ಗುರುವಾರ , ನವೆಂಬರ್ 26, 2020
20 °C

ಸಂಪಾದಕೀಯ: ಡೇಟಾ ಸೇವೆಗೆ ಕನಿಷ್ಠ ದರ ಶಾಶ್ವತ ಪರಿಹಾರ ಸೂತ್ರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಕ್ತ ಮಾರುಕಟ್ಟೆಯ ತಾತ್ವಿಕತೆಯನ್ನು ಒಪ್ಪುವವರು ಯಾವುದೇ ಸೇವೆಗಳಿಗೆ ಕನಿಷ್ಠ ಬೆಲೆ ನಿಗದಿ ಆಗಬೇಕು ಎಂಬ ವಾದವನ್ನು ಸಾಮಾನ್ಯ ಸಂದರ್ಭಗಳಲ್ಲಿ ಬೆಂಬಲಿಸಲಾರರು. ಯಾವ ಸೇವೆಗೆ ಎಷ್ಟು ಬೆಲೆ ನಿಗದಿ ಆಗಬೇಕು ಎಂಬುದನ್ನು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುವ ಬೇಡಿಕೆ ಹಾಗೂ ಆ ಸೇವೆಯ ಲಭ್ಯತೆಯ ಪ್ರಮಾಣವು ತೀರ್ಮಾನಿಸುತ್ತವೆ ಎಂದು ಅವರು ಹೇಳಬಹುದು. ಆದರೆ, ಅಸಾಮಾನ್ಯ ಸಂದರ್ಭಗಳಲ್ಲಿ ಈ ತತ್ವವನ್ನು ಕ್ರಿಯಾರೂಪಕ್ಕೆ ತರುವುದು ಸುಲಭವಲ್ಲ. ಭಾರತದಲ್ಲಿ ಈಗ ಮೊಬೈಲ್‌ ದೂರಸಂಪರ್ಕ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳ ಸಂಖ್ಯೆ ಮೂರು ಮಾತ್ರ. ಹಿಂದೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಖಾಸಗಿ ಕಂಪನಿಗಳು ಇದ್ದವು. ದೂರಸಂಪರ್ಕ ಕ್ಷೇತ್ರದಲ್ಲಿ ದರ ಸಮರ ಆರಂಭವಾದ ನಂತರ ಕೆಲವು ಕಂಪನಿಗಳು ಬಾಗಿಲು ಮುಚ್ಚಿದವು, ಕೆಲವು ಕಂಪನಿಗಳು ವಿಲೀನ ಆದವು. ವರ್ಷಗಳಿಂದ ದರ ಸಮರದಲ್ಲಿ ತೊಡಗಿರುವ ದೂರಸಂಪರ್ಕ ಕಂಪನಿಗಳು ಈಗ, ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂಬ ಆಗ್ರಹವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಮುಂದೆ ಇರಿಸಿವೆ. ಕನಿಷ್ಠ ದರ ನಿಗದಿ ಮಾಡಬೇಕು ಎಂಬ ಆಗ್ರಹವನ್ನು ಕಂಪನಿಗಳು ಟ್ರಾಯ್ ಮುಂದೆ ಇರಿಸಿ ತಿಂಗಳುಗಳೇ ಕಳೆದಿವೆ. ಒಂದು ಜಿ.ಬಿ. ಡೇಟಾಕ್ಕೆ ಕನಿಷ್ಠ ದರವನ್ನು ₹ 20ರಿಂದ ₹ 35ರ ವರೆಗೆ ನಿಗದಿ ಮಾಡಬಹುದು ಎಂಬ ಸಲಹೆಯನ್ನು ಬೇರೆ ಬೇರೆ ಕಂಪನಿಗಳು ಇರಿಸಿವೆ ಎಂಬ ವರದಿಗಳು ಇವೆ. ವಿಶ್ವದಲ್ಲಿ ಅತ್ಯಂತ ಕಡಿಮೆ ದರಕ್ಕೆ ಡೇಟಾ ಸಿಗುವ ದೇಶಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೆ ಇನ್ನೊಂದು ಮುಖವೂ ಇದೆ. ಮೊಬೈಲ್‌ ಇಂಟರ್ನೆಟ್‌ ಸಂಪರ್ಕ ಪಡೆದವರಿಗೆ ಸಿಗುವ ಡೇಟಾದ ಸರಾಸರಿ ವೇಗವು ಭಾರತದಲ್ಲಿ 12.07 ಎಂಬಿಪಿಎಸ್‌ ಮಾತ್ರ; ಇದು ಪಾಕಿಸ್ತಾನ ಮತ್ತು ನೇಪಾಳದಲ್ಲಿ ಸಿಗುವ ವೇಗಕ್ಕಿಂತಲೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಡೇಟಾದ ಸರಾಸರಿ ವೇಗ 35.26 ಎಂಬಿಪಿಎಸ್.‌

ದರ ಸಮರದ ಕಾರಣದಿಂದಾಗಿ ಭಾರತದ ಮೊಬೈಲ್ ದೂರಸಂಪರ್ಕ ಸೇವಾ ಕಂಪನಿಗಳಿಗೆ ವರಮಾನ ಹೆಚ್ಚಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಮೂಲಸೌಕರ್ಯದ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಅವುಗಳಿಗೆ ಆಗುತ್ತಿಲ್ಲ. ಭಾರತದಲ್ಲಿ ಮೊಬೈಲ್ ಸೇವೆಗಳಿಗೆ ವಿಧಿಸಲಾಗುತ್ತಿರುವ ಶುಲ್ಕವು ದೂರಸಂಪರ್ಕ ಉದ್ಯಮದ ದೃಷ್ಟಿಯಿಂದ ಸುಸ್ಥಿರವಲ್ಲ ಎಂದು ತಜ್ಞರು ಹಲವು ಬಾರಿ ಹೇಳಿದ್ದಾರೆ.
‘₹ 160 ಪಾವತಿಸಿ 16 ಜಿ.ಬಿ. ಡೇಟಾ ಪಡೆಯುತ್ತಿರುವುದು ದುರಂತವೇ ಸರಿ’ ಎಂದು ಭಾರ್ತಿ ಏರ್‌ಟೆಲ್‌ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಕೆಲವು ತಿಂಗಳುಗಳ ಹಿಂದೆ ಆಡಿದ್ದ ಮಾತು, ‘ಸುಸ್ಥಿರವಲ್ಲ’ ಎಂಬ ಅಭಿಪ್ರಾಯವನ್ನೇ ಧ್ವನಿಸುತ್ತದೆ. ವಿವಿಧ ಬ್ಯಾಂಕುಗಳಿಂದ ದೇಶದ ದೂರಸಂಪರ್ಕ ವಲಯಕ್ಕೆ ಸಾಲವಾಗಿ ದೊರೆತಿರುವ ಹಣದ ಮೊತ್ತವು ₹ 1 ಲಕ್ಷ ಕೋಟಿಗಿಂತ ಹೆಚ್ಚು ಎಂಬ ವರದಿಗಳು ಇವೆ. ದೇಶದ ಯಾವುದೇ ದೂರಸಂಪರ್ಕ ಕಂಪನಿಯು ದರ ಸಮರ ಅತಿಯಿಂದಾಗಿ ಸಾಲ ಮರುಪಾವತಿಯಲ್ಲಿ ವಿಫಲವಾದರೆ ದೇಶದ ಬ್ಯಾಂಕಿಂಗ್ ವಲಯದ ಮೇಲೆ ಭಾರಿ ಪ್ರಮಾಣದ ಒತ್ತಡ ಸೃಷ್ಟಿಯಾಗುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಂಡು, ‘ಕನಿಷ್ಠ ದರ ನಿಗದಿ’ಯ ಬೇಡಿಕೆಯನ್ನು ಟ್ರಾಯ್ ಪರಿಶೀಲಿಸಬಹುದು. ಸೀಮಿತ ಅವಧಿಗೆ ಮಾತ್ರ ಅನ್ವಯವಾಗುವಂತೆ, ಡೇಟಾ ಸೇವೆಗಳಿಗೆ ಕನಿಷ್ಠ ದರವನ್ನು ನಿಗದಿ ಮಾಡಿ ದೂರಸಂಪರ್ಕ ಕಂಪನಿಗಳು ಹಣಕಾಸಿನ ಹೊರೆಯನ್ನು ತಗ್ಗಿಸಿಕೊಳ್ಳಲು ಅವಕಾಶ ಮಾಡಿಕೊಡಬಹುದು. ಕನಿಷ್ಠ ದರ ನಿಗದಿ ಸಾಧ್ಯವಾದರೆ, ಆ ಸೌಲಭ್ಯವನ್ನು ಬಳಸಿಕೊಂಡು ಕಂಪನಿಗಳು ಮೊಬೈಲ್‌ ಇಂಟರ್ನೆಟ್ ಸೇವೆಯ ಮೂಲಸೌಕರ್ಯ ಹೆಚ್ಚಿಸುವತ್ತಲೂ ಗಮನ ನೀಡಬಹುದು. ಒಳ್ಳೆಯ ಮೊಬೈಲ್‌ ಇಂಟರ್ನೆಟ್ ಸಂಪರ್ಕವು ದೇಶದ ಉತ್ಪಾದಕತೆಗೆ ಪರೋಕ್ಷವಾಗಿ ನೆರವಾಗುವ ಸಾಧ್ಯತೆಯಂತೂ ಇದ್ದೇ ಇರುತ್ತದೆ. ‘ಕನಿಷ್ಠ ದರ ನಿಗದಿ ಮಾಡಿ’ ಎಂದು ಕೇಳಿಕೊಳ್ಳಬೇಕಾದ ಸ್ಥಿತಿ ಸೃಷ್ಟಿಯಾಗಿರುವುದಕ್ಕೆ ದೂರಸಂಪರ್ಕ ಕಂಪನಿಗಳೇ ಕಾರಣ. ಇಂಥದ್ದೊಂದು ಸ್ಥಿತಿ ನಿರ್ಮಾಣವಾಗಿರುವುದನ್ನು ಗಮನಿಸಿ ಅವು ದರ ಸಮರಕ್ಕೆ ಅಂತ್ಯ ಹೇಳಲು ಮುಂದಾಗಬೇಕು. ಕನಿಷ್ಠ ದರ ನಿಗದಿಯು ತಾತ್ಕಾಲಿಕ ಕ್ರಮವಾಗಿರಬೇಕೇ ವಿನಾ ಶಾಶ್ವತ ಪರಿಹಾರ ಸೂತ್ರ ಆಗಬಾರದು. ಕನಿಷ್ಠ ದರವನ್ನು ಸರ್ಕಾರ ಅಥವಾ ಪ್ರಾಧಿಕಾರಗಳು ನಿಗದಿ ಮಾಡುವುದು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಒಪ್ಪುವ ನಡೆಯಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು