ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಸಂಪಾದಕೀಯ: ಅನುದಾನ ಬಿಡುಗಡೆಯಲ್ಲಿ ವಿಳಂಬ ಜನವಿರೋಧಿ ಧೋರಣೆ ಬದಲಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ರಾಜ್ಯ ಸರ್ಕಾರವೂ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರ್ಕಾರದ ವರಮಾನದ ಮೂಲಗಳು ಕುಗ್ಗಿವೆ. ತೆರಿಗೆ ಮೂಲಗಳಿಂದ ನಿರೀಕ್ಷಿತ ಪ್ರಮಾಣದ ವರಮಾನ ಸಂಗ್ರಹ ಆಗುತ್ತಿಲ್ಲ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಇಂತಹ ಸನ್ನಿವೇಶದಲ್ಲೇ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕೆ ತನ್ನ ಪಾಲಿನ ಅನುದಾನವನ್ನು ಕೇಂದ್ರ ಸರ್ಕಾರ ಸಕಾಲಕ್ಕೆ ಬಿಡುಗಡೆ ಮಾಡದಿರುವುದು ದುರದೃಷ್ಟಕರ.

ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ, ತೋಟಗಾರಿಕೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಹತ್ತು ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 2021–22ನೇ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಕೂಡ ಬಿಡುಗಡೆ ಆಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮಂಡಿಸಿರುವ ಅಂಕಿಅಂಶಗಳೇ ಇದನ್ನು ಬಹಿರಂಗಪಡಿಸಿವೆ.

ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಗ್ರಾಮ ಸಡಕ್‌, ಪ್ರಧಾನ ಮಂತ್ರಿ ಆವಾಸ್‌, ಆಹಾರ ಭದ್ರತಾ ಅಭಿಯಾನ ಸೇರಿದಂತೆ ಜನರ ಜೀವನಮಟ್ಟ ಸುಧಾರಣೆಯ ಗುರಿ ಸಾಧನೆಯಲ್ಲಿ ನೇರವಾಗಿ ಸಂಬಂಧ ಹೊಂದಿರುವ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ಪರಿಣಾಮವಾಗಿ ಈ ಯೋಜನೆಗಳ ಅನುಷ್ಠಾನದಲ್ಲಿನ ವೆಚ್ಚವೂ ಶೂನ್ಯವಾಗಿದೆ. ₹ 3,890.59 ಕೋಟಿ ವೆಚ್ಚದ ಹತ್ತು ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ₹ 2,410.81 ಕೋಟಿ ನೀಡಬೇಕಿದೆ.

ಈ ಯೋಜನೆಗಳಿಗೆ ರಾಜ್ಯ ಸರ್ಕಾರವು ₹ 1,479.78 ಕೋಟಿ ಹೊಂದಾಣಿಕೆ ಅನುದಾನವನ್ನು ನೀಡಬೇಕಿದೆ. ಕೇಂದ್ರದ ಅನುದಾನ ಮತ್ತು ರಾಜ್ಯದ ಹೊಂದಾಣಿಕೆ ಅನುದಾನ ಎರಡೂ ಲಭಿಸದೇ ಇರುವುದರಿಂದ ಈ ಯೋಜನೆಗಳ ಅನುಷ್ಠಾನ ಪ್ರಗತಿ ಶೂನ್ಯವಾಗಿದೆ. ಕೇಂದ್ರವು ತಾನೇ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಕ್ಕೆ ಸಕಾಲದಲ್ಲಿ ಅನುದಾನ ಒದಗಿಸದೇ ಇರುವುದು ಯಾವುದೇ ನೆಲೆಯಲ್ಲಿ ಸಮರ್ಥನೀಯವಲ್ಲ.

ರಾಜ್ಯ ಸರ್ಕಾರದ 22 ಇಲಾಖೆಗಳ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ 89 ಯೋಜನೆಗಳು ಜಾರಿಯಲ್ಲಿವೆ. ಇದಕ್ಕಾಗಿ ಕೇಂದ್ರ ಸರ್ಕಾರವು ಪ್ರಸಕ್ತ ವರ್ಷ ₹ 17,643 ಕೋಟಿ ಅನುದಾನ ಒದಗಿಸಬೇಕಿದೆ. ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಬಯಲು ಬಹಿರ್ದೆಸೆಯಿಂದ ದೇಶವನ್ನು ಮುಕ್ತಗೊಳಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ನಿರ್ಮಾಣ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಗಳ ನಿರ್ವಹಣೆ, ಹೊಸ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಶಿಷ್ಯವೇತನ ಯೋಜನೆಗಳಿಗೆ ಆರ್ಥಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಅನುದಾನ ಬಿಡುಗಡೆ ಮಾಡದಿರುವುದು ಸರಿಯಲ್ಲ.

ಕೃಷಿ ಮತ್ತು ವಸತಿ ಯೋಜನೆಗಳಿಗೂ ಅನುದಾನ ನೀಡಿಲ್ಲ. ಜನರ ಜೀವನಮಟ್ಟ ಸುಧಾರಣೆಯ ದಿಸೆಯಲ್ಲಿ ಆದ್ಯತೆಯ ಯೋಜನೆಗಳಿಗೇ ಅನುದಾನ ಬಿಡುಗಡೆಯಲ್ಲಿ ವಿಳಂಬ ಮಾಡಿರುವುದು ಜನವಿರೋಧಿ ನಡೆ. ಆರಂಭಿಕ ಹಂತದಲ್ಲಿ ಅನುದಾನ ಬಿಡುಗಡೆ ವಿಳಂಬವಾದರೆ ವರ್ಷದ ಅಂತ್ಯದಲ್ಲಿ ಪೂರ್ಣ ಪ್ರಮಾಣದ ಗುರಿ ಸಾಧನೆ ಆಗುವುದಿಲ್ಲ. 2020–21ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ₹ 18,715 ಕೋಟಿ ಅನುದಾನವು ಕೇಂದ್ರದಿಂದ ಬರಬೇಕಿತ್ತು. ಆದರೆ, ರಾಜ್ಯಕ್ಕೆ ದೊರಕಿರುವುದು ₹ 16,320 ಕೋಟಿ ಮಾತ್ರ. ಇದು ಅನುದಾನ ಬಿಡುಗಡೆಯಲ್ಲಿನ ವಿಳಂಬದ ಪ್ರತಿಕೂಲ ಪರಿಣಾಮಗಳಿಗೆ ಸಾಕ್ಷಿ. ಇಂತಹ ಬೆಳವಣಿಗೆ ಮರುಕಳಿಸದಂತೆ ತಡೆಯಬೇಕಾದ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ.

ಜಿಎಸ್‌ಟಿಯಲ್ಲಿ ರಾಜ್ಯದ ಪಾಲು, ಜಿಎಸ್‌ಟಿ ಪರಿಹಾರ, ಹಣಕಾಸು ಆಯೋಗದ ಅನುದಾನಗಳ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ನ್ಯಾಯೋಚಿತ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ದೀರ್ಘ ಕಾಲದಿಂದ ಇದೆ. ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವೂ ಇದೆ.

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಅನುದಾನ ಬಿಡುಗಡೆಯ ವಿಳಂಬದ ವಿಚಾರದಲ್ಲಿ ಗಟ್ಟಿಯಾದ ನಿಲುವು ತಾಳಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಅನುದಾನ ಬಿಡುಗಡೆಯಲ್ಲಿನ ವಿಳಂಬವನ್ನು ಮುಚ್ಚಿಟ್ಟು, ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತಹ ನಡೆಯನ್ನು ಪ್ರದರ್ಶಿಸದೇ ವಾಸ್ತವಿಕವಾಗಿ ದೊರೆಯಬೇಕಾದ ಪಾಲನ್ನು ಗಟ್ಟಿ ಧ್ವನಿಯಲ್ಲಿ ಕೇಳಬೇಕಾದ ಜವಾಬ್ದಾರಿ ಇದೆ.

ಹಂಚಿಕೆಯಾದ ಪೂರ್ಣ ಪ್ರಮಾಣದ ಅನುದಾನವನ್ನು ಪಡೆದು, ಬಳಕೆ ಮಾಡುವುದಕ್ಕೆ ಸರಿಯಾದ ಪ್ರಯತ್ನಗಳನ್ನು ಮಾಡಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯ. ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಹತ್ತು ಪ್ರಮುಖ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಬಿಡುಗಡೆ ಆಗದೇ ಇರುವುದಕ್ಕೆ ಕಾರಣವಾದ ಅಂಶಗಳನ್ನು ಪತ್ತೆಮಾಡಿ, ಪರಿಹಾರ ಕಂಡುಕೊಳ್ಳುವ ಮೂಲಕ ರಾಜ್ಯದ ಪಾಲಿನ ಪೂರ್ಣ ಅನುದಾನವನ್ನು ಪಡೆಯುವ ದಿಟ್ಟತನ ಪ್ರದರ್ಶಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು