ಶನಿವಾರ, ಜುಲೈ 24, 2021
22 °C

ಸಂಪಾದಕೀಯ | ರಾಜ್ಯಸಭೆ ಚುನಾವಣೆ: ಕಾರ್ಯಕರ್ತರ ನೈತಿಕ ಬಲ ಹೆಚ್ಚಿಸಿದ ಬಿಜೆಪಿ ನಡೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದಶಕಗಳಿಂದ ಅಧಿಕಾರ ಅನುಭವಿಸುತ್ತಾ ಬಂದವರನ್ನೇ ರಾಜ್ಯಸಭೆಗೂ ಆಯ್ಕೆ ಮಾಡಬೇಕಾದ ಅನಿವಾರ್ಯ ಒದಗಿರುವುದರ ಸಾಧಕ–ಬಾಧಕ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್‌ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಕರ್ನಾಟಕ ವಿಧಾನಸಭೆಯಿಂದ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಣಕ್ಕಿಳಿಸಿವೆ. ಈ ನಾಲ್ವರು ಅವಿರೋಧವಾಗಿ ಆಯ್ಕೆಯಾಗುವುದೂ ನಿಚ್ಚಳವಾಗಿದೆ. ರಾಜ್ಯದಿಂದ ರಾಜ್ಯಸಭೆಗೆ ಈ ಹಿಂದೆ ಚುನಾವಣೆ ನಡೆದ ಹಲವು ಸಂದರ್ಭಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಕೆಲವು ಉದ್ಯಮಿಗಳನ್ನು ಕರ್ನಾಟಕವು ಮೇಲ್ಮನೆ ಸದಸ್ಯರನ್ನಾಗಿ ಆರಿಸಿ ಕಳುಹಿಸಿದೆ.

ವೆಂಕಯ್ಯ ನಾಯ್ಡು, ನಿರ್ಮಲಾ ಸೀತಾರಾಮನ್‌ ಮುಂತಾದವರೂ ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದಾರೆ. ಅಭ್ಯರ್ಥಿಗಳಾಗಿ ಇವರ ಹೆಸರು ಪ್ರಕಟವಾದಾಗಲೂ ‘ಕರ್ನಾಟಕದವರಲ್ಲದ ಇವರನ್ನು ಕರ್ನಾಟಕದಿಂದ ಆಯ್ಕೆ ಮಾಡುವುದು ಎಷ್ಟು ಸರಿ’ ಎಂಬ ಚರ್ಚೆ ನಡೆದಿತ್ತು. ಈ ಬಾರಿ ಬಿಜೆಪಿ ಅಭ್ಯರ್ಥಿ ಪಟ್ಟಿಯು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಹಿಂದುಳಿದ ಸವಿತಾ ಸಮಾಜದ ಅಶೋಕ‌ ಗಸ್ತಿ, ಲಿಂಗಾಯತ ಸಮುದಾಯದ ಈರಣ್ಣ ಕಡಾಡಿ ಬಿಜೆಪಿ ಅಭ್ಯರ್ಥಿಗಳು. ಈ ಇಬ್ಬರೂ ಸುಮಾರು ಮೂರು ದಶಕಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದರೂ ಪ್ರಭಾವಿ ನಾಯಕರೆಂದು ಹೆಸರಾದವರಲ್ಲ; ದೊಡ್ಡ ಅಧಿಕಾರದ ಸ್ಥಾನದಲ್ಲಿ ಇದ್ದವರೂ ಅಲ್ಲ; ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳಾಗಬಹುದು ಎಂಬ ನಿರೀಕ್ಷೆ ಅವರಿಗೇ ಇರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ರಾಜ್ಯ ಬಿಜೆಪಿಯ ಪ್ರಮುಖರ ಸಮಿತಿಯು ಶಿಫಾರಸು ಮಾಡಿದ ಪಟ್ಟಿಯಲ್ಲಿ ಇವರ ಹೆಸರೇ ಇರಲಿಲ್ಲ. ರಾಜ್ಯ ಘಟಕವು ಶಿಫಾರಸು ಮಾಡಿದ ಪ್ರಭಾವಿಗಳ ಹೆಸರಿರುವ ಪಟ್ಟಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಬಿಜೆಪಿ ವರಿಷ್ಠರು‌, ಪಕ್ಷಕ್ಕೆ ನಿಷ್ಠರಾಗಿರುವ ಇಬ್ಬರು ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶದ ಅವಕಾಶ ನೀಡಿದ್ದಾರೆ.

ಬಿಜೆಪಿ ಕೇಂದ್ರ ನಾಯಕತ್ವದ ಈ ನಿರ್ಧಾರದ ಹಿಂದೆ ಹಲವು ಸಂದೇಶಗಳನ್ನು ರವಾನಿಸುವ ಉದ್ದೇಶ ಇದ್ದಂತೆ ಕಾಣಿಸುತ್ತದೆ. ರಾಜ್ಯಸಭೆ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರಿ ಹಗ್ಗಜಗ್ಗಾಟ ನಡೆದಿತ್ತು. ಆಡಳಿತ ಪಕ್ಷದ ಪ್ರಭಾವಿ ಮುಖಂಡರು ಒತ್ತಡ ತಂತ್ರವನ್ನೂ ಆರಂಭಿಸಿದ್ದರು. ಆದರೆ, ಯಾವುದೇ ರೀತಿಯ ಪ್ರಭಾವ, ಒತ್ತಡಕ್ಕೆ ಮಣಿಯುವುದಿಲ್ಲ ಎಂಬುದನ್ನು ಬಿಜೆಪಿ ನಾಯಕತ್ವ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ತಳಮಟ್ಟದ ಕಾರ್ಯಕರ್ತರ ಪಕ್ಷ ಎಂದು ಬಿಜೆಪಿ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಈಗಿನ ಆಯ್ಕೆಯು ಅದಕ್ಕೆ ಪೂರಕವಾಗಿಯೂ ಇದೆ. ನಾಯಕರಿಗಷ್ಟೇ ಅಲ್ಲ ಇಲ್ಲಿ ಮಣೆ ಎಂಬ ಸಂದೇಶವು ಕಾರ್ಯಕರ್ತರಲ್ಲಿ ದೊಡ್ಡ ಉಮೇದು ಮೂಡಿಸಬಹುದು. ಅಧಿಕಾರ ಸ್ಥಾನದ ನಿರೀಕ್ಷೆಯು ಅವರ ಪಕ್ಷ ನಿಷ್ಠೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾದ ಹೆಸರುಗಳನ್ನು ಬದಿಗೆ ತಳ್ಳುವ ಮೂಲಕ, ಅವರಿಗೆ ಚುರುಕು ಮುಟ್ಟಿಸುವ ಯತ್ನವನ್ನೂ ವರಿಷ್ಠರು ಮಾಡಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಅದರಲ್ಲಿ ಹುರುಳಿರಬಹುದು ಎಂದೂ ಅನಿಸುತ್ತಿದೆ. ಆಂತರಿಕ ಪ್ರಜಾ‍ಪ್ರಭುತ್ವ ಇರುವ ಪಕ್ಷ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ, ರಾಜ್ಯ ಘಟಕವು ಕಳಿಸಿದ ಪಟ್ಟಿಯನ್ನು ನಿರ್ಲಕ್ಷಿಸುವ ಮೂಲಕ ಬಿಜೆಪಿಯಲ್ಲಿ ಕೇಂದ್ರ ನಾಯಕತ್ವದ ಹಿಡಿತ ಇನ್ನಷ್ಟು ಗಟ್ಟಿಯಾಗಿ ಬೇರೂರಿದೆ ಎಂಬುದು ಈಗ ನಿಚ್ಚಳವಾಗಿದೆ.

ಯಾವುದೇ ರಾಜಕೀಯ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ; ಅವರು ತಳಮಟ್ಟದಲ್ಲಿ ಹರಿಸುವ ಬೆವರಿನ ಮೂಲಕವೇ ಪಕ್ಷವು ಅಧಿಕಾರಕ್ಕೆ ಏರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಸತ್ಯ ಮನವರಿಕೆ ಆಗಿದೆ ಎಂದು ತೋರಿಸಿಕೊಡುವಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತೀ ಹಂತದಲ್ಲೂ ಎಡವುತ್ತಲೇ ಇವೆ. 77 ವರ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್; ಪಕ್ಷದ ರಾಷ್ಟ್ರೀಯ ಅಧ್ಯಕ್ಷ, 87 ವರ್ಷದ ಎಚ್‌.ಡಿ.ದೇವೇಗೌಡ ಅವರನ್ನು ಜೆಡಿಎಸ್‌ ಆಯ್ಕೆ ಮಾಡಿವೆ.

ರಾಜ್ಯಸಭೆಯಲ್ಲಿ ಶಾಸನಗಳ ಮೇಲಿನ ಚರ್ಚೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಬೇಕಾದ ಸಾಮರ್ಥ್ಯ ಮತ್ತು ಅನುಭವ ಈ ಇಬ್ಬರಿಗೂ ಇದೆ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಇಬ್ಬರೂ ಸೋತಿದ್ದರು. ಜನರಿಂದ ನೇರವಾಗಿ ಚುನಾಯಿತರಾಗಿ, ದಶಕಗಳಿಂದ ಅಧಿಕಾರ ಅನುಭವಿಸುತ್ತಾ ಬಂದವರನ್ನೇ ರಾಜ್ಯಸಭೆಗೂ ಆಯ್ಕೆ ಮಾಡಬೇಕಾದ ಅನಿವಾರ್ಯವು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಒದಗಿರುವುದರ ಸಾಧಕ–ಬಾಧಕ ಕುರಿತು ಈಗಲಾದರೂ ಆ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಲೋಕಸಭೆಯಲ್ಲಿ ಭಾರಿ ಬಹುಮತ ಇರುವ ಸರ್ಕಾರವು ತನ್ನಿಚ್ಛೆಯ ಎಲ್ಲವನ್ನೂ ದೇಶದ ಮೇಲೆ ಹೇರುವುದನ್ನು ತಡೆಯುವ ಉದ್ದೇಶವೂ ರಾಜ್ಯಸಭೆ ರಚನೆಯ ಹಿಂದೆ ಇದೆ. ಲೋಕಸಭೆಯು ಅಂಗೀಕರಿಸುವ ಮಸೂದೆಗಳನ್ನು ಒರೆಗೆ ಹಚ್ಚುವ ಅಧಿಕಾರ ಈ ಸದನಕ್ಕೆ ಇದೆ. ಈ ಶಾಸನಸಭೆಗೆ ಆಯ್ಕೆಯಾಗಲಿರುವ ಅಭ್ಯರ್ಥಿಗಳು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ ಎಂಬುದರ ಮೇಲೆ ಅವರ ಆಯ್ಕೆಯ ಯುಕ್ತಾಯುಕ್ತತೆಯು ನಿರ್ಧಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು