ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಎರಡು ಅಗ್ನಿ ದುರಂತ: ಹೇಳುವ ಪಾಠ ಹಲವಾರು

ನಿಯಮ ಉಲ್ಲಂಘನೆಯಿಂದ ಸಂಭವಿಸುವ ಅಗ್ನಿ ದುರಂತಗಳು ಅಧಿಕಾರಿಗಳ ಮಟ್ಟದಲ್ಲಿ ಹಾಗೂ ವ್ಯಕ್ತಿಗತವಾಗಿ ಹಾಸುಹೊಕ್ಕಾಗಿರುವ ಉದಾಸೀನ ಪ್ರವೃತ್ತಿಗೆ ಕನ್ನಡಿ ಹಿಡಿಯುತ್ತವೆ.
Published 28 ಮೇ 2024, 23:53 IST
Last Updated 28 ಮೇ 2024, 23:53 IST
ಅಕ್ಷರ ಗಾತ್ರ

ಎರಡು ದಿನಗಳ ಅಂತರದಲ್ಲಿ, ಎರಡು ಕಡೆಗಳಲ್ಲಿ ಭೀಕರ ಅಗ್ನಿದುರಂತಗಳು ಸಂಭವಿಸಿವೆ. ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮ್‌ ಜೋನ್‌ನಲ್ಲಿ ನಡೆದ ಅನಾಹುತದಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಏಳು ನವಜಾತ ಶಿಶುಗಳು ಸಾವಿಗೀಡಾಗಿವೆ. ಈ ಘಟನೆಗಳು ಕ್ರಿಮಿನಲ್ ನಿರ್ಲಕ್ಷ್ಯ; ಸುರಕ್ಷತೆಯ ವಿಚಾರದಲ್ಲಿ ಸಂಸ್ಥೆಗಳ ಮಟ್ಟದಲ್ಲಿ, ಅಧಿಕಾರಿಗಳ ಮಟ್ಟದಲ್ಲಿ ಹಾಗೂ ವ್ಯಕ್ತಿಗತವಾಗಿ ಹಾಸುಹೊಕ್ಕಾಗಿರುವ ಉದಾಸೀನ ಪ್ರವೃತ್ತಿಗೆ ಕನ್ನಡಿ ಹಿಡಿಯುವಂತೆ ಇವೆ. ದೆಹಲಿ ಹಾಗೂ ರಾಜ್‌ಕೋಟ್‌ನಲ್ಲಿ ಸಂಭವಿಸಿದ ದುರಂತಗಳಿಗೆ ಮನುಷ್ಯನೇ ಕಾರಣ. ಈ ಎರಡೂ ಪ್ರಕರಣಗಳಲ್ಲಿ, ಗೇಮ್‌ ಜೋನ್‌ ಹಾಗೂ ಆಸ್ಪತ್ರೆಯನ್ನು ನಡೆಸುತ್ತಿರುವವರು ತೀರಾ ಮೂಲಭೂತವಾದ ಸುರಕ್ಷತಾ ಕ್ರಮಗಳನ್ನು ಕೂಡ ಪಾಲಿಸಿರಲಿಲ್ಲ. ನಿಯಮಗಳ ಪಾಲನೆ ಆಗುವಂತೆ ನೋಡಿಕೊಳ್ಳಬೇಕಾದವರು ಆ ಕೆಲಸ ಮಾಡುವಲ್ಲಿ ವಿಫಲರಾಗಿದ್ದರು. ರಾಜ್‌ಕೋಟ್‌ನ ಗೇಮ್‌ ಜೋನ್‌ ಕಾರ್ಯಚಟುವಟಿಕೆಯ ಕಟ್ಟಡವು ಆ ಚಟುವಟಿಕೆಗಳಿಗೆ ಸೂಕ್ತವಲ್ಲವಾಗಿತ್ತು. ಆ ಕೇಂದ್ರಕ್ಕೆ ಅಗ್ನಿ ಸುರಕ್ಷತಾ ಅನುಮತಿ ಇರಲಿಲ್ಲ, ಅಲ್ಲಿ ಅಗ್ನಿಶಾಮಕ ಉಪಕರಣಗಳೂ ಇರಲಿಲ್ಲ. ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆಯ ಮೇಲೆ ನಿಯಂತ್ರಣವೂ ಇರಲಿಲ್ಲ. ದೆಹಲಿಯ ಆಸ್ಪತ್ರೆಯು ಎಲ್ಲ ಬಗೆಯ ನಿಯಮಗಳನ್ನೂ ಉಲ್ಲಂಘಿಸಿತ್ತು. ಆಸ್ಪತ್ರೆಯು ಕೂಡ ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ಅಗತ್ಯ ಅನುಮತಿಗಳನ್ನು ಪಡೆದಿರಲಿಲ್ಲ, ಅಲ್ಲಿ ನುರಿತ ವೈದ್ಯರೂ ಇರಲಿಲ್ಲ. ಆಸ್ಪತ್ರೆಯ ಪರವಾನಗಿ ಅವಧಿಯು ಎರಡು ತಿಂಗಳ ಹಿಂದೆ ಮುಗಿದಿತ್ತು.ಆಸ್ಪತ್ರೆಯಲ್ಲಿ ಅಗ್ನಿಶಾಮಕ ಉಪಕರಣಗಳು ಇರಲಿಲ್ಲ. ತನಗೆ ಅನುಮತಿ ಇದ್ದುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅದು ರೋಗಿಗಳನ್ನು ದಾಖಲು ಮಾಡಿಕೊಂಡಿತ್ತು. ಅಲ್ಲದೆ, ಅಪಾಯಕಾರಿಯಾದ ‘ಆಮ್ಲಜನಕ ಸಿಲಿಂಡರ್‌’ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿತ್ತು.

ಈ ದುರ್ಘಟನೆಗಳು ನಡೆದ ನಂತರದಲ್ಲಿ ಅಧಿಕಾರಿಗಳು ಒಂದಿಷ್ಟು ಕ್ರಮ ಕೈಗೊಂಡಿದ್ದಾರೆ. ಗೇಮ್‌ ಜೋನ್‌ ಹಾಗೂ ಆಸ್ಪತ್ರೆಯ ಮಾಲೀಕರು, ಅವರ ಕೆಲವು ಪಾಲುದಾರರನ್ನು ಬಂಧಿಸಲಾಗಿದೆ. ರಾಜ್‌ಕೋಟ್‌ ಅಗ್ನಿ ದುರಂತದ ಬಗ್ಗೆ ಗುಜರಾತ್ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಗೇಮಿಂಗ್‌ ಕೇಂದ್ರಗಳ ಕಾರ್ಯ ಚಟುವಟಿಕೆ ಬಗ್ಗೆ ವರದಿ ಸಲ್ಲಿಸುವಂತೆ ಗುಜರಾತ್ ಸರ್ಕಾರ ಹಾಗೂ ಅಲ್ಲಿನ ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಅನುಮತಿ ಇಲ್ಲದೆಯೂ ಕಾರ್ಯಾಚರಣೆ ನಡೆಸುತ್ತಿರುವ ಇಂತಹ ಕೇಂದ್ರಗಳು ಬೇರೆಡೆಯೂ ಇವೆ. ಎಲ್ಲ ಗೇಮಿಂಗ್‌ ಕೇಂದ್ರಗಳನ್ನೂ ತಪಾಸಣೆಗೆ ಗುರಿಪಡಿಸಿ, ಪರವಾನಗಿ ಇಲ್ಲದ ಕೇಂದ್ರಗಳ ಬಾಗಿಲು ಮುಚ್ಚಲು ಆದೇಶ ಹೊರಡಿಸಲಾಗಿದೆ. ದೆಹಲಿಯ ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಏನು ಎಂಬ ಕುರಿತು ದೆಹಲಿ ಸರ್ಕಾರ ತನಿಖೆ ನಡೆಸುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತೆಗೆ ಎಲ್ಲ ಆಯಾಮಗಳಿಂದಲೂ ವಿಶೇಷ ಗಮನ ನೀಡಬೇಕಾಗಿತ್ತು. ಏಕೆಂದರೆ, ಆ ಆಸ್ಪತ್ರೆಯು ನವಜಾತ ಶಿಶುಗಳನ್ನು ಆರೈಕೆ ಮಾಡುತ್ತಿತ್ತು.

ನಿಯಮಗಳು ಸರಿಯಾಗಿ ಅನುಷ್ಠಾನ ಆಗುವಂತೆ ನೋಡಿಕೊಳ್ಳದ, ಅಗ್ನಿ ಸುರಕ್ಷತೆಯ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ನಿಗಾ ವಹಿಸದ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೂಡ ತಪ್ಪಿನ ಹೊಣೆ ಹೊರಬೇಕು. ಇಂತಹ ದುರ್ಘಟನೆಗಳು ನಡೆದ ನಂತರ ನಡೆಸುವ ತನಿಖೆಯ ವರದಿಗಳನ್ನು ಬಹಳ ಬೇಗ ಮರೆಯಲಾಗುತ್ತದೆ. ದುರ್ಘಟನೆಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ತಿರುಗಾಡಿಕೊಂಡು ಇರುತ್ತಾರೆ. ಈ ಪರಿಸ್ಥಿತಿಯು ದೇಶದ ಎಲ್ಲ ಕಡೆಗಳಲ್ಲಿಯೂ ಇದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಲಾಗುತ್ತದೆ, ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕಿರುವ ಅನುಮತಿಗಳನ್ನು ಕೂಡ ಪಡೆದುಕೊಂಡಿರುವುದಿಲ್ಲ. ಕಾಲಕಾಲಕ್ಕೆ ತಪಾಸಣೆ ನಡೆದಿರುವುದಿಲ್ಲ. ಇಲ್ಲಿ ಅಗ್ನಿ ಸುರಕ್ಷತೆಯು ತೀರಾ ಉಪೇಕ್ಷೆಗೆ ಗುರಿಯಾಗಿದೆ. ಕಚೇರಿಗಳು, ಆಸ್ಪತ್ರೆಗಳು, ಅಂಗಡಿಗಳು, ಕಾರ್ಖಾನೆಗಳು ಮತ್ತು ಉಪಾಹಾರ ಮಂದಿರಗಳು ಅಗ್ನಿ ದುರಂತಕ್ಕೆ ಈಡಾಗುವ ಸಾಧ್ಯತೆ ಇರುವಂಥವು. ರಾಷ್ಟ್ರೀಯ ಕಟ್ಟಡ ಸಂಹಿತೆಯು ಒಂದಿಷ್ಟು ನಿಯಮಗಳನ್ನು ಒಳಗೊಂಡಿದೆ, ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಗಳು ಇವೆ. ಅಗ್ನಿ ಅವಘಡಗಳನ್ನು ನಿಭಾಯಿಸುವುದು ಹೇಗೆ ಎಂಬುದರ ಕುರಿತಾಗಿ ಮಾರ್ಗಸೂಚಿಗಳನ್ನು ಕಾಲಕಾಲಕ್ಕೆ ಹೊರಡಿಸಲಾಗುತ್ತದೆ. ಆದರೂ, ನಿಯಮಗಳನ್ನು ಉಲ್ಲಂಘಿಸುವ, ಉಪೇಕ್ಷಿಸುವ ಕಾರಣದಿಂದಾಗಿ ಅಗ್ನಿ ದುರಂತಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT