ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೊರೊನಾ: ಇತರ ರೋಗಗಳ ಅವಗಣನೆ ಸಲ್ಲದು

Last Updated 9 ಜೂನ್ 2020, 1:12 IST
ಅಕ್ಷರ ಗಾತ್ರ

ಕೊರೊನಾ ಸೋಂಕು ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ದೇಶದ ವೈದ್ಯಕೀಯ ಕ್ಷೇತ್ರ ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಶಕ್ತಿಮೀರಿ ಶ್ರಮಿಸುತ್ತಿದೆ. ಸೋಂಕು ಹರಡುವುದನ್ನು ತಡೆಯಲುಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ತಮ್ಮ ಕೈಲಾದ ಪ್ರಯತ್ನಗಳನ್ನು ನಡೆಸುತ್ತಿವೆ. ಎಲ್ಲವೂ ಸ್ತುತ್ಯರ್ಹ. ಆದರೆ, ಕೊರೊನಾದ ಈ ಆರ್ಭಟದ ಮಧ್ಯೆ ಇತರ ರೋಗಗಳಿಂದ ತೊಂದರೆಗೆ ಒಳಗಾಗಿರುವವರನ್ನು ಕಡೆಗಣಿಸುವುದು, ನಿರ್ಲಕ್ಷಿಸುವುದು ಎಳ್ಳಷ್ಟೂ ಸರಿಯಲ್ಲ. ಈಗ ಯಾರಿಗೇ ಆದರೂ ಜ್ವರ ಮತ್ತು ಇತರ ಕಾಯಿಲೆಗಳು ಬಂತೆಂದರೆ ಹೆದರಿ ನಡುಗುವ ಪರಿಸ್ಥಿತಿ ಇದೆ.

ಏಕೆಂದರೆ, ಜ್ವರ ಅಂದರೆ ಕೊರೊನಾ ಎಂದು ತಪ್ಪಾಗಿ ಭಾವಿಸುವ ಪರಿಪಾಟ ಹೆಚ್ಚುತ್ತಿದೆ. ಜ್ವರ ಅಥವಾ ಇನ್ನಿತರ ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದರೂ ಹೆಚ್ಚಿನ ಆಸ್ಪತ್ರೆಗಳು ಅವರನ್ನು ಒಳರೋಗಿಯಾಗಿ ಸೇರಿಸಿಕೊಳ್ಳದಂತಹ ಸ್ಥಿತಿ ಉಂಟಾಗಿದೆ. ಇಂತಹ ರೋಗಿಗಳೂ ಮೊದಲು ಕೊರೊನಾಸೋಂಕು ತಪಾಸಣೆ ಮಾಡಿಸಿಕೊಳ್ಳಲು ನಿರ್ದಿಷ್ಟ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ತಪಾಸಣೆ ನಡೆಸಿ, ಅದು ಕೊರೊನಾ ಸೋಂಕಿನ ಜ್ವರ ಅಲ್ಲ, ಬೇರೆಯೇ ಜ್ವರ ಎನ್ನುವುದು ಸಾಬೀತಾದರೂ ಅವರನ್ನು ಒಳರೋಗಿಯಾಗಿ ಸೇರಿಸಿಕೊಂಡು ಚಿಕಿತ್ಸೆ ಕೊಡಲು ಕೆಲವು ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ ಎಂಬ ದೂರುಗಳಿವೆ. ಅನಾರೋಗ್ಯಕ್ಕೆ ಒಳಗಾದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆಗಳು ಅಷ್ಟಿಷ್ಟಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೆ ಜನರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವತ್ತ ಸರ್ಕಾರ ತಕ್ಷಣ ಗಮನ ಹರಿಸಬೇಕು. ಅಗತ್ಯ ಬಂದರೆ ಈಗಿರುವ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಬೇಕು.

ಕೋವಿಡ್ ಬಾಧಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಸಿಬ್ಬಂದಿಯನ್ನು ‘ಕೋವಿಡ್ ಹೋರಾಟಗಾರರು’ ಎಂದು ಗೌರವಿಸಿ ಇಡೀ ದೇಶ ಕೊಂಡಾಡುತ್ತಿದೆ. ವೈದ್ಯಸಮುದಾಯದ ಬಗ್ಗೆ ಎಲ್ಲೆಡೆ ಕೃತಜ್ಞತೆಯ ಭಾವವೂ ಇದೆ. ಪರಿಸ್ಥಿತಿ ಹೀಗಿರುವಾಗ ಕೆಲವು ಆಸ್ಪತ್ರೆಗಳಲ್ಲಿ ಮನುಷ್ಯತ್ವಕ್ಕೇ ಕಳಂಕ ಉಂಟುಮಾಡುವಂತಹ ಪ್ರಕರಣಗಳು ನಡೆಯುವುದಾದರೆ ಅವುಗಳನ್ನು ಸಹಿಸುವುದಾದರೂ ಹೇಗೆ? ಮಧ್ಯಪ್ರದೇಶದ ಶಾಜಾಪುರದ ಆಸ್ಪತ್ರೆಯೊಂದರಲ್ಲಿ ಮತ್ತು ಉತ್ತರಪ್ರದೇಶದ ನೊಯಿಡಾದಲ್ಲಿ ನಡೆದ ಎರಡು ದಾರುಣ ಪ್ರಕರಣಗಳು ದೇಶದ ಕೆಲವು ಆಸ್ಪತ್ರೆಗಳಲ್ಲಿ ಇರುವ ಅಮಾನವೀಯ ವ್ಯವಸ್ಥೆಗೆ ಕನ್ನಡಿ ಹಿಡಿದಿವೆ.

ಶಾಜಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೊಟ್ಟೆನೋವಿನ ಚಿಕಿತ್ಸೆಗೆಂದು ಸೇರಿದ್ದ 80 ವರ್ಷದ ಹಿರಿಯರೊಬ್ಬರನ್ನು ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಮಂಚಕ್ಕೆ ಹಗ್ಗದಿಂದ ಕಟ್ಟಿ ಹಾಕಿರುವ ವಿಡಿಯೊ ವೈರಲ್ ಆಗಿದೆ. ಇದು, ಅತ್ಯಂತ ಅಮಾನವೀಯ, ಖಂಡನಾರ್ಹ. ನೊಯಿಡಾದಲ್ಲಿ ಗರ್ಭಿಣಿಯೊಬ್ಬಳು ಚಿಕಿತ್ಸೆಗಾಗಿ ಸತತ 13 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿ ಕೊನೆಗೆ ಆಂಬುಲೆನ್ಸ್‌ನಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಗರ್ಭಿಣಿಯು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯೊಂದರ ಸಹಿತ ಒಟ್ಟು ಎಂಟು ಆಸ್ಪತ್ರೆಗಳಿಗೆ ಎಡತಾಕಿದರೂ ಅಲ್ಲಿ ಬೇರೆ ಬೇರೆ ಸಬೂಬುಗಳನ್ನು ಹೇಳಿ ಸೇರಿಸಿಕೊಳ್ಳಲು ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.ಇದು ಅಕ್ಷಮ್ಯ.

ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಇನ್ನೆಷ್ಟು ಪ್ರಕರಣಗಳು ಬೆಳಕಿಗೆ ಬಾರದೆ ಹೋಗುತ್ತಿವೆಯೋ ಗೊತ್ತಿಲ್ಲ. ಸ್ಥಳೀಯ ಜಿಲ್ಲಾ ಆಡಳಿತಗಳು ಈ ಘಟನೆಗಳ ಕುರಿತು ತನಿಖೆಗೆ ಆದೇಶಿಸಿವೆ. ಆದರೆ, ತನಿಖೆ ಎಂಬುದು ಕಣ್ಣೊರೆಸುವ ತಂತ್ರ ಆಗಬಾರದು. ರೋಗಿಗಳನ್ನು ಕಾಳಜಿಯಿಂದ ಉಪಚರಿಸಬೇಕಾದುದು ಆಸ್ಪತ್ರೆಗಳ ಕರ್ತವ್ಯ. ಹಣವೊಂದೇ ಮುಖ್ಯವಾಗಿ, ಅದು ರೋಗಿಗಳನ್ನು ಕಟ್ಟಿಹಾಕುವಂತಹ ಅಮಾನವೀಯ ರೂಪ ತಳೆಯುವುದು ಅತ್ಯಂತ ಹೇಯವಾದುದು. ರಾಜ್ಯ ಸರ್ಕಾರಗಳು ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಮೊಕದ್ದಮೆಗಳನ್ನು ಹೂಡಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.ಇಂತಹ ಮನೋಭಾವದ ಇತರರಿಗೂ ಇದೊಂದು ಪಾಠವಾಗಬೇಕು. ಇಂತಹ ಅಮಾನವೀಯ ಘಟನೆಗಳು ಮರುಕಳಿಸುವುದನ್ನು ಈ ಮೂಲಕ ತಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT