ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ನೆಲದಲ್ಲೂ ವಿಜೃಂಭಿಸಿದಾಖಲೆ ಬರೆದ ಕೊಹ್ಲಿ ಪಡೆ

Last Updated 7 ಜನವರಿ 2019, 20:28 IST
ಅಕ್ಷರ ಗಾತ್ರ

‘ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ’. ಭಾರತ ಕ್ರಿಕೆಟ್‌ ತಂಡವು ಬೇರೆ ದೇಶಗಳಲ್ಲಿ ಸರಣಿ ಆಡುವಾಗ ಕೇಳಿಬರುವ ವ್ಯಂಗ್ಯ ಇದು. ಆದರೆ ಈ ಬಾರಿ ಇದು ಸುಳ್ಳಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ 2–1ರಿಂದ ಸರಣಿ ಗೆದ್ದು ಹುಲಿಯಾಗಿದೆ. ಭಾರತದ ಆಟಗಾರರ ಆಲ್‌ರೌಂಡ್ ಆಟವು ಗಮನಸೆಳೆಯಿತು. ಏಳು ದಶಕಗಳ ಕನಸು ಈಗ ನನಸಾಗಿದೆ. 1948ರಲ್ಲಿ ಲಾಲಾ ಅಮರನಾಥ್ ನಾಯಕತ್ವದ ಭಾರತ ತಂಡವು ಮೊದಲಸಲ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡಿತ್ತು. ಅದರಲ್ಲಿ 4–0ಯಿಂದ ಆತಿಥೇಯರು ಗೆದ್ದಿದ್ದರು.

ಭಾರತ ಇಲ್ಲಿಯವರೆಗೆ 12 ಬಾರಿ ಪ್ರವಾಸ ಮಾಡಿದೆ. 1996–97ರಲ್ಲಿ ಉಭಯ ತಂಡಗಳ ನಡುವಣ ಟೆಸ್ಟ್ ಸರಣಿಗೆ ಬಾರ್ಡರ್‌–ಗಾವಸ್ಕರ್ ಹೆಸರು ಇಡಲಾಯಿತು. ಕಾಂಗರೂಗಳ ನಾಡಿನಲ್ಲಿ 2003–04ರಲ್ಲಿ ಸೌರವ್ ಗಂಗೂಲಿ ನಾಯಕತ್ವದ ತಂಡವು 1–1ರಿಂದ ಸರಣಿ ಡ್ರಾ ಮಾಡಿಕೊಂಡಿದ್ದು ಸಾಧನೆಯಾಗಿತ್ತು. ಬೇರೆ ದೇಶಗಳನ್ನು ಅವುಗಳ ನೆಲದಲ್ಲಿಯೇ ಸೋಲಿಸಿದ್ದ ದಾಖಲೆಗಳು ಇವೆ. ಆದರೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ಬಲಿಷ್ಠವಾಗಿರುವ ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿಯೇ ಸೋಲಿಸಿದ್ದು ಮಹಾಸಾಧನೆ. ಮನ್ಸೂರ್ ಅಲಿ ಖಾನ್ ಪಟೌಡಿ ಬಳಗವು 1967ರಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು, 1970–71ರಲ್ಲಿ ಅಜಿತ್ ವಾಡೇಕರ್ ಪಡೆಯು ಆಗಿನ ದೈತ್ಯ ವೆಸ್ಟ್ ಇಂಡೀಸ್, ಇಂಗ್ಲೆಂಡ್ ತಂಡಗಳನ್ನು ಅವರ ನೆಲದಲ್ಲಿಯೇ ಸೋಲಿಸಿತ್ತು. 1993ರಲ್ಲಿ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಪಡೆಯು ಶ್ರೀಲಂಕಾವನ್ನು, ಸೌರವ್ ಗಂಗೂಲಿ ಬಳಗವು 2000–01ರಲ್ಲಿ ಬಾಂಗ್ಲಾ ದೇಶವನ್ನು, 2003– 04ರಲ್ಲಿ ಪಾಕಿಸ್ತಾನವನ್ನು ಮತ್ತು 2005ರಲ್ಲಿ ಜಿಂಬಾಬ್ವೆಯನ್ನು ಅವರ ನೆಲದಲ್ಲೇ ಸೋಲಿಸಿ ಇತಿಹಾಸ ಬರೆದಿತ್ತು. ಪಾಕ್ ಎದುರಿನ ಸರಣಿಯ ಕೆಲವು ಪಂದ್ಯಗಳಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದು ಹೆಮ್ಮೆಯ ಸಂಗತಿ.

ಈ ಸರಣಿಯಲ್ಲಿಯೂ ಕರ್ನಾಟಕದವರ ಕಾಣಿಕೆ ಇದೆ. ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ ಮಯಂಕ್ ಅಗರವಾಲ್ ಮಿಂಚಿದರು. ಸಿಡ್ನಿ ಟೆಸ್ಟ್‌ನಲ್ಲಿಯೂ ಅರ್ಧಶತಕ ಹೊಡೆದರು. ಸೋಮವಾರ ವಿಜಯೋತ್ಸವದಲ್ಲಿ ನಾಯಕ ವಿರಾಟ್ ಅವರು ಮಯಂಕ್ ಕೈಗೆ ಟ್ರೋಫಿ ಕೊಟ್ಟಿದ್ದು, ತಂಡದಲ್ಲಿ ಯುವ ಆಟಗಾರರಿಗೆ ಸಿಗುತ್ತಿರುವ ಮನ್ನಣೆಯ ಪ್ರತೀಕವಾಗಿತ್ತು. ಸರಣಿ ಆರಂಭಕ್ಕೂ ಮುನ್ನ ಪೃಥ್ವಿ ಶಾ ಗಾಯಗೊಂಡಿದ್ದರಿಂದ ತಂಡಕ್ಕೆ ಉತ್ತಮ ಆರಂಭ ನೀಡುವ ಹೊಣೆ ಕೆ.ಎಲ್. ರಾಹುಲ್‌ಗೆ ಇತ್ತು. ಆದರೆ ಅವರು ಸತತ ವೈಫಲ್ಯ ಅನುಭವಿಸಿದರು. ಸೌರಾಷ್ಟ್ರದ ಚೇತೇಶ್ವರ ಪೂಜಾರ ಮಾತ್ರ ತಾವು ಗಟ್ಟಿಮುಟ್ಟಾದ ‘ಗೋಡೆ’ ಎಂದು ಸಾರಿ ಹೇಳಿದರು. ಮೂರು ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದರು. ಒಟ್ಟು 521 ರನ್‌ ಗಳಿಸಿದರು. ಯುವ ವಿಕೆಟ್‌ಕೀಪರ್ ರಿಷಭ್ ಪಂತ್ 350 ರನ್‌ ಕಲೆ ಹಾಕಿದರು. ಅವರ ಮತ್ತು ಟಿಮ್ ಪೇನ್ ನಡುವಣ ‘ಬೇಬಿಸಿಟ್ಟರ್’ ಘಟನೆಯು ಆಸ್ಟ್ರೇಲಿಯಾ ಪ್ರಧಾನಿಯ ಮನವನ್ನೂ ಗೆದ್ದಿತು. ರವೀಂದ್ರ ಜಡೇಜ ತಾನು ಶ್ರೇಷ್ಠ ಆಲ್‌ರೌಂಡರ್ ಎಂಬುದನ್ನು ಸಾಬೀತುಪಡಿಸಿದರು. ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಾದ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ತಂಡವು ನೈತಿಕವಾಗಿ ಕುಗ್ಗಿರುವುದರಿಂದ ಭಾರತಕ್ಕೆ ಗೆಲುವು ಸುಲಭ ಎಂದೂ ಕೆಲವರು ವಿಶ್ಲೇಷಿಸಿದ್ದರು. ಆದರೆ, ತಂಡಕ್ಕೆ ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪ್ಯಾಟ್ ಕಮಿನ್ಸ್, ನೇಥನ್ ಲಯನ್, ಮಿಷೆಲ್ ಸ್ಟಾರ್ಕ್ ಅವರಂತಹ ಅನುಭವಿಗಳ ಬಲ ಇತ್ತು. ಲಯನ್ ಸ್ಪಿನ್‌ ಮೋಡಿಯಲ್ಲಿ ಸಫಲರಾದರು. ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಗೆದ್ದಿತ್ತು. ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಭಾರತ ತಂಡ ಈ ಗೆಲುವಿನಿಂದ ಮೈಮರೆಯುವಂತಿಲ್ಲ. ಈ ತಿಂಗಳ 12ರಿಂದ ಆರಂಭವಾಗಲಿರುವ ಏಕದಿನ ಸರಣಿ, ನಂತರದ ನ್ಯೂಜಿಲೆಂಡ್ ಪ್ರವಾಸಗ
ಳಲ್ಲಿಯೂ ಜಯಿಸಬೇಕು. ಆ ಮೂಲಕ ಮೇ ತಿಂಗಳಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ರೂಪುಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT