ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಳೆಹಾನಿ: ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ, ತಕ್ಷಣ ಪರಿಹಾರ ಕೊಡಿ

Last Updated 4 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರವು ಚುರುಕು ಮುಟ್ಟಿಸಬೇಕು. ಸಂತ್ರಸ್ತರಿಗೆ ಆಸರೆಯಾಗಿ ನಿಲ್ಲಬೇಕು. ಜನಪ್ರತಿನಿಧಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಗಳ ನಿಗಾ ವಹಿಸಬೇಕು

ಅಧಿಕ ಮಳೆ, ಉಕ್ಕಿ ಹರಿಯುತ್ತಿರುವ ನದಿ–ಹಳ್ಳಗಳು ಹಾಗೂ ಭೂಕುಸಿತದಿಂದ ಆಗಿರುವ ಹಾನಿಗೆ ಅರ್ಧ ರಾಜ್ಯ ನಲುಗಿದೆ. ಮಳೆ ಬಂದು ಹಾನಿ ಸಂಭವಿಸಿದಾಗಷ್ಟೆ ಎಚ್ಚೆತ್ತುಕೊಳ್ಳುವ ಸರ್ಕಾರದ ನಡೆಯಿಂದಾಗಿ ಜನ ಸಂಕಷ್ಟ ಅನುಭವಿಸುವಂತಾಗಿದೆ.

ಮಳೆಯಿಂದಾಗಿ 64 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.18,280 ಹೆಕ್ಟೇರ್ ಕೃಷಿ ಬೆಳೆ, 4,565 ಹೆಕ್ಟೇರ್ ತೋಟಗಾರಿಕೆ ಬೆಳೆ, 1,730 ಕಿ.ಮೀ. ಲೋಕೋ‍ಪಯೋಗಿ ರಸ್ತೆ, 5,419 ಗ್ರಾಮೀಣ ರಸ್ತೆಗಳು, 899 ಕಿರು ಸೇತುವೆಗಳು, 4,324 ಶಾಲೆಗಳು, 55 ಆರೋಗ್ಯ ಕೇಂದ್ರಗಳು, 2,146 ಅಂಗನವಾಡಿಗಳು, 16,510 ವಿದ್ಯುತ್ ಕಂಬಗಳು, 1,880 ವಿದ್ಯುತ್ ಪರಿವರ್ತಕಗಳು ಹಾಗೂ 61 ಕೆರೆಗಳು ಹಾನಿಗೊಳಗಾಗಿವೆ. 8,057 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ 6,933 ಮಂದಿ ನೆಲೆ ಕಂಡುಕೊಂಡಿದ್ದಾರೆ ಎಂದುಕಂದಾಯ ಸಚಿವ ಆರ್. ಅಶೋಕ ಅವರು ಮಾಹಿತಿ ನೀಡಿದ್ದಾರೆ.

ಇವಿಷ್ಟೂ ಸರ್ಕಾರ ಕೊಟ್ಟ ಲೆಕ್ಕ. ಲೆಕ್ಕಕ್ಕೆ ಸಿಗದೇ ಇರುವ ಸಾವು–ನೋವು ಮತ್ತು ನಷ್ಟದ ಪ್ರಮಾಣ ಹಲವು ಪಟ್ಟು ಹೆಚ್ಚು ಇದ್ದಿರುವ ಸಾಧ್ಯತೆ ಇದೆ. ‘ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಸಾಕಷ್ಟು ಹಣವಿದೆ. ಪರಿಹಾರ ಕಾರ್ಯಕ್ಕೆ ತೊಂದರೆ ಇಲ್ಲ’ ಎನ್ನುವುದು ಮಳೆಯಿಂದ ಹಾನಿ ಸಂಭವಿಸಿದ ಕೂಡಲೇ ಸರ್ಕಾರ ನಡೆಸುವವರು ಹೇಳುವ ಮಾತು. ಜನರ ತೊಂದರೆ ಪರಿಹರಿಸಲು ಹಣವೊಂದೇ ಸಾಲದು. ಜನರ ನೋವಿಗೆ ಮಿಡಿಯುವ ಮನಃಸ್ಥಿತಿ, ತಕ್ಷಣಕ್ಕೆ ಬೇಕಾದ ಆಶ್ರಯ, ಆಹಾರ, ಹೊದಿಕೆ ಮತ್ತು ಮಕ್ಕಳ ಓದಿಗೆ ಅಗತ್ಯವಾದ ನೆರವನ್ನು ಸಕಾಲದಲ್ಲಿ ಒದಗಿಸುವ ಬದ್ಧತೆ ಕೂಡ ಅಗತ್ಯ.

2019ರಲ್ಲಿ ಹೀಗೆಯೇ ಹಾನಿಯಾದಾಗ ಮುಖ್ಯಮಂತ್ರಿಯಾಗಿದ್ದವರು ಬಿ.ಎಸ್. ಯಡಿಯೂರಪ್ಪ. ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ವರಿಷ್ಠರು ಅವಕಾಶ ಕೊಟ್ಟಿರಲಿಲ್ಲ. ಅವರು ಏಕಾಂಗಿಯಾಗಿ ರಾಜ್ಯ ಸುತ್ತಿದ್ದರು. ಹಾನಿ ಪ್ರದೇಶಗಳಿಗೆ ದಕ್ಷ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಸಂಕಷ್ಟದಲ್ಲಿದ್ದವರಿಗೆ ತಕ್ಷಣವೇ ಪರಿಹಾರ ತಲುಪುವಂತೆ ನೋಡಿಕೊಂಡಿದ್ದರು. ಮಳೆ–ಪ್ರವಾಹ ಇಳಿಯುವವರೆಗೆ ಜಿಲ್ಲೆಯಲ್ಲೇ ಮೊಕ್ಕಾಂ ಮಾಡಿ, ಪರಿಹಾರ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುವಂತೆ ಉಸ್ತುವಾರಿ ಸಚಿವರಿಗೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದವರು ತಾಕೀತು ಮಾಡಿದ್ದರು.

ಪರಿಹಾರದ ನಿರ್ಣಾಯಕ ಅಧಿಕಾರವನ್ನೂ ಅವರಿಗೇ ಕೊಟ್ಟಿದ್ದರು. ಅದರಿಂದಾಗಿ ಪರಿಹಾರ ಕೆಲಸಗಳು ತುಸು ವೇಗ ಪಡೆದುಕೊಳ್ಳಲು ಸಾಧ್ಯವಾಗಿತ್ತು. ಸಂತ್ರಸ್ತರಲ್ಲಿ ಒಂದಷ್ಟು ವಿಶ್ವಾಸ ಮೂಡಿಸುವಲ್ಲಿಯೂ ಈ ಉಪಕ್ರಮ ನೆರವಾಗಿತ್ತು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಈಗ ಪರಿಶೀಲನೆ ನಡೆಸಿದ್ದಾರೆ. ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯಲ್ಲೇ ಮೊಕ್ಕಾಂ ಮಾಡಿ ಪರಿಹಾರ ಕಾರ್ಯಗಳ ಮೇಲೆ ನಿಗಾ ಇಟ್ಟ ವಿವರಗಳು ಇಲ್ಲ. ಜಿಲ್ಲೆಯಲ್ಲಿ ಮೊಕ್ಕಾಂ ಹೂಡುವಂತೆ ಮುಖ್ಯಮಂತ್ರಿ ಸೂಚಿಸಿದರೂ ಕೆಲವರು ಇದನ್ನು ಪಾಲಿಸಿಲ್ಲ. ಇನ್ನು ಕೆಲವರು ಅತಿಥಿಗಳಂತೆ ಜಿಲ್ಲೆಗೆ ಹೋಗಿ ಬರುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ವಿಚಾರದಲ್ಲಿ ಅಸಡ್ಡೆ ತೋರುವುದು ಸರಿಯಲ್ಲ.

ಮಳೆ– ಪ್ರವಾಹದಿಂದ ಹಾನಿ ಆಗುವುದು ಹೊಸತೇನೂ ಅಲ್ಲ. ಸರ್ಕಾರದ ಅಂದಾಜಿನಂತೆ, 2019ರಿಂದ 2021ರವರೆಗೆ ಮೂರು ವರ್ಷಗಳಲ್ಲಿ ಮಳೆಯಿಂದ ಆಗಿರುವ ಒಟ್ಟಾರೆ ನಷ್ಟ ₹ 2 ಲಕ್ಷ ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಪ್ರಕಾರ ಸುಮಾರು ₹ 55 ಸಾವಿರ ಕೋಟಿ
ಯಷ್ಟು ನಷ್ಟವು ಬೆಳೆ ಹಾಗೂ ಮನೆಗಳ ಹಾನಿಯಿಂದ ಆಗಿದೆ.

ಕೇಂದ್ರ ಸರ್ಕಾರವು ಸುಮಾರು ₹ 4,200 ಕೋಟಿಯಷ್ಟು ಪರಿಹಾರವನ್ನು ರಾಜ್ಯಕ್ಕೆ ನೀಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಕಷ್ಟಕ್ಕೆ ಹೆಗಲುಕೊಟ್ಟು, ಆಸರೆಯಾಗಬೇಕಾದ ಕೇಂದ್ರ ಸರ್ಕಾರವು ಇದರಿಂದ ನುಣುಚಿಕೊಳ್ಳುತ್ತಲೇ ಇದೆ. ಕೃಷಿ ಉತ್ಪನ್ನ ಹಾಗೂ ನಿರ್ಮಾಣ ಸಾಮಗ್ರಿಯ ಬೆಲೆ ಏರಿಳಿತ ಆಧರಿಸಿ ಪ್ರತೀ ಐದು ವರ್ಷಗಳಿಗೊಮ್ಮೆ ಪರಿಹಾರದ ಮೊತ್ತ ಪರಿಷ್ಕರಣೆಯಾಗಬೇಕು. 2015ರಲ್ಲಿ ಪರಿಷ್ಕರಣೆಯಾಗಿದ್ದ ಈ ದರ, 2020ಕ್ಕೆ ಪರಿಷ್ಕರಣೆ ಆಗಬೇಕಿತ್ತು.

ಅವಧಿ ಮುಗಿದು ಎರಡು ವರ್ಷಗಳಾದರೂ ಪರಿಹಾರ ಮೊತ್ತವನ್ನು ಪರಿಷ್ಕರಣೆ ಮಾಡುವ ಕುರಿತು ಕೇಂದ್ರ ಆಸಕ್ತಿ ತೋರಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಗಳ ಸಾಲದ ಮೊತ್ತ ಹೆಚ್ಚುತ್ತಿದೆ. 15ನೇ ಹಣಕಾಸು ಆಯೋಗದ ಪ್ರಾಥಮಿಕ ವರದಿಯಲ್ಲಿ ಕರ್ನಾಟಕವು ಪ್ರವಾಹಪೀಡಿತ ರಾಜ್ಯಗಳಲ್ಲಿ ಒಂದು ಎಂದು ಉಲ್ಲೇಖಗೊಂಡಿತ್ತು. ಅನುದಾನ ನಿಗದಿ ಮಾಡುವಾಗ ಹೆಚ್ಚಿನ ಆದ್ಯತೆ ನೀಡಬೇಕು ಎಂದಿತ್ತು. ಪ್ರಾಕೃತಿಕ ವಿಕೋಪ ಮತ್ತು ಇತರ ವೆಚ್ಚಗಳಿಗಾಗಿ ಕರ್ನಾಟಕಕ್ಕೆ ಒಟ್ಟಾರೆ ₹5,495 ಕೋಟಿ ನೆರವು ನೀಡಬೇಕು ಎಂಬ ಶಿಫಾರಸು ಮಧ್ಯಂತರ ವರದಿಯಲ್ಲಿಯೂ ಇತ್ತು.

ಅಂತಿಮ ವರದಿಯಲ್ಲಿ ಇದು ಕಾಣೆಯಾಗಿದೆ. ರಾಜ್ಯಗಳಲ್ಲಿನ ಮಳೆಹಾನಿ ಪರಿಶೀಲಿಸಿ ಪರಿಹಾರ ಕೊಡಿಸುವ ಹೊಣೆ ಕೇಂದ್ರ ಗೃಹ ಸಚಿವರದ್ದಾಗಿದೆ. ಅಮಿತ್ ಶಾ ಅವರು ಉದ್ಯಮಿಗಳ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಈ ಸಂಕಟದ ಹೊತ್ತಿನಲ್ಲೇ ಕರ್ನಾಟಕಕ್ಕೆ ಬಂದಿದ್ದರು. ಇದರೊಂದಿಗೆ ಪ್ರವಾಹಪೀಡಿತ ಪ್ರದೇಶಗಳಿಗೂ ಅವರು ಭೇಟಿ ನೀಡಬಹುದಿತ್ತು. ಅದು ಆಗಲಿಲ್ಲ. ಇದೇನೇ ಇರಲಿ, ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರವು ಚುರುಕು ಮುಟ್ಟಿಸಬೇಕು. ಸಂತ್ರಸ್ತರಿಗೆ ಆಸರೆಯಾಗಿ ನಿಲ್ಲಬೇಕು. ಅಲ್ಲದೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಪಾಲನ್ನು ಪಡೆಯಲು ಒತ್ತಡ ಹೇರುವ ಕೆಲಸವೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT