ಶನಿವಾರ, ಜನವರಿ 22, 2022
16 °C

ಸಂಪಾದಕೀಯ | ಅಧಿಕಾರ ಅವಧಿ ವಿಸ್ತರಣೆಗೆ ಸುಗ್ರೀವಾಜ್ಞೆ ಕೋರ್ಟ್‌ ಆಶಯಕ್ಕೆ ವಿರುದ್ಧ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ.) ಮುಖ್ಯಸ್ಥರ ಅಧಿಕಾರ ಅವಧಿಯನ್ನು ವಿಸ್ತರಣೆ ಮಾಡುವ ಕೇಂದ್ರ ಸರ್ಕಾರದ ತೀರ್ಮಾನವು ಸರಿಯಲ್ಲ. ಇದರಿಂದ ಕೆಟ್ಟ ಪದ್ಧತಿಯೊಂದನ್ನು ಆರಂಭಿಸಿದಂತಾಗುವುದು. ಸುಪ್ರೀಂ ಕೋರ್ಟ್‌ ಈಚೆಗೆ ನೀಡಿರುವ ಒಂದು ತೀರ್ಪು ಹಾಗೂ ಹಿಂದೆ ನೀಡಿದ್ದ ಹಲವು ತೀರ್ಪುಗಳಿಗೆ ವಿರುದ್ಧವಾಗಿ ಇದೆ ಕೇಂದ್ರದ ಈ ತೀರ್ಮಾನ.

ಈ ಎರಡು ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿ ಎರಡು ವರ್ಷಗಳು. ಆದರೆ, ಅವರ ಅಧಿಕಾರ ಅವಧಿಯನ್ನು ಗರಿಷ್ಠ ಐದು ವರ್ಷಗಳಿಗೆ ವಿಸ್ತರಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರವು ಎರಡು ಸುಗ್ರೀವಾಜ್ಞೆಗಳ ಮೂಲಕ ತನಗೆ ತಾನೇ ಕೊಟ್ಟುಕೊಂಡಿದೆ. ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರವೇ ಸುಗ್ರೀವಾಜ್ಞೆಯ ಮೂಲಕ ಕಾನೂನು ಜಾರಿಗೆ ತರಬೇಕು.

ಅಂತಹ ಪರಿಸ್ಥಿತಿ ಇಲ್ಲ ಎಂದಾದರೆ, ಶಾಸನಸಭೆಗಳ ಮೂಲಕವೇ ಕಾನೂನು ರೂಪಿಸಬೇಕು. ಇ.ಡಿ. ಮುಖ್ಯಸ್ಥರ ಅಧಿಕಾರ ಅವಧಿಯು ಕೊನೆಗೊಳ್ಳಲಿತ್ತು ಎಂಬುದನ್ನು ಹೊರತು‍ಪಡಿಸಿದರೆ, ಇಲ್ಲಿ ಯಾವುದೇ ತುರ್ತು ಸಂದರ್ಭ ಎದುರಾಗಿರಲಿಲ್ಲ. ಒಂದು ಸುಗ್ರೀವಾಜ್ಞೆಯಿಂದಾಗಿ ಅವರ ಅಧಿಕಾರ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಈ ತಿಂಗಳ ಅಂತ್ಯಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಹೀಗಿರುವಾಗ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರುವ ಅಗತ್ಯ ಏನಿತ್ತು? ಸುಗ್ರೀವಾಜ್ಞೆಗಳನ್ನು ಅತ್ಯಂತ ಜರೂರಿನ ಸಂದರ್ಭಗಳಲ್ಲಿ ಮಾತ್ರ ಜಾರಿಗೆ ತರಬೇಕೇ ವಿನಾ, ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸುಗ್ರೀವಾಜ್ಞೆಯ ಮೊರೆ ಹೋಗಬಾರದು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಸ್ಪಷ್ಟವಾಗಿ ಹೇಳಿದೆ.

ಆದರೆ, ಕೇಂದ್ರ ಸರ್ಕಾರವು ಸಿಬಿಐ ಮತ್ತು ಇ.ಡಿ. ಮುಖ್ಯಸ್ಥರ ಅಧಿಕಾರ ಅವಧಿಯ ವಿಚಾರವಾಗಿ ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದರ ಹಿಂದೆ ಇರುವುದು ರಾಜಕೀಯ ಉದ್ದೇಶ ಸಾಧನೆಯೇ ಹೊರತು ಬೇರಾವ ಕಾರಣವೂ ಅಲ್ಲ ಎಂದು ಭಾಸವಾಗುತ್ತಿದೆ. ಇ.ಡಿ. ಮುಖ್ಯಸ್ಥ ಎಸ್.ಕೆ. ಮಿಶ್ರಾ ಅವರ ಅಧಿಕಾರ ಅವಧಿಯು ನವೆಂಬರ್ 18ರಂದು ಕೊನೆಗೊಳ್ಳಬೇಕಿತ್ತು. ಈಗ ಅದನ್ನು ವಿಸ್ತರಿಸಲಾಗಿದೆ. ಅವರನ್ನು 2018ರಲ್ಲಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಹಿಂದಿನ ವರ್ಷದ ನವೆಂಬರ್‌ನಲ್ಲಿ ಅವರ ಅಧಿಕಾರ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಣೆ ಮಾಡಲಾಗಿತ್ತು. ಆಗ ಸುಪ್ರೀಂ ಕೋರ್ಟ್‌ ಈ ವಿಸ್ತರಣೆಯ ಬಗ್ಗೆ ಅತೃಪ್ತಿವ್ಯಕ್ತಪಡಿಸಿತ್ತು.

ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಅಧಿಕಾರ ಅವಧಿಯನ್ನು ವಿಸ್ತರಿಸಬೇಕು, ಅದನ್ನು ಕೂಡ ಅಲ್ಪ ಅವಧಿಗೆ ಮಾತ್ರ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಈಗಿನ ಸುಗ್ರೀವಾಜ್ಞೆಗಳು ಈ ನಿರ್ದೇಶನದ ಉಲ್ಲಂಘನೆಯಂತೆ ಇದೆ. ಕೇಂದ್ರದ ತೀರ್ಮಾನವು ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ್ದ ಆಶಯಗಳಿಗೆ ವಿರುದ್ಧವಾಗಿ ಇದೆ. ಈ ‍ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಇ.ಡಿ. ಹಾಗೂ ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ನಿಗದಿ ಮಾಡಿತ್ತು.

ಇದರಿಂದಾಗಿ ಆ ಹುದ್ದೆಯಲ್ಲಿ ಇರುವವರು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಕೋರ್ಟ್ ಆಶಿಸಿತ್ತು. ಆದರೆ, ಅಧಿಕಾರ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಣೆ ಮಾಡಲು ಈಗ ಸುಗ್ರೀವಾಜ್ಞೆಗಳ ಮೂಲಕ ಅವಕಾಶ ಮಾಡಿಕೊಂಡಿರುವುದರಿಂದ, ಅಧಿಕಾರ ಅವಧಿ ವಿಸ್ತರಣೆ ಪಡೆದುಕೊಂಡವರು ಸರ್ಕಾರಕ್ಕೆ ಕೃತಜ್ಞರಾಗಿ ಇರುವಂತಾಗಬಹುದು. ಇದರ ಪರಿಣಾಮವಾಗಿ ಈ ಎರಡು ತನಿಖಾ ಸಂಸ್ಥೆಗಳ ಸ್ವಾಯತ್ತೆಯು ಇನ್ನಷ್ಟು ತಗ್ಗಬಹುದು.

ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ. ಎನ್‌ಸಿಬಿ, ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ಸರ್ಕಾರದ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು, ಟೀಕಾಕಾರರ ಬಾಯಿ ಮುಚ್ಚಿಸಲು ಮತ್ತೆ ಮತ್ತೆ ಬಳಕೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವ ಚಾಳಿ ಹಿಂದಿನಿಂದಲೂ ನಡೆದುಬಂದಿದೆ. ಆದರೆ, ಇದು ಈಗಿನ ಸರ್ಕಾರದ ಅವಧಿಯಲ್ಲಿ ತೀರಾ ವ್ಯಾಪಕವಾಗಿಯೂ ಎಗ್ಗಿಲ್ಲದೆಯೂ ನಡೆಯುತ್ತಿದೆ. ಇ.ಡಿ. ಅಧಿಕಾರಿಗಳು ವಿರೋಧ ಪಕ್ಷಗಳ ಹಲವು ಮುಖಂಡರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
 

ಅವರ ವಿರುದ್ಧದ ಪ್ರಕರಣಗಳ ಹಿಂದಿನ ರಾಜಕೀಯ ಹಾಗೂ ಅವರ ಮೇಲಿನ ದಾಳಿಗಳ ಹಿಂದಿನ ರಾಜಕೀಯವು ತೀರಾ ಸ್ಪಷ್ಟವಾಗಿ ಗೋಚರವಾಗುತ್ತ ಇದೆ. ಈಗ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿಯನ್ನು ವಿಸ್ತರಿಸುತ್ತಿರುವುದು, ಅವರು ವೈಯಕ್ತಿಕವಾಗಿಯೂ ಆಸಕ್ತಿ ತೋರಿಸಿ ಇಂತಹ ದಾಳಿಗಳನ್ನು ಮುಂದುವರಿಸಲಿ ಎಂಬ ಕಾರಣಕ್ಕೂ ಇರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು