ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಹಾರಾಷ್ಟ್ರದ ರಾಜಕೀಯ ವಿದ್ಯಮಾನ ರಾಜ್ಯಪಾಲರ ಪಕ್ಷಪಾತಿ ನಿರ್ಧಾರ

Last Updated 10 ಜುಲೈ 2022, 19:30 IST
ಅಕ್ಷರ ಗಾತ್ರ

ರಾಜ್ಯಪಾಲರು ತಮ್ಮ ರಾಜ್ಯದಲ್ಲಿನ ಚುನಾಯಿತ ಸರ್ಕಾರದ ಜೊತೆ ನಡೆದುಕೊಳ್ಳುವ ರೀತಿಯು ಹಲವು ಬಾರಿ ವಿವಾದ ಸೃಷ್ಟಿಸಿದೆ. ರಾಜ್ಯಪಾಲರ ಕೆಲವು ವರ್ತನೆಗಳು ಸ್ಪಷ್ಟವಾಗಿ ಪಕ್ಷಪಾತಿಯಾಗಿ, ರಾಜಕೀಯ ಪ್ರೇರಿತವಾಗಿ ಇದ್ದ ನಿದರ್ಶನಗಳೂ ಇವೆ. ಅದರಲ್ಲೂ ಮುಖ್ಯವಾಗಿ, ಚುನಾವಣೆ ನಂತರ ಸರ್ಕಾರ ರಚನೆಯ ಸಂದರ್ಭದಲ್ಲಿ ಅಥವಾ ಸರ್ಕಾರವೊಂದಕ್ಕೆ ಬಹುಮತ ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಬಂದಾಗ ಕೆಲವು ರಾಜ್ಯಗಳ ರಾಜ್ಯಪಾಲರು ನಡೆದುಕೊಂಡ ರೀತಿಯು ‍ವಿವಾದಗಳಿಗೆ ಅತೀತವಾಗಿ ಇರಲಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ಪಕ್ಷದ ನೇತೃತ್ವದ ಸರ್ಕಾರಗಳನ್ನು ರಕ್ಷಿಸಲು ರಾಜ್ಯಪಾಲರು ಯತ್ನಿಸಿದ ನಿದರ್ಶನಗಳಿವೆ. ಕೇಂದ್ರ ಸರ್ಕಾರದ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿಲ್ಲದ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು ಉರುಳಿಸುವ ಯತ್ನಕ್ಕೆ ಬೆಂಬಲವಾಗಬಹುದಾದ ಕೆಲಸ ಮಾಡಿದ್ದೂ ಇದೆ. ಈಚೆಗೆ ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದ ಕೆಲವು ಶಾಸಕರು ಒಟ್ಟಾಗಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ತಿರುಗಿಬಿದ್ದರು.ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದರು. ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಆ ಸಂದರ್ಭದಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಪಕ್ಷಪಾತಿತನದಿಂದ ಕೂಡಿದ್ದವು. ಆ ನಿರ್ಧಾರಗಳು ಭಿನ್ನಮತೀಯ ಶಾಸಕರಿಗೆ ಪ್ರಮುಖ ಸಂದರ್ಭಗಳಲ್ಲಿ ಮಹತ್ವದ ನೆರವು ಒದಗಿಸಿದವು. ಅವರ ನಿರ್ಧಾರಗಳ ಪೈಕಿ ಎರಡು ಬಹಳ ಮುಖ್ಯವಾಗಿ ಕಾಣಿಸುತ್ತವೆ.

ಜೂನ್‌ 29ಕ್ಕೆ ವಿಧಾನಸಭೆಯ ಅಧಿವೇಶನ ಕರೆದು, ವಿಶ್ವಾಸಮತ ಯಾಚನೆ ನಡೆಸಬೇಕು ಎಂದು ರಾಜ್ಯಪಾಲರು ಹೇಳಿದ್ದು ಆ ಎರಡು ತೀರ್ಮಾನಗಳ ಪೈಕಿ ಮೊದಲನೆಯದು. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಭಿನ್ನಮತೀಯ ಶಾಸಕರು ತಮಗೆ ‍ತಿಳಿಸಿದ 24 ಗಂಟೆಗಳ ಒಳಗೆ ರಾಜ್ಯಪಾಲರು ಈ ತೀರ್ಮಾನ ತೆಗೆದುಕೊಂಡರು. ವಿಧಾನಸಭೆಯ ಉಪಾಧ್ಯಕ್ಷ ನರಹರಿ ಜಿರವಾಲ್ ಅವರು ಜೂನ್‌ 25ರಂದು ನೀಡಿದ್ದ ಅನರ್ಹತೆಯ ನೋಟಿಸ್ ಪ್ರಶ್ನಿಸಿ ಭಿನ್ನಮತೀಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದರೂ ರಾಜ್ಯಪಾಲರು ಈ ತೀರ್ಮಾನ ಕೈಗೊಂಡರು. ವಿಧಾನಸಭೆ ಉಪಾಧ್ಯಕ್ಷರ ಪದಚ್ಯುತಿಗೆ ನೀಡಿರುವ ನೋಟಿಸ್ ಇತ್ಯರ್ಥವಾಗದೆ ಇದ್ದ ಸಂದರ್ಭದಲ್ಲಿ, ಅನರ್ಹತೆಗೆ ಸಂಬಂಧಿಸಿದಂತೆ ಉಪಾಧ್ಯಕ್ಷರು ಯಾವುದೇ ತೀರ್ಮಾನ ಕೈಗೊಳ್ಳಲು ಅವಕಾಶ ಇಲ್ಲ ಎಂದು ಭಿನ್ನಮತೀಯ ಶಾಸಕರು ವಾದಿಸಿದ್ದರು. ಭಿನ್ನಮತೀಯರು ಮತ್ತು ಇತರರ ಅರ್ಜಿಗಳನ್ನು ಜುಲೈ 11ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಆ ಹೊತ್ತಿಗೆ ಅರ್ಜಿಗಳೇ ವ್ಯರ್ಥವಾಗುವ ಪರಿಸ್ಥಿತಿ ಸೃಷ್ಟಿಯಾಗಿರುವುದಿಲ್ಲ ಎಂದು ತಾನು ಆಶಿಸುವುದಾಗಿ ಕೋರ್ಟ್‌ ಹೇಳಿತ್ತು. ಆದರೆ, ಅರ್ಜಿಗಳು ಬಾಕಿ ಇದ್ದ ಹೊತ್ತಿನಲ್ಲಿಯೇ ರಾಜ್ಯಪಾಲರು ಅಧಿವೇಶನ ಕರೆದರು. ರಾಜ್ಯ‍ಪಾಲರ ತೀರ್ಮಾನವು ಪರಿಸ್ಥಿತಿಯನ್ನು ಬದಲಾಯಿಸಿತು. ರಾಜ್ಯಪಾಲರು ಕೈಗೊಂಡ ತೀರ್ಮಾನವು ಸರಿಯಲ್ಲ. ಅದು ಭಿನ್ನಮತೀಯ ಶಾಸಕರಿಗೆ ನೆರವು ಕೊಡುವ ಉದ್ದೇಶ ಹೊಂದಿತ್ತು.

ರಾಜ್ಯಪಾಲರ ಎರಡನೆಯ ತೀರ್ಮಾನವು ವಿಧಾನಸಭೆಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ್ದು. ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಮಾಡಲು ಹಿಂದೆ ಒಪ್ಪಿರದಿದ್ದರೂ, ಬಿಜೆಪಿಯ ರಾಹುಲ್ ನಾರ್ವೇಕರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲು ರಾಜ್ಯಪಾಲರು ಅವಕಾಶ ಮಾಡಿಕೊಟ್ಟರು. ಅಧ್ಯಕ್ಷರ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿ ಮಾಡುವ ವಿವೇಚನಾ ಅಧಿಕಾರ ಅಥವಾ ಕಾನೂನಿನ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಆಧರಿಸಿ ಆ ತೀರ್ಮಾನ ಕೈಗೊಳ್ಳಬೇಕು. ಚುನಾವಣೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ ಎಂಬ ಕಾರಣಕ್ಕೆ ರಾಜ್ಯಪಾಲರು ದಿನಾಂಕ ನಿಗದಿ ಮಾಡಲು ಒಪ್ಪಿರಲಿಲ್ಲ. ಆದರೆ, ರಾಜ್ಯಪಾಲರು ತಾವು ಎತ್ತಿದ್ದ ಆಕ್ಷೇಪಗಳನ್ನು, ಬಿಜೆಪಿ ಮತ್ತು ಶಿವಸೇನಾ ಭಿನ್ನಮತೀಯರ ಮೈತ್ರಿ ಸರ್ಕಾರ ರಚನೆಯಾದ ನಂತರ ನುಂಗಿಕೊಂಡರು. ದಿನಾಂಕ ನಿಗದಿ ಮಾಡಿ, ಹೊಸ ಅಧ್ಯಕ್ಷರ ಆಯ್ಕೆಗೆ ನೆರವು ನೀಡಿದರು. ವಿಶ್ವಾಸಮತ ಯಾಚನೆಯ ಪ‍್ರಕ್ರಿಯೆ ನಡೆಸಲು ಹೊಸ ಸರ್ಕಾರಕ್ಕೆ ಸಭಾಧ್ಯಕ್ಷರ ಅಗತ್ಯವಿತ್ತು. ರಾಜ್ಯಪಾಲರು ತಮ್ಮ ಸಾಂವಿಧಾನಿಕ ಸ್ಥಾನ ಮತ್ತು ಅಧಿಕಾರವನ್ನು ಬಿಜೆಪಿ ಮತ್ತು ಶಿವಸೇನಾ ಭಿನ್ನಮತೀಯರಿಗೆ ನೆರವು ಒದಗಿಸಲು ದುರ್ಬಳಕೆ ಮಾಡಿಕೊಂಡರು. ಆ ಮೂಲಕ, ಸುಪ್ರೀಂ ಕೋರ್ಟ್‌ ಇನ್ನಷ್ಟೇ ತೀರ್ಮಾನ ಮಾಡಬೇಕಿರುವ ಸಾಂವಿಧಾನಿಕ ಪ್ರಶ್ನೆಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT