ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಗ್ರಾಹಕರ ಹಿತರಕ್ಷಣೆಗೆ ಶಿಫಾರಸು–ಆರ್‌ಬಿಐಗೆ ಜಾರಿ ಹೊಣೆ

Published 19 ಜೂನ್ 2023, 22:32 IST
Last Updated 19 ಜೂನ್ 2023, 22:32 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನೇಮಕ ಮಾಡಿದ್ದ ತಜ್ಞರ ಸಮಿತಿಯೊಂದು, ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆಗಳಲ್ಲಿ ಸುಧಾರಣೆ ತರಲು ಕೆಲವು ಸ್ವಾಗತಾರ್ಹ ಶಿಫಾರಸುಗಳನ್ನು ಸಲ್ಲಿಸಿದೆ. ಈ ಶಿಫಾರಸುಗಳು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂದು ವರದಿಯಾಗಿದೆ. ಗ್ರಾಹಕರ ಹಿತ ಕಾಯುವ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೂಡ ಸಮಿತಿಯು ಶಿಫಾರಸು ಮಾಡಿದೆ. ತಜ್ಞರ ಸಮಿತಿಯು ಮಾಡಿರುವ ಶಿಫಾರಸುಗಳಲ್ಲಿ ಪ್ರಮುಖವಾದದ್ದು ಒಂದಿದೆ. ಲೋಪಗಳು ಪತ್ತೆಯಾದ ಸಂದರ್ಭಗಳಲ್ಲಿ ಅವನ್ನು ಸರಿಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಆರ್‌ಬಿಐ ಒಂಬುಡ್ಸ್‌ಮನ್ ವ್ಯವಸ್ಥೆಗೆ ನೀಡಬೇಕು; ಆ ಕ್ರಮವನ್ನು ಸಂಬಂಧಪಟ್ಟ ಸಂಸ್ಥೆಯು ಜಾರಿಗೆ ತಂದಿದೆಯೇ ಎಂಬುದರ ವಿವರವು ಆರ್‌ಬಿಐಗೆ ಸಲ್ಲಿಕೆಯಾಗಬೇಕು ಎಂಬುದು ಆ ಶಿಫಾರಸು. ಗ್ರಾಹಕರಿಗೆ ಒದಗಿಸುವ ಸೇವೆಗಳ ವಿಚಾರದಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುವವರಿಗೆ ಉತ್ತೇಜನ ನೀಡುವ ಅಂಶವೂ ಶಿಫಾರಸುಗಳಲ್ಲಿ ಸೇರಿದೆ. ಖಾತೆ ಹೊಂದಿದ್ದ ವ್ಯಕ್ತಿಯು ಮೃತಪಟ್ಟ ನಂತರದಲ್ಲಿ ಆ ವ್ಯಕ್ತಿಯ ಕಾನೂನುಬದ್ಧ ವಾರಸುದಾರರು ಸಲ್ಲಿಸುವ ಕ್ಲೇಮ್ ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಇತ್ಯರ್ಥಪಡಿಸುವ ಅವಕಾಶ ಇರಬೇಕು, ಪಿಂಚಣಿ ಪಡೆಯುತ್ತಿರುವ ವ್ಯಕ್ತಿಗಳು ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸುವ ವಿಚಾರದಲ್ಲಿ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆ ಬೇಕು ಎಂದು ಸಮಿತಿ ಹೇಳಿದೆ. ಕಾಲಕಾಲಕ್ಕೆ ಆಗಬೇಕಿರುವ ಕೆವೈಸಿ ದಾಖಲೆಗಳ ಸಲ್ಲಿಕೆ ಆಗದಿದ್ದ ಮಾತ್ರಕ್ಕೇ ಖಾತೆಯನ್ನು ಸ್ಥಗಿತಗೊಳಿಸುವಂತೆ ಇಲ್ಲ ಎಂದು ಸಲಹೆ ನೀಡಿದೆ. ಸಾಲ ಮರುಪಾವತಿ ಆಗಿ, ಸಾಲದ ಖಾತೆಯನ್ನು ಮುಕ್ತಾಯಗೊಳಿಸಿದ ನಂತರದಲ್ಲಿ, ಸಾಲ ಪಡೆದವರ ಆಸ್ತಿಯ ದಾಖಲೆಗಳನ್ನು ಕಾಲಮಿತಿಯಲ್ಲಿ ಹಿಂದಿರುಗಿಸಬೇಕು ಎಂದು ಅದು ಹೇಳಿದೆ. ಹೀಗೆ ಕಾಲಮಿತಿಯಲ್ಲಿ ದಾಖಲೆಗಳನ್ನು ವಾಪಸ್ ಮಾಡದೆ ಇದ್ದರೆ, ಹಣಕಾಸು ಸಂಸ್ಥೆಗೆ ದಂಡ ವಿಧಿಸಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಗ್ರಾಹಕರು ಬ್ಯಾಂಕ್‌ಗಳ ಜೊತೆಗಿನ ಒಡನಾಟದಲ್ಲಿ ಇಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಈಚೆಗೆ ಕೆಲವು ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ. ಹಾಗೆಯೇ, ಸೇವೆಗಳಲ್ಲಿ ಲೋಪಗಳು ಇವೆ ಎಂಬ ದೂರುಗಳು ಸಲ್ಲಿಕೆಯಾಗುವ ಪ್ರಮಾಣವೂ ಹೆಚ್ಚಾಗಿದೆ. ಬ್ಯಾಂಕ್‌ ಕಾಲ್‌ ಸೆಂಟರ್‌ ಉದ್ಯೋಗಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂಬ ದೂರುಗಳನ್ನು ಕೂಡ ಕೆಲವು ಗ್ರಾಹಕರು ನೀಡಿದ್ದಾರೆ. ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುತ್ತಿಲ್ಲ, ಸಮಸ್ಯೆಗಳಿಗೆ ಬರುವ ಪ್ರತಿಕ್ರಿಯೆಗಳು ಸಮಾಧಾನಕರವಾಗಿ ಇರುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಕಾಲ್‌ ಸೆಂಟರ್‌ಗಳ ಕೆಲಸದ ಸ್ವರೂಪವನ್ನು ಸುಧಾರಿಸಲು ಕೂಡ ಸಮಿತಿಯು ಕೆಲವು ಕ್ರಮಗಳನ್ನು ಶಿಫಾರಸಿನಲ್ಲಿ ಹೇಳಿದೆ. ಕಾಲ್ ಸೆಂಟರ್‌ಗೆ ಮಾಡಿದ ಕರೆಯು ಮಧ್ಯದಲ್ಲಿಯೇ ಕಡಿತ ಆದಲ್ಲಿ, ಆ ಗ್ರಾಹಕನಿಗೆ ಮತ್ತೆ ಕರೆ ಮಾಡುವ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಹೇಳಿದೆ. ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುವವರು ಹಾಗೂ ಗ್ರಾಹಕರ ನಡುವೆ ‍ಪ್ರಾದೇಶಿಕ ಭಾಷೆಗಳಲ್ಲಿಯೂ ಸ್ಪಷ್ಟ ಸಂವಹನ ಸಾಧ್ಯವಾಗಬೇಕು ಎಂದು ಹೇಳಿದೆ. ಕ್ರಮ ಜರುಗಿಸುವ ವಿಚಾರದಲ್ಲಿ ತೃಪ್ತಿಕರ ಕೆಲಸ ಆಗುತ್ತಿಲ್ಲ ಎಂಬುದನ್ನು ಸಮಿತಿ ಗುರುತಿಸಿದೆ. ಆರ್‌ಬಿಐ ಒಂಬುಡ್ಸ್‌ಮನ್ ವ್ಯವಸ್ಥೆಯನ್ನು ಬಲಪಡಿಸಬೇಕು. ದೂರುಗಳನ್ನು ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸಲು ಅಗತ್ಯವಿರುವ ಕ್ರಮವನ್ನು ಕೈಗೊಳ್ಳುವಂತೆ ಸಂಸ್ಥೆಗಳಿಗೆ ನಿರ್ದೇಶನ ನೀಡುವ ಅಧಿಕಾರವು ಆರ್‌ಬಿಐ ಒಂಬುಡ್ಸ್‌ಮನ್ ವ್ಯವಸ್ಥೆಗೆ ಇರಬೇಕು ಎಂದು ಸಮಿತಿಯು ಹೇಳಿದೆ. ಸಣ್ಣ ಮೊತ್ತವನ್ನು ಒಳಗೊಂಡ ಹಣಕಾಸಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್‌ ಲರ್ನಿಂಗ್ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಶಿಫಾರಸು ಹೇಳುತ್ತದೆ.

ಬ್ಯಾಂಕಿಂಗ್ ಸೇವೆ ಅತಿಮುಖ್ಯವಾದ ಸೇವೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಇಂತಹ ಸೇವೆಗಳಲ್ಲಿ ಗ್ರಾಹಕರಿಗೆ ನ್ಯಾಯಸಮ್ಮತ ರೀತಿಯಲ್ಲಿ ಸ್ಪಂದನ ಸಿಗುವಂತೆ ಆಗಬೇಕು. ಗ್ರಾಹಕರಿಗೆ ಅತ್ಯುತ್ತಮ ಮಟ್ಟದ ಸೇವೆಗಳು ಲಭ್ಯವಾಗುವಂತೆ ಮಾಡಲು ಸೂಕ್ತವಾದ ನಿಯಮಗಳನ್ನು ರೂಪಿಸಲು ಜಗತ್ತಿನಾದ್ಯಂತ ಹಲವು ಕೇಂದ್ರೀಯ ಬ್ಯಾಂಕ್‌ಗಳು ಗಮನ ನೀಡುತ್ತಿವೆ. ಸಮಿತಿಯು ನೀಡಿರುವ ಶಿಫಾರಸುಗಳಿಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು, ಅವುಗಳನ್ನು ಜಾರಿಗೆ ತರುವ ಕೆಲಸವನ್ನು ಆರ್‌ಬಿಐ ಈಗ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT