ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಜೆಡ್‌ ವ್ಯಾಪ್ತಿಗೆ ಕತ್ತರಿ ಪರಿಸರದ ನಿಷ್ಕಾಳಜಿಗೆ ನಿದರ್ಶನ

Last Updated 13 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಈ ಮೊದಲು ಗೊತ್ತುಮಾಡಿದ್ದ ‘ಪರಿಸರ ಸೂಕ್ಷ್ಮ ವಲಯ’ದ (ಇಎಸ್‌ಜೆಡ್‌) ವ್ಯಾಪ್ತಿಯನ್ನು 268.96 ಚದರ ಕಿಲೊಮೀಟರ್‌ನಿಂದ ಇದೀಗ 168.84 ಚದರ ಕಿಲೊಮೀಟರ್‌ಗೆ ಕುಗ್ಗಿಸಲಾಗಿದೆ. ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಸಂಬಂಧ ಅಂತಿಮ ಅಧಿಸೂಚನೆಯನ್ನು ಪ್ರಕಟಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪ್ರಭಾವವೂ ಕೆಲಸ ಮಾಡಿದೆ.

ಇಎಸ್‌ಜೆಡ್‌ ವ್ಯಾಪ್ತಿಯನ್ನು ನೂರು ಚದರ ಕಿ.ಮೀ.ನಷ್ಟು ಕಡಿಮೆ ಮಾಡುವಂತೆ ಆಗ್ರಹಿಸಿ ಕೇಂದ್ರ ಪರಿಸರ ಸಚಿವರಿಗೆ ಅವರೇ ಪತ್ರ ಬರೆದಿದ್ದರು. ಪಾಲಕನ ಸ್ಥಾನದಲ್ಲಿ ನಿಂತುಕೊಂಡು ಅರಣ್ಯದ ರಕ್ಷಣೆ ಮಾಡಬೇಕಿದ್ದ ಸರ್ಕಾರವೇ ಈ ರೀತಿ ಪರಿಸರದ ದುರ್ಬಳಕೆಗೆ ದಾರಿ ಮಾಡಿಕೊಡುವಂತಹ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ.

ಬೆಂಗಳೂರು ನಗರದ ಶ್ವಾಸಕೋಶ ಎನಿಸಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ. ತಮಿಳುನಾಡಿನ ಕೃಷ್ಣಗಿರಿ, ಹೊಸೂರು ಮತ್ತು ಕರ್ನಾಟಕದ ಕಾವೇರಿ ಅಭಯಾರಣ್ಯಗಳ ನಡುವಿನ ಕೊಂಡಿಯಾಗಿರುವ ಈ ಉದ್ಯಾನವು ದೇಶದ ಪ್ರಮುಖ ಆನೆ ಕಾರಿಡಾರ್‌ಗಳಲ್ಲಿ ಒಂದೆನಿಸಿದೆ. ಅಲ್ಲದೆ, ಚಿರತೆ, ಕರಡಿ, ಅಡವಿನಾಯಿ, ಕಡವೆ, ರಣಹದ್ದುಗಳಿಗೆ ಆವಾಸ ಕಲ್ಪಿಸಿರುವ ಅರಣ್ಯ ಪ್ರದೇಶವಿದು.

ಇಎಸ್‌ಜೆಡ್‌ ವ್ಯಾಪ್ತಿಯನ್ನು ಕುಗ್ಗಿಸುವುದರಿಂದ ಈ ಪರಿಸರದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಇನ್ನಷ್ಟು ಹೆಚ್ಚಿ, ಆನೆಪಥ ತುಂಡರಿಸಿ ಹೋಗಲಿದೆ. ಬನ್ನೇರುಘಟ್ಟ ಭಾಗದಲ್ಲಿ ಈಗಾಗಲೇ ಶುರುವಾಗಿರುವ ಮಾನವ–ಪ್ರಾಣಿ ಸಂಘರ್ಷವು ಈ ನಿರ್ಧಾರದಿಂದಾಗಿ ಮತ್ತಷ್ಟು ಹೆಚ್ಚಲಿದೆ ಎನ್ನುವ ಆತಂಕವನ್ನು ಪರಿಸರತಜ್ಞರು ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು 268.96 ಚದರ ಕಿ.ಮೀ. ಎಂದೇ ಗುರುತಿಸಲಾಗಿತ್ತು. ವ್ಯಾಪ್ತಿಯನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಸಲು 2017ರಲ್ಲಿ ಆಗಿನ ರಾಜ್ಯ ಸರ್ಕಾರದ ಸಂಪುಟ ಉಪಸಮಿತಿ ನಿರ್ಣಯ ಕೈಗೊಂಡಿತ್ತು. ಆಗ, ಈ ನಿರ್ಧಾರವನ್ನು ಬಿಜೆಪಿ ವಿರೋಧಿಸಿತ್ತು. ಈಗ ತನ್ನ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿರುವಾಗ ತದ್ವಿರುದ್ಧವಾದ ನಿಲುವು ತಾಳಿದ್ದು ಏಕೆ?

ಬೆಂಗಳೂರಿನಂತಹ ದೊಡ್ಡ ನಗರದ ಸರಹದ್ದಿ ನಲ್ಲೇ ಇರುವ ಈ ಉದ್ಯಾನದ ಪ್ರದೇಶದ ಮೇಲೆ ಭೂಗಳ್ಳರ ಕಣ್ಣು ನೆಟ್ಟಿರುವುದು ಸುಳ್ಳಲ್ಲ. ರೆಸಾರ್ಟ್‌ ಗಳನ್ನು ಮಾಡುವವರು, ಲೇಔಟ್‌ಗಳನ್ನು ನಿರ್ಮಿಸುವವರು ತುದಿಗಾಲ ಮೇಲೆಯೇ ನಿಂತಿ ದ್ದಾರೆ. ಉದ್ಯಾನದ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆದಿರುವ ಕುರಿತು ದೂರುಗಳೂ ಇವೆ.

ಇಎಸ್‌ಜೆಡ್‌ ವ್ಯಾಪ್ತಿ ಕುಗ್ಗಿದರೆ ಪರಿಸರ ಸೂಕ್ಷ್ಮ ಪ್ರದೇಶದಲ್ಲೂ ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚುವುದರಲ್ಲಿ ಯಾವ ಅನುಮಾನವೂ ಇಲ್ಲ. ರಾಜ್ಯದ ಹಲವು ಅರಣ್ಯ ಪ್ರದೇಶಗಳ ಸ್ಥಿತಿಯನ್ನೇ ಈ ನಿಟ್ಟಿನಲ್ಲಿ ಉದಾಹರಣೆಯಾಗಿ ನೋಡಬಹುದು. ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಇಎಸ್‌ಜೆಡ್‌ಗೆ ಸಂಬಂಧಿಸಿದಂತೆ ಸರಿಯಾದ ಪ್ರಸ್ತಾವವನ್ನೇ ಸಲ್ಲಿಸಿದ್ದರು. ಆದರೆ, ಅಧಿಕಾರಸ್ಥ ರಾಜಕಾರಣಿಗಳು ವಿವೇಚನೆ ಮರೆತರು.

‘ಇಎಸ್‌ಜೆಡ್‌ ವ್ಯಾಪ್ತಿಯನ್ನು ಕುಗ್ಗಿಸುವಲ್ಲಿ ರಿಯಲ್‌ ಎಸ್ಟೇಟ್‌ ಮಾಫಿಯಾದ ಕೈವಾಡವೂ ಇದೆ; ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಕುಳಗಳ ಒತ್ತಡಕ್ಕೂ ಸರ್ಕಾರ ಮಣಿದಂತಿದೆ’ ಎಂದು ಪರಿಸರ ಕಾರ್ಯಕರ್ತರು ಆರೋಪಿಸಿದ್ದಾರೆ. ಅದರಲ್ಲಿ ನಿಜಾಂಶ ಇಲ್ಲದೇ ಇಲ್ಲ. ಇಎಸ್‌ಜೆಡ್‌ನ ವ್ಯಾಪ್ತಿ ಕುಗ್ಗಿಸಲು ಈ ಹಿಂದಿನ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಾಗ ಅಬ್ಬರಿಸಿದ್ದ ಬಿಜೆಪಿ ಸಂಸದರು, ಈಗ ಮೌನಕ್ಕೆ ಶರಣಾಗಿರುವುದು ಸರಿಯಲ್ಲ.

ಆಗ ತಪ್ಪಾಗಿ ಕಂಡಿದ್ದ ಈ ನಿರ್ಧಾರವು ಈಗ ಸರಿ ಎನಿಸುವಂತಾಗಲು ಅಂತಹ ಯಾವ ಮಂತ್ರದಂಡ ಕೆಲಸ ಮಾಡಿದೆ? ರಾಜ್ಯ ಸರ್ಕಾರಕ್ಕೆ ಪರಿಸರದ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಇಎಸ್‌ಜೆಡ್‌ ವ್ಯಾಪ್ತಿಯನ್ನು ಮೊದಲಿನ ಪ್ರಮಾಣಕ್ಕೆ ಹೆಚ್ಚಿಸುವಂತೆ ಕೇಂದ್ರ ಪರಿಸರ ಸಚಿವಾಲಯವನ್ನು ಕೇಳಿಕೊಳ್ಳಬೇಕು. ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯದ ಯಾವುದೇ ಚಟುವಟಿಕೆಯು ಬನ್ನೇರುಘಟ್ಟ ಉದ್ಯಾನದ ಪರಿಸರದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು. ಪರಿಸರದ ಬೇಕಾಬಿಟ್ಟಿ ಬಳಕೆಗೆ ಅವಕಾಶ ಮಾಡಿಕೊಟ್ಟರೆ ಅದಕ್ಕೆ ಕಾರಣರಾದವರನ್ನು ಮುಂದಿನ ಪೀಳಿಗೆ ಎಂದಿಗೂ ಕ್ಷಮಿಸದು ಎಂಬುದನ್ನು ನೆನಪಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT