ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೆಪಿಸಿಸಿ ಹೊಸ ಅಧ್ಯಕ್ಷರ ಪದಗ್ರಹಣ; ಮುಂದಿದೆ ಸಂಘಟಿಸುವ ಸವಾಲು

Last Updated 3 ಜುಲೈ 2020, 22:13 IST
ಅಕ್ಷರ ಗಾತ್ರ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಮಹತ್ವದ ಹೊಣೆಗಾರಿಕೆಯು ವಿರೋಧ ಪಕ್ಷಕ್ಕೆ ಇದೆ. ಆಡಳಿತ ಪಕ್ಷವು ಜನಹಿತದ ವಿಚಾರದಲ್ಲಿ ಎಡವಿದಾಗ, ಆಡಳಿತದ ಮೇಲೆ ಹಿಡಿತ ಕಳೆದುಕೊಂಡಾಗ ಅಥವಾ ಯಾವುದೇ ಲೋಪ ಎಸಗಿದಾಗ ಆ ಪಕ್ಷವನ್ನು ಎಚ್ಚರಿಸುವುದು ವಿರೋಧ ಪಕ್ಷದ ಗುರುತರ ಜವಾಬ್ದಾರಿ.

ವಿರೋಧ ಪಕ್ಷ ದುರ್ಬಲವಾಗುವುದು ಅಂದರೆ ಆಡಳಿತ ಪಕ್ಷಕ್ಕೆ ಅಪರಿಮಿತ ಅಧಿಕಾರ ಲಭಿಸಿದಂತೆ. ಅಂತಹ ಅಧಿಕಾರವು ಒಳ್ಳೆಯದಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಿರೋಧ ಪಕ್ಷ ಸಮರ್ಥವಾಗಿದ್ದರೆ ಆಡಳಿತ ಪಕ್ಷ ಎಚ್ಚರ ತಪ್ಪುವ ಸಾಧ್ಯತೆ ಕಡಿಮೆ. ರಾಷ್ಟ್ರ ಮಟ್ಟದಲ್ಲಿ ಮತ್ತು ದೇಶದ ಬಹುಪಾಲು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಪ್ರಾಬಲ್ಯ ಕುಗ್ಗಿದೆ ಎಂಬುದು ಇಂದಿನ ವಾಸ್ತವ.

ಕರ್ನಾಟಕದಲ್ಲಿಯೂ ಕಾಂಗ್ರೆಸ್ಸಿನ ಸಂಘಟನಾ ಶಕ್ತಿ ಕುಗ್ಗಿರುವುದನ್ನು 2019ರ ಲೋಕಸಭಾ ಚುನಾವಣೆಯಲ್ಲಿನ ದಯನೀಯ ಸೋಲು ಸ್ಪಷ್ಟವಾಗಿ ತೋರಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಪದಗ್ರಹಣ ಮಾಡಿದ್ದಾರೆ.

ಪಕ್ಷದಲ್ಲಿ ಬೇರೆ ಬೇರೆ ಹಂತಗಳಲ್ಲಿ ಕೆಲಸ ನಿಭಾಯಿಸಿರುವ ಶಿವಕುಮಾರ್‌, ಪಕ್ಷಕ್ಕೆ ಸಮಸ್ಯೆ ಎದುರಾದಾಗ ಅದನ್ನು ನಿವಾರಿಸಲು ಮುನ್ನುಗ್ಗುವ ಧೈರ್ಯ ತೋರಿಸಿದವರು. ಪಕ್ಷದ ಹೈಕಮಾಂಡ್‌ನ ಬೆಂಬಲ ಕೂಡ ಅವರಿಗೆ ಇದೆ. ಈಗ ಇಡೀ ರಾಜ್ಯದ ಕಾಂಗ್ರೆಸ್ ನಾಯಕರನ್ನು, ಕಾರ್ಯಕರ್ತರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಸವಾಲಿನ ಕೆಲಸ ಅವರ ಮುಂದಿದೆ. ಇದನ್ನು ಅವರು ಹೇಗೆ ನಿಭಾಯಿಸಲಿದ್ದಾರೆ, ಪಕ್ಷದ ಸಂಘಟನೆಯನ್ನು ಹೇಗೆ ತಳಮಟ್ಟದಿಂದ ಬಲಪಡಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ.

ಶತಮಾನದ ಚರಿತ್ರೆ ಹೊಂದಿರುವ ಕಾಂಗ್ರೆಸ್ ಪಕ್ಷದ ಬೇರುಗಳು ಇಂದು ಸಡಿಲವಾಗಿವೆ. ಇದನ್ನು ಹೇಳಲು ವಿಸ್ತೃತ ಅಧ್ಯಯನವೇನೂ ಬೇಕಾಗಿಲ್ಲ. ಬಿಜೆಪಿಯ ಬಲಾಢ್ಯ ಪ್ರಚಾರ ತಂತ್ರದ ಎದುರಾಗಿ ನಿಲ್ಲುವ ಚೈತನ್ಯವನ್ನು ಕಾಂಗ್ರೆಸ್ ತೋರುತ್ತಿಲ್ಲ. ಪಕ್ಷದ ನೆಲೆಗಟ್ಟನ್ನು ರಾಜ್ಯದಲ್ಲಿ ಇನ್ನಷ್ಟು ಗಟ್ಟಿಗೊಳಿಸುವ ಹುಮ್ಮಸ್ಸನ್ನು ಶಿವಕುಮಾರ್ ತೋರಿದ್ದಾರೆ.

‘ಅಧಿಕಾರ ಇದ್ದಾಗ ಮಾತ್ರ ನಮ್ಮವರ ಆರ್ಭಟ...’ ಎಂಬ ಮಾತು ಆ ಪಕ್ಷದವರಿಂದಲೇ ಬರುತ್ತದೆ. ಜಾತಿ, ವರ್ಗಗಳನ್ನು ಮೀರಿದ ಜನಬೆಂಬಲ ಕಾಂಗ್ರೆಸ್ಸಿಗೆ ಇದೆ. ಆದರೆ, ಬಿಜೆಪಿಗೆ ಹೋಲಿಸಿದರೆ ತತ್ವನಿಷ್ಠ ಕಾರ್ಯಕರ್ತರ ಬಲ ಆ ಪಕ್ಷಕ್ಕೆ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.

2018ರ ವಿಧಾನಸಭೆ ಚುನಾವಣೆಗೆ ಮುನ್ನ ‘ಮನೆಮನೆಗೆ ಕಾಂಗ್ರೆಸ್’ ಎಂಬ ಘೋಷಣೆ ನೀಡಿದ್ದ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕಾರ್ಯಕರ್ತರ ಬಲವನ್ನು ಆಧರಿಸಿ ಪಕ್ಷದ ಸಂಘಟನೆಗೆ ಮುಂದಾಗಿದ್ದರು. ಚುನಾವಣೆ ಎದುರಿಗಿದ್ದಾಗ ನಡೆದ ಈ ಪ್ರಯೋಗವು ತಕ್ಷಣಕ್ಕೆ ದೊಡ್ಡ ಫಲ ಕೊಡಲಿಲ್ಲ. ಕಾರ್ಯಕರ್ತರನ್ನೇ ಬೆನ್ನೆಲುಬು, ಕೈ–ಕಾಲಾಗಿಸಿ ಪಕ್ಷ ಕಟ್ಟುವ ಮಾತುಗಳನ್ನು ಶಿವಕುಮಾರ್ ಈಗ ಆಡಿದ್ದಾರೆ.

ಅಧಿಕಾರ ಸ್ವೀಕಾರ ಸಮಾರಂಭದ ದಿನ ಅವರು ನಡೆಸಿದ ವರ್ಚುವಲ್ ರ‍್ಯಾಲಿ ಆ ನೆಲೆಯಲ್ಲಿ ಪಕ್ಷವನ್ನು ಪುನಃ ಕಟ್ಟುವ ಕೆಲಸದ ಆರಂಭಿಕ ಚಹರೆಯಂತೆ ಕಾಣಿಸುತ್ತದೆ. ಹಲವು ವಿಚಾರಧಾರೆಗಳ ನಾಯಕರನ್ನು, ಕಾರ್ಯಕರ್ತರನ್ನು ಹೊಂದಿರುವ ಕಾಂಗ್ರೆಸ್ಸನ್ನು ಈ ನೆಲೆಯಲ್ಲಿ ಕಟ್ಟುವುದು ಸುಲಭದ ಕೆಲಸವಲ್ಲ. ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕ ಗೊಂದಲದಲ್ಲಿ ಇರುವಂತೆ ಕಾಣುತ್ತಿದೆ. ತಾನು ಬಲವಾಗಿ ಪ್ರತಿಪಾದಿಸುವ ಮೌಲ್ಯ ಯಾವುದು ಎಂಬುದನ್ನು ಆ ಪಕ್ಷ ಗಟ್ಟಿ ದನಿಯಲ್ಲಿ ಹೇಳುತ್ತಿಲ್ಲ.

ಪಕ್ಷಕ್ಕೆ ಬೌದ್ಧಿಕ ಗಟ್ಟಿತನವನ್ನು ತಂದುಕೊಡುವವರ ಸಂಖ್ಯೆ ಕಡಿಮೆ ಆಗಿದೆ. ಪಕ್ಷದ ಸಿದ್ಧಾಂತವನ್ನು ಸಮಾಜದ ನಡುವೆ ಪ್ರತಿಪಾದಿಸುವ ವಾಗ್ಮಿಗಳು ಇಲ್ಲ. ಕಪ್ಪುಹಣ, ಭ್ರಷ್ಟಾಚಾರ ಎನ್ನುವ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಸಮಾಜದಲ್ಲಿ ವಿಸ್ತೃತ ಚರ್ಚೆಯನ್ನು ಹುಟ್ಟುಹಾಕಬಲ್ಲದು. ಹಾಗೆ ಮಾಡಲು ಅಗತ್ಯವಿರುವ ಪರಿಕರಗಳು ಆ ಪಕ್ಷದ ಬಳಿ ಇವೆ. ಆದರೆ, ಈ ರೀತಿಯಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಸಮಾಜ ಅದರ ಬಗ್ಗೆ ಚರ್ಚಿಸುವಂತೆ ಮಾಡುವ, ಅದನ್ನು ಮುಂದೆ ಮತಗಳನ್ನಾಗಿ ಪರಿವರ್ತಿಸಿಕೊಳ್ಳುವ ಶಕ್ತಿಯನ್ನು ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಪ್ರದರ್ಶಿಸಿಲ್ಲ.

ಚುನಾವಣೆಗಳಲ್ಲಿ ಕಾಂಗ್ರೆಸ್ ಮುಗ್ಗರಿಸಲುಇವೆಲ್ಲವೂ ಕಾರಣ. ಕರ್ನಾಟಕದ ವ್ಯಾಪ್ತಿಯಲ್ಲಿ ಇಂತಹ ಸಮಸ್ಯೆಗಳಿಗೆ ಮದ್ದು ಕಂಡುಕೊಳ್ಳುವ ಹೊಣೆಗಾರಿಕೆ ಕೂಡ ಶಿವಕುಮಾರ್ ಅವರ ಮೇಲಿದೆ. ಚದುರಿ ಹೋಗಿರುವ ಮತಗಳನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುವ ಹೊಣೆ ಅಧ್ಯಕ್ಷರ‌ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT