ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಗೂಗಲ್‌ಗೆ ಸಿಸಿಐ ಭಾರಿ ದಂಡ; ಸ್ಪರ್ಧಾತ್ಮಕತೆ ಉಳಿಸಲು ನೆರವು

Last Updated 28 ಅಕ್ಟೋಬರ್ 2022, 1:10 IST
ಅಕ್ಷರ ಗಾತ್ರ

ಆ್ಯಪ್‌ ಡೆವಲಪರ್‌ಗಳ ಜೊತೆಗಿನ ಸಂವಹನ ಪಾರದರ್ಶಕವಾಗಿ ನಡೆಯಬೇಕು, ಪಾವತಿಗೆ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿರಬೇಕು

ಮಾಹಿತಿ ತಂತ್ರಜ್ಞಾನ ವಲಯದ ಬೃಹತ್‌ ಕಂಪನಿ ಗೂಗಲ್‌ಗೆ ಭಾರಿ ಮೊತ್ತದ ದಂಡವನ್ನು ವಿಧಿಸುವ ಮೂಲಕ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಸ್ಪಷ್ಟ ಹಾಗೂ ಕಠಿಣ ಸಂದೇಶವೊಂದನ್ನು ರವಾನಿಸಿದೆ. ಮಾರುಕಟ್ಟೆಯಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ಗೂಗಲ್ ದುರುಪಯೋಗ ಮಾಡಿಕೊಳ್ಳುವುದರ ವಿರುದ್ಧದ ಸಂದೇಶ ಇದು.

ಆ್ಯಂಡ್ರಾಯ್ಡ್‌ ಮೊಬೈಲ್ ಕಾರ್ಯಾಚರಣೆ ವ್ಯವಸ್ಥೆ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಗೂಗಲ್ ಕಂಪನಿಗೆ ಸಿಸಿಐ ಅಕ್ಟೋಬರ್ 20ರಂದು ₹ 1,337.76 ಕೋಟಿ ದಂಡ ವಿಧಿಸಿತ್ತು. ಅಲ್ಲದೆ, ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುವುದರಿಂದ ದೂರವಿರಬೇಕು ಎಂದು ತಾಕೀತು ಮಾಡಿತ್ತು. ಕಂಪನಿಯು ನಿರ್ದಿಷ್ಟ ಅವಧಿಯೊಳಗೆ ತನ್ನ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಕೂಡ ಹೇಳಿತ್ತು.

ಆ್ಯಪ್‌ ಡೆವಲಪರ್‌ಗಳು ಪ್ಲೇಸ್ಟೋರ್‌ ಸೇವೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ವಿಚಾರದಲ್ಲಿ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಗೂಗಲ್ ಕಂಪನಿಯು ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಿಸಿಐ ಮತ್ತೆ ₹ 936.44 ಕೋಟಿ ದಂಡ ವಿಧಿಸಿದೆ. ಗೂಗಲ್‌ ಕಂಪನಿಗೆ ಸೇರಿಲ್ಲದ ಬಿಲ್ಲಿಂಗ್ ಮತ್ತು ಪಾವತಿ ಸೇವೆಗಳನ್ನು ಬಳಸಿಕೊಳ್ಳುವುದಕ್ಕೆ ಆ್ಯಪ್‌ ಡೆವಲಪರ್‌ಗಳಿಗೆ ನಿರ್ಬಂಧ ವಿಧಿಸಬಾರದು ಎಂದು ಕೂಡ ಸಿಸಿಐ ಈಗ ತಾಕೀತು ಮಾಡಿದೆ. ಕಂಪನಿಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಅವು ನ್ಯಾಯಸಮ್ಮತ ಆಗಿರಬೇಕು ಎಂಬ ಉದ್ದೇಶದಿಂದ ಸಿಸಿಐ ಹಲವು ಸೂಚನೆಗಳನ್ನು ನೀಡಿದೆ.

ಗೂಗಲ್ ಕಂಪನಿಯು ಏಕಸ್ವಾಮ್ಯದ ವರ್ತನೆಯನ್ನು ತೋರಿಸುತ್ತಿದೆ ಎಂಬ ದೂರುಗಳು ಹಿಂದಿನಿಂದಲೂ ಇವೆ. ಅಲ್ಲದೆ, ಇಂತಹ ವರ್ತನೆಗಳನ್ನು ನಿಯಂತ್ರಿಸಲು ದಂಡ ವಿಧಿಸಬೇಕು ಎಂಬ ಬೇಡಿಕೆಗಳೂ ಇವೆ. ಸ್ಮಾರ್ಟ್‌ಫೋನ್‌ಗಳ ಕಾರ್ಯಾಚರಣೆ ವ್ಯವಸ್ಥೆ ಹಾಗೂ ಪ್ಲೇಸ್ಟೋರ್‌ ವೇದಿಕೆಯನ್ನು ಒಂದಿಷ್ಟು ಮುಕ್ತವಾಗಿಸುವ ಕೆಲವು ಕ್ರಮಗಳನ್ನು ಕೈಗೊಳ್ಳಲು ಗೂಗಲ್ ಕಂಪನಿಗೆ ಈಗ ಸಿಸಿಐ ಸೂಚನೆ ನೀಡಿದೆ.

ಡಿಜಿಟಲ್ ಅರ್ಥ ವ್ಯವಸ್ಥೆಯಲ್ಲಿ ಏಕಸ್ವಾಮ್ಯದ ವರ್ತನೆಗೆ ನಿಯಂತ್ರಣ ಹಾಕುವಲ್ಲಿ ಸಿಸಿಐ ವಿಧಿಸಿರುವ ದಂಡ, ನೀಡಿರುವ ಸೂಚನೆಗಳು ಹಾಗೂ ಸೂಚನೆಗೆ ಅನುಗುಣವಾಗಿ ಗೂಗಲ್‌ ಕೈಗೊಳ್ಳಬಹುದಾದ ಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ. ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳ ಪ್ರಮಾಣವು ಸರಿಸುಮಾರು ಶೇಕಡ 96ರಷ್ಟು. ಸಿಸಿಐ ಈಗ ಕೈಗೊಂಡಿರುವ ತೀರ್ಮಾನದ ಪರಿಣಾಮ ಏನಿರಬಹುದು, ಅದರ ಮಹತ್ವ ಎಷ್ಟು ಎಂಬುದನ್ನು ಈ ಸಂಖ್ಯೆಯೇ ಹೇಳುತ್ತದೆ.

‘ಗೂಗಲ್ ಕಂಪನಿಯು ತನ್ನ ಜಾಹೀರಾತು ಆದಾಯವು ಯಾವ ಅಡಚಣೆಯೂ ಇಲ್ಲದೆ ಹೆಚ್ಚಾಗುವಂತಹ ರೀತಿಯಲ್ಲಿ ಮೊಬೈಲ್‌ ಆಧಾರಿತವಾದ ತನ್ನ ಇಂಟರ್ನೆಟ್ ಶೋಧ ಸೇವೆಗಳನ್ನು ಗ್ರಾಹಕರು ಬಳಸುವಂತೆ ಮಾಡಿದೆ’ ಎಂದು ಸಿಸಿಐ ಈಚೆಗಿನ ತನ್ನ ಆದೇಶದಲ್ಲಿ ಹೇಳಿದೆ. ಅಲ್ಲದೆ, ಹೀಗೆ ಮಾಡಿರುವುದು ‘ಇಂಟರ್ನೆಟ್ ಶೋಧ ಸೇವೆಗಳಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ರಕ್ಷಿಸಿಕೊಳ್ಳಲು ಮತ್ತು ಇನ್ನಷ್ಟು ಬಲಪಡಿಸಿಕೊಳ್ಳಲು. ಆ ಮೂಲಕ ಶೋಧ ಸೇವೆಗಳ ಜೊತೆಯಲ್ಲಿ ಬರುವ ಜಾಹೀರಾತಿನ ಆದಾಯವನ್ನು ರಕ್ಷಿಸಿಕೊಳ್ಳಲು ಮತ್ತುಗಟ್ಟಿಗೊಳಿಸಿಕೊಳ್ಳಲು’ ಎಂದು ಕೂಡ ಸಿಸಿಐ ಹೇಳಿದೆ. ತನ್ನ ವರ್ತನೆಯನ್ನು ಗೂಗಲ್ ತಿದ್ದಿಕೊಳ್ಳಬೇಕು, ಅಗತ್ಯ ಬದಲಾವಣೆಗಳನ್ನು ಮೂರು ತಿಂಗಳಲ್ಲಿ ತರಬೇಕು ಎಂದು ತಾಕೀತು ಮಾಡಿದೆ.

₹ 936 ಕೋಟಿ ದಂಡ ವಿಧಿಸಿರುವ ಈಚಿನ ಆದೇಶದಲ್ಲಿ ಸಿಸಿಐ, ಬಿಲ್ಲಿಂಗ್ ಮತ್ತು ಪಾವತಿ ಸೇವೆಗಳ ವಿಚಾರದಲ್ಲಿ ನ್ಯಾಯಸಮ್ಮತ ಅಲ್ಲದ ವ್ಯವಹಾರಗಳನ್ನು ಗೂಗಲ್ ನಿಲ್ಲಿಸಬೇಕು ಎಂದು ಸೂಚಿಸಿದೆ. ಸ್ಪರ್ಧಾತ್ಮಕತೆಗೆ ವಿರುದ್ಧವಾಗಿರುವ ನಡೆಗಳನ್ನು ತಿದ್ದಿಕೊಳ್ಳಲು ಕೆಲವು ಕ್ರಮಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳಬೇಕು ಎಂದು ಹೇಳಿದೆ. ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಗೂಗಲ್ ಕಂಪನಿಯು ಯಾವುದೇ ಆ್ಯಪ್‌ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಹಾಗೂ ಆ್ಯಪ್‌ಗಳ ವಿರುದ್ಧ ತಾರತಮ್ಯದ ನಡೆ ಅನುಸರಿಸುವಂತೆ ಇಲ್ಲ.

ಆ್ಯಪ್‌ ಡೆವಲಪರ್‌ಗಳ ಜೊತೆಗಿನ ಮಾತುಕತೆಗಳು, ಸಂವಹನಗಳುಪಾರದರ್ಶಕವಾಗಿ ನಡೆಯಬೇಕು, ಪಾವತಿಗೆ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿರಬೇಕು. ಗೂಗಲ್‌ನಂತಹ ದೈತ್ಯ ಕಂಪನಿಯು ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ, ಸ್ಪರ್ಧಾತ್ಮಕತೆಗೆ ಧಕ್ಕೆ ತರುವುದಿಲ್ಲ ಎಂಬುದನ್ನು ಖಾತರಿಪಡಿಸಲು ಇಂತಹ ಕ್ರಮಗಳ ಅಗತ್ಯ ಇದೆ. ಸಿಸಿಐ ಆದೇಶವು ಬಹಳ ದೊಡ್ಡ ಹಿನ್ನಡೆ ಎಂದು ಗೂಗಲ್ ಪ್ರತಿಕ್ರಿಯೆ ನೀಡಿದೆ. ಹಾಗೆಯೇ, ಮೊಬೈಲ್‌ ಸಾಧನಗಳ ಬೆಲೆ ಏರಿಕೆಗೆ ಇದು ಕಾರಣವಾಗುತ್ತದೆ ಎಂದು ಕೂಡ ಅದು ಹೇಳಿದೆ. ಆದರೆ ತನಿಖೆಯ ನಂತರದಲ್ಲಿ ಬಂದಿರುವ ಸಿಸಿಐ ಆದೇಶವು ಅದರ ಉದ್ದೇಶ ಮತ್ತು ಅದು ಬೀರಬಹುದಾದ ಪರಿಣಾಮದ ಕಾರಣದಿಂದಾಗಿ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT