ಗುರುವಾರ , ಡಿಸೆಂಬರ್ 5, 2019
24 °C

ಲೋಧಾ ಸಮಿತಿಯ ಶಿಫಾರಸು ದುರ್ಬಲಗೊಳಿಸುವ ಪ್ರಯತ್ನ ಬೇಡ

Published:
Updated:
Prajavani

2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯ ಸ್ಪಾಟ್ ಫಿಕ್ಸಿಂಗ್ ಹಗರಣವು ‌ಕ್ರಿಕೆಟ್‌ ವಲಯವನ್ನು ತಲೆತಗ್ಗಿಸುವಂತೆ ಮಾಡಿತ್ತು. ಆಗ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಎನ್. ಶ್ರೀನಿವಾಸನ್ ಮಾಲೀಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಎರಡುವರ್ಷ ನಿಷೇಧಕ್ಕೊಳಗಾಗಿತ್ತು. ಕ್ರಿಕೆಟ್‌ ಆಡಳಿತವನ್ನು ಶುದ್ಧೀಕರಿಸಲು ಅನುವಾಗುವಂತೆ ಮಾ‌ರ್ಗೋಪಾಯಗಳನ್ನು ಶಿಫಾರಸು ಮಾಡಲು ಸುಪ್ರೀಂ ಕೋರ್ಟ್‌ 2015ರಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯನ್ನು ರಚಿಸಿತು. 2016ರಲ್ಲಿ ಸಮಿತಿಯು ನೀಡಿದ ವರದಿಯಲ್ಲಿನ ಶಿಫಾರಸುಗಳಲ್ಲಿ ಕೆಲವನ್ನು ಪರಿಷ್ಕರಿಸಿ ಹೊಸ ನಿಯಮಾವಳಿ ರೂಪಿಸಲಾಯಿತು. ಕ್ರಿಕೆಟ್ ಶುದ್ಧೀಕರಣ ಮತ್ತು ಕ್ರಿಕೆಟಿಗರ ಹಿತಾಸಕ್ತಿ ರಕ್ಷಣೆಯೇ ಈ ನಿಯಮಗಳ ಮೂಲ ಉದ್ದೇಶ. ಆದರೆ, ಈಗ ಸೌರವ್ ಗಂಗೂಲಿ ಅಧ್ಯಕ್ಷತೆಯ ಬಿಸಿಸಿಐ, ಆ ನಿಯಮಗಳಲ್ಲಿ ಕೆಲವು ಪ್ರಮುಖ ಅಂಶಗಳಿಗೆ ಕೊಕ್‌ ಕೊಡಲು ಮುಂದಾಗಿರುವುದು ದುರದೃಷ್ಟಕರ. ತಾವು ನಾಯಕರಾಗಿದ್ದಾಗ ತಂಡದ ಗೆಲುವು ಮತ್ತು ಆಟಗಾರರ ಹಿತಾಸಕ್ತಿಗೆ ಕಟಿಬದ್ಧರಾಗಿದ್ದವರು ಗಂಗೂಲಿ. ಆದರೆ, ಈಗ ತಮ್ಮ ಹಾಗೂ ಕಾರ್ಯದರ್ಶಿ ಜಯ್‌ ಶಾ ಹಿತಾಸಕ್ತಿಗಾಗಿ ನಿಯಮಾವಳಿಯ ತಿದ್ದುಪಡಿಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅದರಲ್ಲಿ ಹುರುಳಿಲ್ಲದೇ ಇಲ್ಲ. ಡಿಸೆಂಬರ್ 1ರಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸರ್ವಸದಸ್ಯರ ಸಭೆಯು ಉದ್ದೇಶಿತ ತಿದ್ದುಪಡಿಗೆ ಅನುಮೋದನೆಯ ಮುದ್ರೆ ಒತ್ತಿದೆ. ಮೂರು ವರ್ಷಗಳ ನಂತರ ನಡೆದ ಈ ಸಭೆಯ ಮುಖ್ಯ ಕಾರ್ಯಸೂಚಿಯೇ ನಿಯಮಾವಳಿ ತಿದ್ದುಪಡಿ ಕುರಿತು ನಿರ್ಣಯ ಕೈಗೊಳ್ಳುವುದಾಗಿತ್ತು. ಅದರಲ್ಲೂ ಪ್ರಮುಖವಾಗಿ ಕೂಲಿಂಗ್ ಆಫ್ (ವಿಶ್ರಾಂತಿ) ನಿಯಮ. ಇದರ ಪ್ರಕಾರ, ರಾಜ್ಯ ಅಥವಾ ರಾಷ್ಟ್ರೀಯ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿ ಮೂರು ವರ್ಷಗಳ ಎರಡು ಅವಧಿಗಳಲ್ಲಿ ಸತತವಾಗಿ ಕಾರ್ಯನಿರ್ವಹಿಸಿದ ಮೇಲೆ ಒಂದು ಅವಧಿ ವಿಶ್ರಾಂತಿ ಪಡೆಯಬೇಕು. ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯಾಗಿ ಐದು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿದ್ದಾರೆ. ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಜಯ್‌ ಶಾ ಕಾರ್ಯನಿರ್ವಹಿಸಿದ್ದರು. ‌ಆದ್ದರಿಂದ ಇವರಿಬ್ಬರೂ ಆರು ವರ್ಷ ಪೂರೈಸಲು ಕೆಲವು ತಿಂಗಳು ಮಾತ್ರ ಬಾಕಿ ಇದೆ. ಗಂಗೂಲಿ ಅವರು 2024ರವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಆಕಾಂಕ್ಷೆ  ಹೊಂದಿದ್ದಾರೆ. ಕೂಲಿಂಗ್‌ ಆಫ್‌ ನಿಯಮದ ಜೊತೆಗೆ ಇನ್ನೂ ಐದು ನಿಯಮಗಳಿಗೆ ತಿದ್ದುಪಡಿ ತರಲು ಸಭೆ ಬಯಸಿದೆ. ಉದ್ದೇಶಿತ ತಿದ್ದುಪಡಿಗಳಿಗೆ ಸುಪ್ರೀಂ ಕೋರ್ಟ್‌ ಒಂದೊಮ್ಮೆ ಅನುಮತಿ ನೀಡಿದರೆ, ಬಿಸಿಸಿಐ ತನ್ನ ಹಳೆಯ ದಾರಿಗೆ ಮರಳುವುದು ಖಚಿತ. ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ನಿಯಮ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಪದಾಧಿಕಾರಿಗಳಾಗುವುದನ್ನು ತಡೆಯುವ ನಿಯಮ ಮತ್ತು 70 ವರ್ಷದ ಮೇಲಿನವರನ್ನು ಅಧಿಕಾರದಿಂದ ಹೊರಗಿಡುವ ನಿಯಮವೂ ಬಲ ಕಳೆದುಕೊಳ್ಳುತ್ತವೆ. ಇದರಿಂದಾಗಿ ಪಾರದರ್ಶಕ ಆಡಳಿತದ ಕನಸು ಕಮರುವ ಅಪಾಯ ಇದೆ. 

ಈಗಿರುವ ನಿಯಮಾವಳಿಯಿಂದಾಗಿ ಶ್ರೀನಿವಾಸನ್, ನಿರಂಜನ್ ಶಾ, ಶರದ್ ಪವಾರ್ ಅವರಂತಹ ಪ್ರಭಾವಿಗಳು ‘ಬೆಂಚ್’ ಮೇಲೆ ಕುಳಿತುಕೊಳ್ಳುವಂತಾಗಿದೆ. ಆದರೆ, ಕೆಲವರು ತಮ್ಮ ಮಕ್ಕಳು ಮತ್ತು ಬಳಗವನ್ನು ಆಡಳಿತದೊಳಗೆ ಸೇರಿಸಿ ಚಾಲಾಕಿತನ ಮೆರೆದಿದ್ದಾರೆ. ಅವರನ್ನು ಒಲೈಸಲು ಗಂಗೂಲಿ ಮುಂದಾಗಿದ್ದಾರೆ. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್‌ ಶಾ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಗೆ ಬಿಸಿಸಿಐ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ, ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಸಭೆಗೆ ಹಾಜರಾಗಿದ್ದರು. ಚುನಾಯಿತ ಪ್ರತಿನಿಧಿಯೇ
ಸಿಇಒ ಆಗುವ ಮುನ್ಸೂಚನೆಯೂ ಇದಾಗಿರಬಹುದೇ? ಒಬ್ಬ ವ್ಯಕ್ತಿಯು ಏಕಕಾಲಕ್ಕೆ ಎರಡು ಲಾಭದಾಯಕ ಹುದ್ದೆಗಳಲ್ಲಿ ಇರಬಾರದು ಎನ್ನುವ ನಿಯಮ ಇದೆ. ಅದನ್ನು ಉಲ್ಲಂಘಿಸಿದ ಆರೋಪವೂ ಗಂಗೂಲಿ ಮೇಲಿದೆ. ಅವರು ಐಪಿಎಲ್ ತಂಡದ ಮಾರ್ಗದರ್ಶಕ ಮತ್ತು ಟಿ.ವಿ ವೀಕ್ಷಕ ವಿವರಣೆಗಾರ ಕೂಡ ಆಗಿದ್ದಾರೆ. ರಾಜ್ಯ ಸಂಸ್ಥೆಗಳಲ್ಲಿಯೂ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆ ಮಾಡಿದವರು ಅನೇಕರಿದ್ದಾರೆ. ಆದ್ದರಿಂದ ಅವರೆಲ್ಲರೂ ನಿಯಮಗಳ ತಿದ್ದುಪಡಿಯ ಪರ ಇದ್ದಾರೆ. ಆದರೆ, ಈ ಯಾವುದೇ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅನುಮತಿ ಕಡ್ಡಾಯ ಎಂಬ ನಿಯಮ ಇದೆ. ಅದು ಇರದೇ ಹೋಗಿದ್ದರೆ, ಮಂಡಳಿಯು ನಿಯಮಗಳನ್ನು ಈ ವೇಳೆಗಾಗಲೇ ತನಗೆ ಬೇಕಾದಂತೆ ಬದಲಾಯಿಸಿಬಿಡುತ್ತಿತ್ತೋ ಏನೋ? ಇದೀಗ ಚೆಂಡು ನ್ಯಾಯಾಲಯದ ಅಂಗಳದಲ್ಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು