ ರಾಗಿ ಖರೀದಿಸುವುದಾಗಿ ಅಧಿಕಾರಿಗಳು ಹೇಳುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ, ಇಂತಹ ನಿಲುವು ತಾಳಿರುವುದು ಆಶ್ಚರ್ಯ ಉಂಟುಮಾಡಿದೆ. ರಾಗಿ ಬೆಳೆದವರು ಇದರಿಂದಾಗಿ ತೀವ್ರ ಆಘಾತ ಅನುಭವಿಸುತ್ತಿದ್ದಾರೆ. ಈ ಹಿಂದೆ ರಾಗಿ ಖರೀದಿ ಮೇಲೆ ಇಂತಹ ಮಿತಿ ವಿಧಿಸಿರಲಿಲ್ಲ. ಆಹಾರ ಭದ್ರತೆಯ ದೃಷ್ಟಿಯಿಂದ ರಾಗಿ, ಭತ್ತದಂತಹ ಆಹಾರ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಾಗ ನಿರ್ಬಂಧ ವಿಧಿಸುವುದು ತರವಲ್ಲ ಎನ್ನುವುದು ಈ ಕ್ಷೇತ್ರದ ತಜ್ಞರ ಅಭಿಪ್ರಾಯ. ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿಸದೇ ಹೋದರೆ ರೈತರು ತಾವು ಬೆಳೆದ ಫಸಲನ್ನು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ  ಮಾರಾಟ ಮಾಡುವ ಅನಿವಾರ್ಯ ಸೃಷ್ಟಿಯಾಗುತ್ತದೆ. ಅಪ ರೂಪಕ್ಕೆ ಉತ್ತಮ ಫಸಲು ಕಂಡಿರುವ ರೈತರು, ಕಡಿಮೆ ಬೆಲೆಗೆ ರಾಗಿ ಮಾರಿದರೆ, ಬೆಳೆದ ಖರ್ಚೂ ಹುಟ್ಟುವುದಿಲ್ಲ.

ರಾಗಿ ಹೆಚ್ಚಾಗಿ ಬೆಳೆಯುವ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಫಸಲು ತಕ್ಕಮಟ್ಟಿಗೆ ಉತ್ತಮವಾಗಿದೆ. ಲಾಕ್‌ಡೌನ್ ಮತ್ತಿತರ ಕಾರಣ ಗಳಿಂದಾಗಿ ನಗರ ಬಿಟ್ಟು ಹಳ್ಳಿ ಸೇರಿರುವ ಅನೇಕ ಯುವಕರು ಕೃಷಿಯತ್ತ ಒಲವು ತೋರಿದ್ದು ರಾಗಿ ಉತ್ಪಾದನೆ ಹೆಚ್ಚಲು ಕಾರಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬೆಂಬಲ ಬೆಲೆಯಡಿ ರಾಗಿ ಖರೀದಿ ಮೇಲೆ ಮಿತಿ ವಿಧಿಸುವಂತಹ ಕ್ರಮಕ್ಕೆ ಸರ್ಕಾರ ಮುಂದಾಗ ಬಾರದಿತ್ತು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ಸಾಲ ಮಾಡಿ, ಹವಾಮಾನ ವೈಪರೀತ್ಯ ಎದುರಿಸುತ್ತಾ, ಪರಿಶ್ರಮದೊಂದಿಗೆ ಬೆಳೆ ಬೆಳೆದಿರುವ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಆದ್ಯ ಕರ್ತವ್ಯ.

ರಾಗಿ ಖರೀದಿಗೆ ವಿಧಿಸಿರುವ ಮಿತಿಯನ್ನು ತಕ್ಷಣ ತೆರವುಗೊಳಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲೂ ಪ್ರಯತ್ನಿಸಬೇಕು. ಇದರಿಂದ ಆಗಿರುವ ಅನನುಕೂಲಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳುವ ಕೇಂದ್ರ ಸರ್ಕಾರ, ಕೃಷಿಕರ ಕನಿಷ್ಠ ವರಮಾನಕ್ಕೂ ಸಂಚಕಾರ ತರುವಂತಹ ಇಂತಹ ಅಪಕ್ವ ನಿರ್ಧಾರಗಳನ್ನು ಮಾಡಬಾರದು. ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸ್ಥಗಿತಗೊಳಿಸಿರುವ ನೋಂದಣಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಬೇಕು. ರಾಜ್ಯ ಸರ್ಕಾರ ಕೂಡ, ಅಗತ್ಯಬಿದ್ದರೆ ಸರ್ವಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಒಂದೊಮ್ಮೆ ರಾಜ್ಯ ಸರ್ಕಾರ ಈಗ ರಾಗಿ ಬೆಳೆಗಾರರ ನೆರವಿಗೆ ಧಾವಿಸದಿದ್ದರೆ, ಈಗಾಗಲೇ ‘ರಾಗಿ ಕೃಷಿ ನಷ್ಟದ ಬಾಬತ್ತು’ ಎನ್ನುತ್ತಾ, ಈ ಕೃಷಿಯಿಂದ ಅನೇಕರು ದೂರ ಉಳಿದಿದ್ದು, ಅವರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು. ಖರ್ಚು ವೆಚ್ಚ–ಮಾರುಕಟ್ಟೆಯ ಕಾರಣಕ್ಕಾಗಿ ರಾಗಿಯ ಹೊಲ, ಭತ್ತದ ಗದ್ದೆಗಳೆಲ್ಲ ಅಡಿಕೆ ತೋಟಗಳಾಗುತ್ತಿವೆ. ಇದು ಭವಿಷ್ಯದಲ್ಲಿ ಆಹಾರ ಭದ್ರತೆಗೆ ಧಕ್ಕೆ ಉಂಟುಮಾಡುವುದರ ಜೊತೆಗೆ, ಜಲಕ್ಷಾಮಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು, ರಾಗಿ ಬೆಳೆಗಾರರ ನೆರವಿಗೆ ಧಾವಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು