ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಸಂಸದೀಯ ಪದಗಳ ಪಟ್ಟಿ- ಕಳವಳ ಮೂಡಿಸುವ ನಡೆ

Last Updated 20 ಜುಲೈ 2022, 19:46 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಸದನದಲ್ಲಿ ವಿವರಿಸಲು ವಿರೋಧ ಪಕ್ಷಗಳು ಇದುವರೆಗೆ ಬಳಕೆ ಮಾಡಿಕೊಂಡು ಬಂದಿರುವ ಹಲವು ಪದಗಳನ್ನು ‘ಅಸಾಂವಿಧಾನಿಕ’ ಎಂದು ತೀರ್ಮಾನಿಸಲಾಗಿದೆ. ಈ ಪದಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಅಂದರೆ ಈ ಪದಗಳನ್ನು ಸದನದಲ್ಲಿ ಸದಸ್ಯರು ಬಳಕೆ ಮಾಡಿದರೆ, ಅವುಗಳನ್ನು ಕಡತದಿಂದ ತೆಗೆದುಹಾಕಲು ಅವಕಾಶವಿದೆ. ಹೀಗಾಗಿ, ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಹೇಳಲು ವಿರೋಧ ಪಕ್ಷಗಳು ಈಗ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ! ಸರ್ಕಾರ ಮಾಡಿದ ಯಾವುದಾದರೂ ಕೆಲಸಕ್ಕೆ ‘ನಾಚಿಕೆಯಾಗಬೇಕು’ ಎನ್ನಲು ಆಗುವುದಿಲ್ಲ, ಸರ್ಕಾರವು ಜನರು ಇರಿಸಿದ್ದ ‘ನಂಬಿಕೆಗೆ ದ್ರೋಹ ಬಗೆದಿದೆ’ ಎನ್ನಲು ಆಗುವುದಿಲ್ಲ, ಸಚಿವರು ತಮ್ಮ ಸ್ಥಾನವನ್ನು ‘ದುರ್ಬಳಕೆ’ ಮಾಡಿಕೊಂಡಿದ್ದಾರೆ ಎಂದು ಹೇಳಲು ಅವಕಾಶ ಇಲ್ಲ, ಹಾಗೆಯೇ ಯಾರೊಬ್ಬರನ್ನೂ ‘ಭ್ರಷ್ಟ, ಅಸಮರ್ಥ, ಸರ್ವಾಧಿಕಾರಿ ಮನಃಸ್ಥಿತಿಯವ’ ಎಂದು ಟೀಕಿಸಲು ಅವಕಾಶವಿಲ್ಲ. ಸರ್ಕಾರವು ದೇಶವನ್ನು ‘ತಪ್ಪು ದಾರಿಗೆ ಎಳೆದಿದೆ’ ಎಂದು ಸದನದ ಯಾವ ಸದಸ್ಯನೂ ಹೇಳುವಂತಿಲ್ಲ. ಸರ್ಕಾರದ ಯಾವುದೇ ಯೋಜನೆಯನ್ನು ‘ಕಣ್ಣೊರೆಸುವ ತಂತ್ರ’ ಎನ್ನಲೂ ಆಗದು. ‘ಕತ್ತೆಗಳು’, ‘ಚಮಚಾಗಳು’, ‘ಹೇಡಿಗಳು’, ‘ಕ್ರಿಮಿನಲ್‌ಗಳು’ ಎಂಬ ಪದಗಳನ್ನು ಕೂಡ ಬಳಸಲು ಅವಕಾಶ ಇಲ್ಲವಾಗಿದೆ.

ಲೋಕಸಭಾ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ, ‘ಅಸಾಂವಿಧಾನಿಕ’ ಎಂದು ಕರೆಯಲಾಗಿರುವ ಪದಗಳು ಹಾಗೂ ನುಡಿಗಟ್ಟುಗಳನ್ನು ಒಳಗೊಂಡಿರುವ 50 ಪುಟಗಳ ಪಟ್ಟಿಯನ್ನು ಓದಿದಾಗ ಅರ್ಥವಾಗುವ ವಿಚಾರ ಇದು. ಈ ಪಟ್ಟಿಯನ್ನು ಅಭಿವ್ಯಕ್ತಿಯನ್ನು ಹತ್ತಿಕ್ಕುವ ಯತ್ನ ಎಂದು ವಿರೋಧ ಪಕ್ಷಗಳು ಕರೆದಿವೆ. ಈ ಪಟ್ಟಿಯಲ್ಲಿ ಇರುವ ಪದಗಳನ್ನು ಬಳಕೆ ಮಾಡದಿರುವ ನಿಲುವನ್ನು ತಾವು ತಳೆಯುವುದಿಲ್ಲ ಎಂದೂ ವಿರೋಧ ಪಕ್ಷಗಳು ಹೇಳಿವೆ. ‘ಅಸಾಂವಿಧಾನಿಕ’ ಎಂದು ಕರೆಯಲಾಗುವ ಪದಗಳ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸುವುದು,ಹೊಸದಾಗಿ ಪದಗಳನ್ನು ಅದಕ್ಕೆ ಸೇರಿಸುವುದು ಬಹಳ ಹಿಂದಿನಿಂದಲೂ ‍ಪಾಲಿಸಿಕೊಂಡು ಬಂದಿರುವ ಪದ್ಧತಿ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿವರಣೆ ನೀಡಿದ್ದಾರೆ. ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು ಹಾಗೂ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ತಿನ ಮುಖ್ಯಸ್ಥರು ನೀಡುವ ರೂಲಿಂಗ್ ಆಧರಿಸಿ 1954ರಿಂದಲೂ ಈ ರೀತಿ ಮಾಡುತ್ತ ಬರಲಾಗಿದೆ ಎಂದಿದ್ದಾರೆ. ಯಾವುದೇ ಪದವನ್ನು ಕಡತದಿಂದ ತೆಗೆದುಹಾಕಲಾಗುತ್ತದೆಯೇ ಇಲ್ಲವೇ ಎಂಬುದು ಆ ಪದವನ್ನು ಯಾವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಬಳಕೆ ಮಾಡಲಾಯಿತು ಎನ್ನುವುದನ್ನು ಆಧರಿಸಿರುತ್ತದೆ ಎಂಬ ವಿವರಣೆಯನ್ನೂ ಬಿರ್ಲಾ ನೀಡಿದ್ದಾರೆ. ಆದರೆ ಅವರ ವಿವರಣೆಯು ವಿರೋಧ ಪಕ್ಷಗಳಿಗೆ ಸಮಾಧಾನ ತಂದಿಲ್ಲ. ಏಕೆಂದರೆ, ಪದಗಳನ್ನು ಯಾವ ಸಂದರ್ಭದಲ್ಲಿ ಬಳಕೆ ಮಾಡಲಾಯಿತು ಎನ್ನುವುದನ್ನು ಮತ್ತು ಆ ಸಂದರ್ಭದಲ್ಲಿ ಆ ಪದವು ಯಾವ ಅರ್ಥವನ್ನು ಧ್ವನಿಸಿತು ಎನ್ನುವುದನ್ನು ಸ್ಪೀಕರ್ ಅವರೇ ತೀರ್ಮಾನಿಸುತ್ತಾರೆ. ಈ ಪದಗಳನ್ನು ನಿರ್ಬಂಧಿಸಿದರೆ ಸಂಸತ್ತಿನಲ್ಲಿನ ಚರ್ಚೆಗಳಿಗೆ ಅರ್ಥ ಉಳಿಯುವುದಿಲ್ಲ. ಹೀಗಾಗಿ, ಇದು ಅಭಿವ್ಯಕ್ತಿಯನ್ನು ಮೊಟಕುಗೊಳಿಸುವ ಯತ್ನ ಎಂದು ವಿರೋಧ ಪಕ್ಷಗಳು ಭಾವಿಸಿವೆ.

ಪದಗಳನ್ನು ಯಾವ ಸಂದರ್ಭದಲ್ಲಿ ಬಳಸಲಾಯಿತು ಎನ್ನುವುದನ್ನು ಆಧರಿಸಿ ಅದರ ಸ್ವೀಕಾರಾರ್ಹತೆಯನ್ನು ತೀರ್ಮಾನಿಸಬೇಕು ಎಂದು ಸ್ಪೀಕರ್‌ ಹೇಳುವುದಾದರೆ, ‘ಅಸಾಂವಿಧಾನಿಕ’ ಎಂದು ಹೇಳುತ್ತಿರುವ ಪದಗಳ ಪಟ್ಟಿಯನ್ನು ಸಿದ್ಧಪಡಿಸಿದ್ದನ್ನು, ಅದನ್ನು ಸಿದ್ಧಪಡಿಸಿದ ಸಂದರ್ಭ ಹಾಗೂ ಸನ್ನಿವೇಶದ ಆಧಾರದಲ್ಲಿ ಗ್ರಹಿಸಬೇಕಾಗುತ್ತದೆ. ಅಂದರೆ, ಸರ್ಕಾರವನ್ನು ಟೀಕಿಸುವುದನ್ನು ಇಷ್ಟಪಡದಿರುವ ಹಾಗೂ ಅಂತಹ ಟೀಕೆಗಳಿಗೆ ಕೆಲವೊಮ್ಮೆ ಬೆಲೆ ತೆರುವಂತೆ ಮಾಡುವ ಇಂದಿನ ಸಂದರ್ಭದ ಹಿನ್ನೆಲೆಯಲ್ಲಿ ಇದನ್ನು ಗ್ರಹಿಸಬೇಕಾಗುತ್ತದೆ. ಮುಕ್ತ ಅಭಿವ್ಯಕ್ತಿ ಹಾಗೂ ಟೀಕೆಯು ನಿಂದನೆಗಳಿಗೆ ಗುರಿ ಯಾಗುತ್ತಿಲ್ಲದಿದ್ದ ಸಂದರ್ಭದಲ್ಲಿ, ಇಂತಹ ಪದಗಳ ಒಂದು ಪಟ್ಟಿಯು ಕಳವಳಕ್ಕೆ ಕಾರಣವಾಗುತ್ತಿರಲಿಲ್ಲ. ಈ ಪಟ್ಟಿಯನ್ನು ಹಿಂದೆ ಸಿದ್ಧಪಡಿಸಿದ್ದಾಗ ಅದು ಹೆಚ್ಚಿನ ಗಮನ ಸೆಳೆದಿರಲಿಲ್ಲ. ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ, ಘೋಷಣೆ ಕೂಗುವುದು, ಧರಣಿ ನಡೆಸುವುದು, ಉಪವಾಸ ಸತ್ಯಾಗ್ರಹ ನಡೆಸುವುದನ್ನು ನಿಷೇಧಿಸಿರುವ ಕ್ರಮದ ಜೊತೆ ಈ ರೀತಿ ಪಟ್ಟಿ ಸಿದ್ಧಪಡಿಸಿರುವುದನ್ನು ಇರಿಸಿ ವಸ್ತುಸ್ಥಿತಿಯನ್ನು ತಿಳಿದುಕೊಳ್ಳಬೇಕು.ಧರಣಿ, ಪ್ರತಿಭಟನೆಗಳನ್ನು ನಿಷೇಧಿಸಿರುವುದು ಕೂಡ ಮಾಮೂಲಿ ಆದೇಶ ಎಂದು ಸ್ಪೀಕರ್ ಹೇಳಿದ್ದಾರೆ. ಅವರು ಏನೇ ಸಮರ್ಥನೆ ನೀಡಿದರೂ ಈ ಆದೇಶಗಳು ನೀಡುವ ಸಂದೇಶ ಬೇರೆಯೇ ಆಗಿದೆ.ಸರ್ಕಾರವನ್ನು ಟೀಕಿಸುವುದು ಮತ್ತು ಸರ್ಕಾರದ ನಿಲುವುಗಳನ್ನು ವಿರೋಧಿಸುವುದನ್ನು ನಿಷೇಧಿಸಲಾಗಿದೆ ಎಂಬ ಸಂದೇಶವನ್ನು ಈ ಪಟ್ಟಿ ಹಾಗೂ ಆದೇಶವು ಜನರಿಗೆ ಮತ್ತು ಜನರ ಪ್ರತಿನಿಧಿಗಳಿಗೆ ರವಾನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT