ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತಾಪಮಾನ ಏರಿಕೆ ತಡೆಗೆ ಪರಿಣಾಮಕಾರಿ ಕ್ರಮ ಜರೂರು

Last Updated 30 ಮಾರ್ಚ್ 2023, 19:51 IST
ಅಕ್ಷರ ಗಾತ್ರ

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಇಂಟರ್‌ಗವರ್ನಮೆಂಟಲ್‌ ಸಮಿತಿಯು (ಐಪಿಸಿಸಿ) ಆರನೇ ಹವಾಮಾನ ವಿಶ್ಲೇಷಣೆ ಸರಣಿಯ ಕೊನೆಯ ವರದಿಯನ್ನು ಕಳೆದ ವಾರ ಬಿಡುಗಡೆ ಮಾಡಿದೆ. ಈ ಹಿಂದೆ ನೀಡಿದ್ದ ಮುನ್ನೆಚ್ಚರಿಕೆಗಳನ್ನು ಪುನರುಚ್ಚರಿಸಿದ್ದಲ್ಲದೆ, ಜೀವಸಂಕುಲದ ಮನೆಬಾಗಿಲಿಗೆ ಬಂದು ನಿಂತಿರುವ ಹವಾಮಾನ ಮಹಾದುರಂತಕ್ಕೆ ಸಂಬಂಧಿಸಿ ಹೊಸ ಎಚ್ಚರಿಕೆಗಳನ್ನೂ ನೀಡಿದೆ. ಬದುಕುವುದು ಅಸಾಧ್ಯ ಅಥವಾ ಕಷ್ಟಕರ ಎನಿಸುವಂತಹ ಹವಾಮಾನ ಮಹಾದುರಂತದತ್ತ ಜಗತ್ತು ಸಾಗುವ ವೇಗವನ್ನು ಕಡಿಮೆಗೊಳಿಸಲು ಈಗ ಕೈಗೊಂಡಿರುವ ಕ್ರಮಗಳು ಏನೇನೂ ಸಾಲುವುದಿಲ್ಲ ಎಂದು ಈ ಹಿಂದೆ ನೀಡಿದ್ದ ವರದಿಗಳಲ್ಲಿ ಹೇಳಲಾಗಿತ್ತು. ಈ ಶತಮಾನದ ಕೊನೆಯ ಹೊತ್ತಿಗೆ ಉಷ್ಣತೆಯು ಕೈಗಾರಿಕಾಪೂರ್ವ ಯುಗದ ಉಷ್ಣತೆಗೆ ಹೋಲಿಸಿದರೆ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರ ಏರಿಕೆಯಾಗಬೇಕು ಎಂಬ ಗುರಿ ಸಾಧಿಸುವುದು ಸಾಧ್ಯವಿಲ್ಲ ಎಂದು ಐ‍ಪಿಸಿಸಿ 2018ರಲ್ಲಿ ಹೇಳಿತ್ತು. ಏಕೆಂದರೆ, ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು 2030ರ ಹೊತ್ತಿಗೆ 2010ರಲ್ಲಿ ಇದ್ದುದರ ಅರ್ಧಕ್ಕೆ ಇಳಿಸುವ ದಿಸೆಯಲ್ಲಿ ಕೆಲಸ ಮಾಡಲು ಜಗತ್ತು ವಿಫಲವಾಗಿದೆ. ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಹಲವು ದೇಶಗಳು ನೀಡಿವೆ. ಇಂಗಾಲ ಹೊರಸೂಸುವಿಕೆಯನ್ನು ಸಂ‍ಪೂರ್ಣ ನಿಲ್ಲಿಸುವುದಾಗಿಯೂ ಕೆಲವು ದೇಶಗಳು ಹೇಳಿವೆ. ಆದರೆ, ಇಂಗಾಲದ ಹೊರಸೂಸುವಿಕೆ ಹೆಚ್ಚುತ್ತಲೇ ಸಾಗಿದೆ. ಜಾಗತಿಕವಾಗಿ ಇಂಧನಕ್ಕೆ ಸಂಬಂಧಿಸಿದ ಇಂಗಾಲ ಹೊರಸೂಸುವಿಕೆಯ ಏರಿಕೆಯು 2021ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಹಾಗಿದ್ದರೂ ಏರಿಕೆ ಪ್ರಮಾಣವು ಅಪಾಯಕಾರಿ ಎನಿಸುವಷ್ಟು ಹೆಚ್ಚು ಇದೆ.

ಸರಿಪಡಿಸಲು ಸಾಧ್ಯವಾಗದ ಮಟ್ಟವನ್ನು ಹವಾಮಾನ ಬಿಕ್ಕಟ್ಟು 2025ರ ಹೊತ್ತಿಗೆ ಮೀರಲಿದೆ ಎಂಬ ಎಚ್ಚರಿಕೆಯನ್ನು ವರದಿಯು ನೀಡಿದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ನ ಒಳಗೆ ಇರಿಸಬೇಕಿದ್ದರೆ 2025ರವರೆಗೆ ಇಂಗಾಲ ಹೊರಸೂಸುವಿಕೆಯ ಕಡಿತಗೊಳಿಸುವಿಕೆಯುಗರಿಷ್ಠ ಪ್ರಮಾಣದಲ್ಲಿ ಇರಬೇಕು ಮತ್ತು ಮುಂದಿನ ಐದು ವರ್ಷಗಳಲ್ಲಿ ಕಡಿತವು ಶೇ 43ರಷ್ಟಿರಬೇಕು. ಇದು ಬಹುತೇಕ ಅಸಾಧ್ಯ ಎಂಬಂತೆ ಕಾಣಿಸುತ್ತಿದೆ. ಹಾಗಾಗಿಯೇ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಪ್ರಯತ್ನವು ಹೆಚ್ಚಿನ ವೇಗ ಪಡೆದುಕೊಳ್ಳಬೇಕು. ಈ ವಿಚಾರದಲ್ಲಿ ಯಾರಿಗೂ ಭಿನ್ನಮತ ಇಲ್ಲ, ಆದರೆ ಈ ಪ್ರಯತ್ನವು ಕಷ್ಟಕರವಾದುದರಿಂದ ಅದಕ್ಕಾಗಿ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಈ ಕಷ್ಟವನ್ನು ಸಹಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂಬ ವಿವೇಕವು ಯಾರಲ್ಲಿಯೂ ಕಾಣಿಸುತ್ತಿಲ್ಲ. ದೊಡ್ಡ ವಿಪತ್ತು ಇನ್ನೇನು ಘಟಿಸಲಿದೆ ಎಂಬುದನ್ನು ಸೂಚಿಸುವಂತಹ ಘಟನೆಗಳು ಪ್ರತಿದಿನವೂ ಕಾಣಿಸಿಕೊಳ್ಳುತ್ತಿವೆ. ಜೀವಿಸಲು ಸಾಧ್ಯವಾಗದ ಸ್ಥಿತಿಯತ್ತ ಈ ಜಗತ್ತು ವಾಲುತ್ತಿದೆ ಎಂಬುದನ್ನು ಎರ್‍ರಾಬಿರ್‍ರಿಯಾಗಿರುವ ಮುಂಗಾರು ಋತು, ಬೇಸಿಗೆಯ ಬಿಸಿ ಹೆಚ್ಚಳ, ಚಂಡಮಾರುತ, ಕಾಳ್ಗಿಚ್ಚು, ಬರಗಾಲ, ಪ್ರವಾಹ, ಸಮುದ್ರ ಮಟ್ಟ ಏರಿಕೆ ಮತ್ತು ವಿವಿಧ ರೀತಿಯ ನೈಸರ್ಗಿಕ ವಿಕೋಪಗಳು ಸೂಚಿಸುತ್ತಿವೆ. ಸಮಾಜ, ರಾಜಕಾರಣ, ಅರ್ಥ ವ್ಯವಸ್ಥೆ ಮತ್ತು ಜನಜೀವನದ ಎಲ್ಲ ಆಯಾಮಗಳ ಮೇಲೆ ಉಂಟಾಗುವ ಪರಿಣಾಮವು ಅಪಾರ ಮತ್ತು ಅತ್ಯಂತ ಅಸಹನೀಯವಾದುದು.

ಇಂಗಾಲ ಹೊರಸೂಸುವಿಕೆ ಕಡಿತ ಮಾಡಲು ದೇಶಗಳು ಹಾಕಿಕೊಂಡಿರುವ ಗುರಿಗಳನ್ನು 2030ರ ಬಳಿಕ ಇನ್ನಷ್ಟು ಹೆಚ್ಚಿಸದೇ ಇದ್ದರೆ 2100ನೇ ಇಸವಿಯ ಹೊತ್ತಿಗೆ ಉಷ್ಣತೆಯ ಏರಿಕೆಯು 2.8 ಡಿಗ್ರಿ ಸೆಲ್ಸಿಯಸ್‌ನಷ್ಟಾಗಬಹುದು. ಉಷ್ಣತೆಯಲ್ಲಿ 3.2 ಡಿಗ್ರಿ ಸೆಲ್ಸಿಯಸ್‌ ಏರಿಕೆ ಉಂಟಾಗಬಹುದು ಎಂಬುದನ್ನೂ ತಳ್ಳಿಹಾಕುವಂತಿಲ್ಲ. ಅಳವಡಿಕೆ ಮತ್ತು ತಡೆ ಎರಡಕ್ಕೂ ಹಣ ಹೊಂದಿಸುವುದು ಬಹಳ ಮುಖ್ಯ; ತಾಂತ್ರಿಕ ಕ್ರಮಗಳು ನಿರ್ಣಾಯಕ. ಹಾಗಾಗಿ, ಈ ವಿಚಾರದಲ್ಲಿ ಶ್ರೀಮಂತ ದೇಶಗಳ ಹೊಣೆಗಾರಿಕೆ ಹೆಚ್ಚು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಇತರ ಮೂಲಗಳಿಂದ ಹೆಚ್ಚಿನ ಹಣಕಾಸಿನ ನೆರವು ಒದಗಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಹವಾಮಾನ ಬದಲಾವಣೆಯು ಮಾನವ ಕುಲಕ್ಕೆ ಎದುರಾಗಿರುವ ಅತ್ಯಂತ ಗಂಭೀರವಾದ ಬೆದರಿಕೆಯಾಗಿದೆ. ಹಾಗಿದ್ದರೂ ಅದನ್ನು ತಡೆಯುವುದಕ್ಕೆ ಸಮಂಜಸ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ದುರದೃಷ್ಟಕರ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ತಡೆ ಸಮಾವೇಶದ 28ನೇ ಸಭೆಯಲ್ಲಿ ಮುಂದಿನ ಮೌಲ್ಯಮಾಪನವು ನಡೆಯಲಿದೆ. ಅದು ಈ ವರ್ಷ ದುಬೈಯಲ್ಲಿ ನಡೆಯಲಿದೆ. ಈ ಬಾರಿಯ ಸಭೆಯು ಹೆಚ್ಚು ಫಲಪ್ರದವಾದ ಕ್ರಮಗಳಿಗೆ ಸಾಕ್ಷಿಯಾಗಬಹುದು
ಎಂಬ ಭರವಸೆ ಇರಿಸಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT