ಮಂಗಳವಾರ, ಸೆಪ್ಟೆಂಬರ್ 21, 2021
25 °C
ಈ ಜನವಿರೋಧಿ ಕ್ರಮವನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯಬೇಕು

ಸಂಪಾದಕೀಯ | ಪ್ರತಿಭಟನೆಯನ್ನು ಹತ್ತಿಕ್ಕುವ ಕುತಂತ್ರ ಎಳ್ಳಷ್ಟೂ ಸರಿಯಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಅಧಿಕಾರದಲ್ಲಿ ಯಾವ ಪಕ್ಷವೇ ಇರಲಿ, ಸರ್ಕಾರದ ನಿಲುವು ಮತ್ತು ನೀತಿಗಳನ್ನು ಪ್ರಶ್ನಿಸುವ ಜನರು ಇದ್ದೇ ಇರುತ್ತಾರೆ. ಪ್ರತಿಭಟನೆಯು ಪ್ರಜಾಪ್ರಭುತ್ವದ ಜೀವಂತಿಕೆಯ ಮುಖ್ಯ ಲಕ್ಷಣ. ಜನರು ಪ್ರತಿಭಟನೆಯ ಮೂಲಕ ಎಚ್ಚರಿಸುತ್ತಿದ್ದರೆ, ಯಾವುದೇ ಸರ್ಕಾರಕ್ಕೆ ತನ್ನ ಲೋಪಗಳನ್ನು ಅರಿತುಕೊಳ್ಳಲು ಅವಕಾಶ ದೊರೆಯುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಜನರೇ ಆರಿಸುವುದರಿಂದ, ಅವರ ಆಶೋತ್ತರಗಳಿಗೆ ಅನುಗುಣವಾಗಿಯೇ ಸರ್ಕಾರದ ಕಾರ್ಯವೈಖರಿ ಇರಬೇಕು.

ಸರ್ಕಾರದ ನೀತಿ ಮತ್ತು ಧೋರಣೆಗಳ ಬಗ್ಗೆ ಪ್ರಜೆಗಳಿಗೆ ಸಹಮತ ಇಲ್ಲದಿದ್ದರೆ, ಶಾಂತಿಯುತವಾಗಿ ಪ್ರತಿಭಟಿಸುವುದು ಅವರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಪ್ರತಿಭಟನಕಾರರು ಭಾರಿ ಸಂಖ್ಯೆಯಲ್ಲಿದ್ದರೆ, ಜನರ ಜಮಾವಣೆಯಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವಂತಿದ್ದರೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಪ್ರತಿಭಟನೆಗೆ ಸರ್ಕಾರ ಮಣಿಯುವ ಮೂಲಕ ಈವರೆಗೆ ಅದೆಷ್ಟೋ ಜನೋಪಯೋಗಿ ಕಾಯ್ದೆಗಳು ಜಾರಿಗೆ ಬಂದಿವೆ, ಜನವಿರೋಧಿ ಕಾಯ್ದೆಗಳಿಗೆ ತಿದ್ದುಪಡಿಯಾಗಿದೆ.

ರಾಜ್ಯದ ಅಧಿಕಾರವು ವಿಧಾನಸೌಧದಲ್ಲೇ ಹೆಪ್ಪುಗಟ್ಟಿರುವುದರಿಂದ, ವಿವಿಧ ಜಿಲ್ಲೆಗಳಿಂದ ಪ್ರತಿಭಟನಕಾರರು ರಾಜಧಾನಿಗೆ ಬಂದು ಧರಣಿ ಕುಳಿತುಕೊಳ್ಳುವುದು ಸಹಜ. ಹಲವು ದಶಕಗಳ ಹಿಂದೆ, ವಿಧಾನಸೌಧದ ಮುಂದಿನ ರಸ್ತೆಯಲ್ಲೇ ಪ್ರತಿಭಟನೆಗಳು ನಡೆಯುತ್ತಿದ್ದವು. ಆ ಬಳಿಕ ಪ್ರತಿಭಟನಕಾರರನ್ನು ರಸ್ತೆಗೆ ಬಿಡದೆ, ಕಬ್ಬನ್‌ ಪಾರ್ಕ್‌ನ ಒಂದು ಮೂಲೆಗೆ ಸೀಮಿತಗೊಳಿಸಲಾಯಿತು. ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಧಾನಸೌಧದಿಂದ ತುಸು ದೂರ ಇರುವ ಸ್ವಾತಂತ್ರ್ಯ ಉದ್ಯಾನದಲ್ಲಿ ಜನರ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ಜನರ ಗಮನವನ್ನು ಹೆಚ್ಚಾಗಿ ಸೆಳೆಯುವುದಕ್ಕಾಗಿ ಪುರಭವನದ (ಟೌನ್‌ಹಾಲ್‌) ಮೆಟ್ಟಿಲುಗಳನ್ನೂ ಪ್ರತಿಭಟನಕಾರರು ಆಶ್ರಯಿಸುತ್ತಾರೆ. ಇಂತಹ ಪ್ರತಿಭಟನೆಗಳಿಗೆ ಸರ್ಕಾರ ಮಣಿದು, ಅವರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆದು, ಸಮಸ್ಯೆಗಳು ಸುಸೂತ್ರವಾಗಿ ಬಗೆಹರಿದ ಹಲವಾರು ನಿದರ್ಶನಗಳಿವೆ. 

ಆದರೆ, ಬೆಂಗಳೂರಿನ ಪುರಭವನದ ಬಳಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯಬೇಕಿದ್ದರೆ ₹ 10 ಲಕ್ಷದವರೆಗಿನ ಮೊತ್ತದ ಬಾಂಡ್‌ ನೀಡುವುದನ್ನು ಪೊಲೀಸರು ಈಗ ಕಡ್ಡಾಯಗೊಳಿಸಿದ್ದಾರೆ. ಪುರಭವನದ ಮುಂದಿನ ಪ್ರತಿಭಟನೆಗಳಿಗೆ ಅನುಮತಿ ನೀಡಲು ಈ ಹಿಂದೆ ವಿಧಿಸುತ್ತಿದ್ದ ₹ 10 ಸಾವಿರದವರೆಗಿನ ಖಾತರಿಪತ್ರವೇ ದುಬಾರಿ. ಈ ಮೊತ್ತವನ್ನು ಗರಿಷ್ಠ ₹ 10 ಲಕ್ಷಕ್ಕೆ ಏಕಾಏಕಿ ಏರಿಸಿರುವುದರ ಹಿಂದೆ ಸಮಾಜದ ಭಿನ್ನದನಿಗಳನ್ನು ಸದೆಬಡಿಯುವ ದುರುದ್ದೇಶ ಇದ್ದಂತಿದೆ. ಸಾಮಾನ್ಯವಾಗಿ ಮಹಿಳೆಯರು, ಕಾರ್ಮಿಕರು, ಅಸಂಘಟಿತ ನೌಕರರು, ರೈತರು, ದಲಿತರು, ಮಾನವಹಕ್ಕು ಪ್ರತಿಪಾದಕರು ಪ್ರತಿಭಟನೆಗೆ ಪುರಭವನವನ್ನು ನೆಚ್ಚಿಕೊಳ್ಳುತ್ತಾರೆ. ಸಮಾಜದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರೂ ಈ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿದೆ. ಪುರಭವನದ ಮುಂದಿನ ಬಹುಪಾಲು ಪ್ರತಿಭಟನೆಗಳು ಶಾಂತಿಯುತವಾಗಿಯೇ ನಡೆದಿವೆ. ಇಂತಹ ಪ್ರತಿಭಟನೆಗಳನ್ನು ಹೊಸಕಿಹಾಕಲು ಪೊಲೀಸರು ಹೊರಟಿರುವುದು ಖಂಡನೀಯ.

ಶ್ರೀಮಂತರಷ್ಟೇ ಇಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಾರೆಂದು ಪೊಲೀಸರು ಭಾವಿಸಿದ್ದಾರೆಯೇ? ಜನರ ಪ್ರತಿಭಟನೆಯ ದನಿಯನ್ನು ದಮನಿಸಲು ಸರ್ಕಾರವು ಪೊಲೀಸರನ್ನು ಬಳಸಿಕೊಳ್ಳುತ್ತಿದೆಯೇ? ರಾಜ್ಯದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿ ನಾಯಕರೂ ಜನರ ಹಕ್ಕೊತ್ತಾಯಗಳನ್ನು ಬೆಂಬಲಿಸಲು ಈ ಹಿಂದೆ ಇದೇ ಪುರಭವನದ ಮುಂದೆ ಪ್ರತಿಭಟನೆ ನಡೆಸಿದ್ದುದು ಅವರಿಗೆ ಮರೆತುಹೋಯಿತೇ? ಅಧಿಕಾರಕ್ಕೆ ಬಂದಾಕ್ಷಣ ಬಡವರು ಮತ್ತು ಶೋಷಿತರಿಗೆ ಪ್ರತಿಭಟನೆ ನಡೆಸುವ ಹಕ್ಕಿಲ್ಲ ಎಂದು ಇವರು ತೀರ್ಮಾನಿಸಿದ್ದಾರೆಯೇ?  ಪ್ರತಿಭಟನಕಾರರು ಹಿಂಸೆಯನ್ನು ಪ್ರಚೋದಿಸದಂತೆ ನೋಡಿಕೊಳ್ಳಲು ಬೇಕಾದಷ್ಟು ನಿಯಮಗಳಿವೆ. ಆದರೆ, ಪ್ರತಿಭಟನೆಯೇ ನಡೆಯದಂತೆ ನೋಡಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಅನುಮತಿಗೆ ಸಂಬಂಧಿಸಿದ ನಿಯಮಗಳನ್ನು ಪೊಲೀಸರು ಮನಬಂದಂತೆ ಪರಿಷ್ಕರಿಸುವುದು ಎಳ್ಳಷ್ಟೂ ಸರಿಯಲ್ಲ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಖುದ್ದಾಗಿ ಗಮನಹರಿಸಿ, ಪೊಲೀಸರ ಈ ಜನವಿರೋಧಿ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು