ಬುಧವಾರ, ಮಾರ್ಚ್ 22, 2023
32 °C

ಸಂಪಾದಕೀಯ | ಫಿಫಾ ವಿಶ್ವಕಪ್: ಕತಾರ್ ಕಣದಲ್ಲಿ ಗೆದ್ದ ಫುಟ್‌ಬಾಲ್

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಚಾಂಪಿಯನ್ ಆಗುವುದರೊಂದಿಗೆ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಗೆ ಭವ್ಯ ತೆರೆ ಬಿದ್ದಿತು. ಶ್ರೀಮಂತಿಕೆ ಎದ್ದು ಕಾಣುವಂತಹ ಆಯೋಜನೆಯ ಮೂಲಕ ಪುಟ್ಟ ರಾಷ್ಟ್ರ ಕತಾರ್ ಜಗತ್ತಿನ ಗಮನ ಸೆಳೆಯಿತು. ಅದರಲ್ಲೂ ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡಗಳ ನಡುವಣ ರೋಚಕ ಫೈನಲ್‌ ಪಂದ್ಯವು ಈ ಟೂರ್ನಿಗೆ ಕಿರೀಟಪ್ರಾಯವಾಯಿತು. 36 ವರ್ಷಗಳ ನಂತರ ಅರ್ಜೆಂಟೀನಾ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ತಮ್ಮ ವೃತ್ತಿಜೀವನದ ಐದನೇ ವಿಶ್ವಕಪ್ ಟೂರ್ನಿ ಆಡಿದ ಮೆಸ್ಸಿ ಚಿನ್ನದ ಟ್ರೋಫಿಗೆ ಮುತ್ತಿಟ್ಟು ಭಾವುಕರಾದರು. ಅತ್ಯಂತ ಕಠಿಣ ಪೈಪೋಟಿಯೊಡ್ಡಿದ ಫ್ರಾನ್ಸ್‌, ಪಂದ್ಯ ಸೋತರೂ ಕೋಟ್ಯಂತರ ಕ್ರೀಡಾಪ್ರೇಮಿಗಳ ಹೃದಯ ಗೆದ್ದಿತು. ಅದರಲ್ಲೂ ನವಯುಗದ ತಾರೆ ಕಿಲಿಯನ್ ಎಂಬಾಪೆ ಆಟ ಮನದಲ್ಲಿ ಅಚ್ಚಳಿಯದೇ ಉಳಿಯಿತು. ಅರ್ಜೆಂಟೀನಾ ತಂಡವು ಈ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿಯೇ ‘ದುರ್ಬಲ’ ತಂಡ ಸೌದಿ ಅರೇಬಿಯಾ ಎದುರು ಪರಾಭವಗೊಂಡಿತ್ತು. ಸೋಲನ್ನೇ ಗೆಲುವಿನ ಸೋಪಾನವಾಗಿಸಿಕೊಂಡ ಅರ್ಜೆಂಟೀನಾ ವಿಜಯಿಯಾಯಿತು. 

ಈ ಸಲದ ಟೂರ್ನಿಯು ಇಂತಹ ಹತ್ತಾರು ಅಚ್ಚರಿಗಳು ಮತ್ತು ಛಲ ಬಿಡದ ಹೋರಾಟಗಳಿಗೆ ಸಾಕ್ಷಿಯಾಯಿತು. ಫುಟ್‌ಬಾಲ್‌ನಲ್ಲಿ ಪಳಗಿರುವ ದಕ್ಷಿಣ ಅಮೆರಿಕ ಮತ್ತು ಐರೋಪ್ಯ ದೇಶಗಳ ತಂಡಗಳಿಗೆ ಏಷ್ಯಾ ಖಂಡದ ತಂಡಗಳು ಒಡ್ಡಿದ ಪೈಪೋಟಿ ಅಸಾಧಾರಣವಾದುದು. ಸ್ಪೇನ್ ಮತ್ತು ನಾಲ್ಕು ಸಲ ವಿಶ್ವಕಪ್ ಗೆದ್ದಿರುವ ಜರ್ಮನಿ ತಂಡಗಳ ಎದುರು ಜಪಾನ್, ವೇಲ್ಸ್‌ ಎದುರು ಇರಾನ್, ಪೋರ್ಚುಗಲ್‌ ವಿರುದ್ಧ ದಕ್ಷಿಣ ಕೊರಿಯಾದ ವಿಜಯಗಳು ಅವಿಸ್ಮರಣೀಯ. ಆಫ್ರಿಕಾ ಖಂಡದ ಮೊರೊಕ್ಕೊ ತಂಡವು ಬೆಲ್ಜಿಯಂ, ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದು ಬಹುದೊಡ್ಡ ಸಾಧನೆಯೇ ಸರಿ. ದಿಗ್ಗಜರಾದ ಕ್ರಿಸ್ಟಿಯಾನೊ ರೊನಾಲ್ಡೊ, ಲೂಕಾ ಮಾಡ್ರಿಚ್, ಪೋಲೆಂಡ್‌ನ ರಾಬರ್ಟ್ ಲೆವಾಂಡೊವಸ್ಕಿ, ಫ್ರಾನ್ಸ್ ಗೋಲ್‌ಕೀಪರ್ ಹ್ಯುಗೊ ಲಾರಿಸ್ ಮತ್ತು ಉರುಗ್ವೆಯ ಲೂಯಿಸ್ ಸೊರೇಜ್ ಅವರು ಕೊನೆ ಬಾರಿ ವಿಶ್ವಕಪ್ ಅಂಗಳದಲ್ಲಿ ತಮ್ಮ ಕಾಲ್ಚಳಕ ಮೆರೆದರಾದರೂ ಟ್ರೋಫಿ ಜಯಿಸುವ ಕನಸು ನನಸಾಗಲಿಲ್ಲ.

ಇದೇ ಹೊತ್ತಿನಲ್ಲಿ ಪೋರ್ಚುಗಲ್‌ನ ಗೊನ್ಸಾಲೊ ರಾಮೋಸ್, ಫ್ರಾನ್ಸ್‌ನ ಆರ್ಲೆನ್ ಚುವಮೆನಿ, ಸ್ಪೇನ್‌ನ ಗಾವಿ, ಕ್ರೊವೇಷ್ಯಾದ ಗವಾರೆಡೊಲ್, ಅರ್ಜೆಂಟೀನಾದ ಎಂಜೊ ಫರ್ನಾಂಡಿಜ್, ಬ್ರೆಜಿಲ್‌ನ ವಿನೀಸಿಯಸ್ ಜೂನಿಯರ್, ಸೌದಿ ಅರೇಬಿಯಾದ ಸಲೆಹ ಅಲ್‌ಶೆಹರಿ ಮತ್ತು ಮೊರೊಕ್ಕೊದ ಅಶ್ರಫ್ ಹಕೀಮಿ ಅವರು ಭವಿಷ್ಯದ ಭರವಸೆಯ ತಾರೆಗಳಾಗಿ ಹೊರಹೊಮ್ಮಿದರು. ಇವರೆಲ್ಲರಿಂದಾಗಿ ಟೂರ್ನಿಯು ಕೊನೆಯ ಕ್ಷಣದವರೆಗೂ ಕುತೂಹಲ ಉಳಿಸಿಕೊಂಡಿತು. ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಸೇರುತ್ತಿದ್ದ ಸಾವಿರಾರು ಪ್ರೇಕ್ಷಕರು ಅಲ್ಲದೆ, ಟಿ.ವಿ, ಆ್ಯಪ್‌ಗಳ ಮೂಲಕ ಕೋಟ್ಯಂತರ ಜನ ಪಂದ್ಯಗಳನ್ನು ವೀಕ್ಷಿಸಿದರು. ಅದರಲ್ಲಿ ಭಾರತದ ಅಭಿಮಾನಿಗಳ ಸಂಖ್ಯೆಯೂ ಗಮನಾರ್ಹವಾಗಿತ್ತು. ವಿಶ್ವ ಭೂಪಟದಲ್ಲಿ ಪುಟ್ಟ ಚುಕ್ಕೆಗಳಂತೆ ಕಾಣುವ ದೇಶಗಳ ಆಟವನ್ನು ನೋಡಿದಾಗಲೆಲ್ಲ ಭಾರತ ತಂಡ ಯಾಕಿಲ್ಲವೆಂಬ ಚರ್ಚೆಗಳೂ ನಡೆದವು. ಮುಂದಿನ ಬಾರಿ ಅಮೆರಿಕದಲ್ಲಿ ನಡೆಯಲಿರುವ ಟೂರ್ನಿಯಲ್ಲಿ 48 ತಂಡಗಳಿಗೆ ಅವಕಾಶ ದೊರೆಯಲಿದೆ. ಅದರಲ್ಲಿ ಸ್ಥಾನ ಪಡೆಯುವತ್ತ ಭಾರತ ತಂಡ ಪ್ರಯತ್ನಿಸಬೇಕು. ಅದಕ್ಕಾಗಿ ಜಪಾನ್, ಕೊರಿಯಾ ಮತ್ತು ಇರಾನ್‌ ತಂಡಗಳಂತೆ ಭಾರತವೂ ಶ್ರಮಿಸಬೇಕಷ್ಟೇ.

ಆದರೆ, ಸುಮಾರು ₹ 16 ಲಕ್ಷ ಕೋಟಿ ಖರ್ಚು ಮಾಡಿ ಆಯೋಜಿಸಲಾದ ಈ ಬಾರಿಯ ಟೂರ್ನಿಯಲ್ಲಿಯೂ ಕೆಲವು ವಿವಾದಗಳಾದವು. ಕತಾರ್‌ ದೇಶವನ್ನು ಚೆಂದಗಾಣಿಸಿದ ವಲಸೆ ಕಾರ್ಮಿಕರ ಸಾವು–ನೋವು, ವಸ್ತ್ರಸಂಹಿತೆ, ಬಿಯರ್ ನಿರ್ಬಂಧದಂಥ ನಿಯಮಗಳೂ ದೊಡ್ಡ ಸುದ್ದಿಗಳಾದವು. ಕ್ರೀಡಾಂಗಣದೊಳಗೂ ಕೆಲವು ವಿಷಯಗಳು ಚರ್ಚೆಗೆ ಗ್ರಾಸವಾದವು. ಪೋರ್ಚುಗಲ್ ತಾರೆ ರೊನಾಲ್ಡೊ ಅವರನ್ನು ಸ್ವಿಟ್ಜರ್‌ಲೆಂಡ್ ವಿರುದ್ಧದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಬೆಂಚ್‌ನಲ್ಲಿ ಕೂರಿಸಿದ ತಂಡದ ಮ್ಯಾನೇಜರ್ ಫರ್ನಾಂಡೊ ಸ್ಯಾಂಟೋಸ್ ನಿರ್ಧಾರದ ಪರ, ವಿರುದ್ಧದ ಚರ್ಚೆಗಳು ಇನ್ನೂ ಮುಗಿದಿಲ್ಲ. ಕೆಲವು ಪಂದ್ಯಗಳಲ್ಲಿ ನೀಡಿದ ತೀರ್ಪುಗಳಿಗಾಗಿ ರೆಫರಿಗಳೂ ಟೀಕೆಗೆ ಗುರಿಯಾದರು. ಇವೆಲ್ಲದರಾಚೆ 28 ದಿನಗಳ ಈ ಮಹಾಮೇಳದಲ್ಲಿ 32 ರಾಷ್ಟ್ರಗಳು ತಮ್ಮ ಸಾಮರ್ಥ್ಯ ಪಣಕ್ಕೊಡ್ಡಿ ಫುಟ್‌ಬಾಲ್ ಕ್ರೀಡೆಯನ್ನು ಗೆಲ್ಲಿಸಿದವು. ಫೈನಲ್ ಪಂದ್ಯದ ನಂತರ ಮೆಸ್ಸಿ ಮತ್ತು ಎಂಬಾಪೆ ಆಲಿಂಗಿಸಿಕೊಂಡು ಕೈಕೈ ಹಿಡಿದು ಹೆಜ್ಜೆ ಹಾಕಿದಾಗ ಕ್ರೀಡಾಸ್ಫೂರ್ತಿಯೂ ವಿಜೃಂಭಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು