ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್‍ಯಾಲಿ: ಅಹಿತಕರ ಘಟನೆಗಳು ವಿಷಾದನೀಯ

Last Updated 26 ಜನವರಿ 2021, 20:18 IST
ಅಕ್ಷರ ಗಾತ್ರ

ದೆಹಲಿಯಲ್ಲಿ ನಡೆಯುವ ಅದ್ಧೂರಿ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಈ ಬಾರಿ ‘ರೈತ ಗಣರಾಜ್ಯೋತ್ಸವ’ ನಡೆದಿದೆ. ದೇಶದ ಸೈನಿಕ ಶಕ್ತಿಯ ಪ್ರದರ್ಶನವು ಗಣರಾಜ್ಯೋತ್ಸವ ಆಚರಣೆಯ ಭಾಗವೇ ಆಗಿಬಿಟ್ಟಿದೆ. ಆದರೆ, ಈ ಬಾರಿ ರಾಜಧಾನಿಯಲ್ಲಿ ಪ್ರದರ್ಶನಗೊಂಡಿದ್ದು ರೈತಶಕ್ತಿಯ ವಿರಾಟ್‌ ಸ್ವರೂಪ. ಯುದ್ಧ ಟ್ಯಾಂಕ್‌ಗಳ ಪ್ರದರ್ಶನ, ಸೈನಿಕರ ಪಥಸಂಚಲನ ಹಾಗೂ ವಿವಿಧ ರಾಜ್ಯಗಳ ಅನನ್ಯತೆಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳ ಮೆರವಣಿಗೆಗೆ ಪರ್ಯಾಯವೆನ್ನುವಂತೆ ಟ್ರ್ಯಾಕ್ಟರ್‌ಗಳು, ಕೃಷಿಕರು ಹಾಗೂ ಕೃಷಿಜೀವನದ ಅವಿಭಾಜ್ಯ ಅಂಗವಾದ ವಸ್ತು–ವಿಶೇಷಗಳ ಅಭೂತಪೂರ್ವ ಮೆರವಣಿಗೆ ನಡೆದಿದೆ. ದೆಹಲಿಯಲ್ಲಿರೈತರ ರ್‍ಯಾಲಿಗೆ ಬೆಂಬಲವಾಗಿ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರ ರ್‍ಯಾಲಿ ಮತ್ತು ಟ್ರ್ಯಾಕ್ಟರ್‌ಗಳ ಪ್ರದರ್ಶನ ನಡೆದಿದೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಈ ಟ್ರ್ಯಾಕ್ಟರ್‌ ರ್‍ಯಾಲಿ ನಡೆದಿದೆ. ಕೃಷಿಪ್ರಧಾನ ದೇಶವೊಂದರ ನೀತಿ–ನಿಲುವುಗಳಲ್ಲಿ ಯಾವುದಕ್ಕೆ ಮಹತ್ವ ಇರಬೇಕು ಎನ್ನುವುದರ ರೂಪಕವಾಗಿ ರ್‍ಯಾಲಿಯನ್ನು ನೋಡುವುದು ಸಾಧ್ಯವಾದರೆ, ರೈತರ ಪ್ರತಿಭಟನೆಯು ಸಮಾಜಕ್ಕೆ ಮರೆತ ಕೆಲವು ಪಾಠಗಳನ್ನು ನೆನಪಿಸುವಂತಿದೆ. ತಂತ್ರಜ್ಞಾನ ಮತ್ತು ಅದನ್ನು ಆಧರಿಸಿದ ಆರ್ಥಿಕ ಶಕ್ತಿ ಹಾಗೂ ಮಿಲಿಟರಿ ಸಾಮರ್ಥ್ಯದ ಪಾರಮ್ಯ ಹೊಂದುವುದೇ ಆಧುನಿಕ ಜಗತ್ತಿನಲ್ಲಿ ಬಲಾಢ್ಯ ಎನ್ನಿಸಿಕೊಂಡಿರುವ ರಾಷ್ಟ್ರಗಳ ಪ್ರಮುಖ ಲಕ್ಷಣಗಳಾಗಿವೆ. ಈ ಪೈಪೋಟಿಯು ವಿಶ್ವಶಾಂತಿಗೆ ಮುಳ್ಳಾಗಿ ಪರಿಣಮಿಸಿರುವ ಉದಾಹರಣೆಗಳು ಬಹಳಷ್ಟಿವೆ. ಸಮಷ್ಟಿ ಪ್ರಜ್ಞೆಯನ್ನು ಹೊಂದಿಲ್ಲದ ಸಮಕಾಲೀನ ಅಭಿವೃದ್ಧಿಯ ಪರಿಕಲ್ಪನೆ ಗಳು ಆರ್ಥಿಕ ತರತಮವನ್ನು ಹೆಚ್ಚಿಸುತ್ತಿವೆ. ಸುಸ್ಥಿರ ಹಾಗೂ ಸಾಮೂಹಿಕ ಅಭಿವೃದ್ಧಿಯು ಕೃಷಿಕೇಂದ್ರಿತ ಸಮಾಜದಿಂದಷ್ಟೇ ಸಾಧ್ಯ ಎನ್ನುವುದನ್ನು ಮಹಾತ್ಮ ಗಾಂಧಿ ಸೇರಿದಂತೆ ಈ ದೇಶದ ಬಹುತೇಕ ದಾರ್ಶನಿಕರು ಹೇಳುತ್ತಲೇ ಬಂದಿದ್ದಾರೆ. ಆದರೆ, ಅಭಿವೃದ್ಧಿಯ ನಾಗಾಲೋಟದ ಭರದಲ್ಲಿ ರೈತರು ಹಾಗೂ ಕಾರ್ಮಿಕರು ವ್ಯವಸ್ಥೆಯಲ್ಲಿ ನಗಣ್ಯರಾಗುತ್ತಿದ್ದಾರೆ. ರೈತರ ಹೆಸರು ಹೇಳಿಕೊಂಡೇ ಎಲ್ಲ ಪಕ್ಷಗಳೂ ರಾಜಕಾರಣ ಮಾಡುತ್ತಿದ್ದರೂ ಕೃಷಿಕ್ಷೇತ್ರದ ಸಮಸ್ಯೆಗಳು ಮಾತ್ರ ಉಲ್ಬಣಿಸುತ್ತಲೇ ಇವೆ. ಇಂಥ ವಿರೋಧಾಭಾಸವೇ ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕಾರಣವಾಗಿರಬಹುದಾದ ಪ್ರಮುಖಅಂಶಗಳಲ್ಲಿ ಒಂದಾಗಿರಬಹುದು.

ಶಾಂತಿಯುತವಾಗಿ ನಡೆಯಬೇಕಾಗಿದ್ದ ರೈತರ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿರುವುದು ವಿಷಾದನೀಯ. ರ್‍ಯಾಲಿ ಸಂದರ್ಭದಲ್ಲಿ ರೈತರೊಬ್ಬರು ಸಾವಿಗೀಡಾ ಗಿದ್ದಾರೆ. ಪೊಲೀಸರು ಮತ್ತು ರೈತರ ನಡುವೆ ಹಿಂಸಾತ್ಮಕ ಸಂಘರ್ಷ ಕೂಡ ನಡೆದಿದೆ. ಇಂಥ ಕೃತ್ಯಗಳು ಯಾವುದೇ ಪ್ರತಿಭಟನೆ ಅಥವಾ ಚಳವಳಿಯ ಘನತೆಯನ್ನು ಕುಗ್ಗಿಸುವಂತಹವು. ಅಹಿತಕರ ಘಟನೆಗಳನ್ನು ರಾಜಕೀಯ ಪಿತೂರಿ ಎಂದು ಕರೆದಿರುವ ರೈತ ಸಂಘಟನೆಗಳ ನಾಯಕರು, ದುಂಡಾವರ್ತಿಯಲ್ಲಿ ಸಮಾಜಘಾತುಕ ಶಕ್ತಿಗಳ ಕೈವಾಡವಿರುವುದಾಗಿ ಶಂಕಿಸಿದ್ದಾರೆ. ಕೊರೊನಾ ಬಿಕ್ಕಟ್ಟು ಹಾಗೂ ಪ್ರತಿಕೂಲ ವಾತಾವರಣದ ನಡುವೆಯೂ ಎರಡು ತಿಂಗಳುಗಳಿಂದ ರೈತರು ದೆಹಲಿಯ ಗಡಿಗಳಲ್ಲಿ ಅಸಾಧಾರಣ ಸಂಯಮದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಸಾವುನೋವುಗಳು ಉಂಟಾದಾಗಲೂ ಸಮಚಿತ್ತವನ್ನು ಕಳೆದುಕೊಳ್ಳದ ರೈತರು, ಈ ರ್‍ಯಾಲಿಯ ಸಂದರ್ಭದಲ್ಲಿ ಒಮ್ಮೆಗೇ ಉದ್ರಿಕ್ತರಾದರು ಎಂಬ ತೀರ್ಮಾನಕ್ಕೆ ಬರುವುದು ಇದುವರೆಗಿನ ಅವರ ತಾಳ್ಮೆಯ ವರ್ತನೆಯನ್ನು ಹಗುರವಾಗಿ ನೋಡಿದಂತಾಗುತ್ತದೆ. ಕಾನೂನನ್ನು ಕೈಗೆತ್ತಿಕೊಂಡವರು ಯಾರೆನ್ನುವುದು ತನಿಖೆಯಿಂದ ಹೊರಬರಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರನ್ನು ಪತ್ತೆಹಚ್ಚುವ ಕೆಲಸವನ್ನು ಪೊಲೀಸರಿಗೆ ಬಿಟ್ಟು, ಪ್ರತಿಭಟನೆನಿರತ ರೈತರೊಂದಿಗೆ ಸರ್ಕಾರ ಇನ್ನಷ್ಟು ಸಹಾನುಭೂತಿಯಿಂದ ವರ್ತಿಸುವುದು ಸದ್ಯದ ತುರ್ತು. ‘ರೈತ ಗಣರಾಜ್ಯೋತ್ಸವ’ವನ್ನು ಸರ್ಕಾರ ತನ್ನ ವಿರುದ್ಧದ ಪ್ರತಿಭಟನೆಯೆಂದು ತಿಳಿಯದೆ, ಈ ಕಗ್ಗಂಟಿಗೆ ಮಾತುಕತೆಯ ಮೂಲಕ ಪರಿಹಾರ ಸೂತ್ರ ಕಂಡುಕೊಳ್ಳುವಲ್ಲಿ ರೈತರ ಹಾಗೂ ರಾಷ್ಟ್ರದ ಹಿತ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT