ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಸಹಕಾರ ಬ್ಯಾಂಕ್‌ಗಳಲ್ಲಿ ಅಕ್ರಮ ತಡೆಗೆ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

Last Updated 15 ಏಪ್ರಿಲ್ 2023, 1:15 IST
ಅಕ್ಷರ ಗಾತ್ರ

ರಾಜ್ಯದ ಹಲವು ಸಹಕಾರ ಬ್ಯಾಂಕ್‌ಗಳು ಗ್ರಾಹಕರ ಗುರುತು ದೃಢಪಡಿಸುವ (ಕೆವೈಸಿ) ದಾಖಲೆಗಳಿಲ್ಲದೇ ಚೆಕ್‌ ಡಿಸ್ಕೌಂಟ್‌ ಮೂಲಕ ₹ 1,000 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಂಶಯಾಸ್ಪದ ರೀತಿಯಲ್ಲಿ ಪಾವತಿಸಿರುವುದನ್ನು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಿಧಾನಸಭಾ ಚುನಾವಣೆಗೆ ನೀತಿಸಂಹಿತೆ ಜಾರಿಯಾದ ಬೆನ್ನಲ್ಲೇ ಐ.ಟಿ. ಅಧಿಕಾರಿಗಳು ಸಹಕಾರ ಬ್ಯಾಂಕ್‌ಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು. ಅಲ್ಲಿ ವಶಕ್ಕೆ ಪಡೆದ ದಾಖಲೆಗಳನ್ನು ಪರಿಶೀಲಿಸಿದಾಗ ರಾಜ್ಯದ ಹಲವು ಸಹಕಾರ ಬ್ಯಾಂಕ್‌ಗಳು ಇಂತಹ ಭಾರಿ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಸಂಶಯಾಸ್ಪದ ಮತ್ತು ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳು, ಉದ್ದಿಮೆಗಳ ಹೆಸರಿನಲ್ಲಿ ನೇರ ಪಾವತಿಯ (ಬೇರರ್‌) ಚೆಕ್‌ಗಳನ್ನು ‘ಡಿಸ್ಕೌಂಟ್‌’ ಮಾಡಲಾಗಿದೆ. ಆ ಹಣವನ್ನು ಸಹಕಾರ ಬ್ಯಾಂಕ್‌ಗಳಲ್ಲಿ ಇರುವ ಸಹಕಾರ ಸೊಸೈಟಿಗಳ ಖಾತೆಗೆ ವರ್ಗಾಯಿಸಿ, ಅಲ್ಲಿಂದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಗುತ್ತಿಗೆದಾರರ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಕೆವೈಸಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಂತಹ ವಹಿವಾಟುಗಳನ್ನು ನಡೆಸಲಾಗಿದೆ. ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಸದಸ್ಯರೇ ನೇರವಾಗಿ ಇಂತಹ ಅಕ್ರಮ
ಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೃಹತ್‌ ಮೊತ್ತದ ಸಾಲ ಮಂಜೂರು ಮಾಡಿರುವ ಪ್ರಕರಣಗಳೂ ಪತ್ತೆಯಾಗಿವೆ. ಆದಾಯವನ್ನು ಮುಚ್ಚಿಟ್ಟು, ತೆರಿಗೆ ವಂಚಿಸುವುದಕ್ಕಾಗಿ ಕೆವೈಸಿ ಮಾರ್ಗಸೂಚಿಗಳನ್ನು ಪಾಲಿಸದೇ ಹಣದ ವಹಿವಾಟು ನಡೆಸಲಾಗಿದೆ ಎಂಬ ಅಭಿಪ್ರಾಯವನ್ನು ಸಿಬಿಡಿಟಿ ವ್ಯಕ್ತಪಡಿಸಿದೆ. ದೇಶದ ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ವಹಿವಾಟು ಬಹುತೇಕ ಕಂಪ್ಯೂಟರೀಕರಣ
ಗೊಂಡಿದೆ. ಆ ಬ್ಯಾಂಕ್‌ಗಳಲ್ಲಿ ಕೆವೈಸಿ ಮಾರ್ಗಸೂಚಿಯನ್ನು ಪಾಲಿಸದೇ ದೊಡ್ಡ ಮೊತ್ತದ ಹಣ ವರ್ಗಾವಣೆ, ನಗದೀಕರಣ ಸಾಧ್ಯವಿಲ್ಲ. ಬ್ಯಾಂಕ್‌ಗಳಲ್ಲಿ ಮಾರ್ಗಸೂಚಿ ಹಾಗೂ ನಿಯಮಗಳ ಪಾಲನೆ ಬಿಗಿಯಾದ ಬಳಿಕ ತೆರಿಗೆ ವಂಚನೆ ಮತ್ತು ಹಣದ ಮೂಲವನ್ನು ಮುಚ್ಚಿಡುವುದಕ್ಕಾಗಿ ಕೆಲವರು ಸಹಕಾರ ಬ್ಯಾಂಕ್‌ಗಳು ಹಾಗೂ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ರಾಜಕಾರಣಿಗಳು, ಉದ್ಯಮಿಗಳು, ಗುತ್ತಿಗೆದಾರರು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಅಕ್ರಮ ಹಣವನ್ನು ಸಕ್ರಮಗೊಳಿಸುವುದಕ್ಕಾಗಿಯೇ ತಮ್ಮದೇ ಸಹಕಾರ ಬ್ಯಾಂಕ್‌ ಹಾಗೂ ಸಂಸ್ಥೆಗಳನ್ನು ಹೊಂದಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಕಪ್ಪುಹಣದ ಪರಿವರ್ತನೆಯ ದಂಧೆಗೆ ಸಹಕಾರ ಸಂಸ್ಥೆಗಳ ದುರ್ಬಳಕೆ ಹೆಚ್ಚುತ್ತಿದೆ ಎಂಬುದು ಐ.ಟಿ. ಅಧಿಕಾರಿಗಳು ರಾಜ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದೃಢಪಟ್ಟಿದೆ. ಕೆವೈಸಿ ಮಾರ್ಗಸೂಚಿಗಳು, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನಗಳು ಹಾಗೂ ಹಣದ ಅಕ್ರಮ ವಹಿವಾಟು ನಿಯಂತ್ರಣ (ಪಿಎಂಎಲ್‌) ಕಾಯ್ದೆಯನ್ನು ಸಹಕಾರ ಬ್ಯಾಂಕ್‌ಗಳು ಗಾಳಿಗೆ ತೂರಿವೆ ಎಂಬುದನ್ನು ಈ ಪ್ರಕರಣ ಜಾಹೀರುಗೊಳಿಸಿದೆ.

ಸಹಕಾರ ಕಾಯ್ದೆ ಹಾಗೂ ಆರ್‌ಬಿಐ ಕಾಲಕಾಲಕ್ಕೆ ನೀಡುವ ನಿರ್ದೇಶನಗಳ ಅನುಸಾರ ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ. ಹಣದ ಅಕ್ರಮ ವಹಿವಾಟು ತಡೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಅನುಸರಿಸುವ ಎಲ್ಲ ಕ್ರಮಗಳನ್ನು ಸಹಕಾರ ಬ್ಯಾಂಕ್‌ಗಳೂ ಪಾಲಿಸಬೇಕು. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ಗ್ರಾಹಕರಿಂದ ಕೆವೈಸಿ ದಾಖಲೆಗಳನ್ನು ಪಡೆಯುವುದು ಕಡ್ಡಾಯ. ಸಂಶಯಾಸ್ಪದ ವಹಿವಾಟುಗಳು ಕಂಡುಬಂದಲ್ಲಿ ಕೇಂದ್ರ ಸರ್ಕಾರದ ಹಣಕಾಸು ಗುಪ್ತಚರ ಘಟಕಕ್ಕೆ ಮಾಹಿತಿ ನೀಡುವುದು ಕಡ್ಡಾಯ. ಇಂತಹ ಪ್ರಕರಣಗಳ ಕುರಿತು ಸಹಕಾರ ಬ್ಯಾಂಕ್‌ಗಳು ಆರ್‌ಬಿಐ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳ ಜತೆಗೂ ಮಾಹಿತಿ ಹಂಚಿಕೊಳ್ಳಬೇಕು. ರಾಜ್ಯದ ಸಹಕಾರ ಇಲಾಖೆಯು ಸಹಕಾರ ಬ್ಯಾಂಕ್‌ ಹಾಗೂ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣ ಹೊಂದಿದೆ. ಈಗ ಕೇಂದ್ರದಲ್ಲೂ ಸಹಕಾರ ಸಚಿವಾಲಯ ಅಸ್ತಿತ್ವಕ್ಕೆ ಬಂದಿದ್ದು, ಇನ್ನೊಂದು ಸ್ತರದ ಆಡಳಿತಾತ್ಮಕ ನಿಯಂತ್ರಣ ವ್ಯವಸ್ಥೆ ಸೃಷ್ಟಿಯಾಗಿದೆ. ಆರ್‌ಬಿಐ ಅನುಮೋದಿತ ಲೆಕ್ಕಪರಿಶೋಧಕರು
ಹಾಗೂ ರಾಜ್ಯ ಸಹಕಾರ ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿಗಳು ಸಹಕಾರ ಸಂಸ್ಥೆಗಳ ಲೆಕ್ಕಪರಿಶೋಧನೆ ನಡೆಸುತ್ತಾರೆ. ಎರಡು ವರ್ಷಗಳಿಗೊಮ್ಮೆ ಆರ್‌ಬಿಐ ಪರಿಶೀಲನೆ ನಡೆಸುತ್ತದೆ. ಇಷ್ಟಾಗಿಯೂ ಕಪ್ಪುಹಣದ ಪರಿವರ್ತನೆ, ತೆರಿಗೆ ವಂಚನೆ, ನಕಲಿ ದಾಖಲೆಗಳನ್ನು ಬಳಸಿ ಭಾರಿ ಮೊತ್ತದ ಸಾಲ ನೀಡುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿರುವುದು ನಿಯಂತ್ರಣ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ಸಹಕಾರ ಇಲಾಖೆ, ಆರ್‌ಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಎಲ್ಲ ಸಕ್ಷಮ ಪ್ರಾಧಿಕಾರಗಳೂ ಈ ವೈಫಲ್ಯದ ಹೊಣೆ ಹೊರಬೇಕು. ಸಂಪೂರ್ಣ ತಂತ್ರಜ್ಞಾನ ಬಳಕೆಯ ಮೂಲಕ ಸಹಕಾರ ಸಂಸ್ಥೆಗಳ ವಹಿವಾಟನ್ನು ಪಾರದರ್ಶಕಗೊಳಿಸಬೇಕು. ಸಂಶಯಾಸ್ಪದ ಮತ್ತು ಹಣದ ಅಕ್ರಮ ವರ್ಗಾವಣೆಗೆ ಅವಕಾಶ ಕಲ್ಪಿಸಿ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುವಂತಹ ಕೃತ್ಯಕ್ಕೆ ಸಹಕಾರ ನೀಡುತ್ತಿರುವ ಸಹಕಾರ ಸಂಸ್ಥೆಗಳು ಹಾಗೂ ಅವುಗಳ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ನೂರಾರು ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದಕ್ಕೆ ಚುನಾವಣಾ ಅಕ್ರಮಗಳ ನಂಟು ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT