ಮಂಗಳವಾರ, ಡಿಸೆಂಬರ್ 1, 2020
17 °C

ಸಂಪಾದಕೀಯ| ಕೆಪಿಎಸ್‌ಸಿ: ಹೈಕೋರ್ಟ್‌ನ ಕಟುಮಾತು ರಾಜ್ಯ ಸರ್ಕಾರದ ಕಣ್ಣು ತೆರೆಸಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಮುಚ್ಚಲು ಇದು ಸಕಾಲ ಎಂದು ಹೈಕೋರ್ಟ್ ಕಟುವಾಗಿ ಹೇಳಿರುವುದನ್ನು ರಾಜ್ಯ ಸರ್ಕಾರ ಮತ್ತು ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಆಯೋಗದ ಒಂದಲ್ಲ ಒಂದು ತಪ್ಪು ಹಲವಾರು ವರ್ಷಗಳಿಂದ ಬೆಳಕಿಗೆ ಬರುತ್ತಲೇ ಇದೆ. ಸಾರ್ವಜನಿಕರು ಮತ್ತು ಉದ್ಯೋಗ ಆಕಾಂಕ್ಷಿಗಳಿಂದ ಹಿಡಿಶಾಪಕ್ಕೆ, ನ್ಯಾಯಾಲಯಗಳಿಂದ ಛೀಮಾರಿಗೆ ಒಳಗಾಗುತ್ತಲೇ ಇದೆ. ಉದ್ಯೋಗ ಆಕಾಂಕ್ಷಿಗಳು ನ್ಯಾಯಾಲಯದ ಬಾಗಿಲು ತಟ್ಟುತ್ತಲೇ ಇದ್ದಾರೆ.

ಸಂಪಾದಕೀಯ ಕೇಳಿ: ಕೆಪಿಎಸ್ಸಿ: ಹೈಕೋರ್ಟ್‌ನ ಕಟು ಮಾತು ಸರ್ಕಾರದ ಕಣ್ಣು ತೆರೆಸಲಿ

1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈಗ ಮತ್ತೊಮ್ಮೆ ಚಾಟಿ ಬೀಸಿದೆ. ‘ಲೋಪಗಳನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ, ಕೆಪಿಎಸ್‌ಸಿಯನ್ನು ರದ್ದು ಮಾಡುವುದೇ ಸೂಕ್ತ. ಕರ್ನಾಟಕದ ಮರ್ಯಾದೆ ಕಾಪಾಡಲು, ಘನತೆ ಉಳಿಸಲು, ನ್ಯಾಯಯುತವಾಗಿ ನೇಮಕಾತಿ ಪ್ರಕ್ರಿಯೆ ನಡೆಯಲು ಕೇಂದ್ರ ಲೋಕಸೇವಾ ಆಯೋಗದ ಮಾದರಿಯ ಹೊಸ ಪದ್ಧತಿ ಅನುಷ್ಠಾನಕ್ಕೆ ತರುವುದು ಸೂಕ್ತ’ ಎಂದು ಹೈಕೋರ್ಟ್ ಹೇಳಿದೆ. ಕೆಪಿಎಸ್‌ಸಿ ಸುಧಾರಣೆಗೆ ರಾಜ್ಯ ಸರ್ಕಾರಕ್ಕೂ ಮನಸ್ಸು ಇದ್ದಂತೆ ಇಲ್ಲ ಎಂದು ಹೇಳಿರುವುದು ಆಯೋಗ ಮತ್ತು ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಹೈಕೋರ್ಟ್ ಎಷ್ಟು ಬೇಸರಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಸಂವೇದನೆ ಇರುವ ಯಾರಿಗಾದರೂ ಇದು ತಟ್ಟುವ ಮಾತು. ಆದರೆ ಅಧಿಕಾರದಲ್ಲಿ ಇರುವ ವ್ಯಕ್ತಿಗಳಿಗೆ ಅಂತಹ ಸಂವೇದನೆ ಇದ್ದಂತೆ ಕಾಣುತ್ತಿಲ್ಲ. 1998ರ ನೇಮಕಾತಿ ಅಕ್ರಮಗಳ ಬಗ್ಗೆ 22 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. 2002ರಿಂದ ಈ ವಿಚಾರ ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ಕೆಎಟಿ ಮುಂದೆ ಬರುತ್ತಲೇ ಇದೆ. ನ್ಯಾಯಾಲಯಗಳು ಸ್ಪಷ್ಟ ಆದೇಶ ನೀಡಿದ್ದರೂ ಕೆಪಿಎಸ್‌ಸಿ ಆಗಲೀ ರಾಜ್ಯ ಸರ್ಕಾರವಾಗಲೀ ಎಚ್ಚೆತ್ತು
ಕೊಂಡಿಲ್ಲ. ತಪ್ಪು ಸರಿಪಡಿಸುವ ಯತ್ನವನ್ನೇ ಮಾಡುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಜನಹಿತ ಕಾಯುವ ಮನಸ್ಸು ನಿಜವಾಗಿಯೂ ಇದ್ದರೆ ದಕ್ಷರು,  ಪ್ರಾಮಾಣಿಕರನ್ನು ಕೆಪಿಎಸ್‌ಸಿಗೆ ನೇಮಕ ಮಾಡಬೇಕು ಎಂಬರ್ಥದಲ್ಲಿ ನ್ಯಾಯಾಲಯ ಹೇಳಿರುವುದು ಒಪ್ಪಲೇಬೇಕಾದ ಮಾತು. ಸಾಂವಿಧಾನಿಕ ಸಂಸ್ಥೆಯೊಂದರ ಬಗ್ಗೆ ಇಷ್ಟೊಂದು ಕಟು ಟೀಕೆ ನ್ಯಾಯಾಲಯಗಳಿಂದ ವ್ಯಕ್ತವಾದರೂ ಪರಿಸ್ಥಿತಿ ಸುಧಾರಿಸದೇ ಹೋದರೆ ಸರ್ಕಾರ ಮತ್ತು ಕೆಪಿಎಸ್‌ಸಿಯದ್ದು ದಪ್ಪ ಚರ್ಮ ಎಂದೇ ಹೇಳಬೇಕಾದೀತು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕೆಪಿಎಸ್‌ಸಿಯನ್ನು ಸರಿದಾರಿಗೆ ತರಬೇಕು. ಇದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ.

ಸಾಂವಿಧಾನಿಕ ಸಂಸ್ಥೆಯೊಂದು ಪಾರದರ್ಶಕವಾಗಿರಬೇಕು ಎಂದು ಬಯಸುವುದು ನಾಗರಿಕರ ಹಕ್ಕು. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಕನಸು ಕಾಣುವ ಲಕ್ಷಾಂತರ ಯುವಜನ ನಮ್ಮ ರಾಜ್ಯದಲ್ಲಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವುದು ಮತ್ತು ನೇಮಕಾತಿಯು ನ್ಯಾಯಯುತವಾಗಿ  ನಡೆಯುತ್ತದೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸುವುದು ಆಯೋಗ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ನೇಮಕಾತಿ ಆಯೋಗವೇ ಅವ್ಯವಹಾರಗಳ ಕೂಪ ಎಂಬ ಭಾವನೆ ಯುವಜನರಲ್ಲಿ ಈಗಾಗಲೇ ಬೆಳೆದುಬಿಟ್ಟಿದೆ. ಅದನ್ನು ತೊಲಗಿಸಲು ಬಹಳಷ್ಟು ಕಷ್ಟಪಡಬೇಕಾಗಿದೆ. ಈಗಲಾದರೂ ಅಂತಹ ಕಾರ್ಯಕ್ಕೆ ತೊಡಗದಿದ್ದರೆ ಮುಂದಾಗಬಹುದಾದ ಅನಾಹುತಗಳಿಗೆ ರಾಜ್ಯ ಸರ್ಕಾರ ಮತ್ತು ಆಯೋಗವೇ ಹೊಣೆಯಾಗುತ್ತವೆ. ನೇಮಕಾತಿಯಲ್ಲಿ ಅಕ್ರಮಗಳು ಹೀಗೆಯೇ ಮುಂದುವರಿದರೆ ಅದರ ವಿರುದ್ಧ ಜನಾಂದೋಲನವೇ ಆರಂಭವಾಗಬಹುದು. ಯುವಜನರು ಸಿಡಿದೇಳಬಹುದು. ಅದಕ್ಕೆ ಅವಕಾಶ ನೀಡಬಾರದು. ಕರ್ನಾಟಕ ಲೋಕಸೇವಾ ಆಯೋಗದ ಶುದ್ಧೀಕರಣದ ಕೆಲಸ ತಕ್ಷಣ ಆರಂಭವಾಗಬೇಕು ಮತ್ತು ಆ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು