ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವಿಧಾನ ಪರಿಷತ್‌ನಲ್ಲಿ ರಂಪಾಟ ಹೊಣೆಗೇಡಿ ವರ್ತನೆ ಅಕ್ಷಮ್ಯ

Last Updated 16 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ವಿದ್ಯಮಾನ ಯಾವ ದೃಷ್ಟಿಯಿಂದ ನೋಡಿದರೂ ಅಕ್ಷಮ್ಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ವಿಧಾನಮಂಡಲದ ಹಿರಿಮೆಗೆ ಅಷ್ಟೇ ಅಲ್ಲ, ಇಡೀ ಕನ್ನಡನಾಡಿಗೆ ಮಾಡಿದ ಅವಮಾನ. ಕನ್ನಡಿಗರು ತಲೆ ತಗ್ಗಿಸುವಂತಹ ಪರಿಸ್ಥಿತಿಯನ್ನು ಈ ಪ್ರಸಂಗ ಸೃಷ್ಟಿಸಿದೆ.

ಇಂತಹ ನಾಯಕರು ತಮ್ಮನ್ನು ಆಳುತ್ತಿದ್ದಾರಲ್ಲ ಎಂದು ಮತದಾರರು ಪಶ್ಚಾತ್ತಾಪಪಡಬೇಕಾದ ಸಮಯ ಇದು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಸೇರಿ ಮೇಲ್ಮನೆಯ ಮಾನ ಹರಾಜು ಹಾಕಿದ್ದಾರೆ. ಹಿರಿಯರ ಮನೆ, ಮೇಲ್ಮನೆ ಎಂದೆಲ್ಲಾ ಕರೆಸಿಕೊಳ್ಳುವ ವಿಧಾನ ಪರಿಷತ್ತಿನ ಘನತೆ ಕುಸಿಯಲು ಆರಂಭವಾಗಿ ಬಹಳ ದಿನಗಳು ಸಂದಿವೆ.

ಪಾಂಡಿತ್ಯ, ವಿದ್ವತ್, ವಿಚಾರವಂತಿಕೆ, ಚರ್ಚೆ, ಸಂವಾದದ ಬದಲು ರಾಜಕೀಯ ಮೇಲಾಟವೇ ನಡೆಯಲು ಆರಂಭಿಸಿ ವರ್ಷಗಳೇ ಕಳೆದಿವೆ. ಆದರೂ ಇಷ್ಟೊಂದು ಹೀನಾಯ ಮಟ್ಟ ತಲುಪಿದ್ದು ಇದೇ ಮೊದಲು. ವಿಧಾನಮಂಡಲದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಗೌರವಯುತವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾದ ವೇದಿಕೆಯಲ್ಲಿ ರಂಪಾಟ ಮಾಡಿದ್ದು, ಕೈಕೈ ಮಿಲಾಯಿಸಿದ್ದು, ಸಭಾಪತಿಪೀಠವನ್ನೇ ರಣಾಂಗಣದ ಕೇಂದ್ರ ಮಾಡಿಕೊಂಡಿದ್ದು ಅಸಹ್ಯಕರ.

ಹಣ ಬಲ, ಜಾತಿ ಬಲ, ವಶೀಲಿಗೆ ಕಟ್ಟುಬಿದ್ದು ಯಾರ್‍ಯಾರಿಗೋ ಟಿಕೆಟ್ ನೀಡಿ ಮೇಲ್ಮನೆ ಸದಸ್ಯರನ್ನಾಗಿ ಮಾಡಿದ್ದರ ಫಲ ಇದು. ‘ಸಮಾಜಸೇವೆ’ ಎಂಬ ನೆವವನ್ನು ಆಧಾರವಾಗಿಟ್ಟುಕೊಂಡು ವೃತ್ತಿ ರಾಜಕಾರಣಿಗಳನ್ನು ಮೇಲ್ಮನೆಗೆ ತಂದು ಬಿಟ್ಟಿದ್ದು ಇಂದಿನ ಈ ಸ್ಥಿತಿಗೆ ಕಾರಣ. ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನೂ ಮೇಲ್ಮನೆಗೆ ಆಯ್ಕೆ ಮಾಡುವ ಪರಿಪಾಟ ಶುರುವಾಯಿತು.

ಸರ್ಕಾರದಿಂದ ನಾಮಕರಣ ಮಾಡಬೇಕಾದ ಸಂದರ್ಭದಲ್ಲಿಯೂ ಶಿಕ್ಷಣ, ಸಾಹಿತ್ಯ, ಸಹಕಾರ, ವಿಜ್ಞಾನ, ಕಲೆ ಮುಂತಾದ ಕ್ಷೇತ್ರಗಳ ಗಣ್ಯರನ್ನು ಆಯ್ಕೆ ಮಾಡದೆ ವೃತ್ತಿನಿರತ ರಾಜಕಾರಣಿಗಳನ್ನೇ ನಾಮಕರಣ ಮಾಡಲು ಆರಂಭಿಸಿದಾಗಲೇ ಮೇಲ್ಮನೆಯ ಮೌಲ್ಯ ಕುಸಿಯತೊಡಗಿತು. ಅದು ವಿಪರೀತಕ್ಕೆ ಹೋಗಿರುವುದರ ಪರಿಣಾಮವು ಈಗ ಕಾಣಿಸಿಕೊಳ್ಳುತ್ತಿದೆ ಅಷ್ಟೆ. ವಿಧಾನ ಪರಿಷತ್ತಿನ ಇಂದಿನ ಹೀನಾಯ ಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳೂ ಕಾರಣ. ಮಂಗಳವಾರ ನಡೆದ ಗಲಭೆ–ಗದ್ದಲಕ್ಕೆ ರಾಜ್ಯದ ಮೂರೂ ಪ್ರಧಾನ ಪಕ್ಷಗಳನ್ನು ಹೊಣೆ ಮಾಡಬೇಕಾಗುತ್ತದೆ.

ಸಭಾಪತಿ ಪೀಠದಲ್ಲಿ ಕುಳಿತವರನ್ನು ಎಳೆದು ಹಾಕಿದ್ದು, ಸಭಾಪತಿ ಅವರು ಸದನ ಪ್ರವೇಶಿಸದಂತೆ ಬಾಗಿಲು ಮುಚ್ಚಿದ್ದು, ಸಭಾಪತಿ ಪೀಠದ ಎದುರಿನ ಉಪಕರಣಗಳನ್ನು ಕಿತ್ತು ಹಾಕಿದ್ದು... ಇವೆಲ್ಲ ಪ್ರಜ್ಞಾವಂತರು ಮಾಡಬಹುದಾದ ಕೆಲಸಗಳಲ್ಲ. ಇದು ಸಂವಿಧಾನಕ್ಕೂ ಮತದಾರರಿಗೂ ಮಾಡಿದ ಅಪಮಾನ. ಸಭಾಪತಿ ಬಗ್ಗೆ ಅವಿಶ್ವಾಸ ಇದ್ದರೆ ಅದನ್ನು ನಿಯಮಾನುಸಾರವೇ ವ್ಯಕ್ತಪಡಿಸಬೇಕು. ಸಭಾಪತಿ ಕೂಡ ನಿಯಮಗಳಿಗೆ ಬದ್ಧರಾಗಿರಬೇಕು. ಅದನ್ನು ಬಿಟ್ಟು ಸದನದಲ್ಲಿ ತೋಳ್ಬಲದ ಶೌರ್ಯ ತೋರುವುದು ಘನತೆಗೆ ತಕ್ಕ ನಡೆಯಲ್ಲ. ವಿಧಾನ ಪರಿಷತ್‌ನಲ್ಲಿ ಹಿಂದೆ ಇದ್ದ ಮಹಾನ್ ವ್ಯಕ್ತಿಗಳ ಹೆಸರು ನೆನಪಿಸಿಕೊಂಡರೆ ಅದರ ಘನತೆ ಅರ್ಥವಾಗುತ್ತದೆ.

ಎಚ್.ನರಸಿಂಹಯ್ಯ, ಡಿ.ವಿ.ಜಿ.,ಗೊರೂರು ರಾಮಸ್ವಾಮಿ ಅಯ್ಯಂಗಾರ್, ನಜೀರ್‌ ಸಾಬ್‌, ಎ.ಕೆ. ಸುಬ್ಬಯ್ಯ ಅವರಂತಹ ಗಣ್ಯರು ಮೇಲ್ಮನೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮೇಲ್ಮನೆ ಎನ್ನುವುದು ಕೇವಲ ರಾಜಕೀಯದ ತಾಣ ಅಲ್ಲ. ಹಲವಾರು ಸಂದರ್ಭಗಳಲ್ಲಿ ರಾಜಕೀಯವನ್ನು ಬದಿಗೆ ಒತ್ತಿ ರಾಜ್ಯದ ಹಿತದೃಷ್ಟಿಯಿಂದ ನಿರ್ಣಯಗಳನ್ನು ಕೈಗೊಂಡ ಉದಾಹರಣೆಗಳು ಇವೆ.

ಚುನಾವಣೆಯಲ್ಲಿ ಗೆಲ್ಲಲಾಗದವರು ಮತ್ತು ವಿವಿಧ ಕ್ಷೇತ್ರಗಳ ತಜ್ಞರಿಗೆ ಆಡಳಿತದಲ್ಲಿ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೇ ವಿಧಾನ ಪರಿಷತ್‌ ಅನ್ನು ಸೃಷ್ಟಿಸಲಾಗಿದೆ. ಅದನ್ನು ವಿಧಾನ ಪರಿಷತ್ ಸದಸ್ಯರು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸಮಸ್ಯೆಯನ್ನು ಎಲ್ಲ ಕೋನಗಳಿಂದ ಪರಾಮರ್ಶಿಸಿ ತೀರ್ಮಾನ ಕೈಗೊಳ್ಳಬೇಕು. ಆದರೆ ಈಗ ವಿಧಾನ ಪರಿಷತ್ ರಾಜಕಾರಣಿಗಳ ಆಡುಂಬೊಲವಾಗಿದೆ. ಅದಕ್ಕಾಗಿಯೇ ನಾವು ಈಗ ಬೆಲೆ ತೆರಬೇಕಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ವಿಧಾನ ಪರಿಷತ್ ಇಲ್ಲ. ನಮ್ಮಲ್ಲಿ ಇದೆ. ಪರಿಷತ್‌ ಎಂಬ ಸಂಸ್ಥೆಯನ್ನು ಉಳಿಸಿಕೊಂಡಿರುವುದರ ಜತೆಗೆ ಅದರ ಘನತೆಯನ್ನೂ ಉಳಿಸಿಕೊಳ್ಳುವ ಕೆಲಸ ಆಗಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT