ಬುಧವಾರ, ಜುಲೈ 6, 2022
21 °C

ಸಂಪಾದಕೀಯ | ‘ಸುಮಾರ್ಗ’ ಯೋಜನೆ: ಅನುದಾನ ಹಂಚಿಕೆಯಲ್ಲಿ ಭೇದಭಾವ ಸಲ್ಲದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ರೂಪಿಸಿರುವ ‘ಸುಮಾರ್ಗ’ ಯೋಜನೆಯ ಅನುದಾನ ಹಂಚಿಕೆಯು ಕೆಲವು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಮುಖೇನ ಅನುಷ್ಠಾನವಾಗಬೇಕಾಗಿದ್ದ ಯೋಜನೆಯನ್ನು ಮುಖ್ಯಮಂತ್ರಿಯವರ ಕಚೇರಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಕಾರಣವೇನು? ಕಾರಣ ಏನೇ ಆಗಿರಲಿ, ಹಾಗೆ ಮಾಡಿದ ಬಳಿಕ ಅನುದಾನ ಹಂಚಿಕೆಯು ಅನುಮಾನಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಆಗಬೇಕಾಗಿತ್ತು. ಹಾಗೆ ಆಗಿಲ್ಲ ಎಂಬುದೇ ಶಾಸಕರ ಅಸಮಾಧಾನಕ್ಕೆ ಕಾರಣ. ಸರ್ಕಾರವನ್ನು ಮುನ್ನಡೆಸುವ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅಥವಾ ಸಚಿವರು ಪಕ್ಷಪಾತಿಯಾಗಿರಬಾರದು; ಜನ ಕಲ್ಯಾಣ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಯೇ ಅವರ ಗುರಿಯಾಗಿರಬೇಕು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿಯೇ 2010ರಲ್ಲಿ ಕರ್ನಾಟಕ ಸರ್ಕಾರ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ಅದರ ಅವಧಿ 2020ರ ಏಪ್ರಿಲ್‌ನಲ್ಲಿ ಮುಕ್ತಾಯವಾಗಿದೆ. ಈ ಯೋಜನೆ ಬದಲಿಗೆ ‘ಗ್ರಾಮೀಣ ಸುಮಾರ್ಗ ಯೋಜನೆ’ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರು. ‘ಮುಂದಿನ ಐದು ವರ್ಷಗಳಲ್ಲಿ ರಾಜ್ಯದ 20 ಸಾವಿರ ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಈ ವರ್ಷ ₹ 780 ಕೋಟಿ ಅನುದಾನ ನೀಡಲಾಗುವುದು’ ಎಂದೂ ಪ್ರಕಟಿಸಿದ್ದರು. 2018–19ರ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ 1,90,862 ಕಿ.ಮೀ. ಉದ್ದದಷ್ಟು ಗ್ರಾಮೀಣ ಸಂಪರ್ಕ ರಸ್ತೆಗಳಿವೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹4,775 ಕೋಟಿ ವೆಚ್ಚ ಮಾಡಿ 18,549 ಕಿ.ಮೀ. ಹಾಗೂ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ₹6,567 ಕೋಟಿ ವೆಚ್ಚ ಮಾಡಿ, 14,070 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆ ಹೇಳಿದೆ. ಈ ಎರಡು ಯೋಜನೆಗಳಡಿ 32 ಸಾವಿರ ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಯಾಗಿದೆ ಎಂದಿಟ್ಟುಕೊಂಡರೂ ಇನ್ನೂ 1.58 ಲಕ್ಷ ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳು ಅಭಿವೃದ್ಧಿಗೆ ಕಾಯುತ್ತಿವೆ. ರಸ್ತೆಗೆ ವೆಚ್ಚ ಮಾಡುವ ಹಣದಲ್ಲಿ ಅರ್ಧಭಾಗವು ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳ ಪಾಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಇದೆ. ನಮ್ಮ ನಾಡಿನ ರಸ್ತೆಗಳ ಸ್ಥಿತಿ ಈ ಆರೋಪಕ್ಕೆ ಪುಷ್ಟಿ ನೀಡುವಂತೆಯೇ ಇದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹ 780 ಕೋಟಿ ಅನುದಾನ ಘೋಷಿಸಿದ್ದರೂ, 10 ತಿಂಗಳವರೆಗೂ ಈ ಯೋಜನೆಯ ಪ್ರಸ್ತಾಪವೇ ಇರಲಿಲ್ಲ. ‘ಅನುದಾನ ನೀಡಿಲ್ಲ, ಶಾಸಕರ ಅಹವಾಲುಗಳನ್ನು ಮುಖ್ಯಮಂತ್ರಿ ಮತ್ತು ಸಚಿವರು ಕೇಳುತ್ತಿಲ್ಲ, ‘ಪರ್ಸಂಟೇಜ್‌’ ಇಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ’ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಡಳಿತಾರೂಢ ಪಕ್ಷದ ಶಾಸಕರೇ ಆರೋಪಿಸಿದ್ದರು ಎಂದು ವರದಿಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಕಚೇರಿಯೇ ಅನುದಾನ ಹಂಚಿಕೆ ಮಾಡಲು ಮುಂದಾಗಿದೆ. ಯಾರು ತಮ್ಮ ವಿರುದ್ಧ ಮಾತನಾಡಿದ್ದಾರೋ ಸಚಿವ ಸ್ಥಾನ ಸಿಗಲಿಲ್ಲವೆಂದು ಸಿಟ್ಟನ್ನು ಹೊರಹಾಕುತ್ತಿದ್ದಾರೋ ಅಂತಹವರನ್ನು ಓಲೈಸಿಕೊಳ್ಳಲು ‘ಸುಮಾರ್ಗ’ವನ್ನು ಮುಖ್ಯಮಂತ್ರಿ ಕಚೇರಿ ಬಳಸಿಕೊಂಡಿದೆ ಎಂಬ ಟೀಕೆಯನ್ನು ಆಡಳಿತ ಪಕ್ಷದ ಶಾಸಕರೇ ಮಾಡಿದ್ದಾರೆ. ಅನುದಾನ ಪಡೆದ 81 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ 32 ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹಂಚಿಕೆಯಾಗಿದೆ. ಒಂದು ಕ್ಷೇತ್ರಕ್ಕೆ ಗರಿಷ್ಠ ₹ 23 ಕೋಟಿವರೆಗೂ ಹಂಚಿಕೆ ಆಗಿದೆ. ಕಾಂಗ್ರೆಸ್‌ನ 30, ಜೆಡಿಎಸ್‌ನ 18 ಹಾಗೂ ಬಿಎಸ್‌ಪಿಯ ಒಬ್ಬ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ತಲಾ ₹ 5 ಕೋಟಿ ದೊರೆತಿದೆ. ಈ ರೀತಿಯ ಹಂಚಿಕೆಗೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಇದು ತಕರಾರಿಗೆ ಕಾರಣವಾಗಿರುವ ಅಂಶ.

ನಿರ್ದಿಷ್ಟ ವಿಧಾನಸಭಾ ಕ್ಷೇತ್ರದ ರಸ್ತೆ ಸ್ಥಿತಿಗತಿ, ಹಿಂದುಳಿದಿರುವಿಕೆ, ಹಿಂದಿನ ವರ್ಷಗಳಲ್ಲಿ ನೀಡಿದ ಅನುದಾನ, ಮಳೆಯಿಂದಾಗಿರುವ ಹಾನಿ ಮುಂತಾದ ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ಅಗತ್ಯಾನುಸಾರ ಅನುದಾನವನ್ನು ಹಂಚಿಕೆ ಮಾಡಬೇಕು. ಅದಕ್ಕೆ ಮಾನದಂಡ ಇರಬೇಕು. ಅದನ್ನು ಬಿಟ್ಟು, ತಮಗೆ ಬೇಕಾದವರಿಗೆ ಹಂಚಲು ಇದು ಸ್ವಂತದ ದುಡ್ಡಲ್ಲ. ರಾಜ್ಯದ ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಯಾರನ್ನೋ ಓಲೈಸಲು ಹಂಚುವುದು ಜನತಂತ್ರ ವಿರೋಧಿಯಾದ ಕ್ರಮ. ಸರ್ಕಾರದ ಸಂಪನ್ಮೂಲವು ರಾಜ್ಯದ ಎಲ್ಲರಿಗೂ ಸೌಕರ್ಯ ಕಲ್ಪಿಸಲು ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಿಸಲು ಸದ್ಬಳಕೆಯಾಗಬೇಕು. ಈ ಸಾಂವಿಧಾನಿಕ ಆಶಯವನ್ನು ಬದಿಗಿಟ್ಟು, ಕ್ಷಣಿಕ ರಾಜಕೀಯ ಪ್ರಯೋಜನಕ್ಕಾಗಿ ಬೇಕಾಬಿಟ್ಟಿಯಾಗಿ ಅನುದಾನ ಹಂಚಿಕೆ ಮಾಡುವುದು ಒಪ್ಪುವಂತಹ ನಡೆಯಲ್ಲ. ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ವಿವೇಚನೆಯಿಂದ ಬಳಸಿದಾಗ ಮಾತ್ರ ಅವುಗಳ ಗುರಿ ಈಡೇರುತ್ತದೆ. ಅಭಿವೃದ್ಧಿಯ ಆಶಯವೂ ನೆರವೇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು