ಮಂಗಳವಾರ, ಅಕ್ಟೋಬರ್ 27, 2020
26 °C
ರೈತರ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆ ಕಾರ್ಯದಲ್ಲಿ ಈಗ ಆಗಿರುವ ವಿಳಂಬವೇ ಸಾಕು. ಈಗಲಾದರೂ ತ್ವರಿತವಾಗಿ ಈ ಕಾರ್ಯ ನೆರವೇರಬೇಕು

ಬೆಳೆಸಾಲ ಮನ್ನಾ: ‘ಅರ್ಹತೆ’ಯ ಇತ್ಯರ್ಥ ತ್ವರಿತವಾಗಿ ಆಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಸಹಕಾರ ಸಂಘಗಳಿಂದ ₹ 1 ಲಕ್ಷದ ತನಕ ಪಡೆದಿದ್ದ ಬೆಳೆಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಸುಮಾರು 1.70 ಲಕ್ಷ ರೈತರು ತೊಂದರೆಗೆ ಸಿಲುಕಿದ್ದಾರೆ. ಜೆಡಿಎಸ್– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು 2018ರಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದ ಸಂದರ್ಭದಲ್ಲಿ 19.14 ಲಕ್ಷ ರೈತರ ಒಟ್ಟು ಸಾಲದ ಮೊತ್ತ ₹11,032 ಕೋಟಿ ಎಂದು ಗುರುತಿಸಲಾಗಿತ್ತು. ಇದರಲ್ಲಿ ₹ 1 ಲಕ್ಷದವರೆಗಿನ ಸಾಲದ ಮೊತ್ತ ₹ 8,480 ಕೋಟಿ. ಒಟ್ಟಾರೆ ಇದುವರೆಗೆ 16.41 ಲಕ್ಷ ಅರ್ಹ ರೈತರ ₹ 7,637 ಕೋಟಿ ಮೊತ್ತದ ಸಾಲ ಮನ್ನಾ ಮಾಡಲಾಗಿದೆ. ಬ್ಯಾಂಕ್‌ ಖಾತೆ ವಿವರ ನೀಡದ ವೇತನದಾರರು, ಪಿಂಚಣಿ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸದ ಒಟ್ಟು 9,920 ರೈತರನ್ನು ಈ ಯೋಜನೆಗೆ ಪರಿಗಣಿಸಿಲ್ಲ. ಅತಂತ್ರ ಸ್ಥಿತಿಯಲ್ಲಿರುವ 1,67,851 ರೈತರನ್ನು ಯಾವ ಕಾರಣಕ್ಕೆ ಸಾಲ ಮನ್ನಾಕ್ಕೆ ಪರಿಗಣಿಸಿಲ್ಲ ಎಂಬುದನ್ನು ಪಟ್ಟಿ ಮಾಡಲಾಗಿದೆ.

ಸಂಪಾದಕೀಯ ಕೇಳಿ: ಬೆಳೆಸಾಲ ಮನ್ನಾ‘ಅರ್ಹತೆ’ಯ ಇತ್ಯರ್ಥ ತ್ವರಿತವಾಗಿ ಆಗಲಿ

ಆದರೆ, ಸಹಕಾರ ಇಲಾಖೆಗೆ ಎರಡು ವರ್ಷಗಳ ನಂತರವೂ ಇನ್ನೂ 2,638 ರೈತರ ಮಾಹಿತಿಯೇ ಸಿಕ್ಕಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ರೈತರ ಮಾಹಿತಿ ಸಂಗ್ರಹಿಸಲು ಇಷ್ಟು ಸುದೀರ್ಘ ಅವಧಿ ಬೇಕೇ? ಹೆಸರು, ಊರು ಯಾವ ಮಾಹಿತಿಯೂ ಇಲ್ಲದೆ ಸಹಕಾರ ಸಂಘಗಳು ಸಾಲ ಕೊಟ್ಟಿವೆಯೇ? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ವಿಚಾರಣೆ ನಡೆಸಿ, ಎಲ್ಲಿ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಅಲ್ಲದೆ, ಒಬ್ಬರಿಗೆ ಎರಡು ಸಹಕಾರ ಸಂಘಗಳಿಂದ ಸಾಲ ಪಡೆಯಲು ಅವಕಾಶ ಇಲ್ಲದಿದ್ದರೂ 23,528 ರೈತರು ಒಂದೇ ಆಧಾರ್‌ ಸಂಖ್ಯೆಯಲ್ಲಿ ಎರಡಕ್ಕಿಂತ ಹೆಚ್ಚು ಸಾಲದ ಖಾತೆ ಹೊಂದಿದ್ದಾರೆ ಎಂಬ ಅಂಶ ಬಯಲಾಗಿದೆ. ಆಧಾರ್‌ ಸಂಖ್ಯೆ ನಮೂದಿಸುತ್ತಿದ್ದಂತೆಯೇ ಆ ವ್ಯಕ್ತಿ ಬೇರೆ ಎಲ್ಲಿ ಖಾತೆ ಹೊಂದಿದ್ದಾರೆ ಎಂಬ ಮಾಹಿತಿ ಕ್ಷಣಮಾತ್ರದಲ್ಲಿ ಲಭ್ಯವಾಗುವಂತಹ ತಂತ್ರಜ್ಞಾನ ಬೆರಳ ತುದಿಯಲ್ಲಿದ್ದರೂ ಇದು ಹೇಗೆ ಸಾಧ್ಯವಾಯಿತು? ಇದರಲ್ಲಿ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಜಾಣಕುರುಡುತನ ಕೆಲಸ ಮಾಡಿರುವ ಶಂಕೆ ಮೂಡುತ್ತದೆ. 2018ರ ಜುಲೈ 10ರ ಒಳಗಿನ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದ್ದರಿಂದ ಆ ದಿನಾಂಕಕ್ಕೆ ಒಂದೆರಡು ದಿನಗಳ ಹಿಂದೆ ಏಕವ್ಯಕ್ತಿಯ ಪಡಿತರಚೀಟಿಗಳನ್ನು ರೈತರು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಾಲ ಮನ್ನಾದ ಸೌಲಭ್ಯ ಪಡೆಯಲು ಇಂತಹ ಕೆಲಸ ಮಾಡಿರುವುದು ಸರಿಯಲ್ಲ. ಪಡಿತರಚೀಟಿಗಾಗಿ ದಿಢೀರ್‌ ಬೇಡಿಕೆ ಸೃಷ್ಟಿಯಾದಾಗಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇದನ್ನು ತಡೆಯಲು ಮುಂದಾಗಬೇಕಿತ್ತು.

ಸಾಲ ಮನ್ನಾ ಘೋಷಿಸುವ ಮೊದಲೇ ಸರ್ಕಾರ ಅದಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕಿತ್ತು. ಅರ್ಹರಾರು, ಅನರ್ಹರಾರು ಎಂಬುದನ್ನು ಆಗಲೇ ತಿಳಿದುಕೊಂಡಿದ್ದರೆ ಈ ರೀತಿಯ ಗೊಂದಲವನ್ನು ತಪ್ಪಿಸಬಹುದಿತ್ತು. ಪೂರ್ವಸಿದ್ಧತೆಯಿಲ್ಲದೆ ಯೋಜನೆಯನ್ನು ಪ್ರಕಟಿಸಿದ್ದರಿಂದ ಆಗಿರುವ ಅನನುಕೂಲ ಇದು. ‘ಇಂತಹ ಕಾರಣಕ್ಕೆ ಸಾಲ ಮನ್ನಾ ಯೋಜನೆಗೆ ನೀವು ಅರ್ಹರಲ್ಲ’ ಎಂಬುದನ್ನು ಸ್ಪಷ್ಟಪಡಿಸಲು ಎರಡು ವರ್ಷಗಳಷ್ಟು ಸುದೀರ್ಘ ಅವಧಿ ಬೇಕಿತ್ತೇ? ಈ ದಾಖಲೆಗಳನ್ನೇನೂ ರೈತರು ಇತ್ತೀಚೆಗೆ ಸಲ್ಲಿಸಿರುವುದಲ್ಲ. ಯೋಜನೆ ಘೋಷಣೆಯಾದಾಗ ನಿಗದಿಪಡಿಸಿದ ಗಡುವಿನ ಒಳಗೇ ಸಲ್ಲಿಸಿದ್ದಾರೆ. ಆದರೂ ಇಷ್ಟು ದಿನ ಏಕೆ ಅವುಗಳನ್ನು ಕೊಳೆಯುವಂತೆ ಮಾಡಲಾಯಿತು? ಇದು ಎಂದಿನಂತೆ ಅಧಿಕಾರಶಾಹಿಯ ವಿಳಂಬ ಧೋರಣೆಯೇ ಆಗಿದೆ. ಸರ್ಕಾರ ಯಾವುದೇ ಕಾರ್ಯಕ್ರಮ, ಯೋಜನೆಯನ್ನು ಪ್ರಕಟಿಸಿದರೆ ಅದರ ಲಾಭ ಅರ್ಹರಿಗೆ ತ್ವರಿತವಾಗಿ ಸಿಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಇದರ ಅನುಷ್ಠಾನಕ್ಕಾಗಿ ಕೆಳ ಹಂತದ ಸಿಬ್ಬಂದಿಗೆ ಸಮರ್ಪಕವಾದ ಸೂಚನೆಗಳನ್ನು ನೀಡಿ, ಕಾಲಮಿತಿಯೊಳಗೆ ಕೆಲಸ ಆಗುವಂತೆ ಅವರು ಮಾಡಬೇಕು. ಈ ಯೋಜನೆಯ ಅನುಷ್ಠಾನದಲ್ಲಿ ಸಹಕಾರ ಇಲಾಖೆಯಿಂದ ಆಗಿರುವ ವಿಳಂಬವನ್ನು ಸಮರ್ಥಿಸಲು ಆಗದು. ಸಹಕಾರ ಇಲಾಖೆಯು ಈ ತಿಂಗಳ 15ರ ಒಳಗೆ ಈ ಎಲ್ಲ ರೈತರ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ, ವರದಿ ನೀಡುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಈಗ ಸೂಚಿಸಿದೆ. ತ್ವರಿತವಾಗಿ ಇತ್ಯರ್ಥಗೊಳಿಸುವ ಬದ್ಧತೆಯನ್ನು ಈಗಲಾದರೂ ತೋರಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು