ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕನಿಂದ ಏಟು: ದಲಿತ ಬಾಲಕ ಸಾವು ಲಜ್ಜೆಯಿಂದ ತಲೆತಗ್ಗಿಸಬೇಕಾದ ಸಂಗತಿ

Last Updated 19 ಆಗಸ್ಟ್ 2022, 21:25 IST
ಅಕ್ಷರ ಗಾತ್ರ

ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕನಿಂದ ಪೆಟ್ಟು ತಿಂದು, ಪರಿಶಿಷ್ಟ ಜಾತಿಯ 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’ ಆಚರಣೆಯ ಆಸುಪಾಸಿನಲ್ಲಿ ನಡೆದಿರುವ ಈ ಘಟನೆ ಸಮಾಜದಲ್ಲಿ ಮಡುಗಟ್ಟಿರುವ ಜಾತೀಯತೆ ಹಾಗೂ ಅದರ ಪರಿಣಾಮವಾದ ಕ್ರೌರ್ಯದ ಅಭಿವ್ಯಕ್ತಿಯ ಮತ್ತೊಂದು ಉದಾಹರಣೆ. ಸಾವಿಗೆ ಕಾರಣವಾಗಿರುವ ಶಿಕ್ಷಕನ ಮೇಲೆ ಕೊಲೆಗೆ ಯತ್ನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ನತದೃಷ್ಟ ವಿದ್ಯಾರ್ಥಿಯ ಕುಟುಂಬಕ್ಕೆ ರಾಜಸ್ಥಾನ ಸರ್ಕಾರವು ₹ 5 ಲಕ್ಷ ಪರಿಹಾರ ಪ್ರಕಟಿಸಿದ್ದು, ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಹೇಳಿದೆ. ಇವೆಲ್ಲವೂ ದುರಂತವೊಂದು ಸಂಭವಿಸಿದಾಗ ನಡೆಯಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳು. ದಲಿತರು ದೌರ್ಜನ್ಯಕ್ಕೊಳಗಾದ ಘಟನೆ ಸುದ್ದಿಯಾದಾಗಲೆಲ್ಲ ಇಂಥ ಕಾನೂನು ಕ್ರಮಗಳು ಜರುಗುತ್ತವೆ. ಆದರೆ, ಇದರಿಂದಾಗಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ದಲಿತರ ಸಾವುನೋವಿನ ಘಟನೆಗಳು ದೇಶದ ಒಂದಲ್ಲಾ ಒಂದು ಭಾಗದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ದಲಿತ ಸಮುದಾಯದವರ ಆತ್ಮಗೌರವವನ್ನು ಕುಗ್ಗಿಸುವ ಹಾಗೂ ಅವರನ್ನು ಕೀಳಾಗಿ ನಡೆಸಿಕೊಳ್ಳುವ ಘಟನೆಗಳು ನಡೆಯದ ಒಂದು ದಿನವೂ ಇಲ್ಲ ಎನ್ನುವಂತಾಗಿದೆ. ಇಂಥ ಘಟನೆಗಳಲ್ಲಿ ಕೆಲವಷ್ಟೇ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತವೆ, ಉಳಿದವು ಸದ್ದಿಲ್ಲದೆ ತೆರೆಮರೆಗೆ ಸರಿಯುತ್ತವೆ. ವರದಿಯಾದ ಘಟನೆಗಳು ಕೂಡ ತಾರ್ಕಿಕ ಅಂತ್ಯವನ್ನು ಮುಟ್ಟುವುದು ಅಪರೂಪ. ಹೊಸ ಘಟನೆ ವರದಿಯಾದ ನಂತರ, ಹಳೆಯ ಘಟನೆ ವಿಸ್ಮೃತಿಗೆ ಸಲ್ಲುವುದು ಸಾಮಾನ್ಯ ಎನ್ನುವಂತಾಗಿದೆ.

ಸಮಾಜದಲ್ಲಿ ಬೇರುಬಿಟ್ಟಿರುವ ಜಾತೀಯತೆಯಿಂದಾಗಿ ದಲಿತರು ಅನುಭವಿಸುತ್ತಿರುವ ಸಂಕಷ್ಟಗಳ ನೋವು ಸುಲಭ ವ್ಯಾಖ್ಯಾನಕ್ಕೆ ನಿಲುಕುವಂತಹದ್ದಲ್ಲ. ಅದು ಯಾವುದೇ ದೇಶ ಅಥವಾ ಸಮಾಜಕ್ಕೆ ಗೌರವ ತರುವಂತಹದ್ದೂ ಅಲ್ಲ. ಎಲ್ಲ ವರ್ಗದವರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಕಲ್ಪಿ ಸುವ ಸಂಕಲ್ಪದೊಂದಿಗೆ ಗಳಿಸಿದ ಸ್ವಾತಂತ್ರ್ಯ ಸಂಭ್ರಮಕ್ಕೆ ಎಪ್ಪತ್ತೈದು ವರ್ಷಗಳು ತುಂಬಿದ ನಂತರವೂ ಸಾಮಾಜಿಕ ಅಸಮಾನತೆ ಜೀವಂತವಾಗಿರುವುದು ಹಾಗೂ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುವುದು ಕಳವಳ ಹುಟ್ಟಿಸುವಂತಹದ್ದು.

ದಲಿತ ಎನ್ನುವ ಕಾರಣಕ್ಕಾಗಿ ಅಧಿಕಾರಿಗಳು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಇತ್ತೀಚೆಗೆ ಆರೋಪಿಸಿದ್ದ ಉತ್ತರ ಪ್ರದೇಶದ ಸಚಿವ ದಿನೇಶ್‌ ಖಟಿಕ್‌, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಕೆಲವು ಗ್ರಾಮ ಪಂಚಾಯಿತಿಗಳ ದಲಿತ ಅಧ್ಯಕ್ಷರಿಗೆ ರಾಷ್ಟ್ರಧ್ವಜ ಹಾರಿಸುವ ಅವಕಾಶ ನಿರಾಕರಿಸಿದ ಹಾಗೂ ಕುರ್ಚಿಯ ಮೇಲೆ ಕೂರಲು ಅವಕಾಶ ನೀಡದಿರುವ ಘಟನೆಗಳು ‘ಅಮೃತ ಮಹೋತ್ಸವ’ ಸಂದರ್ಭದಲ್ಲಿಯೇ ತಮಿಳುನಾಡಿನಿಂದ ವರದಿಯಾಗಿವೆ.

ರಾಜಕೀಯವಾಗಿ ಅಧಿಕಾರ ಸ್ಥಾನದಲ್ಲಿರುವ ದಲಿತರೇ ಜಾತಿಯ ಕಿರುಕುಳಗಳಿಗೆ ಒಳಗಾಗುತ್ತಿರುವಾಗ, ಸಾಮಾನ್ಯರ ಪಾಡೇನು? ದಲಿತರ ಮೇಲಿನ ದೌರ್ಜನ್ಯದ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ದಲಿತರ ಮೇಲಿನ ದೌರ್ಜನ್ಯದ ಘಟನೆಗಳು ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ‘ಕಾನೂನು ಮತ್ತು ಸುವ್ಯವಸ್ಥೆಗೆ ಮಾದರಿ’ ಎಂದು ಬಿಂಬಿಸಲಾಗುತ್ತಿರುವ ಉತ್ತರ ಪ್ರದೇಶದಿಂದ. ದೇಶದ ಜನಸಂಖ್ಯೆಯಲ್ಲಿ ಶೇ 16ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ದಲಿತರಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಅವರು ಪ್ರತಿನಿತ್ಯ ಎದುರಿಸಬೇಕಾಗಿದೆ. ದಲಿತರಲ್ಲಿ ಕೆಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಸಾಮಾನ್ಯ ದಲಿತರ ಸ್ಥಿತಿ ದಯನೀಯವಾಗಿಯೇ ಇದೆ.

ಜಾತೀಯತೆಯ ನಿರ್ಮೂಲನಕ್ಕೆ ಉತ್ತರದ ರೂಪದಲ್ಲಿ ಶಿಕ್ಷಣವನ್ನು ಗುರುತಿಸಲಾಗುತ್ತದೆ. ಆದರೆ, ಶಿಕ್ಷಣ ಕ್ಷೇತ್ರ ಕೂಡ ಜಾತೀಯತೆಯ ಸೋಂಕಿನಿಂದ ಮುಕ್ತವಾಗಿಲ್ಲ. ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ ಮೂಡಿಸಬೇಕಾದ ಶಿಕ್ಷಕರೇ ಜಾತಿಯ ಪೂರ್ವಗ್ರಹಗಳಿಂದ ಮುಕ್ತರಾಗಿಲ್ಲ. ಜಾತಿಯ ಮೇಲರಿಮೆಯ ಪರಿಣಾಮದ ರೂಪದಲ್ಲಿಯೇ ರಾಜಸ್ಥಾನದಲ್ಲಿ ವಿದ್ಯಾರ್ಥಿಯ ದುರಂತ ಸಾವನ್ನು ನೋಡಬೇಕಾಗಿದೆ. ಪ್ರಬಲ ಜಾತಿಯ ವಿದ್ಯಾರ್ಥಿನಿಯರು ಫೋಟೊ ತೆಗೆಸಿಕೊಳ್ಳಲಿಕ್ಕಾಗಿ, ದಲಿತ ಬಾಲಕಿಯರ ಸಮವಸ್ತ್ರ ಬಿಚ್ಚಿಸಿದ ಘಟನೆ ಉತ್ತರ ಭಾರತದಿಂದ ವರದಿಯಾಗಿತ್ತು. ಬೋಧಕರು ಮಾತ್ರವಲ್ಲ, ಮಕ್ಕಳ ಮನಸ್ಸಿನಲ್ಲೂ ಜಾತಿಯ ವಿಷಬೀಜಗಳನ್ನು ಬಿತ್ತಲಾಗಿದೆ. ಪರಿಶಿಷ್ಟ ಸಮುದಾಯದ ಹೆಣ್ಣುಮಕ್ಕಳು ಮಾಡುವ ಅಡುಗೆಯನ್ನು ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸುವ ಪ್ರಸಂಗಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಜಾತಿಯ ಕಿರುಕುಳದಿಂದ ನೊಂದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ಇವೆ.

ಈ ಎಲ್ಲ ಘಟನೆಗಳು ಪರಿಶಿಷ್ಟರ ಮೇಲೆ ಸಮಾಜ ಹೊಂದಿರುವ ಪೂರ್ವಗ್ರಹ, ಅಸಹನೆ ಹಾಗೂ ಅಮಾನವೀಯ ಮನಃಸ್ಥಿತಿಯನ್ನು ಸೂಚಿಸುವಂತಿವೆ. ಆಳವಾಗಿರುವ ಜಾತಿಯ ಗಾಯಕ್ಕೆ ಮುಲಾಮು ಬಳಿಯುವ ಪ್ರಯತ್ನಕ್ಕೆ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಗಮನಾರ್ಹ ಯಶಸ್ಸು ದೊರೆತಿಲ್ಲ. ಧರ್ಮನಿರಪೇಕ್ಷತೆಯನ್ನು ಎತ್ತಿಹಿಡಿದಿರುವ ಭಾರತದ ಸಂವಿಧಾನವು ಸಾಮಾಜಿಕ ತಾರತಮ್ಯಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಜಾತಿಯ ಶೋಷಣೆಗಳಿಗೆ ಸಾಂವಿಧಾನಿಕ ಮಾರ್ಗದಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡದೆಹೋದರೆ, ‘ಜಾತ್ಯತೀತ ಭಾರತ’ದ ಹೆಗ್ಗಳಿಕೆ ಮಾತುಗಳಿಗಷ್ಟೇ ಸೀಮಿತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT