ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಅನಧಿಕೃತ ಜಾಹೀರಾತು ಹಾವಳಿ: ಶಾಶ್ವತವಾಗಿ ಕೊನೆಯಾಗಲಿ

Published 4 ಆಗಸ್ಟ್ 2023, 0:29 IST
Last Updated 4 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಯಾರು ಯಾವಾಗ ಬೇಕಾದರೂ ಜಾಹೀರಾತು, ಫ್ಲೆಕ್ಸ್‌ ಪ್ರದರ್ಶಿಸಬಹುದು ಎನ್ನುವಂತಹ ವಾತಾವರಣವಿದೆ. ರಾಜಕೀಯ ಪುಢಾರಿಗಳಂತೂ ಸಾರ್ವಜನಿಕ ಸ್ಥಳಗಳೆಲ್ಲವೂ ತಮ್ಮ ಸ್ವಂತ ಜಾಗ ಎಂಬಂತೆ ಮನ ಬಂದಲ್ಲೆಲ್ಲ ಜಾಹೀರಾತು ಫಲಕಗಳನ್ನು ಅಳವಡಿಸುತ್ತಿದ್ದಾರೆ. ನಾಯಕರ ಜನ್ಮದಿನಕ್ಕೆ ಶುಭಕೋರುವುದರಿಂದ ಹಿಡಿದು, ಸಣ್ಣ ಪುಟ್ಟ ಕಾರ್ಯಕ್ರಮಗಳ ಮಾಹಿತಿ ನೀಡುವವರೆಗೆ ರಸ್ತೆಯ ಇಕ್ಕೆಲಗಳಲ್ಲೂ ಬಣ್ಣ ಬಣ್ಣದ ಫಲಕಗಳನ್ನು ಅಳವಡಿಸುವುದಂತೂ ಶೋಕಿ ಆಗಿಬಿಟ್ಟಿದೆ. ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಾಗಿರುವುದನ್ನು ಕಂಡು ಬೇಸತ್ತ ಹೈಕೋರ್ಟ್‌, ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಕಿಡಿಕಾರಿದೆ.

‘ಇನ್ನು ಮುಂದೆ ನಗರದಲ್ಲಿ ಅಳವಡಿಸಲಾಗುವ ಪ್ರತಿಯೊಂದು ಅನಧಿಕೃತ ಜಾಹೀರಾತು ಫಲಕಕ್ಕೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಲಾ ₹ 50 ಸಾವಿರವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕಾಗುತ್ತದೆ’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ. ರಾಜ್ಯದ ರಾಜಧಾನಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವೇ ಸರಿ. ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಿಸಲು ಬಿಬಿಎಂಪಿಯೇ ರೂಪಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಿದ್ದರೆ, ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಅಧಿಕಾರಿಗಳಿಗೆ ಬರುತ್ತಿರಲಿಲ್ಲ. 

ಹೈಕೋರ್ಟ್, 2018ರ ಆಗಸ್ಟ್‌ನಲ್ಲೂ ಬೆಂಗಳೂರಿನ ಅನಧಿಕೃತ ಹೊರಾಂಗಣ ಜಾಹೀರಾತುಗಳ ವಿಚಾರವಾಗಿ ಬಿಬಿಎಂಪಿಗೆ ಚಾಟಿ ಬೀಸಿತ್ತು. ಅದರ ಪರಿಣಾಮವಾಗಿ ಇಡೀ ನಗರದ ಅಷ್ಟೂ ಅನಧಿಕೃತ ಜಾಹೀರಾತು ಫಲಕಗಳನ್ನು ಅಧಿಕಾರಿಗಳು ಒಂದೇ ವಾರದಲ್ಲಿ ತೆರವುಗೊಳಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಬಿಬಿಎಂಪಿ ಕೌನ್ಸಿಲ್‌ ಸಭೆಯು ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ- 2018’ ಅನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಬೆಂಗಳೂರಿನಲ್ಲಿ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳನ್ನು ನಿರ್ಬಂಧಿಸಿದ್ದ ಈ ನಿಯಮವು ಸರ್ಕಾರದ ಅನುಮೋದನೆ ಪಡೆದು ಜಾರಿಯೂ ಆಗಿತ್ತು. ಈ ಎಲ್ಲ ಬೆಳವಣಿಗೆಗಳು ನಡೆದು ಐದು ವರ್ಷ ಕಳೆಯುವಷ್ಟರಲ್ಲಿ ಮತ್ತೆ ಅನಧಿಕೃತ ಜಾಹೀರಾತುಗಳ ಹಾವಳಿ ವಿಪರೀತಕ್ಕೆ ಹೋಗಿದೆ. ಇದಕ್ಕೆ ಸರ್ಕಾರವು 2021ರ ಜುಲೈನಲ್ಲಿ ಜಾರಿಗೊಳಿಸಿದ ‘ಬಿಬಿಎಂಪಿ ಜಾಹೀರಾತು ನಿಯಮ– 2019’ ಕೂಡ ಕಾರಣ.

ಇದನ್ನು ಜಾರಿಗೊಳಿಸುವಾಗ ಬೆಂಗಳೂರಿನಲ್ಲಿ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳ ಅಳವಡಿಕೆಗೆ ಇದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿತ್ತು. ನಿರ್ದಿಷ್ಟ ಎತ್ತರದವರೆಗಿನ ಹೋರ್ಡಿಂಗ್‌ಗಳ ಅಳವಡಿಕೆಗೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಬಿಬಿಎಂಪಿಯಿಂದ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶಿಸುವುದಕ್ಕೆ ಈಗಲೂ ಅವಕಾಶವಿಲ್ಲ. ಆದರೂ ಅನಧಿಕೃತ ಜಾಹೀರಾತುಗಳಂತೂ ನಗರದಾದ್ಯಂತ ಕಣ್ಣಿಗೆ ರಾಚುವಂತೆ ಕಾಣಿಸುತ್ತಿವೆ. ನಾಲ್ಕು ತಿಂಗಳುಗಳಿಂದ ಈಚೆಗೆ ಅನಧಿಕೃತವಾಗಿ ಸುಮಾರು 60 ಸಾವಿರ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದ್ದರೂ ಬರೀ 134 ದೂರುಗಳು ದಾಖಲಾಗಿವೆ. ಅದರಲ್ಲೂ ಎಫ್‌ಐಆರ್ ದಾಖಲಿಸಿರುವುದು 40 ಪ್ರಕರಣಗಳಲ್ಲಿ ಮಾತ್ರ. ಜಾಹೀರಾತು ಹಾವಳಿಯ ನಿಯಂತ್ರಣದ ಬಗ್ಗೆ ಅಧಿಕಾರಿಗಳಿಗೆ ಎಷ್ಟರಮಟ್ಟಿಗೆ ಕಾಳಜಿ ಇದೆ ಎಂಬುದು ಇದರಿಂದ ಸ್ಪಷ್ಟ. ಸಾರ್ವಜನಿಕರಿಂದ ದೂರು ಬಂದ ಬಳಿಕವೂ ಅನಧಿಕೃತ ಜಾಹೀರಾತುಗಳ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳದ ಬಹಳಷ್ಟು ಉದಾಹರಣೆಗಳಿವೆ. ರಾಜಕಾರಣಿಗಳ ಬೆಂಬಲಿಗರು ಅಥವಾ ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಗಳೇ ಇಂತಹ ಉಲ್ಲಂಘನೆ ನಡೆಸುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ತಡೆಯುವಲ್ಲಿ ಬಿಬಿಎಂಪಿ ಅಧಿಕಾರಿಗಳು ಅಸಹಾಯಕರಾಗುವುದಕ್ಕೆ ಇದು ಕೂಡಾ ಕಾರಣ.

ಬೆಂಗಳೂರಿನ ಕೆಲವು ಜಂಕ್ಷನ್‌ಗಳ ಬಳಿ ಇರುವ ಜಾಹೀರಾತು ಫಲಕಗಳು ವಾಹನ ಸವಾರರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿವೆ. ಇನ್ನು ಕೆಲವು ಕಡೆ ಹೋರ್ಡಿಂಗ್‌ಗಳಿಗೆ ಅಡ್ಡವಾಗುತ್ತವೆ ಎಂಬ ಕಾರಣಕ್ಕೆ ಮರಗಳನ್ನು ಹಾಗೂ ಕೊಂಬೆಗಳನ್ನು ಕಡಿದ ಪ್ರಸಂಗಗಳೂ ಇವೆ. ಕಾರ್ಯಕ್ರಮ ಪ್ರಚಾರದ ಸಲುವಾಗಿ ಅಳವಡಿಸುವ ಜಾಹೀರಾತು ಫಲಕಗಳು, ಕಾರ್ಯಕ್ರಮ ಮುಗಿದು ತಿಂಗಳು ಉರುಳಿದರೂ ತೆರವಾಗುವುದೇ ಇಲ್ಲ. ಇವುಗಳಿಂದ ನಗರದ ಸೌಂದರ್ಯ ಹಾಳಾಗುವುದರ ಜೊತೆಗೆ ಕಸದ ಸಮಸ್ಯೆಯೂ ಉಲ್ಬಣವಾಗುತ್ತಿದೆ. ಈಗಲಾದರೂ ಸರ್ಕಾರ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕ ಪ್ರದೇಶಗಳನ್ನು ಕುರೂಪಗೊಳಿಸುವಂತಹ ಅನಧಿಕೃತ ಜಾಹೀರಾತುಗಳ ಅಳವಡಿಕೆ ತಡೆಯಲು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು.

ಮಹಾನಗರವನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕಾದ ಹೊಣೆ ಹೊತ್ತ ಬಿಬಿಎಂಪಿ ಅಧಿಕಾರಿಗಳು ಈ ಕರ್ತವ್ಯಪಾಲನೆಯಲ್ಲಿ ವಿಫಲರಾದರೆ ಅವರಿಗೂ ದಂಡ ವಿಧಿಸಿ, ಅವರನ್ನು ಶಿಸ್ತುಕ್ರಮಕ್ಕೆ ಒಳಪಡಿಸಲು ಅವಕಾಶ ಕಲ್ಪಿಸುವಂತೆ ನಿಯಮಗಳಿಗೆ ತಿದ್ದುಪಡಿ ತರಬೇಕು. ಅನಧಿಕೃತ ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಬಿಬಿಎಂಪಿಗೆ ಆನ್‌ಲೈನ್‌ನಲ್ಲೇ ದೂರು ನೀಡಲು ಮತ್ತು ಅವುಗಳನ್ನು ತೆರವುಗೊಳಿಸಿದ ಬಗ್ಗೆ ದೂರುದಾರರಿಗೆ ಮಾಹಿತಿ ನೀಡುವುದನ್ನು ಖಾತರಿಪಡಿಸಲು ವ್ಯವಸ್ಥೆ ರೂಪಿಸಬೇಕು. ಅನಧಿಕೃತ ಜಾಹೀರಾತುಗಳ ಹಾವಳಿಯನ್ನು ಶಾಶ್ವತವಾಗಿ ಕೊನೆಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT