ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ವಿವಿಧ ದೇಶಗಳ ಉತ್ಪನ್ನಗಳ ಮೇಲೆ ಪ್ರತಿಸುಂಕ ವಿಧಿಸುವ ದಿನವನ್ನು ‘ವಿಮೋಚನೆಯ ದಿನ’ ಎಂದು ಕರೆದುಕೊಂಡಿದ್ದರು. ಆ ದಿನವಾದ ಗುರುವಾರ ಅವರು ಘೋಷಿಸಿರುವ ಸುಂಕ ಹೆಚ್ಚಳವು ಜಗತ್ತಿನ ವಿವಿಧ ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ. ಜಾಗತಿಕ ಅರ್ಥವ್ಯವಸ್ಥೆಗೆ ಭಂಗ ತಂದಿರಿಸುವ ಹಾಗೂ ಭಾರಿ ಪ್ರಮಾಣದ ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಡುವ ಭೀತಿಯನ್ನು ಅಧ್ಯಕ್ಷ ಟ್ರಂಪ್ ಅವರ ಘೋಷಣೆಗಳು ಸೃಷ್ಟಿಸಿವೆ. ಅಮೆರಿಕಕ್ಕೆ ಆಮದಾಗುವ ಎಲ್ಲವುಗಳ ಮೇಲೆ ಶೇಕಡ 10ರಷ್ಟು ಮೂಲ ತೆರಿಗೆಯನ್ನು ಅವರು ಘೋಷಿಸಿದ್ದಾರೆ. ವ್ಯಾಪಾರ ಮಿಗತೆ ಹೊಂದಿರುವ ವಿವಿಧ ದೇಶಗಳ ಮೇಲೆ ಅವರು ಹೆಚ್ಚುವರಿ ಸುಂಕವನ್ನು ಘೋಷಿಸಿದ್ದಾರೆ. ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಟ್ರಂಪ್ ನೇತೃತ್ವದ ಸರ್ಕಾರವು ಶೇಕಡ 54ರಷ್ಟು ಸುಂಕ ವಿಧಿಸಲಿದೆ. ಕಾಂಬೋಡಿಯಾ ಮೇಲೆ ಶೇ 49ರಷ್ಟು ಸುಂಕ ಘೋಷಿಸಲಾಗಿದೆ. ವಿಯೆಟ್ನಾಂ ಮೇಲೆ ಶೇ 46ರಷ್ಟು ಮತ್ತು ಶ್ರೀಲಂಕಾ ಮೇಲೆ
ಶೇ 44ರಷ್ಟು ಸುಂಕ ವಿಧಿಸಲಾಗಿದೆ. ಐರೋಪ್ಯ ಒಕ್ಕೂಟದ ಮೇಲೆ ಶೇ 20ರಷ್ಟು, ದಕ್ಷಿಣ ಕೊರಿಯಾ ಮೇಲೆ ಶೇ 26ರಷ್ಟು, ಜಪಾನ್ ಮೇಲೆ ಶೇ 24ರಷ್ಟು ಹಾಗೂ ತೈವಾನ್ ಮೇಲೆ ಶೇ 32ರಷ್ಟು ಸುಂಕ ವಿಧಿಸಲಾಗಿದೆ. ಹೆಚ್ಚುವರಿ ಸುಂಕವು ತಕ್ಷಣದಿಂದಲೇ ಜಾರಿಗೆ ಬರುತ್ತದೆ, ಇದಕ್ಕಾಗಿ ಟ್ರಂಪ್ ಅವರು ರಾಷ್ಟ್ರೀಯ ತುರ್ತು ಸ್ಥಿತಿಯನ್ನು ಘೋಷಿಸಿದ್ದಾರೆ. ಅಮೆರಿಕದ ಅರ್ಥವ್ಯವಸ್ಥೆಗೆ ಹೊಸ ಚೇತನ ಬರಲಿದೆ, ತಯಾರಿಕಾ ವಲಯವು ಬಲ ಪಡೆಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಆದರೆ ಹೊಸ ಸುಂಕಗಳ ಕಾರಣದಿಂದಾಗಿ ಅಮೆರಿಕದ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರ ಹೆಚ್ಚಾಗಿ, ಆರ್ಥಿಕ ಬೆಳವಣಿಗೆಯು ಮಂದಗತಿಗೆ ಹೊರಳಿಕೊಳ್ಳುತ್ತದೆ ಎಂಬ ಭೀತಿಯೂ ಇದೆ.

ಭಾರತದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಎಲ್ಲ ಉತ್ಪನ್ನ ಹಾಗೂ ಸೇವೆಗಳ ಮೇಲೆ ಶೇ 27ರಷ್ಟು ಸುಂಕ ಇರಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಾಲಿಗೆ ಬಹಳ ಒಳ್ಳೆಯ ಸ್ನೇಹಿತ ಆಗಿದ್ದರೂ ಭಾರತವು ಅಮೆರಿಕವನ್ನು ‘ನ್ಯಾಯಯುತವಾಗಿ’ ಕಾಣುತ್ತಿಲ್ಲ ಎಂದು ಟ್ರಂಪ್ ದೂರಿದ್ದಾರೆ. ಭಾರತವು ಅಮೆರಿಕದ ಮೇಲೆ ಶೇ 52ರಷ್ಟು ತೆರಿಗೆ ವಿಧಿಸುತ್ತದೆ, ಹೀಗಾಗಿ ಅಮೆರಿಕವು ಭಾರತದ ಉತ್ಪನ್ನ, ಸೇವೆಗಳ ಮೇಲೆ ಶೇ 27ರಷ್ಟು ತೆರಿಗೆ ವಿಧಿಸಲಿದೆ ಎಂದು ಅವರು ಹೇಳಿದ್ದಾರೆ. ಭಾರತವು ‘ಬಹಳ, ಬಹಳ ಕಠಿಣ’ ದೇಶ ಎಂದು ಅವರು ಬಣ್ಣಿಸಿದ್ದಾರೆ. ಕೃಷಿ, ಆಹಾರ ಉತ್ಪನ್ನಗಳು, ಆಭರಣ, ಎಲೆಕ್ಟ್ರಾನಿಕ್ಸ್, ಜವಳಿ, ಆಟೊಮೊಬೈಲ್ ಸೇರಿದಂತೆ ಹಲವು ಉದ್ಯಮ ವಲಯಗಳ ಉತ್ಪನ್ನಗಳು, ಸೇವೆಗಳ ಮೇಲೆ ಇದರಿಂದಾಗಿ ಕೆಟ್ಟ ಪರಿಣಾಮ ಉಂಟಾಗಬಹುದು. ಆದರೆ, ಪರಿಣಾಮವು ನಿರ್ದಿಷ್ಟವಾಗಿ ಎಷ್ಟಿರುತ್ತದೆ ಎಂಬುದು ಗೊತ್ತಾಗಲು ಇನ್ನೂ ಹಲವು ದಿನಗಳು ಬೇಕಾಗಬಹುದು. ಕೆಲವು ವಿನಾಯಿತಿಗಳ ಕಾರಣದಿಂದಾಗಿ ಔಷಧ ಉದ್ಯಮಕ್ಕೆ ಒಂದಿಷ್ಟು ಲಾಭವಾಗಬಹುದು, ಭಾರತ ಮತ್ತು ಜವಳಿ ಉತ್ಪನ್ನಗಳನ್ನು ರಫ್ತು ಮಾಡುವ ಇತರ ಪ್ರಮುಖ ದೇಶಗಳಿಗೆ ವಿಧಿಸಿರುವ ಸುಂಕದಲ್ಲಿನ ವ್ಯತ್ಯಾಸದ ಕಾರಣದಿಂದಾಗಿ ಭಾರತದ ಜವಳಿ ಉದ್ಯಮಕ್ಕೆ ಒಂದಿಷ್ಟು ಪ್ರಯೋಜನ ಆಗಬಹುದು ಎಂಬ ಅಭಿಪ್ರಾಯ ಇದೆ. ಕೃಷಿ, ಎಲೆಕ್ಟ್ರಾನಿಕ್ಸ್ ಮತ್ತು ಆಭರಣಗಳ ರಫ್ತಿನ ಮೇಲೆ ಹೆಚ್ಚು ದುಷ್ಪರಿಣಾಮ ಉಂಟಾಗಬಹುದು.

ಟ್ರಂಪ್ ಅವರು ಘೋಷಿಸಿರುವ ಸುಂಕಗಳ ಪರಿಣಾಮವಾಗಿ ಭಾರತದ ಒಟ್ಟು ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಉಂಟಾಗಲಿಕ್ಕಿಲ್ಲ. ಏಕೆಂದರೆ ಭಾರತ ಮತ್ತು ಅಮೆರಿಕ ನಡುವಿನ ಸರಕು ವಹಿವಾಟಿನ ಪ್ರಮಾಣವು ಭಾರತದ ಜಿಡಿಪಿಯ ಶೇ 3ರಷ್ಟು ಮಾತ್ರ ಇದೆ. ಅಮೆರಿಕ ವಿಧಿಸಿರುವ ಸುಂಕದ ಪರಿಣಾಮವಾಗಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 0.6ರಷ್ಟು ತಗ್ಗಬಹುದು ಎಂಬ ಒಂದು ಅಂದಾಜು ಇದೆ. ಆದರೆ ಈ ಕ್ರಮಗಳ ಪರೋಕ್ಷ ಪರಿಣಾಮಗಳು ಹಲವು ಇರುತ್ತವೆ. ಭಾರತದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ತಗ್ಗಬಹುದು. ಹೊಸ ಮಾರುಕಟ್ಟೆಗಳ ಶೋಧಕ್ಕೆ ನಡೆಯುವ ತೀವ್ರ ಪೈಪೋಟಿಯ ನಡುವೆ ಜಾಗತಿಕ ಅರ್ಥವ್ಯವಸ್ಥೆಯ ಬೆಳವಣಿಗೆ ದರವು ಕಡಿಮೆ ಆಗಬಹುದು. ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವೊಂದರ ಬಗ್ಗೆ ಮಾತುಕತೆಗಳು ಪ್ರಗತಿಯಲ್ಲಿವೆ. ಈ ಮಾತುಕತೆಗಳ ಫಲಿತಾಂಶ ಏನಿರಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಅಮೆರಿಕ ವಿಧಿಸಿರುವ ಸುಂಕಕ್ಕೆ ಪ್ರತಿಯಾಗಿ ಭಾರತವೂ ಸುಂಕ ವಿಧಿಸುವ ಸಾಧ್ಯತೆ ಇಲ್ಲ. ಟ್ರಂಪ್ ಅವರ ನಡೆಯಿಂದಾಗಿ ದೇಶದ ಅರ್ಥವ್ಯವಸ್ಥೆಗೆ ಒಂದಿಷ್ಟು ನಷ್ಟ ಉಂಟಾಗುವುದಂತೂ ಖಚಿತ. ಆದರೆ ಎಲ್ಲ ನಷ್ಟಗಳ ನಡುವೆಯೂ ಒಂದಿಷ್ಟು ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ಆಗಬಹುದಾದ ನಷ್ಟವನ್ನು ಮಿತಿಗೊಳಿಸುವುದು ಭಾರತದ ಆದ್ಯತೆಯ ಕೆಲಸ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.