ಭೂಸ್ವಾಧೀನ ವಿರೋಧಿಸಿದ ರೈತರ ಚಳವಳಿಗೆ ಯಶಸ್ಸು ದೊರೆತಿದೆ. ಆದರೆ, ಪ್ರತಿಕೂಲ ಸನ್ನಿವೇಶಗಳ ನಡುವೆ ಭೂಮಿ ಉಳಿಸಿಕೊಳ್ಳಬೇಕಾದ ಸವಾಲು ಮುಂದುವರಿದಿದೆ.

ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರ, ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ. ಈ ನಿರ್ಧಾರ, ಚುನಾಯಿತ ಸರ್ಕಾರವೊಂದು ನಡೆದುಕೊಳ್ಳಬೇಕಾದ ಜವಾಬ್ದಾರಿಯುತ ನಡೆಯಾಗಿದೆ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ನಡೆಸಿದ 1,198 ದಿನಗಳ ಹೋರಾಟಕ್ಕೆ ಸರ್ಕಾರ ವಿಳಂಬವಾಗಿಯಾದರೂ ಸ್ಪಂದಿಸಿದ್ದು, ಭೂಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದಿದೆ.

ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗಾಗಿ 13 ಗ್ರಾಮಗಳ ವ್ಯಾಪ್ತಿಯಲ್ಲಿ 1,777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು, 2021ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2022ರಲ್ಲಿ ಅಂತಿಮ ಆದೇಶ ಪ್ರಕಟಗೊಂಡ ನಂತರ ಭೂಸ್ವಾಧೀನ ವಿರೋಧಿಸಿ ರೈತರು ಹೋರಾಟ ಆರಂಭಿಸಿದ್ದರು. ಕಳೆದ ಏಪ್ರಿಲ್ನಲ್ಲಿ ಭೂಸ್ವಾಧೀನದ ಅಂತಿಮ ಅಧಿಸೂಚನೆ ಪ್ರಕಟಗೊಂಡ ನಂತರ ರೈತರ ಹೋರಾಟ ತೀವ್ರಗೊಂಡಿತ್ತು ಹಾಗೂ ಆ ಹೋರಾಟಕ್ಕೆ ವಿವಿಧ ಕ್ಷೇತ್ರಗಳ ಮುಖಂಡರ ಬೆಂಬಲವೂ ದೊರೆತಿತ್ತು. ಅಂತಿಮವಾಗಿ ರೈತರ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ, ಭೂಸ್ವಾಧೀನದ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

ಭೂಮಿ ಉಳಿಸಿಕೊಳ್ಳಲು ರೈತರು ನಡೆಸಿದ ಹೋರಾಟ ಹಾಗೂ ಭೂಸ್ವಾಧೀನ ಅಧಿಸೂಚನೆ ಹಿಂತೆಗೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರ, ಎರಡಕ್ಕೂ ಚಾರಿತ್ರಿಕ ಮಹತ್ವವಿದೆ. ಸಾವಿರ ದಿನಗಳಿಗೂ ಹೆಚ್ಚು ಕಾಲ ಹೋರಾಟವೊಂದನ್ನು ಜೀವಂತವಾಗಿ ಉಳಿಸಿಕೊಳ್ಳುವುದು ಸಮಕಾಲೀನ ಸಂದರ್ಭದಲ್ಲಿ ಸುಲಭವಲ್ಲ. ವ್ಯವಸ್ಥೆ ಹಾಗೂ ಸರ್ಕಾರ ಮಾನವೀಯ ಸ್ಪಂದನ ಗಳನ್ನು ಕಳೆದುಕೊಂಡಂತೆ ವರ್ತಿಸುವ ಉದಾಹರಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ಹಿಂಸೆಗೆ ಆಸ್ಪದ ಕೊಡದೆ ಸತ್ಯಾಗ್ರಹ ಮಾರ್ಗದಲ್ಲಿ ಚಳವಳಿಯನ್ನು ನಡೆಸಿ ರಾಜ್ಯದ ರೈತರು ಯಶಸ್ಸು ಪಡೆದಿದ್ದಾರೆ. ಈ ಯಶಸ್ಸು, ದೃಢಸಂಕಲ್ಪದ ಪ್ರಾಮಾಣಿಕ ಚಳವಳಿಗಳಿಗೆ ವಿಳಂಬವಾಗಿಯಾದರೂ ನ್ಯಾಯ ದೊರೆಯುತ್ತದೆ ಎನ್ನುವುದಕ್ಕೆ ನಿದರ್ಶನದಂತಿದೆ.

ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿರುವ ಹೋರಾಟದ ಯಶಸ್ಸಿನ ಶ್ರೇಯಸ್ಸು, ವಿವೇಕ ಮತ್ತು ಸಂಯಮ ಕಳೆದುಕೊಳ್ಳದೆ ಚಳವಳಿಯನ್ನು ದೀರ್ಘ ಕಾಲ ಮುನ್ನಡೆಸಿದ ರೈತರು ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರಿಗೆ ಸಲ್ಲಬೇಕು. ರೈತರಿಂದ ಬಲವಂತವಾಗಿ ಭೂಮಿ ಪಡೆಯದಿರುವ ಸರ್ಕಾರದ ನಡೆಯೂ ಮೆಚ್ಚುವಂತಹದ್ದು. ಭೂಸ್ವಾಧೀನದ ಅಧಿಸೂಚನೆ ಹೊರಬಿದ್ದ ಆರಂಭದಲ್ಲೇ ಚಳವಳಿನಿರತ ರೈತರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದರು. ಹಾಗಾಗಿ, ಭೂಸ್ವಾಧೀನದ ಅಧಿಸೂಚನೆಯನ್ನು ಹಿಂಪಡೆಯುವುದು ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಅನಿವಾರ್ಯ ದಾರಿಯೂ ಆಗಿತ್ತು. ಕರ್ನಾಟಕಕ್ಕೆ ಬಂದಿರುವ ಯೋಜನೆ ಬೇರೆ ರಾಜ್ಯದ ಪಾಲಾಗಬಹುದು ಎನ್ನುವ ಆತಂಕದ ನಡುವೆಯೂ, ರೈತರ ಹಿತಾಸಕ್ತಿ ಕಾಪಾಡುವ ಇಚ್ಛಾಶಕ್ತಿಯನ್ನು ಸರ್ಕಾರ ಹಾಗೂ ಮುಖ್ಯಮಂತ್ರಿ ಪ್ರದರ್ಶಿಸಿದ್ದಾರೆ.

ಭೂಸ್ವಾಧೀನದ ಅಧಿಸೂಚನೆಯನ್ನು ಕೈಬಿಟ್ಟಿರುವ ಸರ್ಕಾರದ ನಿರ್ಧಾರಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಹೋರಾಟಕ್ಕೆ ಯಶಸ್ಸು ದೊರೆತಾಗ ಸಂಭ್ರಮಿಸುವುದು ಸಹಜ. ಆದರೆ, ರೈತರು ಸಾಗಬೇಕಾಗಿರುವ ದಾರಿ ಹಾಗೂ ಎದುರಿಸಬೇಕಾದ ಸವಾಲು ದೀರ್ಘವಾದುದು. ಭೂಸ್ವಾಧೀನದ ಅಧಿಸೂಚನೆ ಕೈಬಿಟ್ಟಿದ್ದರೂ, ಸ್ವಯಂ ಪ್ರೇರಣೆಯಿಂದ ಜಮೀನು ನೀಡುವ ರೈತರ ಭೂಮಿಯನ್ನು ಪಡೆಯುವುದಾಗಿ ಹಾಗೂ ಆ ಜಮೀನಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಈ ನಿರ್ಧಾರ, ಭೂಮಿಯನ್ನು ಮಾರುವ ಇಲ್ಲವೇ ಮಾರದಿರುವ ಸ್ವಾತಂತ್ರ್ಯವನ್ನು ರೈತರಿಗೆ ಉಳಿಸಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ.

ಆದರೆ, ಭೂಮಿಯನ್ನು ಮಾರುವ ಅವಕಾಶ ಮುಕ್ತವಾಗಿರುವುದು ರೈತರಲ್ಲಿ ಗೊಂದಲ ಮೂಡಿಸಬಹುದು ಹಾಗೂ ಕೃಷಿಯ ಬಗ್ಗೆ ಭರವಸೆಗಳನ್ನು ಕಳೆದುಕೊಂಡವರು ತಮ್ಮ ಭೂಮಿ ಬಿಟ್ಟುಕೊಡಲು ಒತ್ತಾಸೆಯಾಗಿ ಪರಿಣಮಿಸಬಹುದು. ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕಾದ ಸರ್ಕಾರವೇ, ಮಾರಾಟದ ಸಾಧ್ಯತೆಗಳನ್ನು ರೈತರ ಮುಂದಿಡುವ ವಿರೋಧಾಭಾಸ ಸುಲಭ ವ್ಯಾಖ್ಯಾನಕ್ಕೆ ನಿಲುಕುವಂತಹದ್ದಲ್ಲ. ಆರಂಭದಲ್ಲಿ ಕೆಲವಷ್ಟೇ ರೈತರು ಭೂಮಿಯನ್ನು ಬಿಟ್ಟುಕೊಟ್ಟರೂ, ಆ ಮಾದರಿ ದೀರ್ಘಾವಧಿಯಲ್ಲಿ ಉಳಿದ ರೈತರಿಗೂ ತಮ್ಮ ಭೂಮಿಯನ್ನು ಮಾರುವ ಸ್ವಯಂ ಒತ್ತಡ ಸೃಷ್ಟಿಸಬಹುದು. ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಹಾಗೂ ಕೃಷಿಯಲ್ಲಿ ಮುಂದುವರಿಯುವ ಅಗ್ನಿದಿವ್ಯವನ್ನು ಹಾಯುವ ಅವಕಾಶ ಈಗ ರೈತರೆದುರು ಇದೆ. ರೈತರ ಹೋರಾಟಕ್ಕೆ ಜಯ ಸಂದಿದೆಯೆಂದು ಸದ್ಯಕ್ಕೆ ಭಾವಿಸಬಹುದಾದರೂ, ಆ ಯಶಸ್ಸಿನ ಫಲಿತ ಯಾವ ರೂಪದ್ದು ಹಾಗೂ ಎಷ್ಟು ಅವಧಿಯದ್ದು ಎನ್ನುವುದನ್ನು ತೀರ್ಮಾನಿಸುವ ಅವಕಾಶವನ್ನು ಸರ್ಕಾರ ರೈತರಿಗೇ ಬಿಟ್ಟುಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.