ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌– ವಕೀಲರ ಸಂಘರ್ಷ ಶಮನಕ್ಕೆ ತ್ವರಿತ ಕ್ರಮ ಅಗತ್ಯ

Last Updated 6 ನವೆಂಬರ್ 2019, 20:30 IST
ಅಕ್ಷರ ಗಾತ್ರ

ದೇಶದ ರಾಜಧಾನಿ ದೆಹಲಿಯಲ್ಲಿ ಪೊಲೀಸರು ಮತ್ತು ವಕೀಲರ ಮಧ್ಯೆ ಶನಿವಾರ ನಡೆದ ಸಂಘರ್ಷ ಆತಂಕ ಉಂಟುಮಾಡುವಂತಹುದು. ತೀಸ್‌ ಹಜಾರಿ ಕೋರ್ಟ್‌ ಹೊರಗಡೆ ನಡೆದ ಈ ಘರ್ಷಣೆಗೆ ವಾಹನ ನಿಲುಗಡೆ ಕುರಿತ ವಿವಾದವೇ ಕಾರಣ ಎಂದು ವರದಿಯಾಗಿದೆ. ಘರ್ಷಣೆಯಲ್ಲಿ ಹಲವು ವಕೀಲರು, ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸಂಯಮದಿಂದ ಬಗೆಹರಿಸಬಹುದಾಗಿದ್ದ ಕ್ಷುಲ್ಲಕ ವಿವಾದವೊಂದು ಗಂಭೀರ ಸ್ವರೂಪ ಪಡೆದುಕೊಂಡಿರುವುದು ವಿಷಾದದ ಸಂಗತಿ.

ಶನಿವಾರ ಘರ್ಷಣೆಯ ಬಳಿಕ ಪೊಲೀಸರು ಲಾಠಿಪ್ರಹಾರ ಮತ್ತು ಗೋಲಿಬಾರ್‌ ಮಾಡಿದ್ದು, ಒಬ್ಬ ವಕೀಲರಿಗೆ ಗಾಯವಾಗಿದೆ. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಕೀಲರು ಬೀದಿಗೆ ಇಳಿದಿದ್ದಾರೆ. ದೆಹಲಿಯ ಜಿಲ್ಲಾ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿದ್ದಾರೆ. ಇದರಿಂದಾಗಿ, ಕಕ್ಷಿದಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಒಂದೆಡೆ ವಕೀಲರೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಯ ಬೆದರಿಕೆ ಒಡ್ಡಿದರೆ, ಇನ್ನೊಂದೆಡೆ ವಕೀಲರೊಬ್ಬರು ಕೋರ್ಟ್‌ ಕಟ್ಟಡದ ಮೇಲೆ ಹತ್ತಿ ಜಿಗಿಯುವ ಬೆದರಿಕೆ ಹಾಕಿದ್ದೂ ವರದಿಯಾಗಿದೆ.

ಶನಿವಾರದ ಘರ್ಷಣೆಯ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಆದೇಶದ ಮೇರೆಗೆ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಲಾಗಿದೆ. ಈ ಮಧ್ಯೆ, ಸಾಕೇತ್‌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಪೊಲೀಸರೊಬ್ಬರ ಮೇಲೆ ವಕೀಲರು ಹಲ್ಲೆ ನಡೆಸಿದ್ದಾರೆ. ಇದು, ಸಂಘರ್ಷವನ್ನು ಇನ್ನಷ್ಟು ವಿಪರೀತಕ್ಕೆ ಒಯ್ದಿದೆ. ಇದನ್ನು ಖಂಡಿಸಿ, ಸಾವಿರಾರು ಪೊಲೀಸರು ಮಂಗಳವಾರ ಪೊಲೀಸ್‌ ಕೇಂದ್ರ ಕಚೇರಿಯ ಮುಂದೆ ಮುಷ್ಕರ ನಡೆಸಿದ್ದಾರೆ.

ಹಿರಿಯ ಅಧಿಕಾರಿಗಳ ಭರವಸೆಯ ಮೇರೆಗೆ ಪೊಲೀಸರು ಮುಷ್ಕರದಿಂದ ಹಿಂದೆ ಸರಿದಿದ್ದರೂ, ಇಡೀ ದಿನ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿದ್ದು ಎದ್ದು ಕಂಡಿತು. ಬೇಲಿಯೇ ಎದ್ದು ಹೊಲ ಮೇಯ್ದಂತಹ ಪರಿಸ್ಥಿತಿ. ವಿವಾದಗಳನ್ನು ಇತ್ಯರ್ಥಪಡಿಸಲು ನ್ಯಾಯಾಂಗವೇ ಜೊತೆಗೆ ಇರುವಾಗ ವಕೀಲರು ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಎಳ್ಳಷ್ಟೂ ಸರಿಯಲ್ಲ. ರಾಜಧಾನಿಯಲ್ಲಿ ನಡೆಯುವ ವಿದ್ಯಮಾನ ಸಹಜವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುತ್ತದೆ. ವಾಯು ಮಾಲಿನ್ಯವು ದೆಹಲಿಯ ಪ್ರವಾಸೋದ್ಯಮದ ಮೇಲೆ ಈಗಾಗಲೇ ಅಡ್ಡಪರಿಣಾಮ ಬೀರಿದೆ. ಅದರ ಜೊತೆಗೆ ಕಾನೂನು ಪಾಲನೆ ವ್ಯವಸ್ಥೆಯ ಅಂಗಸಂಸ್ಥೆಗಳ ನಡುವಣ ಬೀದಿಕಾಳಗವು ದೆಹಲಿಯ ಪ್ರತಿಷ್ಠೆಗೆ ಕುಂದು ತರುವಂತಹುದು.

ದೆಹಲಿಯಲ್ಲಿ ಪೊಲೀಸರು ಮುಷ್ಕರ ನಡೆಸಿದ್ದು ಇತಿಹಾಸದಲ್ಲಿ ಇದೇ ಮೊದಲು. ಮುಷ್ಕರದ ವೇಳೆ ಪೊಲೀಸರು ಕಮಿಷನರ್‌ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಟ್ಟುನಿಟ್ಟಿನ ಶಿಸ್ತು ಅಗತ್ಯವಿರುವ ಪೊಲೀಸ್‌ ಇಲಾಖೆಯಲ್ಲಿ ಹೀಗೆ ಅಸಮಾಧಾನ ಉಂಟಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಕೇಂದ್ರ ಸರ್ಕಾರದ ಅಡಿಯಲ್ಲೇ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸರ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕಾದ ಹೊಣೆಯನ್ನು ಗೃಹ ಇಲಾಖೆ ಸರಿಯಾಗಿ ನಿರ್ವಹಿಸಬೇಕಿದೆ. ಮೂರು ದಶಕಗಳ ಹಿಂದೆಯೂ ರಾಜಧಾನಿಯಲ್ಲಿ ಹೀಗೆಯೇ ವಕೀಲರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿತ್ತು. ಆಗ ಆರೋಪಿ ವಕೀಲರೊಬ್ಬರಿಗೆ ಪೊಲೀಸರು ಕೈಕೋಳ ತೊಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಉಭಯತ್ರರ ಮಧ್ಯೆ ಅಪನಂಬಿಕೆಯ ವಾತಾವರಣ ಉಂಟಾಗಿರುವುದು ಕಳವಳದ ಸಂಗತಿ.

ಕಾರಣ ಏನೇ ಇದ್ದರೂ ಕಾನೂನು– ಶಿಸ್ತು ಪರಿಸ್ಥಿತಿ ಮತ್ತು ನ್ಯಾಯಪ್ರಜ್ಞೆಯನ್ನು ಕಾಪಾಡಬೇಕಾದವರೇ ಹೀಗೆ ಬೀದಿ ಕಾದಾಟದಲ್ಲಿ ತೊಡಗಿರುವುದು ಸರಿಯಲ್ಲ. ನ್ಯಾಯದಾನ ಪ್ರಕ್ರಿಯೆಯಲ್ಲಿ ಪೊಲೀಸರು ಮತ್ತು ವಕೀಲರದು ಸಮಪಾಲಿದೆ. ಜನರಿಗೆ ನ್ಯಾಯ ಒದಗಿಸಲು ಮತ್ತು ಅಪರಾಧಿಗಳಿಗೆ ಶಿಕ್ಷೆ ದೊರಕಿಸಲು ಇಬ್ಬರೂ ಜತೆಗೂಡಿ ಕೆಲಸ ಮಾಡಬೇಕು. ಸಣ್ಣಪುಟ್ಟ ಭಿನ್ನಮತಗಳನ್ನು ಸೂಕ್ತ ವೇದಿಕೆಯಲ್ಲಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ರಾಜಕಾರಣಿಗಳು ಇದರಲ್ಲಿ ಮೂಗು ತೂರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆರೋಪಗಳೂ ಕೇಳಿಬಂದಿರುವುದು ಯಾರಿಗೂ ಶೋಭೆ ತರುವ ಸಂಗತಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT