ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಿಯು ಫಲಿತಾಂಶ: ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಮೂಹಿಕ ಸಂಕಲ್ಪಬಲದ ಫಲ

Last Updated 14 ಜುಲೈ 2020, 21:47 IST
ಅಕ್ಷರ ಗಾತ್ರ

ಈ ಬಾರಿಯ ಪಿಯು ಪರೀಕ್ಷಾ ಫಲಿತಾಂಶವು ಹಿಂದಿನ ವರ್ಷಗಳ ಅಂಕಿಅಂಶಗಳನ್ನೇ ಬಹುತೇಕ ಪ್ರತಿಫಲಿಸುತ್ತಿದ್ದರೂ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿ ಒಂದು ವಿಶೇಷ ವಿದ್ಯಮಾನವಾಗಿ ಉಳಿಯಲಿದೆ. ಕೊರೊನಾ ಸೋಂಕನ್ನು ನಿಯಂತ್ರಿಸುವ ಕಾರಣದಿಂದ ಮಾರ್ಚ್‌ 24ರಂದು ದೇಶದಲ್ಲಿ ಮೂರು ವಾರಗಳ ಲಾಕ್‌ಡೌನ್‌ ಘೋಷಿಸಿದಾಗ, ಪಿಯು ಪರೀಕ್ಷೆ ಕೊನೆಯ ಹಂತದಲ್ಲಿತ್ತು. ಲಾಕ್‌ಡೌನ್‌ ಕಾರಣದಿಂದ ಮುಂದಕ್ಕೆ ಹೋದ ಇಂಗ್ಲಿಷ್‌ ವಿಷಯದ ಪರೀಕ್ಷೆಯನ್ನು ನಡೆಸಬೇಕೋ ಬೇಡವೋ ಎನ್ನುವ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಚರ್ಚೆ ನಡೆದಿತ್ತು.

ಆತಂಕದ ನಡುವೆಯೇ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ, ಜೂನ್‌ 18ರಂದು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿತ್ತು. ಆ ಪರೀಕ್ಷೆ ತಂದುಕೊಟ್ಟ ಆತ್ಮವಿಶ್ವಾಸವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲಿಕ್ಕೆ ಹುಮ್ಮಸ್ಸನ್ನು ತುಂಬಿತು. ಕೊರೊನಾ ಸೋಂಕು ತೀವ್ರಗೊಂಡ ಸಂದರ್ಭದಲ್ಲೇ ಮೌಲ್ಯಮಾಪನವನ್ನೂ ನಡೆಸಿ, ಕ್ಷಿಪ್ರ ಕಾಲದಲ್ಲೇ ಫಲಿತಾಂಶವನ್ನು ಪ್ರಕಟಿಸಿರುವುದು ಪದವಿಪೂರ್ವ ಶಿಕ್ಷಣ ಇಲಾಖೆಯ ಸಾಧನೆಯಾಗಿದೆ. ಪ್ರಶ್ನೆಪತ್ರಿಕೆಗಳ ಸೋರಿಕೆ ಅವಾಂತರಕ್ಕೆ ಕಡಿವಾಣ ಹಾಕಿದ್ದಲ್ಲದೆ, ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್‌ಗೆ ನೇರವಾಗಿ ತಲುಪಿಸಿರುವುದು ಕೂಡ ವಿಶೇಷ ಸಂಗತಿಯೇ ಆಗಿದೆ. ಈ ಯಶಸ್ಸನ್ನು ಸಾಧ್ಯವಾಗಿಸಿದ್ದಕ್ಕಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ, ಆತಂಕವನ್ನು ಮೆಟ್ಟಿ ನಿಂತು ಪರೀಕ್ಷೆ ಬರೆದ ಮಕ್ಕಳು ಹಾಗೂ ಅವರನ್ನು ಪರೀಕ್ಷೆಗೆ ಸಜ್ಜುಗೊಳಿಸಿದ ಪೋಷಕರಿಗೆ ಅಭಿನಂದನೆ ಸಲ್ಲಬೇಕು. ಪಿಯು ಫಲಿತಾಂಶದೊಂದಿಗೆ ಸಿಬಿಎಸ್‌ಇ ಹಾಗೂ ಐಸಿಎಸ್‌ಇಯ 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳೂ ಈಗಾಗಲೇ ಪ್ರಕಟಗೊಂಡಿವೆ. ಈ ಫಲಿತಾಂಶಗಳ ಮೂಲಕ ಕೊರೊನಾ ಸಂದರ್ಭದಲ್ಲೂ ಶೈಕ್ಷಣಿಕ ವಲಯವು ತನ್ನ ವಾರ್ಷಿಕ ಪ್ರಕ್ರಿಯೆಯ ಬಹು ಮುಖ್ಯವಾದ ಘಟ್ಟವೊಂದನ್ನು ಪೂರೈಸಿದಂತಾಗಿದೆ.

ಕಳೆದ ವರ್ಷಗಳಂತೆ ಈ ಬಾರಿಯೂ ಫಲಿತಾಂಶದ ಅಂಕಿಅಂಶಗಳಲ್ಲಿ ಹೆಚ್ಚಿನ ಏರುಪೇರೇನಿಲ್ಲ. 6.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಯಶಸ್ಸಿನ ಪ್ರಮಾಣದಲ್ಲಿ ಬಾಲಕಿಯರು ಎಂದಿನಂತೆ ಹುಡುಗರಿಗಿಂತ ಮುಂದಿದ್ದಾರೆ. ಶೇ 68.73ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಯಶಸ್ಸು ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಶೇ 54.77ರಷ್ಟಿದೆ. ಶೇ 70ರಷ್ಟು ಅಂಗವಿಕಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಕೂಡ ಗಮನಾರ್ಹ ಸಾಧನೆಯೇ. ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯು ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಫಲಿತಾಂಶದ ಪಟ್ಟಿಯಲ್ಲಿ ಚಿತ್ರದುರ್ಗ, ರಾಯಚೂರು ಹಾಗೂ ವಿಜಯಪುರ ಕ್ರಮವಾಗಿ ಕೊನೆಯ ಮೂರು ಸ್ಥಾನ ಪಡೆದಿವೆ.

ಈ ಸ್ಥಾನಗಳೇ ಸಾಮಾಜಿಕ, ಆರ್ಥಿಕ ವಲಯದಲ್ಲಿನ ಅಸಮಾನತೆಯು ಶಿಕ್ಷಣ ಕ್ಷೇತ್ರದಲ್ಲೂ ಇರುವುದನ್ನು ಸೂಚಿಸುವಂತಿವೆ. ಫಲಿತಾಂಶದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಹಿಂದೆ ಬಿದ್ದಿರುವುದು ಆತಂಕ ಹುಟ್ಟಿಸುವಂತಹದ್ದು. ವಿಜ್ಞಾನ ವಿಭಾಗದಲ್ಲಿ ಶೇ 76.20ರಷ್ಟು, ವಾಣಿಜ್ಯ ವಿಭಾಗದಲ್ಲಿಶೇ 65.52ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಕಲಾ ವಿಭಾಗದಲ್ಲಿನ ಉತ್ತೀರ್ಣತೆಯ ಪ್ರಮಾಣ ಶೇ 41.27 ಮಾತ್ರವಾಗಿದೆ. ಕಳೆದ ವರ್ಷ ಶೇ 50ಕ್ಕೂ ಹೆಚ್ಚಿನ ಫಲಿತಾಂಶವು ಕಲಾ ವಿಭಾಗದಲ್ಲಿ ದಾಖಲಾಗಿತ್ತು. ಈ ಅಂಕಿಅಂಶಗಳು ಶೈಕ್ಷಣಿಕ ವಲಯದಲ್ಲಿ ಕಲಾ ವಿಭಾಗ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದಕ್ಕೆ ಉದಾಹರಣೆಯಾಗಿದೆ.

ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಶೇ 72.45ರಷ್ಟು ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದ ಶೇ 47.56 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಕನ್ನಡ‌ ಮಾಧ್ಯಮದಲ್ಲಿ ಬೋಧನೆ ಮತ್ತು ಕಲಿಕೆ ಕಡೆಗಣನೆಗೆ ಒಳಗಾಗಿವೆಯೇನೋ ಎಂಬ ಅನುಮಾನ ಮೂಡದಿರದು. ಈ ಸಮಸ್ಯೆಗೆಉತ್ತರ ಕಂಡುಕೊಳ್ಳುವುದರ ಜೊತೆಗೆ, ಫಲಿತಾಂಶದಲ್ಲಿ ಸತತವಾಗಿ ಹಿಂದುಳಿಯುತ್ತಿರುವ ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸಾಧಿಸುವ ಹಾಗೂ ಕಲಾ ವಿಭಾಗದಲ್ಲಿನ ಅರೆಕೊರೆಗಳನ್ನು ಸರಿಪಡಿಸುವ ದಿಸೆಯಲ್ಲಿ ವ್ಯಾಪಕ ಚರ್ಚೆಗಳು ನಡೆಯುವ ಅಗತ್ಯವನ್ನು ಪ್ರಸಕ್ತ ಪಿಯು ಫಲಿತಾಂಶ ಸೂಚಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT